»   » ಲಾಂಗು ನಿರಶನ ; ಕಾಮಿಡಿ ದರ್ಶನ!

ಲಾಂಗು ನಿರಶನ ; ಕಾಮಿಡಿ ದರ್ಶನ!

Posted By:
Subscribe to Filmibeat Kannada


ಈ ಚಿತ್ರವನ್ನು ನೋಡಿದೇಟಿಗೇ ದರ್ಶನ್‌ ಬದಲಾಗಿದ್ದಾರೆ ಎಂಬ ಉದ್ಗಾರ ನಿಮ್ಮ ಬಾಯಲ್ಲಿ ಬರದಿದ್ದರೆ ಕೇಳಿ. ಹಾಗೆ ನೋಡಿದರೆ ಸುಂಟರಗಾಳಿಯಲ್ಲೇ ಬದಲಾವಣೆಯ ಗಾಳಿ ಬೀಸಿತ್ತು. ಈ ಚಿತ್ರದಲ್ಲಿ ಅದು ಮತ್ತಷ್ಟು ಬೀಸಿದೆ. ಇಲ್ಲಿಯವರೆಗೂ ಬರಿ ಡಿಶುಂ ಡಿಶುಂ ಮಾಡಿಕೊಂಡಿದ್ದ ದರ್ಶನ್‌ ಮೊದಲ ಬಾರಿಗೆ ಕಾಮಿಡಿಗೆ ಪ್ರಯತ್ನಿಸಿದ್ದಾರೆ.

  • ಚೇತನ್‌ ನಾಡಿಗೇರ್‌
ಅವನೊಂಥರಾ ಕನ್ನಡದ ರಾಬಿನ್‌ಹುಡ್‌. ಹೆಸರು ದತ್ತ. ಉರುಫ್‌ ಲಂಬು. ಶ್ರೀಮಂತರನ್ನೇ ದೋಚುತ್ತಾನೆ. ಬಡವರಿಗೆ ಹಂಚುತ್ತಾನೆ. ಅವರ ಕಷ್ಟಗಳಿಗೆ ಸ್ಪಂದಿಸುತ್ತಾನೆ. ಅವರ ಮನೆ ಮಗನಾಗಿರುತ್ತಾನೆ. ಅವನಿಗೊಬ್ಬ ಶಿಷ್ಯ. ಹೆಸರು ಟಿಂಗು. ಎಲ್ಲ ಅರ್ಥಗಳಲ್ಲೂ ಅವನು ಗುರುವಿಗೆ ತಕ್ಕ ಶಿಷ್ಯ. ಇಬ್ಬರೂ ಫೀಲ್ಡಿಗಿಳಿದರೆ ಆಗೇ ಹೋಯ್ತು!

ಗುರು-ಶಿಷ್ಯನ ಸಾಹಸಗಾಥೆ ಹೀಗೆ ಮುಂದುವರಿಯುತ್ತಿರುವಾಗಲೇ, ಚೋರ ಗುರುವಿನ ಹೃದಯವನ್ನೇ ಒಬ್ಬಳು ಚೋರಿ ಮಾಡಿಬಿಡುತ್ತಾಳೆ. ಅಲ್ಲಿಯವರೆಗೂ ಲವ್ವೆಂದರೇನೂ ಅಂತ ಗೊತ್ತಿರದ ಮುಗ್ಧನನ್ನು ಮೋಡಿ ಮಾಡುತ್ತಾಳೆ. ಹೆಂಗಾದರೂ ಸರಿ, ಅವಳನ್ನು ಗೆದ್ದೇ ತೀರಬೇಕೆಂದು ಚೋರ ಗುರು ತೀರ್ಮಾನಿಸುತ್ತಾನೆ. ಅದಕ್ಕೆ ಶಿಷ್ಯ ಸಹಕರಿಸುತ್ತಾನೆ. ಗುರು-ಶಿಷ್ಯರು ಏನೇನೋ ಆಟ ಹೂಡುತ್ತಾರೆ. ಅವಳ ಕಣ್ಣಿನಲ್ಲಿ ಕ್ರಮೇಣ ದೊಡ್ಡವರಾಗಿ ಬಿಡುತ್ತಾರೆ. ಇನ್ನೇನು ‘ಶುಭಸ್ಯ ಶೀಘ್ರಂ’ ಎನ್ನಬೇಕು, ಅಷ್ಟರಲ್ಲಿ ನಾಯಕಿಗೆ ದತ್ತ ಏನೆಂದು ಗೊತ್ತಾಗುತ್ತದೆ. ಒಂದಾಗಿದ್ದ ಹೃದಯಗಳು ಎರಡಾಗುತ್ತವೆ.

