twitter
    For Quick Alerts
    ALLOW NOTIFICATIONS  
    For Daily Alerts

    ನೆನಪಿರಲಿ ಇದು ಪತಾಜೆ ಹಾರಿಸಿದ ಪ್ರೇಮ ಪತಾಕೆ

    By Staff
    |


    ಚಿತ್ರದ ಕೊನೆಗೆ ನೆನಪಿನಲ್ಲುಳಿಯುವುದು ಪ್ರೇಮ್ ನಟನೆ, ಹೃದಯಸ್ಪರ್ಶಿ ಹಾಡುಗಳು, ಹಾಡುಗಳನ್ನು ಮರೆಸುವ ಸಂಗೀತ ಮತ್ತು ಅದ್ಭುತ ಲೊಕೇಷನ್ನು, ಅದನ್ನು ಕಣ್ತುಂಬಿಸಿದ ಛಾಯಾಗ್ರಹಣ. ನೆನಪುಗಳೆಂದರೆ ಬರೀ ಸವಿಸವಿಯಾಗಿರಬೇಕೆ? ಚಿತ್ರದಲ್ಲಿ ಇನ್ನೊಂದು ಬಗೆಯ ನೆನಪುಗಳ ಉತ್ತರವೂ ನಿಮಗೆ ಸಿಗುತ್ತದೆ.


    ಚಿತ್ರ : ಸವಿಸವಿ ನೆನಪು
    ನಿರ್ಮಾಪಕ : ಎಸ್.ವಿ.ಬಾಬು
    ಕಥೆ, ಚಿತ್ರಕಥೆ, ನಿರ್ದೇಶನ : ಸಂತೋಷ ರೈ ಪತಾಜೆ
    ಸಂಗೀತ : ಆರ್.ಪಿ.ಪಟ್ನಾಯಕ್
    ಛಾಯಾಗ್ರಹಣ : ಕೆ.ಎಸ್.ಚಂದ್ರಶೇಕರ್
    ತಾರಾಗಣದಲ್ಲಿ : ಪ್ರೇಮ್, ಮಲ್ಲಿಕಾ ಕಪೂರ್, ತೇಜಸ್ವಿನಿ, ಅವಿನಾಶ್, ಶ್ರೀನಾಥ್ ಮತ್ತಿತರರು

    ಇದು ಹೃದಯಗಳ ವಿಷಯ ನೆನಪಿರಲಿ.

    ಅಪಾರವಾಗಿ ಪ್ರೀತಿಸಿ ಮದುವೆಯಾದ ಹೃದಯಗಳ ಬೇರ್ಪಡಿಸುವ, ಪ್ರೀತಿಸಿ ಮದುವೆಯಾಗಿ ಬೇರೆಯಾದ ಎರಡು ಹೃದಯಗಳನ್ನು ಬೆಸೆಯುವ ಪ್ರೇಮಗಾಥೆ.

    ಕೇವಲ ಎರಡು ಜೀವಗಳ ಹೃದಯಗಳ ಪಿಸು ಮಾತುಗಳನ್ನೇ ಪ್ರಮುಖವಾಗಿಸಿಕೊಂಡು ನಿರ್ದೇಶಕ ಸಂತೋಷ ರೈ ಪತಾಜೆ ಪ್ರೇಮ ಪತಾಕೆ ಹಾರಿಸುವ ಪ್ರಯತ್ನ ಮಾಡಿದ್ದಾರೆ. ಹೃದಯಗಳ ಮಾತುಗಳು ಹೃದ್ಯವಾಗುವಂತೆ ನೆನಪಿರಲಿ ಪ್ರೇಮ್ ಪ್ರೇಮ ಸೇತುವೆಯಾಗಿದ್ದಾರೆ.

    ನೆನಪಿರಲಿ, ಚಿತ್ರ ಮುಗಿದಾಗ ನೆನಪಿನಲ್ಲುಳಿಯುವುದು ಚಿತ್ರದ ತುಂಬ ಆವರಿಸಿಕೊಂಡಿರುವ ಕನಸುಕಂಗಳ ಪ್ರೇಮ್. ಪ್ರೀತಿಸಿದ ಹೃದಯದೇವತೆ ದೂರವಾದಾಗ ಪ್ರೇಮ್‌ಗೆ ಉಳಿದಿರುವುದು ಕನಸುಗಳು ಮಾತ್ರ! ಮತ್ತೆ ನೆನಪಿನಲ್ಲುಳಿಯುವುದು ನೆನಪುಗಳ ಮೆರವಣಿಗೆ ಹೊತ್ತ ಕನಸುಗಳನ್ನು ಸವಿಸವಿಯಾಗಿಸುವ ಎರಡು ಹಾಡುಗಳು, ಹಾಡಿನ ಚಿತ್ರೀಕರಣಕ್ಕಾಗಿ ಆಯ್ದುಕೊಂಡಿರುವ ಅತ್ಯುದ್ಭುತ ಲೊಕೇಶನ್ನುಗಳು, ಚಿತ್ರೀಕರಣವನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿದಿರುವ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ. ಆಕೆಯ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳು ಕಾಣಿಕೆ ನೀಡಿದರೂ ನೆನಪಿನಲ್ಲುಳಿಯುವುದು ಪ್ರೇಮ್ ಮತ್ತು ಪ್ರೀತಿ ಮಲ್ಲಿಕಾ ಕಪೂರ್ ನಗು.

