For Quick Alerts
  ALLOW NOTIFICATIONS  
  For Daily Alerts

  ‘ಪ್ರಾಣಾ’ ಪಾಯ ಲೆಕ್ಕಿಸದ ಪ್ರಕಾಶ್‌ ಎಕ್ಸ್‌ಪ್ರೆಸ್‌!

  By Staff
  |
  • ವಿನಾಯಕ ಭಟ್‌
  ನಾಯಕ ಪ್ರೇಮ್‌-ಹೊಸ ಪರಿಚಯ, ನಾಯಕಿ ಪ್ರೀತಿ-ಹೊಸ ಪರಿಚಯ, ನಿರ್ದೇಶಕ ಪ್ರಕಾಶ್‌- ಹೊಸ ಪರಿಚಯ, ನಿರ್ಮಾಪಕರಾದ ಕೆ.ವೆಂಕಟರಮಣ, ಪಿ.ನಾಗರಾಜ್‌-ಹೊಸ ಪರಿಚಯ..

  ಚಿತ್ರದ ಶೀರ್ಷಿಕೆಗಳು ಹೀಗೆ ತೆರೆದುಕೊಳ್ಳುತ್ತ ಹೋದಂತೆ ‘ಪ್ರಾಣ’ ಎಂಬ ಚಿತ್ರ ಒಂದು ಟ್ರಯಲ್‌ ಆ್ಯಂಡ್‌ ಎರರ್‌ ಚಿತ್ರವಾಗಿರಬಹುದೇ ಎಂಬ ಸಂಶಯ ಕಾಡತೊಡಗುತ್ತದೆ. ಆದರೆ ಚಿತ್ರವೇ ತೆರೆದುಕೊಳ್ಳುತ್ತ ಹೋದಂತೆ ಅದು ಪಡೆದುಕೊಳ್ಳುವ ವೇಗ, ಆವೇಗ ಹುಟ್ಟಿಸುತ್ತದೆ. ಮುಂದೆ, ಪ್ರಾಣ ಎಂಬ ಪ್ರಕಾಶ್‌ ಎಕ್ಸ್‌ಪ್ರೆಸ್‌ನಲ್ಲಿ ನೀವು ಪಯಣಿಸುತ್ತೀರಿ!

  ನಿಜ. ಪ್ರಾಣ ಹಲವು ಕಾರಣಗಳಿಗೆ ತಾಜಾ ಅನುಭವ ಕೊಡುತ್ತದೆ. ಮೊದಲನೆಯದಾಗಿ ನೋಡಿದ್ದೇ ಮುಖ ನೋಡುವ ಹಿಂಸೆಯಿಂದ ಪ್ರೇಕ್ಷಕರನ್ನು ಕಾಪಾಡಿದ್ದು. ಒಂದೇ ಒಂದು ಪುಟ್ಟ ಪಾತ್ರವನ್ನೂ ಹೊಸಬರಿಂದಲೇ ಮಾಡಿಸಿರುವುದಕ್ಕೆ ಭೇಷ್‌ ಎನ್ನಲೇಬೇಕು. ಎರಡನೆಯದಾಗಿ ಯಾರೂ ಹೊಸಬರು ಎನ್ನಿಸದಿರುವುದು. ಪ್ರತಿಯಾಬ್ಬರ ಅಭಿನಯವೂ ಲೀಲಾಜಾಲ. ಹೊಸಬರೆಂಬ ಹಿಂಜರಿಕೆ, ತಡವರಿಕೆ ಇಲ್ಲವೇ ಇಲ್ಲ. ಮೂರನೆಯದಾಗಿ ಪೂರಕ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ, ನಾಲ್ಕನೆಯದು ಇದು ರೀಮೇಕ್‌ ಚಿತ್ರ ಇಲ್ಲ !

  ನಾಯಕ ಜೀವ ಲವ್ವು ಗಿವ್ವು ಎಂದರೆ ದೂರ. ಅದು ಹದಿಹರಿಯದ ಕಚ್ಚಾಟ, ಅದೇ ಜೀವನವಲ್ಲವೆಂದು ನಂಬಿದಾತ. ರಾತ್ರಿ ಟ್ಯಾಕ್ಸಿ ಓಡಿಸೋದು, ಹಗಲಿಗೆ ಕಾಲೇಜು. ಆತನಿಗೆ ಅಷ್ಟೇ ಅಂತರ್ಮುಖಿ ನಾಯಕಿಯ ಕಾಲೇಜಿನಲ್ಲಿ ಪರಿಚಯ. ಆಕೆ ಬಹಿಮುರ್ಖಿಯಾಗಲು, ಆಟೋಟಗಳಲ್ಲಿ ಪಾಲ್ಗೊಳ್ಳಲು ಕಾರಣಕರ್ತನಾಗುತ್ತಾನೆ ಜೀವ. ಅಷ್ಟೊತ್ತಿಗೆ ಶುರುವಾಗುತ್ತದೆ ಲವ್ವು. ನಾಯಕಿಯ ಹುಟ್ಟುಹಬ್ಬದ ಕಾಣಿಕೆ ಖರೀದಿಯ ದುಡ್ಡಿಗಾಗಿ ಒಬ್ಬ ಉದ್ಯಮಿಯನ್ನೇ ಕೊಲೆ ಮಾಡುತ್ತಾನೆ. ಪರಿಸ್ಥಿತಿ ಹಾಗೆ ಮಾಡಿಸಿರುತ್ತದೆ ಎಂದುಕೊಳ್ಳಿ. ಆಗ ಪೊಲೀಸರ ಕೈಗೆ ಸಿಕ್ಕಿ ಬೀಳದವ ಮತ್ತೊಮ್ಮೆ ನಾಯಕಿಯ ತಂದೆಗೆ ಹಾರ್ಟ್‌ ಆಪರೇಷನ್‌ಗೆ ದುಡ್ಡು ಹೊಂದಿಸಲು ಇನ್ನೊಬ್ಬ ಉದ್ಯಮಿಯ ಕೊಲೆ ಮಾಡುತ್ತಾನೆ. ಆಗ ಸಿಕ್ಕಿ ಬೀಳುತ್ತಾನೆ.

  ಕೊಲೆಗೆಡುಕನೆಂಬ ಹಣೆಪಟ್ಟಿಯಿಂದಾಗಿ ತಂದೆ-ತಾಯಿ, ಆತ್ಮೀಯ ಸ್ನೇಹಿತರು ದೂರ ಮಾಡುತ್ತಾರೆ. ಕೊನೆಗೊಮ್ಮೆ ನಾಯಕಿಯೇ ತನ್ನ ಸುರಕ್ಷತೆಗಾಗಿ ಬೇರೊಬ್ಬನನ್ನು ಮದುವೆಯಾಗಲು ಅನುವಾಗುತ್ತಾಳೆ. ಪ್ರೇಮಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡು , ಕೊಲೆಗಡುಕ ಆಪಾದನೆ ಹೊತ್ತು ಏಕಾಂಗಿಯಾದವನಿಗೆ ಯಾರೂ ಆಸರೆ ಇಲ್ಲದಂತಾಗುತ್ತದೆ. ಜಗತ್ತಿನ ಯಾವ ಪ್ರೀತಿಯೂ ನಿಜವಲ್ಲ. ಎಲ್ಲವೂ ಸುರಕ್ಷತೆ, ಪ್ರತಿಷ್ಠೆ, ಭಯ ಮುನ್ನೆಚ್ಚರಿಕೆ ಇತ್ಯಾದಿ ಇತ್ಯಾದಿ ಸ್ವಾರ್ಥ ಸಾಧನೆಗಷ್ಟೆ ಎಂಬ ನಿರ್ಧಾರಕ್ಕೆ ಬರುತ್ತಾನೆ. ಇನ್ನು ತಾನು ಬದುಕಿದ್ದೂ ಪ್ರಯೋಜನವಿಲ್ಲ ಎಂದುಕೊಂಡು ಆತ್ಮಹತ್ಯೆಗೆ ಮನಸ್ಸು ಮಾಡುತ್ತಾನೆ. ಆದರೆ ಪ್ರಾಣದ ಉದ್ದೇಶ ಪ್ರೀತಿಗಾಗಿ ಸಾವಲ್ಲ , ಬದುಕು.

  ಚಿತ್ರ ಏಕ್‌ದಂ ಅದ್ಭುತ ಎನ್ನಲಾಗದಿದ್ದರೂ ಹೊಸಥರದ ಚಿತ್ರ. ಕಥೆಯಂತೆ ನಿರೂಪಣೆಯೂ ವಿಭಿನ್ನ ಮತ್ತು ಅಚ್ಚರಿ. ಅಲ್ಲಲ್ಲಿ ತುಸು ಹೆಚ್ಚೆನಿಸುವ ಉಪದೇಶಾಮೃತ , ಅಲ್ಲಲ್ಲಿ ತೊಡರುವ ಫ್ಲಾಶ್‌ಬ್ಯಾಕ್‌ ಮತ್ತು ದ್ವಿತೀಯಾರ್ಧ ದೀರ್ಘವಾಗಿರುವುದು ಮೈನಸ್‌ ಪಾಯಿಂಟ್ಸ್‌ . ಪ್ರೇಕ್ಷಕರಿಗೆ ಆಕಳಿಕೆ ತರುತ್ತದೆ ಎನ್ನುವಷ್ಟರಲ್ಲಿಯೇ ಕುತೂಹಲ ತಿರುವು ಪಡೆದು ಕುರ್ಚಿ ತುದಿಗೆ ಕುಳ್ಳಿರಿಸುವುದು ಪ್ಲಸ್‌ ಪಾಯಿಂಟ್‌.

  ನಾಯಕ ಪ್ರೇಮ್‌ ಸಂಯಮದ ಅಭಿನಯ ನೀಡಿದ್ದಾರೆ. ಅವಕಾಶ ಸಿಕ್ಕರೆ ಕನ್ನಡಕ್ಕೊಬ್ಬ ವಿಕ್ರಂ (ಸೇತು, ಅದೂ ತಯಾರಾಗಿ 2 ವರ್ಷ ನಂತರ ಬಿಡುಗಡೆಯಾಗಿತ್ತು .)ದೊರಕಿದಂತಾಗುತ್ತದೆ. ನಾಯಕಿ ಪ್ರೀತಿಯದೂ ಸಹಜಾಭಿನಯ.

  ಬಿ. ಸುರೇಶಬಾಬು ಛಾಯಾಗ್ರಹಣ ಈ ಚಿತ್ರವನ್ನು ಕಾವ್ಯವಾಗಿಸಿದೆ. ಮಂಗಳೂರು ಕಡಲ ಕಿನಾರೆ, ಸಹ್ಯಾದ್ರಿ ಕಣಿವೆಗಳು ಆಸ್ಟ್ರೇಲಿಯಾ, ಸ್ವಿಸ್‌ , ಮಲೇಷ್ಯಾಗೆ ಹೋದರೆ ಸಿಗುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕೆಂದವರು ಒಮ್ಮೆ ಚಿತ್ರ ನೋಡಲೇ ಬೇಕು . ಪ್ರತಿ ಶಾಟ್‌ಗೂ ಛಾಯಾಗ್ರಹಕ ವಹಿಸಿರುವ ಕಾಳಜಿ ಎದ್ದು ಕಾಣುತ್ತದೆ. ಸಂಕಲನಕಾರ ಕೆ.ಗಿರೀಶ್‌ಕುಮಾರ್‌ ತಮ್ಮ ಕೆಲಸ ನೀಟಾಗಿ ಮಾಡಿದ್ದಾರೆ. ಆಲ್ವಿನ್‌ ಸಂಗೀತದಲ್ಲಿ ಎರಡು ಹಾಡು ಸೊಗಸಾಗಿವೆ.

  ಉಪೇಂದ್ರ ಶಿಷ್ಯ ನಿರ್ದೇಶಕ ಪ್ರಕಾಶ್‌ ಯೋಚನೆಯ ಧಾಟಿಯಲ್ಲಿ , ಸಂಭಾಷಣೆ ಹೊಡೆಯಿಸುವ ರೀತಿಯಲ್ಲಿ ,ಚಕಚಕ ಚಿತ್ರ ಓಡಿಸುವ ಮಾದರಿಯಲ್ಲಿ , ಒಟ್ಟಾರೆ ಚಿತ್ರದ ದಿಕ್ಕು ನಿರ್ಧರಿಸುವಲ್ಲಿ ಯಥಾ ಗುರು ತಥಾ ಶಿಷ್ಯ. ಒಬ್ಬ ಒಳ್ಳೆಯ ಗುರುವನ್ನು ಅನುಕರಿಸಿದರೆ ತಪ್ಪೇನಿಲ್ಲ, ಅಪಚಾರವೂ ಇಲ್ಲ. ಇದೇನು ರೀಮೇಕ್‌ ಮಾಡಿದಂತಲ್ಲವಲ್ಲ . ಹೊಸಬರಿಂದ, ಅವರದೇ ಧಾಟಿಯಲ್ಲಿ ಉಪೇಂದ್ರ ಮಾದರಿಯ ಡೈಲಾಗ್‌ ಹೊಡೆಯುವುದು ಸುಲಭವಲ್ಲ. ಆದರಿಲ್ಲಿ ಪ್ರೇಕ್ಷಕರು ಶಿಳ್ಳೆ ಹೊಡೆಯುವಂತೆ ಡೈಲಾಂಗ್‌ ಉದುರುತ್ತವೆ. ದೃಶ್ಯಗಳು ಓಡುತ್ತವೆ..

  (ಸ್ನೇಹ ಸೇತು : ವಿಜಯಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X