ಕ್ರಮೇಣ ಹಾದಿ ಬದಲಾಗುತ್ತದೆ. ಅನಾಥನಾಗಿದ್ದ ದತ್ತ ಇದ್ದಕ್ಕಿದ್ದಂತೇ ಉದ್ಯಮಿ ಶಾಂತವೀರಪ್ಪನ ಮಗನಾಗಿ ಆ್ಯಕ್ಟ್‌ ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ತಾನು ಅನಾಥ ಅಂತ ಕೊರಗುತ್ತಿದ್ದ ದತ್ತನಿಗೆ ದಿಢೀರ್‌ ಅಪ್ಪ-ಅಮ್ಮ ಸಿಕ್ಕಂತಾಗುತ್ತದೆ. ಆ ಶಾಂತವೀರಪ್ಪನೋ ಚಾಲಾಕಿ ಮನುಷ್ಯ. ಮಲ್ಲಿಕಾರ್ಜುನಯ್ಯ ಎಂಬ ಇನ್ನೊಬ್ಬ ಶ್ರೀಮಂತನೊಂದಿಗೆ ವೈರತ್ವ ಕಟ್ಟಿಕೊಂಡಿರುತ್ತಾನೆ. ಅಷ್ಟೇ ಅಲ್ಲ, ಮಲ್ಲಿಕಾರ್ಜುನಪ್ಪ, ಹೆಂಗಾದರೂ ಸರಿ ನಾನು ನಿನ್ನ ಮಗನ್ನ ಕೊಂದು ಹಾಕ್ತೇನೆ ಅಂತ ಪ್ರತಿಜ್ಞೆ ಮಾಡಿರುತ್ತಾನೆ. ಅದಕ್ಕೆ ಶಾಂತವೀರಪ್ಪ ತನ್ನ ಮಗನನ್ನು ಬಚ್ಚಿಟ್ಟು ಈ ದತ್ತನನ್ನು ಮಗ ಎಂದು ಊರಿಗೆ ಕರೆದುಕೊಂಡು ಹೋಗಿರುತ್ತಾನೆ. ಆದರೆ ದತ್ತ ಗೊತ್ತಲ್ಲ... ಎದುರಿಗೆ ಬಂದವರೆಲ್ಲಾ ಪೀಸ್‌ ಪೀಸ್‌. ಯಾವಾಗ ದತ್ತಂಗೆ ತಾನು ಬಲಿಪಶು ಆಗಿದ್ದೀನಿ ಅಂತ ಗೊತ್ತಾಗುತ್ತೋ, ಆಗ ಅವನೇ ಪೀಸ್‌ ಪೀಸ್‌. ಮುಂದೇನಾಗುತ್ತೆ ಅಂತ ಹೇಳಿದ್ರೆ ಮಜ ಇರಲ್ಲ. ಅದನ್ನ ಚಿತ್ರಮಂದಿರದಲ್ಲೇ ನೋಡಬೇಕು.