    ನೆನಪಿನಲ್ಲುಳಿಯದೇ ಇರುವುದು ಪ್ರೇಮ್ ಪ್ರೀತಿಗೆ, ಪ್ರೀತಿ ಪ್ರೇಮ್‌ಗೆ ಎಷ್ಟು ಬಾರಿ ಐ ಲವ್ ಯೂ ಹೇಳಿದರೆಂಬುದು!

    ಹೃದಯಗಳದ್ದು ಮೌನಭಾಷೆ. ಹೃದಯಗಳು ಬೇರ್ಪಟ್ಟಾಗ, ಬೇರ್ಪಟ್ಟ ಹೃದಯಗಳು ಒಂದಾದಾಗ ಮೌನಗಳಲ್ಲೇ ಮಾತು. ಮೌನವೇ ಮಾತಾದಾಗ ಹೃದಯಬಡಿತ ನಿಂತೇ ಹೋಗುವಷ್ಟು ನಿಧಾನ. ಆದರೆ, ಆರ್.ಪಿ.ಪಟ್ನಾಯಕ್ ಸಂಗೀತ ನಿಧಾನವಾದ ಹೃದಯಬಡಿತ ಎದೆ ಹೊಡೆದುಕೊಂಡು ಹೃದಯಾಘಾತವಾಗುವಷ್ಟು ಅಬ್ಬರ. ಯಸ್, ಚಿತ್ರದಲ್ಲಿ ಹೊಡೆದಾಟ ಬಡಿದಾಟ, ಹಿಂಸೆಗಳಿಲ್ಲದಿದ್ದರೂ ಚಿತ್ರದ ಏಕೈಕ ವಿಲನ್ ಪಟ್ನಾಯಕ್ ಸಂಗೀತ.

    ಕಾಯ್ಕಿಣಿ, ನಾಗತಿ, ಕಲ್ಯಾಣ್‌ರಂಥ ಹೃದಯಭಾಷಿಗಳ ಹಾಡುಗಳ ಸವಿಯನ್ನು ಪಟ್ನಾಯಕ್ ಹೀರಿ ಕೇಳುಗರಿಗೆ ಅರ್ಪಿಸಿದ್ದಾರೆ. ಶೋಕಗೀತೆಗೂ ಅವರು ನೀಡಿರುವ ಅಬ್ಬರದ ಸಂಗೀತಕ್ಕೆ ನಿಮ್ಮ ಹೃದಯವೂ ಹೊಂದಿಕೊಳ್ಳಲಾರದು, ಇನ್ನು ಇನ್ನೊಬ್ಬ ನಾಯಕಿ ತೇಜಸ್ವಿನಿ ಕಸಿಮಾಡಿದ ಹೃದಯ ಹೊಂದಿಕೊಳ್ಳಲು ಸಾಧ್ಯವೆ?

    ಅಂದಹಾಗೆ ಕಥೆ ಏನಪ್ಪಾ ಅಂದ್ರೆ... ಅಲ್ಲಿ ಅವರಿಬ್ಬರು, ಇಲ್ಲಿ ಇವರಿಬ್ಬರು... ಛೇ ಕಥೆ ಹೇಳಿಬಿಟ್ರೆ ಏನಿದೆ ಸ್ವಾರಸ್ಯ? ಚಿತ್ರದ ನಾಡಿಬಡಿತ ನಿಂತಿರುವುದೇ ಪತಾಜೆ ಚಿತ್ರಕಥೆಯ ಮೇಲೆ. ಮಧ್ಯಂತರದವರೆಗೆ ಚುರುಕಾಗಿ ಸಾಗುವ ಕಥೆ ತಿರುವು ಪಡೆಯುವುದೇ ನಂತರ. ನೋಡುಗರ ಆಸಕ್ತಿ ಕೆರಳಿಸುವಲ್ಲಿ ಯಶಸ್ವಿಯಾಗಿರುವ ಪ್ರೇಮ್ ನಟನೆ, ಪತಾಜೆ ಹಾರಿಸಿದ ಪತಾಕೆ ಇದ್ದಕ್ಕಿದ್ದಂತೆ ನಿಧಾನವಾಗಿ ಪಟಪಟಿಸಿ ಚಿತ್ರದ ಓಘವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ.

    ಚಿತ್ರ ತಯಾರಿಸುವ ಮುನ್ನ ಪತಾಜೆ ಇನ್ನೂ ಸ್ವಲ್ಪ ಹೋಂವರ್ಕ್ ಮಾಡಿದ್ದರೆ ಚೆನ್ನಾಗಿತ್ತು. ಹಾಡುಗಳ ಚಿತ್ರೀಕರಣಕ್ಕೆ ಆಯ್ದುಕೊಂಡಿರುವ ಮಂಜಿನ ತಾಣಗಳು ಅದ್ಭುತ, ಮಂಜು ಮಾಂಡವ್ಯ ಬರೆದಿರುವ ಸಂಭಾಷಣೆ ಪೂರಕ, ಪತಾಜೆ ವಿಭಿನ್ನ ಪ್ರಯತ್ನಕ್ಕೆ ಬೆನ್ನುತಟ್ಟಲೇ ಬೇಕು. ಹೃದಯಗಳದ್ದು ಮೌನಬಾಷೆಯೇ ಸರಿ ಆದರೆ, ಭವ್ಯವಾದ ಬಂಗಲೆಯಲ್ಲಿ, ದೆವ್ವದಂಥ ಆಸ್ಪತ್ರೆಯಲ್ಲೂ ಏಕೆ ಅಷ್ಟೊಂದು ಮೌನ? ಮನೆಯಲ್ಲಿ ಜನರಿಲ್ಲ, ಆಸ್ಪತ್ರೆಯಲ್ಲಿ ರೋಗಿಗಳಿಲ್ಲ. ಇದ್ದದ್ದು ಡಾಕ್ಟರ್ ಅವಿನಾಶ್ ಜೊತೆಗೆ ಇಬ್ಬರು ನರ್ಸ್‌ಗಳು ಮಾತ್ರ! ಅಷ್ಟಕ್ಕೂ ಹೃದಯಬೇನೆ ವಾಸಿಮಾಡುವ ಡಾಕ್ಟರ್ ಅಪಘಾತಕ್ಕೀಡಾದ ರೋಗಿಯನ್ನೂ ಚಿಕಿತ್ಸೆ ಮಾಡುವುದೇಕೆ? ಸಾಯುವುದನ್ನೇ ಮಾತಾಡುವ ಪ್ರೀತಿಗೆ ತಾನು ಸಾಯುವುದು ತಿಳಿದಿತ್ತೇ? ತಿಳಿದಿದ್ದರೆ ಆಕೆಗೆ ಯಾವ ಕಾಯಿಲೆಯಿತ್ತು? ಉತ್ತರ ಪತಾಜೆ ಹೇಳಬೇಕು. ಕ್ಯಾಜಿ ಪತಾಜೆ?

    ನಗುವಿನಲ್ಲಿ ಮಾತ್ರ ಗಮನ ಸೆಳೆಯುವ ಪ್ರೀತಿ ಪಾತ್ರದಲ್ಲಿ ಮಲ್ಲಿಕಾ ಕಪೂರ್ ಪ್ರೀತಿಪಾತ್ರರಾಗಿ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಗೆ ಮುಖವಾಣಿಯಾಗಿದ್ದಾರೆ. ನಡೆಯುವಾಗ, ಕೂಡುವಾಗ, ನಗುವಾಗ, ಅಳುವಾಗ ಅತ್ಯಂತ ಜಾಗರೂಕತೆಯಿಂದ, ನಾಜೂಕಿನಿಂದ ನಟಿಸುವ ಕನ್ನಡತಿ ತೇಜಸ್ವಿನಿ ಸ್ವಲ್ಪ ತೇಜವಾಗಿ, ತೇಜಸ್ಸಿನಿಂದ ನಟಿಸಿದರೆ ಯಶಸ್ವಿನಿಯಾಗುತ್ತಾರೆ. ಶ್ರೀನಾಥ್ ಇನ್ನೂ ಸ್ವಲ್ಪ ದಪ್ಪಗಾಗಿದ್ದಾರಲ್ಲಾ ಅನ್ನುವುದೇ ಅವರ ಮೇಲಿನ ಕಮೆಂಟು.

    ನೆನಪುಗಳೆಂದರೆ ಬರೀ ಸವಿಸವಿಯಾಗಿರಬೇಕೆ? ಚಿತ್ರದಲ್ಲಿ ಇನ್ನೊಂದು ಬಗೆಯ ನೆನಪುಗಳ ಉತ್ತರವೂ ನಿಮಗೆ ಸಿಗುತ್ತದೆ.

    Friday, March 29, 2024, 8:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X