For Quick Alerts
  ALLOW NOTIFICATIONS  
  For Daily Alerts

  ಸಮಾಜಕ್ಕೆ ಕನ್ನಡಿ ಹಿಡಿಯುವ ‘ಮಠ’

  By Staff
  |


  ‘ಮಠಾಧೀಶರು ಬೇಕಾಗಿದ್ದಾರೆ’ ಎಂಬ ಒನ್‌ಲೈನ್‌ ಸ್ಟೋರಿಯನ್ನು ಗುರುಪ್ರಸಾದ್‌, ಹಲವು ಘಟನೆಗಳ ಮೂಲಕ ಕಾಮಿಡಿಯಾಗಿ ಹೇಳುತ್ತಾ ಹೋಗುತ್ತಾರೆ. ಆ ಮೂಲಕ ಇಡೀ ಸಮಾಜವನ್ನು ಬೆತ್ತಲಾಗಿಸುತ್ತಾರೆ. ಮಠದ ಬಗ್ಗೆ ಇನ್ನೂ ಹೇಳಬೇಕು ಅಂದ್ರೆ -‘ಕೊಟ್ಟ ಕಾಸಿಗೆ ಮೋಸವಿಲ್ಲ’.

  • ಚೇತನ್‌ ನಾಡಿಗೇರ್‌
  ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಗೆದ್ದವನು ಏನಾಗುತ್ತಾನೆ? ಸನ್ಯಾಸಿಯಾಗುತ್ತಾನೆ, ನಸೀಬಿದ್ದರೆ ಮಠಾಧಿಪತಿಯಾಗುತ್ತಾನೆ. ‘ಮಠ’ ಸಂಸ್ಕೃತಿಯ ಬಗ್ಗೆ ಇಂಥದೊಂದು ವಿಮರ್ಶೆಯನ್ನು ಅಥವಾ ವಿಶ್ಲೇಷಣೆಯನ್ನು ಇಷ್ಟೊಂದು ಡೀಟೇಲಾಗಿ ಯಾವ ಚಿತ್ರದಲ್ಲೂ, ಯಾರೂ ತೋರಿಸುವ ಧೈರ್ಯ ಮಾಡಿರಲಿಲ್ಲ. ಗುರುಪ್ರಸಾದ್‌ ಅಂಥದೊಂದು ಪ್ರಯತ್ನವ ತಮ್ಮ‘ಮಠ’ ಚಿತ್ರದಲ್ಲಿ ಮಾಡಿ ಮುಗಿಸಿದ್ದಾರೆ.

  ಆ ಮಠ ಯಾವುದೇ ಧರ್ಮ, ಕೋಮಿನದ್ದಲ್ಲ. ಅ ಮಕ್ಕಳೇ ಆ ಮಠದ ಶಿಷ್ಯಂದಿರು. ಅಲ್ಲಿ ಭಕ್ತರಿಗೆ ಕೊರತೆ ಇಲ್ಲ. ಇಂಥದೊಂದು ಆದರ್ಶ ಮಠದ ಮಠಾಧಿಪತಿಗೆ ದಿಢೀರನೆ ಮದುವೆಯಾಗುವ ವ್ಯಾಮೋಹ ಹುಟ್ಟುತ್ತದೆ. ವ್ಯಾಮೋಹ ದೊಡ್ಡದಾಗಿ, ಪದವಿ ಚಿಕ್ಕದಾಗುತ್ತದೆ. ಅಲ್ಲಿ ಸೂಕ್ತ ಮಠಾಧಿಪತಿಗೆ ಹುಡುಕಾಟ ಪ್ರಾರಂಭವಾಗುತ್ತ ‘ಮಠಾಧೀಶರು ಬೇಕಾಗಿದ್ದಾರೆ!’ ಎಂಬ ಜಾಹೀರಾತು ಪತ್ರಿಕೆಯಾಂದರಲ್ಲಿ ಪ್ರಿಂಟಾಗುತ್ತದೆ.

  ಮಠಕ್ಕೆ ನಿರುದ್ಯೋಗಿಗಳ ಬಯೋಡೇಟಾ ಬಂದು ಬೀಳುತ್ತವೆ. ಹೀಗೆ ಬಂದ ಸಹಸ್ರಾರು ಬಯೋಡೇಟಾಗಳ ಮಧ್ಯೆ ಏಳು ಜನರ ಆಯ್ಕೆಯಾಗುತ್ತಾರೆ. ಆದರೆ, ಅವರಲ್ಲಿ ಯಾರು ಮಠಾಧಿಪತಿಗಳಾಗುತ್ತಾರೆ? ಮಠಾಧಿಪತಿಗಿರಬೇಕಾದ ಅರ್ಹತೆಗಳೇನು ಎಂಬುದನ್ನು ಮಾತ್ರ ತೆರೆಯ ಮೇಲೆ ನೋಡಿ ಎಂಜಾಯ್‌ ಮಾಡಿ.

  ‘ಮಠಾಧೀಶರು ಬೇಕಾಗಿದ್ದಾರೆ’ ಎಂಬ ಒನ್‌ಲೈನ್‌ ಸ್ಟೋರಿಯನ್ನು ಗುರು ಹಲವು ಘಟನೆಗಳ ಮೂಲಕ, ಸನ್ನಿವೇಶಗಳ ಮೂಲಕ ಹೇಳುತ್ತಾ ಹೋಗುತ್ತಾರೆ. ಹಲವು ಸಣ್ಣ-ಸಣ್ಣ ಜೋಕ್‌ಗಳ ಮೂಲಕ, ಪಂಚಿಂಗ್‌ ಸಂಭಾಷಣೆಗಳ, ವಿಮರ್ಶೆಗಳ ಹಾಗೂ ವಿಡಂಬನೆಗಳ ಮೂಲಕ ಇಡೀ ಸಮಾಜವನ್ನು ಬೆತ್ತಲಾಗಿಸುತ್ತಾ ಹೋಗುತ್ತಾರೆ, ಸರಿ-ತಪ್ಪುಗಳ ಬಗೆ ಬುದ್ಧಿವಂತಿಕೆಯಿಂದ ಅರಿವು ಮೂಡಿಸುತ್ತಾ ಹೋಗುತ್ತಾರೆ. ಅದರಲ್ಲೂ ಏನೇ ಹೇಳಿದರೂ ಅದನ್ನು ಕಾಮಿಡಿಯ ಮೂಲಕ ಹೇಳಿರುವುದು ಮತ್ತು ಅದನ್ನು ಕ್ಲಾಸ್‌ ಹಾಗೂ ಮಾಸ್‌ ಎರಡೂ ತರಹದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮಾಡಿರುವುದು ಗುರು ಜಾಣತನಕ್ಕೆ ಸಾಕ್ಷಿ.

  ಹಾಗಂತ ಚಿತ್ರದಲ್ಲಿ ಸಮಸ್ಯೆಗಳೇ ಇಲ್ಲ ಎಂದಲ್ಲ. ಎಲ್ಲ ಚಿತ್ರಗಳಿಗಿದ್ದಂತೆ ಇಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಉಪಕತೆಗಳನ್ನು ಅಳವಡಿಸುವುದೇ ಹೊಸ ಕಾನ್ಸಪ್ಟು. ಆದರೆ ಕೆಲವೆಡೆ ಉಪಕತೆಗಳೇ ದೊಡ್ಡ ಸಮಸ್ಯೆ ಸೃಷ್ಟಿಸಿರುವುದು ಸುಳ್ಳಲ್ಲ. ಈ ಚಿತ್ರದ ಯಶಸ್ಸಿಗೆ ಗುರುಗೆ ಹಲವರ ಬೆಂಬಲವಿದೆ. ಅದರಲ್ಲೂ ಜಗ್ಗೇಶ್‌ ತಮ್ಮ ಲೀಲಾಜಾಲ ಅಭಿನಯದಿಂದ ನವರಸನಾಯಕನ ಪಟ್ಟಕ್ಕೆ ಸೆಂಟ್‌ ಪರ್ಸೆಂಟ್‌ ನ್ಯಾಯ ಸಲ್ಲಿಸಿದ್ದಾರೆ. ಮಾತಿನಮಲ್ಲ ಜಗ್ಗೇಶ್‌ ಬರೀ ಕಣ್ಣುಗಳಲ್ಲೆ ಮಾತಾಡುವುದು ನಿಜವಾಗಲೂ ಸೂಪರ್‌.

  ಅವರ ಜತೆ ಮಂಡ್ಯ ರಮೇಶ್‌, ಬಿರಾದರ್‌, ಶಶಿಧರ್‌ಭಟ್‌ ಮುಂತಾದ ತಂಡದ ಸದಸ್ಯರ ಅಭಿನಯವೂ ಫಸ್ಟ್‌ಕ್ಲಾಸ್‌. ಸುದರ್ಶನ್‌, ನಾಗತಿಹಳ್ಳಿ ಚಂದ್ರಶೇಖರ್‌, ವಿ. ಮನೋಹರ್‌, ಪ್ರಣವ ಮೂರ್ತಿ, ಸಾಧು ಕೋಕಿಲ ಮುಂತಾದ ಕಲಾವಿದರೂ ಚೆನ್ನಾಗಿ ಅಭಿನಯಿಸಿದ್ದಾರೆ.

  ಸಂತೋಷ್‌ ಕುಮಾರ್‌ ಪಾತಾಜೆ ಕ್ಯಾಮೆರಾ ಕಣ್ಣಿನಲ್ಲಿ ತೀರ್ಥಹಳ್ಳಿ ಹಾಗೂ ಮಠದ ಪರಿಸರ ಖುಷಿ ಕೊಡುತ್ತದೆ. ಬಹಳ ದಿನಗಳ ನಂತರ ವಿ. ಮನೋಹರ್‌ ಬಂಪರ್‌ ಹೊಡೆದಿದ್ದಾರೆ. ಅಶ್ವಥ್‌ ದನಿಯಲ್ಲಿ ಮೂಡಿಬಂದಿರುವ ‘ತಪ್ಪು ಮಾಡದೋರು ಯಾರೌವ್ರೆ’ ಶಿಳ್ಳೆ ತರಿಸುತ್ತದೆ. ‘ಜಯ ಹೇ’ ಹಾಡು ಸನ್ನಿವೇಶಕ್ಕೆ ಅದ್ಭುತವಾಗಿ ತಾಳೆಯಾಗುತ್ತದೆ.

  ಗುರುಪ್ರಸಾದ್‌ ಹಾಗೂ ಮಂಜುನಾಥ್‌ ಮಾಂಡವ್ಯರ ಸಂಭಾಷಣೆ ಚಿತ್ರದ ಹೈಲೈಟ್‌ಗಳಲ್ಲಿ ಒಂದು.

  ಕಾಸಿಗೆ ಮೋಸವಿಲ್ಲ; ನೋಡಿ ಎಂಜಾಯ್‌ ಮಾಡಿ.

  (ಸ್ನೇಹ ಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X