ಈ ಚಿತ್ರವನ್ನು ನೋಡಿದೇಟಿಗೇ ದರ್ಶನ್‌ ಬದಲಾಗಿದ್ದಾರೆ ಎಂಬ ಉದ್ಗಾರ ನಿಮ್ಮ ಬಾಯಲ್ಲಿ ಬರದಿದ್ದರೆ ಕೇಳಿ. ಹಾಗೆ ನೋಡಿದರೆ ಸುಂಟರಗಾಳಿಯಲ್ಲೇ ಬದಲಾವಣೆಯ ಗಾಳಿ ಬೀಸಿತ್ತು. ಈ ಚಿತ್ರದಲ್ಲಿ ಅದು ಮತ್ತಷ್ಟು ಬೀಸಿದೆ. ಇಲ್ಲಿಯವರೆಗೂ ಬರಿ ಡಿಶುಂ ಡಿಶುಂ ಮಾಡಿಕೊಂಡಿದ್ದ ದರ್ಶನ್‌ ಮೊದಲ ಬಾರಿಗೆ ಕಾಮಿಡಿಗೆ ಪ್ರಯತ್ನಿಸಿದ್ದಾರೆ. ರೌಡಿ-ಪೊಲೀಸ್‌ ಆಗಿದ್ದವರು ಕಳ್ಳನಾಗಿದ್ದಾರೆ. ಈ ಹೊಸ ಪಾತ್ರದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಹಾಗಂತ ಇದರಲ್ಲಿ ಲಾಂಗು, ಮಚ್ಚು, ಡಿಶುಂ ಡಿಶುಂ ಇಲ್ಲ ಅಂತಲ್ಲ. ಇದೆ, ಕಡಿಮೆಯಿದೆ. ಆದರೆ ಒಂದೊಂದು ಫೈಟು ಶುರುವಾದರೂ ಮುಗಿಯುವುದಕ್ಕೆ ಕನಿಷ್ಠ ಏಳೆಂಟು ನಿಮಿಷಗಳಾದರೂ ಬೇಕು. ಕತೆ ಮಧ್ಯೆ ನಿಧಾನವಾಗಿರುವುದು ಕೊಂಚ ಬೇಜಾರಾಗಬಹುದು. ಇಂಥ ಸಣ್ಣ-ಪುಟ್ಟದನ್ನು ಸಹಿಸಿಕೊಂಡು ಬಿಟ್ಟರೆ, ಈ ದರ್ಶನ್‌ ಚಿತ್ರದಲ್ಲಿ ಹಾಡು, ತಾಯಿ ಸೆಂಟಿಮೆಂಟ್‌ ಹಾಗೂ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ... ತುಂಬಿರುವ ನಿರ್ದೇಶಕ ಚಿ.ಗುರುದತ್‌ಗೆ ಒಂದು ಕಂಗ್ರಾಟ್ಸ್‌ ಹೇಳಬಹುದು.

ದರ್ಶನ್‌ ಜತೆಗೆ ಚಿತ್ರ ಇಷ್ಟವಾಗುವುದು ಕೋಮಲ್‌ಕುಮಾರ್‌ ಅವರಿಂದಾಗಿ. ಅವರ ಬಾಡಿ ಲಾಂಗ್ವೇಜ್‌, ಟೈಮಿಂಗ್‌, ಮುಗ್ಧತೆ ಅದ್ಭುತ. ಸರಿಯಾಗಿ ಬಳಸಿಕೊಂಡರೆ ಕೋಮಲ್‌ ಎಲ್ಲಿಗೋ ಮುಟ್ಟುವುದರಲ್ಲಿ ಆಶ್ಚರ್ಯವಿಲ್ಲ. ರಮ್ಯ ಹಾಡುಗಳಲ್ಲಿ ಸೊಗಸಾಗಿ ಹಾಗೂ ಲವಲವಿಕೆಯಿಂದ ಕಾಣಿಸಿಕೊಳ್ಳುತ್ತಾರೆ. ಇನ್ನಷ್ಟು ಚೆಂದವಾಗಿದ್ದಾರೆ. ಶ್ರೀನಾಥ್‌, ವಿನಯಾ ಪ್ರಕಾಶ್‌, ಅವಿನಾಶ್‌ ಅಭಿನಯ ಚೆನ್ನಾಗಿದೆ. ಕೀರ್ತಿ ಚಾವ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಂ.ಎಸ್‌.ರಮೇಶ್‌-ರಾಜಶೇಖರ್‌ ಸಂಭಾಷಣೆ ಮರೆಯಲು ಸಾಧ್ಯವಿಲ್ಲ. ಹೀಗೂ ಕಾಮಿಡಿ ಸಂಭಾಷಣೆ ಬರೆಯಬಹುದೆಂದು ಅವರು ತೋರಿಸಿದ್ದಾರೆ. ಆದರೆ ನಿರೀಕ್ಷೆ ಮಾಡಿದಂತೆ ಆರ್‌.ಪಿ.ಪಾಟ್ನಾಯಕ್‌ ಸಂಗೀತ ಜಾದೂ ಮಾಡಿಲ್ಲ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada