»   » ‘ಸೆವನ್‌ ಓ ಕ್ಲಾಕ್‌’ಗೆ ಪ್ರೀತಿ ಪಲ್ಲವಿಸಿದಾಗ

‘ಸೆವನ್‌ ಓ ಕ್ಲಾಕ್‌’ಗೆ ಪ್ರೀತಿ ಪಲ್ಲವಿಸಿದಾಗ

Posted By:
Subscribe to Filmibeat Kannada


ಈ ಚಿತ್ರ‘ಬೆಳದಿಂಗಳ ಬಾಲೆ’ ಹಾಗೂ ‘ಯಾರೇ ನೀನು ಚೆಲುವೆ’ ಚಿತ್ರದ ಕೊಲಾಜ್‌ನಂತಿದೆ. ಹಾಗಾಗಿ ಆ ನೆನಪುಗಳು ಕಾಡಬಾರದೆಂದೇ ನಿರ್ದೇಶಕ ಸಂತೋಷ್‌ ಕುಮಾರ್‌ ಪಾತಾಜೆ ವಿಭಿನ್ನವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ.

  • ಚೇತನ್‌ ನಾಡಿಗೇರ್‌
ಅವನು ಪೇಂಟರ್‌, ಅವಳು ಡಾಕ್ಟರ್‌. ಅವನಿರುವುದು ಬೆಂಗಳೂರಿನಲ್ಲಿ. ಅವಳು ಗೋವಾದಲ್ಲಿ. ಅವನಿಗೆ ಪೇಂಟ್‌ ಮಾಡುವ ಹುಚ್ಚು. ಅವಳಿಗೆ ಫೋನ್‌ ಮಾಡುವ ಹುಚ್ಚು. ಯಾವುದೋ ಒಂದು ನಂಬರ್‌ಗೆ ಫೋನ್‌ ಮಾಡುವುದು, ಆ ಕಡೆ ಮಾತನಾಡುವವರ ತಲೆ ಕೆಡಿಸುವುದು ಅವಳ ಹಾಬಿ.

ಆ ಹಾಬಿ ಪ್ರತಿದಿನ ಮುಂಜಾವಿನಿಂದಲೇ ಪ್ರಾರಂಭ. ಹೀಗೆ ಒಮ್ಮೆ ಬೆಳ್ಳಂಬೆಳಿಗ್ಗೆ ಸೆವೆನ್‌ ಓ ಕ್ಲಾಕ್‌ನಲ್ಲಿ ಯಾವುದೋ ಒಂದು ನಂಬರ್‌ಗೆ ಡಯಲ್‌ ಮಾಡುತ್ತಾಳೆ. ನಿಮ್ಮ ಊಹೆ ನಿಜ. ಅದು ಅವನ ಫೋನ್‌. ಅವಳು ತನ್ನನ್ನು ಆಟ ಆಡಿಸುತ್ತಿದ್ದಾಳೆ ಎಂದು ಗೊತ್ತಾಗದ ಅವನು ಬಹಳ ಸುಲಭವಾಗಿ ಬಕ್ರಾ ಆಗುತ್ತಾನೆ. ಮತ್ತೆ ಮುಂದಿನ ಬಾರಿಗೆ ಫೋನ್‌ ಮಾಡಿದಾಗ ಹುಷಾರಾಗುವ ಅವನು ಅವಳ ಗಾಳಕ್ಕೆ ಅವಳನ್ನೇ ಸಿಲುಕಿಸುತ್ತಾನೆ. ಈ ಬಾರಿ ಬಕ್ರಾ ಆಗುವ ಸದಾವಕಾಶ ಅವಳದ್ದು. ಹೀಗೆ ಒನ್‌ ಟು ಒನ್‌ ಆಗುತ್ತಿದ್ದಂತೆ, ಇಬ್ಬರ ಮಧ್ಯೆ ಒಂದು ಗೆಳೆತನ ಪ್ರಾರಂಭ. ಆ ಗೆಳೆತನ ಮುಂದೆ ಪ್ರೀತಿಗೆ ಶುಭಾರಂಭ.

ಹೀಗೆ ಒಬ್ಬರನ್ನೊಬ್ಬರು ಮುಖ ನೋಡದೆ ಪ್ರೀತಿಸುವ ಪ್ರೇಮಿಗಳು ಒಂದು ದಿನ ಭೇಟಿಯಾಗಲು ನಿರ್ಧರಿಸುತ್ತಾರೆ. ಅವನು ಅವಳನ್ನು ಹುಡುಕಿ ಕೊಂಡು ಗೋವಾಗೆ ಹೋಗುತ್ತಾನೆ. ಮುಂದೆ ಅವರಿಬ್ಬರೂ ಸೆವೆನ್‌ ಓ ಕ್ಲಾಕ್‌ಗೆ ಭೇಟಿಯಾಗುತ್ತಾರಾ? ಇದನ್ನು ಚಿತ್ರದಲ್ಲೇ ನೋಡಿಬಿಡಿ ಪ್ಲೀಸ್‌.

ಹಾಗೆ ನೋಡಿದರೆ ಚಿತ್ರ ‘ಬೆಳದಿಂಗಳ ಬಾಲೆ’ ಹಾಗೂ ‘ಯಾರೇ ನೀನು ಚೆಲುವೆ’ ಚಿತ್ರದ ಕೊಲಾಜ್‌ನಂತಿದೆ. ಹಾಗಾಗಿ ಆ ನೆನಪುಗಳು ಕಾಡಬಾರದೆಂದೇ ನಿರ್ದೇಶಕ ಸಂತೋಷ್‌ ಕುಮಾರ್‌ ಪಾತಾಜೆ ವಿಭಿನ್ನವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಆ ಕೆಲಸದಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಆದರೆ ಒಂದೊಳ್ಳೆಯ ಕತೆಗೆ ತೀರಾ ಸವಕಲಾದ ಕಾಮಿಡಿ ದೃಶ್ಯಗಳನ್ನು ಜೋಡಿಸಿಬಿಟ್ಟಿದ್ದಾರೆ. ಕೆಲವು ಕಡೆ ಅದು ಓಕೆ. ಆದರೆ ಮಿಕ್ಕ ಸಂದರ್ಭಗಳಲ್ಲಿ ಹಾಸ್ಯಕ್ಕೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಬೇಸರದ ಸಂಗತಿ. ಅದು ಬಿಟ್ಟರೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ.

‘ ಸೆವೆನ್‌ ಓ ಕ್ಲಾಕ್‌’ನಲ್ಲಿ ಸಂತೋಷ್‌ ಕುಮಾರ್‌ ಪಾತಾಜೆ ತಮ್ಮ ನವಿರು ಪ್ರೇಮಕತೆಯಿಂದ ಗೆಲ್ಲುತ್ತಾರೆ. ಅವರ ಈ ಗಡಿಯಾರದಾಟಕ್ಕೆ ಛಾಯಾಗ್ರಾಹಕ ಚಂದ್ರಶೇಖರ್‌ ಮೆರಗು ನೀಡಿದ್ದಾರೆ. ಬೆಂಗಳೂರಾಗಲಿ, ಗೋವಾ ಆಗಲಿ ಎರಡೂ ಅವರ ಕ್ಯಾಮೆರಾ ಕಣ್ಣಿನಲ್ಲಿ ಚೆಂದಾ ಚೆಂದಾ ... ಅದರಲ್ಲೂ ‘ಕಣ್ಣಿಗೆ ಕಾಣದ ಪ್ರೀತಿ’ ಹಾಡು ಸಖತ್ತಾಗಿ ಚಿತ್ರಿತವಾಗಿದೆ. ಅದಕ್ಕೆ ಪೂರಕವಾಗಿದೆ ಮಧುಕರ್‌ ಹಾಡುಗಳು.

‘ಸಂಜೆ ಸೂರ್ಯನೇ... ’, ‘ಈ ದಿನ... ’ ಹಾಡುಗಳು ಖುಷಿಕೊಡುತ್ತವೆ. ಹಾಡಿನಂತೆ ಸಂಭಾಷಣೆ ಕೂಡ ಚೆನ್ನ. ಕಾರಣ ಮಂಜು ಮಾಂಡವ್ಯ. ಚಿತ್ರಕತೆ ಓಟವೇ ನಿಧಾನವಾಗಿರುವುದರಿಂದ ಕೆಂಪರಾಜು ಇಲ್ಲಿ ನಿಸ್ಸಹಾಯಕ.

ಇನ್ನು ನಾಯಕ ಮಿಥುನ್‌, ನಾಯಕಿ ಪೂಜಾ ಅಭಿನಯಿಸಿದ್ದಾರೆ . ಇನ್ನೊಬ್ಬ ನಾಯಕಿ ಸ್ನೇಹ ಆಟಕ್ಕಿಲ್ಲ ಲೆಕ್ಕಕ್ಕೂ ಇಲ್ಲ. ಬೇಬಿ ಶ್ರೀಶಾ ಹಾಗೂ ಕುಮಾರಿ ನಿತಾ ಅಭಿನಯದಲ್ಲಿ ಫಸ್ಟ್‌ ಕ್ಲಾಸ್‌. ಅದರಲ್ಲೂ ನಿತ್ಯಾಳನ್ನೆ ನಾಯಕಿಯಾಗಿ ಮಾಡಿದ್ದರೆ ಗಂಟೇನು ಹೋಗುತ್ತಿತ್ತು ಎಂದು ಪ್ರೇಕ್ಷಕರು ಗುಸುಗುಸು ಮಾಡುತ್ತಿದ್ದಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ ನಿತ್ಯ.

ದಿಲೀಪ್‌ರಾಜ್‌ ಎಂದಿಗಿಂತ ಹೆಚ್ಚಾಗಿಯೇ ಮಿಂಚಿದ್ದಾರೆ. ಅವರಲ್ಲಿ ಅದೇನು ಕಡಿಮೆಯಾಗಿದೆಯೆಂದು ಚಿತ್ರರಂಗ ಅವರನ್ನು ದೂರ ಇಟ್ಟಿದೆಯೋ ಗೊತ್ತಿಲ್ಲ. ಭವ್ಯ, ರಾಮಕೃಷ್ಣ, ಸುಂದರ್‌ರಾಜ್‌, ಮಾಲತಿ ಸರದೇಶಪಾಂಡೆ, ಉಮೇಶ್‌ ಅಭಿನಯ ಓಕೆ.

ಥರ ಥರ ಹೊಸ ಥರ ಬೇಕಿದ್ದರೆ ಚಿತ್ರ ನೋಡಿ...

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada