»   » ತೆಲುಗು ತಮಿಳಿನಲ್ಲಿ ಈಗಾಗಲೇ ಬಂದುಹೋಗಿರುವ ಚಿತ್ರಗಳಿಂದ ಸ್ಫೂರ್ತಿ ಪಡೆದಿರುವ ಆಲ್‌ರೌಂಡರ್‌ ಆದರ್ಶ, ಕಲಿತೆದ್ದಲವನ್ನೂ- ದುಂಬಿಯಲ್ಲಿ ಭಟ್ಟಿ ಇಳಿಸಿದ್ದಾರೆ. ಸಂಭಾಷಣೆಯಲ್ಲಿ ಮಾತ್ರ ಅವನಿಗೆ ಫುಲ್‌ ಮಾರ್ಕ್ಸ್‌ !

ತೆಲುಗು ತಮಿಳಿನಲ್ಲಿ ಈಗಾಗಲೇ ಬಂದುಹೋಗಿರುವ ಚಿತ್ರಗಳಿಂದ ಸ್ಫೂರ್ತಿ ಪಡೆದಿರುವ ಆಲ್‌ರೌಂಡರ್‌ ಆದರ್ಶ, ಕಲಿತೆದ್ದಲವನ್ನೂ- ದುಂಬಿಯಲ್ಲಿ ಭಟ್ಟಿ ಇಳಿಸಿದ್ದಾರೆ. ಸಂಭಾಷಣೆಯಲ್ಲಿ ಮಾತ್ರ ಅವನಿಗೆ ಫುಲ್‌ ಮಾರ್ಕ್ಸ್‌ !

Subscribe to Filmibeat Kannada

ಇಂಥ ಕತೆಯ ಕೆಲವು ಚಿತ್ರಗಳು ಕನ್ನಡದಲ್ಲಿ ಬಂದು ಹೋಗಿವೆ. ತಮಿಳಿನಲ್ಲಿ ಕಮಲಹಾಸನ್‌ ಕೂಡಾ ದುಂಬಿಯಾಗಿ ಚಿತ್ರವೊಂದರಲ್ಲಿ ಕಾಣಿಸಿದ್ದಾನೆ. ಮೊದಲ ಬಾರಿ ನಿರ್ದೇಶನ ಮಾಡಿರುವ ಆದರ್ಶ ಕೂಡಾ ಹಳೆಯ ಕತೆಗೆ ಕೊಂಚ ಮಸಾಲೆ ಬೆರೆಸಿ ಉಣಬಡಿಸಿದ್ದಾರೆ. ತೆಲುಗಿನಲ್ಲಿ ಇತ್ತೀಚೆಗೆ ಈ ರೀತಿಯ ಚಿತ್ರಗಳ ಹಾವಳಿ ಶುರುವಾಗಿದೆ.

ಹರೆಯದವರ ಹಸಿಬಿಸಿ ಆಸೆಗಳನ್ನು ಅಷ್ಟೇ ಹಸಿಯಾಗಿ ತೋರಿಸುವುದೇ ಅವನ ಪರಮ ಗುರಿ. ಒಂದು ಕಾಲೇಜು. ಅಲ್ಲಿ ತುಂಟಾಟದ ಹುಡುಗರ ಗುಂಪು. ಅವರಲ್ಲಿ ಒಬ್ಬ ನಾಯಕ. ಅಲ್ಲಿಗೆ ಹಾಜರಾಗುವ ನಾಯಕಿ ನಡುವೊಂದಿಷ್ಟು ತಮಾಷೆ. ಬಹುಶಃ ಅದರಿಂದ ಸ್ಫೂರ್ತಿ ಪಡೆದಂತಿರುವ ಆದರ್ಶ ತಾವೇ ಕತೆ-ಚಿತ್ರಕಥೆ-ಸಂಭಾಷಣೆ ಮತ್ತು ಮೂರು ಹಾಡುಗಳನ್ನು ಬರೆದು ಸಕಲ ಕಲಾ ವಲ್ಲಭರಾಗಿದ್ದಾರೆ. ಅವರಲ್ಲಿನ ಪ್ರತಿಭೆ ಗುರುತಿಸಬೇಕಾದರೆ ಸಂಭಾಷಣೆ ಮತ್ತು ಹಾಡುಗಳನ್ನು ಮಾತ್ರ ನೋಡಬೇಕು. ಎಷ್ಟೋ ಕಡೆ ಮಾತುಗಳೇ ದೃಶ್ಯಗಳನ್ನು ಹಿಡಿದು ನಿಂತಿವೆ. ಅದಕ್ಕೊಂದು ಉದಾಹರಣೆ ಕೇಳಿ. ಆತ ಹುಡುಗಿಯಾಬ್ಬಳನ್ನು ಬೈಕಿನ ಹಿಂದೆ ಕೂಡಿಸಿಕೊಂಡು ಹೋಗುವುದನ್ನು ನೋಡಿದ ನಾಯಕಿ ಸಂಕಟಪಡುತ್ತ ಕೂತಿರುತ್ತಾಳೆ. ಆಗ ಮಗುವೊಂದು ಬಂದು ಜಲಸ್‌ ಅಂದ್ರೆ ಏನಕ್ಕಾ ಅಂತ ಕೇಳಿದಾಗ, ಆಕೆ ಕೋಪದಿಂದ ‘ಹೊಟ್ಟೆ ಉರಿ’ ಅಂತಾಳೆ. ಅಲ್ಲಲ್ಲಿ ಹೊಳೆಯುವ ಇಂತಹ ಪಾದರಸ ಮಾತುಗಳೇ ಚಿತ್ರದ ಜೀವಾಳ.

ಜೊತೆಗೆ ‘ಇಂದಿನ ಕೂಸೇ ಮುಂದಿನ ಪೀಸು’ ಎನ್ನುವ ಭಯಂಕರ ಗಾದೆ ಮಾತುಗಳನ್ನು ಹೊಸೆಯಲಾಗಿದೆ. ಆದರೆ ಆದರ್ಶ ಅವಸರದಿಂದ ನಾಯಕರಾದಂತಿದೆ. ಇವರು ಸ್ಥಾವರಕ್ಕಿಂಥ ಜಂಗಮ ತತ್ವದಲ್ಲಿ ನಂಬಿಕೆಯಿಟ್ಟಿರುವಂತಿದೆ. ತೆರೆಮೇಲೆ ಇದ್ದಷ್ಟೂ ಹೊತ್ತು ಓಡುತ್ತಲೇ ಇರುತ್ತಾರೆ. ಆ ಮಟ್ಟಿಗೆ ಇವರದು ‘ಚಲನಶೀಲ ನಟನೆ’.

ಆದರ್ಶ ಕಲಿಯುವುದು ತುಂಬಾ ಇದೆ. ಅದನ್ನು ನೆನಪಿಟ್ಟುಕೊಂಡರೆ ಒಳ್ಳೆಯದು. ನಾಯಕಿ ರಶ್ಮಿ ಮುಖದ ಮೇಲಿನ ಭಾವನೆ ವ್ಯಕ್ತಪಡಿಸಲು ತುಂಬ ಕಷ್ಟಪಡುತ್ತಾರೆ. ಅದೇ ಸ್ವಿಮ್ಮಿಂಗ್‌ ಸೂಟ್‌ ಹಾಕಿಕೊಂಡಾಗ ಮಾತ್ರ ಅದೇನು ರಿಯಾಲಿಟಿ ಅಂತೀರಿ...

ಮಾತಿಗೆ ಮುಂಚೆ ನಕ್ಕು ಪಾತ್ರದ ಮತ್ತು ದೃಶ್ಯದ ಸಹಜತೆಯನ್ನು ಹಾಳು ಮಾಡುವ ಆದರ್ಶನ ಗುಣವನ್ನು ಸ್ವಲ್ಪವಾದರೂ ಸಮತೂಕಕ್ಕೆ ತರಲು ಮೂವರು ಸ್ನೇಹಿತರು ಯತ್ನಿಸಿದ್ದಾರೆ. ಇನ್ನುಳಿದಂತೆ ಶಿಲ್ಪಾ ತುಂಡು ಚೆಡ್ಡಿಯಲ್ಲಿ ಕಾಣಿಸಿದ್ದೇ ಪಡ್ಡೆ ಹೈಕಳ ಪರಮ ಭಾಗ್ಯ. ಅತ್ತಿಗೆಯಂತೆ ಕಾಣುವ ವಿದ್ಯಾಮೂರ್ತಿ, ಸಿಡುಕ ಅಣ್ಣನಾಗಿ ಸುನಿಲ್‌ ಪುರಾಣಿಕ್‌, ಎಲ್‌ಐಸಿ ಪಾಲಿಸಿ ಮಾಡಿಸಲು ಗಂಟು ಬೀಳುವ ಟೆನ್ನಿಸ್‌ ಕೃಷ್ಣ ಇಷ್ಟವಾಗುತ್ತಾರೆ. ಮೂರು ಹಾಡುಗಳು ಕೇಳುವಂತಿವೆ.

ಹೇಗೆ ನೋಡಿದರೂ ‘ದುಂಬಿ’ ಆರಕ್ಕೇರುವುದಿಲ್ಲ , ಮೂರಕ್ಕಿಳಿಯುವುದಿಲ್ಲ . ಆದರೂ ಮೊದಲ ಯತ್ನದಲ್ಲಿ ಆದರ್ಶ ತೋರಿಸಿದ ಅತಿಯಾದ ಉತ್ಸಾಹ ಮರೆಯುವಂತಿಲ್ಲ .

(ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada