»   » ಯಾಹೂ ಭೂತ್‌ಕಾಟ್‌ ಕಾಮ್‌!

ಯಾಹೂ ಭೂತ್‌ಕಾಟ್‌ ಕಾಮ್‌!

Subscribe to Filmibeat Kannada
  • ರಮೇಶ್‌ಕುಮಾರ್‌ ನಾಯಕ್‌
ಕತೆ : ಗೀತೂ ಅನ್ನೋ ಹುಡುಗಿ ದೆವ್ವ-ಭೂತಗಳ ಬಗ್ಗೆ ವಿಶೇಷ ವರದಿ ಸಿದ್ದಪಡಿಸಲು ಸಾಲಿಗ್ರಾಮಕ್ಕೆ ಹೋಗುತ್ತಾಳೆ. ಅವಳ ಬೆಂಗಾವಲಿಗಾಗಿ ಗುಂಡೂ(ಸೌರವ್‌), ಭಾನು ಮತ್ತಿತರ ನಾಲ್ವರು ಸ್ನೇಹಿತರು ಜತೆಗಿರುತ್ತಾರೆ. ಅಲ್ಲಿ ಅವರು ನಾಗಪ್ಪ ಮಯ್ಯ(ದತ್ತಾತ್ರೇಯ) ಎಂಬವರ ಮನೆ ಬಾಗಿಲು ತಟ್ಟುತ್ತಾರೆ. ಆದರೆ ಗೀತೂ ತಂಡವನ್ನು ಸ್ವಾಗತಿಸುವುದು ದೆವ್ವಗಳ ಕುಟುಂಬ!

ಚಿತ್ರಕತೆ : ದೆವ್ವ ಪಿಶಾಚಿಗಳು ಎಂದರೆ ತಮಾಷೆಯ ಐಟಂಗಳು ಎಂದುಕೊಂಡಿದ್ದ ಗೀತೂ ತಂಡ ಸಾಲಿಗ್ರಾಮದಲ್ಲಿ ಮೈನಡುಗವಂಥ ದೆವ್ವದ ಕತೆಗಳನ್ನೂ ಕೇಳಿಸಿಕೊಳ್ಳುತ್ತದೆ. ಆತ್ಮಹತ್ಯೆ ಮಾಡಿಕೊಂಡ ಹುಡುಗಿ ಮುಂಬೈಯಲ್ಲಿರುವ ಪ್ರಿಯತಮನ ಮನೆ ಸೇರುವುದು, ಕೊಳ್ಳಿ ದೆವ್ವಗಳ ನೃತ್ಯ ಇತ್ಯಾದಿ. ನಾಗಪ್ಪ ಮಯ್ಯರ ಮನೆಯಲ್ಲಿ ಪಡ್ಡೆ ಹುಡುಗರ ಲಂಗೋಟಿ ಒದ್ದೆ ಮಾಡುವಂಥ ನಾನಾ ರೀತಿಯ ನಾಟಕೀಯ ಘಟನೆಗಳು ಸಂಭವಿಸುತ್ತವೆ. ಹಾಂಗೂ ಹಿಂಗೂ ದೆವ್ವದ ಮನೆಯಿಂದ ತಪ್ಪಿಸಿಕೊಳ್ಳುವ ಮೂಲಕ ಕತೆಗೆ ಅಂತ್ಯ (ಆಗ ಪ್ರೇಕ್ಷಕರಿಗೂ ಥಿಯೇಟರ್‌ ಎಂಬ ದೆವ್ವದ ಮನೆಯಿಂದ ತಪ್ಪಿಸಿಕೊಂಡು ಬಂದ ಅನುಭವ)

ಸಂಭಾಷಣೆ : ಹಾರರ್‌ ಸಿನಿಮಾ ಆದ್ದರಿಂದ ಆ...ವ್‌...ಊ...ವ್‌, ಅಯ್ಯೋ, ಅಮ್ಮೋ, ಕುಂಯ್ಯೋ ಮುರ್ರೋ...ಅಮ್‌ಮ್‌ಮ್‌...ಇಂಥ ಸದ್ದೇ ಜಾಸ್ತಿ. ಸಂಭಾಷಣೆಕಾರನಿಗೆ ಇಂಕು, ಪೇಪರ್‌ ಉಳಿತಾಯ!

ನಿರ್ದೇಶನ : ಭೂತಾಧಾರಿತ ಚಿತ್ರಗಳಿಗೆ ಸುದೀರ್ಘ ಇತಿಹಾಸವಿದೆ. ಇಂಥ ಚಿತ್ರಗಳೆಲ್ಲ ತಾರ್ಕಿಕ ಅಂತ್ಯ ಕಾಣುತ್ತವೆ(ಕಾಣಬೇಕು ಕೂಡ). ಆದರೆ ಈ ಚಿತ್ರದ ನಿರ್ದೇಶಕರು ಭೂತಗಣದ ಅಸ್ತಿತ್ವ ಪ್ರತಿಪಾದಿಸುವಂಥ ಕ್ಲೈಮ್ಯಾಕ್ಸ್‌ ಸೃಷ್ಟಿಸಿದ್ದಾರೆ. ಆಮೂಲಕ ತಮ್ಮ ಚಿತ್ರದ ಅಸ್ತಿತ್ವವನ್ನೇ ಕೆಡಿಸಿದ್ದಾರೆ.

ಸಂಗೀತ : ಇಡೀ ಚಿತ್ರದಲ್ಲಿ ಭಯ ಹುಟ್ಟಿಸುವುದು ಎಂ.ಎನ್‌.ಕೃಪಾಕರ್‌ರವರ ಸಂಗೀತ ಮಾತ್ರ! ಆದಿಯಿಂದ ಅಂತ್ಯದವರೆಗೆ ಸಂಗೀತೋಪಕರಣಗಳು ಯಾವ ಪರಿ ಕುಕ್ಕಿಸಿಕೊಂಡಿವೆ ಎಂದರೆ, ಸಿನಿಮಾ ಮುಗಿಸಿ ಮನೆಗೆ ಹೋಗುವಾಗ ಯಾವ ವಾಹನದ ಹಾರ್ನೂ ಕಿವಿಗೆ ಬೀಳುವುದಿಲ್ಲ!

ಹಾಡುಗಳು : ಇರುವುದು ಎರಡೇ ಹಾಡುಗಳಾದರೂ ಇಂಪಾಗಿವೆ.

ಛಾಯಾಗ್ರಹಣ : ಛಾಯಾಗ್ರಾಹಕರದು ಇದ್ದುದರಲ್ಲಿ ಉತ್ತಮ ನಿರ್ವಹಣೆ. ಹಲವು ದೃಶ್ಯಗಳಲ್ಲಿ ಛಾ ಯಾಗ್ರಹಣ ಗಮನ ಸೆಳೆಯುತ್ತದೆ.

ವಿನೋದ : ಚಂದ್ರಮುಖಿ ಪ್ರಾಣಸಖಿ ಯಂಥ ಅವಿಸ್ಮರಣೀಯ ಚಿತ್ರ ನೀಡಿರುವ ಸೀತಾರಾಮ್‌ ಕಾರಂತರು ಇಂಥ ತಲೆ ಬುಡವಿಲ್ಲದ, ತಲೆ ಚಿಟ್ಟು ಹಿಡಿಸುವ ಚಿತ್ರ ನಿರ್ಮಿಸಿದ್ದು ಖಾರದ ಸಂಗತಿ.

ಧನ್ಯವಾದ : ಕೇವಲ ಎರಡೇ ಗಂಟೆಯಾಳಗೆ ಚಿತ್ರ ಮುಗಿಸಿ ಪ್ರೇಕ್ಷಕರ ಮೇಲೆ ದಯೆ ತೋರಿಸಿದ್ದಕ್ಕೆ.

ಷರಾ : ನಿಜಕ್ಕೂ ಇದು ಭಯಾನಕ ಚಿತ್ರ, ಅನುಮಾನ ಬೇಡ!

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada