twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ 'ಜಾಕಿ'

    By * ರಾಜೇಂದ್ರ ಚಿಂತಾಮಣಿ
    |

    ಚಿತ್ರದ ನಾಯಕ ಉಂಡಾಡಿ ಗುಂಡ. ಇಸ್ಪೀಟ್ ಆಟದಲ್ಲಿ ಪಳಗಿದ ಕೈ.ಓದು ಒಕ್ಕಾಲು ಬುದ್ಧಿ ಮುಕ್ಕಾಲು. ಹಾಗೆಯೇ ಠಕ್ಕ ಬಿಟ್ರೆ ಸಿಕ್ಕ. ಮನೆಗೆ ಮಾರಿ ಊರಿಗೆ ಉಪಕಾರಿ. ಹೆಸರು ಜಾನಕಿರಾಮ. ಎಲ್ಲರೂ ಶಾರ್ಟ್ ಅಂಡ್ ಸ್ವೀಟ್ ಆಗಿ ಜಾಕಿ ಎಂದು ಕರೆಯುತ್ತಿರುತ್ತಾರೆ. ಇಂತಿಪ್ಪ ಜಾಕಿ ತಮ್ಮ ಏರಿಯಾದ ಪುರೋಹಿತರ ಹುಡುಗಿ ಸಂಧ್ಯಾಗೆ (ಹರ್ಷಿಕಾ ಪೂಣಚ್ಚ) ಮದುವೆ ಮಾಡಿಸಲು ಹೋಗಿ ಇಕ್ಕಟ್ಟಿಗೆ ಸಿಲುಕುತ್ತಾನೆ. ಜಾಕಿ ಕತೆ ಏನಾಗುತ್ತದೆ ಎಂದು ಓದುವುದಕ್ಕೂ ಮುನ್ನ ಚಿತ್ರದ ಬಗ್ಗೆ ಒಂದೆರಡು ಮಾತು.

    ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ. ಇವೆಲ್ಲವನ್ನು ದುನಿಯಾ ಸೂರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುನೀತ್ ಅವರನ್ನು ಗಮನದಲ್ಲಿಟ್ಟುಕೊಂಡೇ ಸೂರಿ ಕಥೆ ಹೆಣೆದಿದ್ದಾರೆ. ಚಿತ್ರಕಥೆಗೆ ಆಯ್ಕೆ ಮಾಡಿರುವ ತಾಣಗಳು ನೈಜವಾಗಿವೆ. ಹಾಡುಗಳ ಚಿತ್ರಣವಂತೂ ಕಣ್ಣಿಗೆ ಹಬ್ಬ. ಸಂಭಾಷಣೆಯಲ್ಲಿನ ಆಡುಭಾಷೆಯ ಬಳಕೆ ಮುಂದಿನ ಬೆಂಚಿನ ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುವಲ್ಲಿ ಸೂರಿ ಯಶಸ್ವಿಯಾಗಿದ್ದಾರೆ.

    ಆರ್ಯ ವೈಶ್ಯ ಭವನದ ಫುಲ್ ಮೀಲ್ಸ್ ನಂತೆ ಚಿತ್ರವನ್ನು ಒಪ್ಪ ಓರಣವಾಗಿ ಸೂರಿ ತೆರೆಗೆ ತಂದಿದ್ದಾರೆ. ಸನ್ನಿವೇಶವೊಂದರಲ್ಲಿ ನಾಯಕನನ್ನು ಜೀವಂತವಾಗಿ ಮಣ್ಣು ಮಾಡಲಾಗುತ್ತದೆ. ಗೋರಿಯಿಂದ ನಾಯಕ ಎದ್ದು ಬರುತ್ತಾನೆ. ಇದು ಒಂಚೂರು ಅತಿಶಯೋಕ್ತಿ ಅನ್ನಿಸುತ್ತದೆ. ಮಾಸ್ ಪ್ರೇಕ್ಷಕರನ್ನು ಉದ್ದೇಶವಾಗಿಟ್ಟುಕೊಂಡು ಈ ಸನ್ನಿವೇಶವನ್ನು ಸೂರಿ ಹೆಣೆದಿದ್ದಾರೆ ಅನ್ನಿಸುತ್ತದೆ.

    ರಂಗಾಯಣ ರಘು ನಟನೆ ಬಗ್ಗೆ ಎರಡು ಮಾತಿಲ್ಲ. ಅವರು ಮಾತನಾಡಿದರೆ ನಗೆ ಬುಗ್ಗೆ ಉಕ್ಕಿ ಬರುತ್ತದೆ. 'ಜಾಕಿ' ಪಾತ್ರಕ್ಕೆ ಪುನೀತ್ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಅವರ ಸಂಭಾಷಣೆ ಶೈಲಿ, ನೃತ್ಯ, ಫೈಟ್ಸ್‌ ವಿಭಿನ್ನವಾಗಿವೆ. ಸಾಹಸಪ್ರಿಯರಿಗೆ ಮತ್ತಷ್ಟು ಆಪ್ತರಾಗುತ್ತಾರೆ.

    ಮಲ್ಲು ಬೆಡಗಿ ಭಾವನಾ ಸೊಗಸಾಗಿ ಅಭಿನಯಿಸಿದ್ದಾರೆ. ಆದರೆ ಆಕೆಯ ನಟನೆಯನ್ನು ಸೂರಿ ಇನ್ನೂ ಒಂಚೂರು ಹೊರತೆಗೆಯಬೇಕಾಗಿತ್ತು ಅನ್ನಿಸುತ್ತದೆ. ಜಾಕಿ ತಾಯಿಯಾಗಿ ಸುಮಿತ್ರಮ್ಮ ಗಮನಸೆಳೆಯುತ್ತಾರೆ. ಸಿಕ್ಕ ಅವಕಾಶದಲ್ಲಿ ಹರ್ಷಿಕಾ ಪೂಣಚ್ಚ ನಟನೆ ಪರ್ವಾಗಿಲ್ಲ.

    ಜಾಕಿ ಚಿತ್ರ ನಾಯಕ ಪ್ರಧಾನ ಚಿತ್ರ ಹೇಗೋ ಹಾಗೆ ತಾಂತ್ರಿಕ ಪ್ರಧಾನ ಚಿತ್ರವೂ ಹೌದು. ಸತ್ಯ ಹೆಗಡೆ ಅವರ ಕ್ಯಾಮೆರಾ ಟ್ರಿಕ್ಸ್ ಕಣ್ಣಿಗೆ ಹಿತವಾಗಿದೆ. ಚಿತ್ರದಲ್ಲಿ ಬಳಕೆ ಮಾಡಿರುವ ಸೆಟ್ಸ್, ಬಣ್ಣಗಳು ನೈಜವಾಗಿ ಮೂಡಿಬರುವಲ್ಲಿ ಶಶಿಧರ ಅಡಪ ಅವರ ಕಲಾ ನಿರ್ದೇಶನ ಎದ್ದು ನಿಲ್ಲುತ್ತದೆ. ಸಂಕಲನ ಸಹ ಫೈನಾಗಿರುವಂತೆ ದೀಪು ಎಸ್ ಕುಮಾರ್ ಜಾಗ್ರತೆ ವಹಿಸಿದ್ದಾರೆ. ಹಾಗಾಗಿ ಚಿತ್ರ ಸರಾಗವಾಗಿ ಸಾಗುತ್ತದೆ. ಈಗ ಚಿತ್ರದ ಕತೆಗೆ ಬರೋಣ.

    ಸಂಧ್ಯಾ ಪ್ರೀತಿಸುತ್ತಿದ್ದವನೊಂದಿಗೆ ಮದುವೆ ಮಾಡಲು ಜಾಕಿ ಸಹಾಯ ಮಾಡುತ್ತಾನೆ. ಅಷ್ಟರಲ್ಲಿ ಆ ಹುಡುಗಿ ಹುಡುಗನೊಂದಿಗೆ ರಾತ್ರೋ ರಾತ್ರಿ ಪರಾರಿಯಾಗುತ್ತಾಳೆ. ಅದೇ ಸಮಯಕ್ಕೆ ಜಾಕಿ ಗೆಳೆಯನೊಬ್ಬ ಪೋಲೀಸರಿಂದ ತಪ್ಪಿಸಿಕೊಂಡು ಬಂದು ಸಹಾಯ ಕೇಳುತ್ತಾನೆ. ಅವನಿಗೆ ಮುಸುಕು ಹಾಕಿ ನಟ್ಟ ನಡುರಾತ್ರಿಯಲ್ಲಿ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರಬೇಕಾದರೆ ಹುಡುಗಿ ಅಪ್ಪ ನೋಡುತ್ತಾರೆ.

    ನನ್ನ ಮಗಳನ್ನು ಜಾಕಿಯೇ ಎಲ್ಲೋ ಕರೆದುಕೊಂಡು ಹೋದ ಎಂದು ಪುರೋಹಿತರು ತಪ್ಪಾಗಿ ಭಾವಿಸುತ್ತಾರೆ. ಜಾಕಿ ತಾಯಿ ಜಯಮ್ಮನ ಬಳಿಯೂ ತನ್ನ ಮಗಳನ್ನು ಕರೆದುಕೊಂಡು ಬರುವಂತೆ ಅಂಗಲಾಚಿ ಬೇಡಿಕೊಳ್ಳುತ್ತಾರೆ. ಮೊದಲೇ ಊರಲ್ಲಿ ಜಾಕಿ ಇಮೇಜ್ ಸಾಕಷ್ಟು ಡ್ಯಾಮೇಜ್ ಆಗಿರುತ್ತದೆ. ಹುಡುಗಿಯನ್ನು ತಾನು ಕರೆದುಕೊಂಡು ಹೋಗಿಲ್ಲ ಎಂದರೆ ಯಾರು ನಂಬುತ್ತಾರೆ? ಅವನು ಎಷ್ಟು ಹೇಳಿದರೂ ಹೆತ್ತ ತಾಯಿಯೂ ನಂಬಲ್ಲ.

    ಕಡೆಗೆ ಆ ಹುಡುಗಿಯನ್ನು ಕರೆತರುತ್ತೇನೆ ಎಂದು ಹೇಳಿ ಹೊರಟು ಹೋಗುತ್ತಾನೆ. ಏತನ್ಮಧ್ಯೆ ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದ ಗೆಳೆಯನ ಜೊತೆ ಅಲ್ಲಿ ಇಲ್ಲಿ ತಲೆಮರೆಸಿಕೊಂಡು ಅಲೆಯುತ್ತಿರುತ್ತಾನೆ. ಪೊಲೀಸರಿಂದ ಅವನು ತಪ್ಪಿಸಿಕೊಂಡು ಬರುತ್ತಿರಬೇಕಾದರೆ ಇನ್ನೊಂದು ಎಡವಟ್ಟಾಗಿರುತ್ತದೆ. ಪೇದೆಯೊಬ್ಬ ಇವನನ್ನು ಹಿಡಿಯಲು ಹೋಗಿ ರಸ್ತೆ ಅಪಘಾತದಲ್ಲಿ ಸಾವಪ್ಪುತ್ತಾನೆ. ಆ ಕಳ್ಳನೇ ಪೇದೆಯನ್ನು ಸಾಯಿಸಿದ ಎಂದು ಪೊಲೀಸರು ಅನುಮಾನಿಸುತ್ತಾರೆ.

    ಇಷ್ಟೆಲ್ಲಾ ಗಂಭೀರ ಆರೋಪಗಳುಳ್ಳ ಗೆಳೆಯನೊಂದಿಗೆ ಜಾಕಿ ಕದ್ದುಮುಚ್ಚಿ ಕಾಡಿನಲ್ಲಿ ಓಡಾಡುತ್ತಿರುತ್ತಾನೆ. ಆಗ ಇದ್ದಕ್ಕಿದ್ದಂತೆ ಒಂದು ಗ್ಯಾಂಗ್ ಇವರ ಮೇಲೆ ದಾಳಿ ಮಾಡುತ್ತದೆ. ಅವರ ಜೊತೆ ಜಾಕಿ ಫೈಟ್ ಮಾಡುತ್ತಾನೆ. ಕಡೆಗೆ ಅವರು ಪೊಲೀಸರು ಎಂದು ಗೊತ್ತಾಗುತ್ತದೆ. ಅವನ ಗೆಳೆಯನನ್ನು ಎನ್‌ಕೌಂಟರ್ ಮಾಡಿ ಮುಗಿಸುತ್ತಾರೆ. ಜಾಕಿಯ ತಲೆಗೂ ಗನ್ ಇಟ್ಟು ಗುಂಡು ಹಾರಿಸಲು ನೋಡುತ್ತಾರೆ.

    ಅಲ್ಲಿಂದ ಜಿಂಕೆಯಂತೆ ಚಂಗನೆ ಹಾರಿ ಹೇಗೋ ತಪ್ಪಿಸಿಕೊಂಡು ಓಡುತ್ತಾನೆ. ಪೊಲೀಸರು ಜಾಕಿ ಬೆನ್ನಿಗೆ ಬೀಳುತ್ತಾರೆ. ಸುಮ್ಮನಿರಲಾರದೆ ಮೈಮೇಲೆ ಇರುವೆ ಬಿಟ್ಟುಕೊಂಡರಂತೆ ಎಂಬಂತಾಗುತ್ತದೆ ಜಾಕಿ ಪರಿಸ್ಥಿತಿ. ಸಂಧ್ಯಾ ಪರಾರಿಯಾಗಬೇಕಾದರೆ ತನ್ನ ಗೆಳತಿ ಅಂಧ ಹುಡುಗಿಯೊಬ್ಬಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಿರುತ್ತಾಳೆ. ಆ ಅಂಧ ಹುಡುಗಿಯನ್ನು ಜಾಕಿ ತಂಗಿಯಂತೆ ನೋಡಿಕೊಂಡಿರುತ್ತಾನೆ.

    ಪೊಲೀಸರಿಂದ ತಪ್ಪಿಸಿಕೊಂಡು ಯಾವುದೋ ಬೈಕಿನಲ್ಲಿ ಎದ್ದನೋ ಬಿದ್ದನೋ ಎಂದು ಪೇರಿಕೀಳುತ್ತಿದ್ದ ಜಾಕಿಗೆ ಅಚಾನಕ್ಕಾಗಿ ಹುಡುಗಿ(ಭಾವನಾ)ಯೊಬ್ಬಳನ್ನು ನರಬಲಿಕೊಡುತ್ತಿದ್ದ ಗ್ಯಾಂಗ್ ಎದುರಾಗುತ್ತದೆ. ಈ ನರಹಂತಕರಿಂದ ಹುಡುಗಿಯನ್ನು ಬಚಾವು ಮಾಡಿ ಜಾಕಿ ಸೇಫಾಗಿ ಮನೆಗೆ ತಲುಪಿಸಲು ನೋಡುತ್ತಾನೆ. ತಮ್ಮ ಮಾವನೇ ಇದೆನ್ನೆಲ್ಲಾ ಮಾಡಿಸಿದ್ದ ಎಂಬ ಕಾರಣಕ್ಕೆ ಅವಳಿಗೆ ಮನೆಗೆ ಹೋಗಲು ಇಷ್ಟವಿರಲ್ಲ. ಇನ್ನೇನು ಜಾಕಿಗೆ ಒಳ್ಳೆ ಜೋಡಿ ಸಿಕ್ಕಂತಾಯ್ತು.

    ಹೇಳಿಕೇಳಿ ಉಂಡಾಡಿ ಗುಂಡನಾದ ಜಾಕಿ ಹೋಗಿ ಹೋಗಿ ಕಲಾಸಿಪಾಳ್ಯ ಪೊಲೀಸ್ ಠಾಣೆ ಚಾವಣಿ ಮೇಲೆ ಮಲಗುತ್ತಾನೆ. ಬೆಳಗ್ಗೆ ಪೇದೆ ಮೀಸೆ ಭೀಮಣ್ಣ (ರಂಗಾಯಣ ರಘು) ಎಬ್ಬಿಸಿದಾಗಲೇ ಅವನಿಗೆ ಎಚ್ಚರವಾಗುವುದು. ಅವನನ್ನು ಠಾಣೆಗೆ ಕರೆದುಕೊಂಡು ಹೋಗಿ ಯಾರು ?ಏನು? ಎತ್ತ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಾನೆ. ಅಲ್ಲಿಂದ ತಪ್ಪಿಸಿಕೊಳ್ಳಲು ಜಾಕಿ ತಾನೊಬ್ಬ ಉತ್ತಮ ಈಜುಪಟು. ಚಿಕ್ಕಂದಿನಲ್ಲಿ ಬಾವಿಗೆ ಬಿದ್ದಿದ್ದ ಯಾರನ್ನೋ ರಕ್ಷಿಸಿದ್ದೆ. ಉತ್ತಮ ಸಾಹಸ ತೋರಿದ್ದಕ್ಕೆ ಪ್ರಶಸ್ತಿಯನ್ನೂ ಕೊಟ್ಟಿದ್ದಾರೆ. ಹಾಗೆ ಹೀಗೆ ಎಂದು ಕಥೆ ಕಟ್ಟುತ್ತಾನೆ.

    ಸರಿ ಬಾ ಎಂದು ಜಾಕಿಯನ್ನು ಮೀಸೆ ಭೀಮಣ್ಣ ಕರೆದುಕೊಂಡು ಹೋಗುತ್ತಾನೆ. ತೀರಾ ಅಲ್ಲಿಗೆ ಹೋದಮೇಲೆಯೇ ಗೊತ್ತಾಗುವುದು, ಯಾವುದೋ ಕೊಲೆ ಕೇಸಿದು ಎಂದು. ನೀರಿನಲ್ಲಿ ಹೆಣಗಳನ್ನು ಬಿಸಾಡಿರುತ್ತಾರೆ. ಅವನ್ನು ಮೇಲೆತ್ತಲು ಜಾಕಿಯನ್ನು ನೀರಿಗಿಳಿಸಲಾಗುತ್ತದೆ. ಬಳಿಕ ಅವುಗಳಲ್ಲಿ ಒಂದು ಹೆಣ ತನ್ನ ಅಂಧ ತಂಗಿಯದೆಂದು ಗೊತ್ತಾಗುತ್ತದೆ. ಈ ಹತ್ಯೆಗಳ ಹಿಂದೆ ಹುಡುಗಿಯ ಮಾರಾಟ ಜಾಲ ಇದೆ ಎಂಬುದು ಜಾಕಿಗೆ ತಿಳಿಯುವಷ್ಟರಲ್ಲಿ ಕತೆ ಒಂದು ಹಂತಕ್ಕೆ ಬಂದಿರುತ್ತದೆ.

    ಮುಂದಿನದು ಆ ಜಾಲದ ಹುಡುಕಾಟ, ಜಾಕಿ ಸಾಹಸಗಳು, ಅವನ ಕಳೆದು ಹೋದ ಗೆಳತಿ (ಭಾವನಾ) ಸಿಗುವುದು. ಕತೆ ಹೀಗೆ ರೋಚಕವಾಗಿ ಸಾಗುತ್ತದೆ. ಹುಡುಗಿಯ ಮಾರಾಟದ ಜಾಲದ ಮುಖ್ಯಸ್ಥನಾಗಿ ರವಿಕಾಳೆ ಅಭಿನಯಿಸಿದ್ದಾರೆ. ಇದಿಷ್ಟು ಜಾಕಿ ಚಿತ್ರದ ಕತೆ. ಚಿತ್ರ ಎಲ್ಲೂ ಬೋರು ಹೊಡೆಸುವುದಿಲ್ಲ. ಸೂರಿ ಒಬ್ಬ ಉತ್ತಮ ತಂತ್ರಜ್ಞ ಎಂಬುದನ್ನು ಮತ್ತೊಮ್ಮೆ ನಿರೂಪಿಸಿಕೊಂಡಿದ್ದಾರೆ.

    Thursday, October 14, 2010, 19:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X