»   » ಎಲ್ಲಿಂದ ಬಂದ ‘ಹುಬ್ಬಳ್ಳಿ’ಯಾಂವ?

ಎಲ್ಲಿಂದ ಬಂದ ‘ಹುಬ್ಬಳ್ಳಿ’ಯಾಂವ?

Posted By:
Subscribe to Filmibeat Kannada


ಓಂಪ್ರಕಾಶ್‌ ರಾವ್‌ ಮೊದಲು ಸ್ವಂತ ಚಿತ್ರಗಳನ್ನು ಮಾಡಿದರು. ನಂತರ ರೀಮೇಕ್‌. ಇತ್ತೀಚೆಗಂತೂ ರೀಮಿಕ್ಸ್‌ ಎಂಬ ಆರೋಪ. ‘ಹುಬ್ಬಳ್ಳಿ’ಯನ್ನು ಯಾವ ವಿಭಾಗಕ್ಕೆ ಸೇರಿಸಬೇಕು?

  • ಚೇತನ್‌ ನಾಡಿಗೇರ್‌
ಚಿತ್ರ : ಹುಬ್ಬಳ್ಳಿ
ನಿರ್ಮಾಣ-ನಿರ್ದೇಶನ : ಓಂ ಪ್ರಕಾಶ ರಾವ್‌
ಸಂಗೀತ : ಹೇಮಂತ್‌
ಛಾಯಾಗ್ರಹಣ : ವಿಷ್ಣುವರ್ಧನ್‌
ತಾರಾಗಣ : ಸುದೀಪ್‌, ರಕ್ಷಿತಾ, ಶೋಭರಾಜ್‌, ಚಿತ್ರಾ ಶೆಣೈ, ಮೇಘನಾ, ಸಾಧು ಕೋಕಿಲಾ ಮತ್ತಿತರರು

ಓಂಪ್ರಕಾಶ್‌ ರಾವ್‌ ಮೊದಲು ಸ್ವಂತ ಚಿತ್ರಗಳನ್ನು ಮಾಡಿದರು. ನಂತರ ರೀಮೇಕ್‌. ಇತ್ತೀಚೆಗಂತೂ ರೀಮಿಕ್ಸ್‌ ಎಂಬ ಆರೋಪ. ‘ಹುಬ್ಬಳ್ಳಿ’ಯನ್ನು ಯಾವ ವಿಭಾಗಕ್ಕೆ ಸೇರಿಸಬೇಕು? ಇದು ಕೊಂಚ ಕಷ್ಟ.

ಚಿತ್ರದ ಮೊದಲಾರ್ಧ ಪೂರಾ ಇಂಗ್ಲೀಷ್‌ನ ‘ಬಾರ್ನ್‌ ಐಡೆಂಟಿಟಿ’ಂುುಾಗಿರುವ ುದರಿಂದ ಇದನ್ನು ರೀಮೇಕ್‌ ಎನ್ನಬಹುದು. ಚಿತ್ರದ ದ್ವಿತೀಯಾರ್ಧ ‘ವಾಂಜಿ ನಾಥನ್‌’ ಸೇರಿದಂತೆ ಹಲವು ಪೋಲೀಸ್‌ ಚಿತ್ರಗಳ ರೀಮಿಕ್ಸ್‌ ಆಗಿರುವುದರಿಂದ ಇದನ್ನು ರೀಮಿಕ್ಸ್‌ ಚಿತ್ರ ಎಂದೂ ಕರೆಯಬಹುದು. ಸಮಸ್ಯೆಯನ್ನು ಇನ್ನೂ ಸುಲಭವಾಗಿ ಬಗೆಹರಿಸಬೇಕು ಎಂದರೆ ಇದೊಂದು ಕೊಲಾಜ್‌ ಚಿತ್ರ ಎಂದು ಸುಮ್ಮನಾಗಬಹುದು.

ಅದು ಬಿಡಿ. ಈಗ ಯಾರು ತಾನೇ ‘ಸ್ಫೂರ್ತಿ’ ಇಲ್ಲದೆ ಚಿತ್ರ ಮಾಡುತ್ತಾರೆ? ಎಲ್ಲರ ಕೈಯೂ ಮತ್ತೊಬ್ಬರ ಜೇಬಿನಲ್ಲೇ. ಹಾಗಾಗಿ ಅದನ್ನೆಲ್ಲ ಮರೆತು ಚಿತ್ರದ ಕತೆ ಕೇಳುವಂತವರಾಗಿ. ಚಿತ್ರ ಪ್ರಾರಂಭವಾಗೋದೇ ಅವನಿಂದ. ಅವನ್ಯಾರು? ಅವನ ಹೆಸರೇನು? ಎಲ್ಲಿಂದ ಬಂದವನು? ಎಲ್ಲಿಗೆ ಹೊರಟವನು? ಯಾರಿಗೂ ಆ ಬಗ್ಗೆ ಗೊತ್ತಿಲ್ಲ. ಸ್ವತಃ ಅವನಿಗೂ ಗೊತ್ತಿಲ್ಲ. ಕಾರಣ ಅವನ ತಲೆಗೆ ಭಾರೀ ಏಟು ಬಿದ್ದು ನೆನಪಿನ ಶಕ್ತಿ ಕಳೆದುಹೋಗಿದೆ. ಅವನು ಹೇಗಾದರೂ ಮಾಡಿ ತಾನ್ಯಾರೆಂದು ಪತ್ತೆ ಮಾಡಬೇಕು. ಆಗ ಅವನಿಗೆ ನೆರವಾಗುವವಳು ಒಬ್ಬ ಹುಡುಗಿ. ಈ ಹುಡುಕಾಟದಲ್ಲಿ ಕ್ರಮೇಣ ಅವನಿಗೆ ತಾನ್ಯಾರೆಂದು ಗೊತ್ತಾಗುವಷ್ಟರಲ್ಲಿ ಮಧ್ಯಂತರ ಬಂದಿರುತ್ತದೆ. ಹೌದು, ಇಷ್ಟಕ್ಕೂ ಅವನ್ಯಾರು? ಅದು ಹೇಳಿದರೆ ಮಜಾ ಏನಿರುತ್ತೆ ಬಿಡಿ. ಅದನ್ನ ಚಿತ್ರಮಂದಿರದಲ್ಲೇ ನೋಡಿ.

ಸ್ವಂತದ್ದೋ, ಸ್ಫೂರ್ತಿಪಡೆದಿದ್ದೋ, ಅದು ಬೇರೆ ಮಾತು. ಒಂದು ಟಿಪಿಕಲ್‌ ಭಾರತೀಯ, ಪೋಲೀಸ್‌, ಕಮರ್ಷಿಯಲ್‌ ಚಿತ್ರ ಹೇಗಿರಬೇಕೋ ‘ಹುಬ್ಬಳ್ಳಿ’ ಕೂಡ ಹಾಗೆಯೇ ಇದೆ. ಸುದೀಪ್‌, ಕಾಮಿಡಿ, ಚೇಸಿಂಗ್‌ ಅಂತ ಮೊದಲ ಒಂದು ಗಂಟೆ ಕಳೆಯೋದೇ ಗೊತ್ತಾಗಲ್ಲ. ಕಷ್ಟ ಗೊತ್ತಾಗೋದೇ ಮಧ್ಯಂತರದ ನಂತರ. ಅಷ್ಟರಲ್ಲಿ ಫ್ಲಾಷ್‌ಬ್ಯಾಕ್‌ ಬಂದಿರುತ್ತದೆ. ಸುದೀಪ್‌ರ ಹಿನ್ನೆಲೆ ಗೊತ್ತಾಗಿರುತ್ತದೆ.

ಲಾಂಗು-ಮಚ್ಚುಗಳು, ದುಷ್ಟರ ಒಣಜಂಭದ ಮಾತುಗಳು-ಕೇಕೆಗಳು ... ಮುಂದಿನದೆಲ್ಲ ನಿಮಗೆ ಗೊತ್ತಲ್ಲ . ಇಷ್ಟಾದರೂ ಚಿತ್ರಕ್ಕೆ ಶಿಳ್ಳೆ ಬೀಳುತ್ತದೆ ಎಂದರೆ ಅದು ಸುದೀಪ್‌ರಿಂದ. ಸುದೀಪ್‌ ಚಿತ್ರದ ತುಂಬ ವಿಜೃಂಭಿಸುತ್ತಾರೆ. ಅದರಲ್ಲೂ ನೆನಪಿನಶಕ್ತಿ ಹೋದಾಗ, ತಾನ್ಯಾರು ಎಂದು ಪತ್ತೆಹಚ್ಚುವಾಗ ಅವರ ಅಭಿನಯ ನೋಡಿಯೇ ಸವಿಯಬೇಕು. ರಕ್ಷಿತಾ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಸಾಧು ಕೋಕಿಲ ಸತತ ಮೂರನೇ ಬಾರಿಗೆ ರಕ್ಷಿತಾಳನ್ನು ಪ್ರೀತಿಸಿ ನಿರಾಶೆಗೊಳಗಾಗಿದ್ದಾರೆ. ಶೋಭರಾಜ್‌, ಚಿತ್ರಾ ಶೆಣೈ, ಮೇಘನಾ ಮುಂತಾದವರು ಚಿಕ್ಕ ಪಾತ್ರಗಳಲ್ಲೇ ಗೆಲ್ಲುತ್ತಾರೆ.

ಹೇಮಂತ್‌ ಹಾಡುಗಳು ಕೇಳುವಂತಿವೆ. ಅದನ್ನು ನೋಡುವಂತೆಯೂ ಮಾಡಿದ್ದಾರೆ ಛಾಯಾಗ್ರಾಹಕ ವಿಷ್ಣುವರ್ಧನ್‌. ಪಳನಿರಾಜ್‌, ಕೆ.ಡಿ. ವೆಂಕಟೇಶ್‌ ಸಾಹಸ ದೃಶ್ಯಗಳು ಓಕೆ. ಇದರ ಜತೆಗೆ ಉಪ್ಪಿನಕಾಯಿ ತರಹ ಎಂ.ಎಸ್‌. ರಮೇಶ್‌ ಬರೆದಿರುವ ಸಂಭಾಷಣೆಗಳಿವೆ.

ಅಭಿಮಾನಿಗಳಿಗಂತೂ ‘ಹುಬ್ಬಳ್ಳಿ’ ಹಬ್ಬ, ಅಬ್ಬಾಬ್ಬ!!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada