»   » ಹೊಸ ‘ಪೊಲೀಸ್‌ ಸ್ಟೋರಿ’ಯಲ್ಲಿ ಅದೇ ಅಗ್ನಿ ಅದೇ ಅಗಿ ್ಗಷ್ಟಿಕೆ!

ಹೊಸ ‘ಪೊಲೀಸ್‌ ಸ್ಟೋರಿ’ಯಲ್ಲಿ ಅದೇ ಅಗ್ನಿ ಅದೇ ಅಗಿ ್ಗಷ್ಟಿಕೆ!

Subscribe to Filmibeat Kannada


ಹಳೆಯ ‘ಪೊಲೀಸ್‌ ಸ್ಟೋರಿ’ ಚಿತ್ರವನ್ನು ನೋಡಿರುವವರು ಬ್ಲಾಕ್‌ ಟೈಗರ್‌ ಸತ್ತು ಹೋದ ಅಲ್ವಾ? ಎಂದು ತಲೆ ಕೆರೆದುಕೊಳ್ಳಬಹುದು. ಆದರೆ, ಥ್ರಿಲ್ಲರ್‌ ಮಂಜು ಅವನನ್ನು ಬದುಕಿಸಿದ್ದಾರೆ. ಮತ್ತೆ ಅಗ್ನಿಯ ವಿರುದ್ಧ ಛೂ ಬಿಟ್ಟಿದ್ದಾರೆ... ಏನೇನೋ ಸರಕು ಸೇರಿಸಿ, ಪ್ರೇಕ್ಷಕರಿಗೆ ಮೋಸವಾಗದಂತೆ ನೋಡಿಕೊಂಡಿದ್ದಾರೆ!

ಚಿತ್ರ : ಪೊಲೀಸ್‌ ಸ್ಟೋರಿ-2
ನಿರ್ಮಾಪಕ : ಗುರುಮೂರ್ತಿ, ಜೆಜಿ ಕೃಷ್ಣ.
ನಿರ್ದೇಶಕ : ಥ್ರಿಲ್ಲರ್‌ ಮಂಜು
ತಾರಾಗಣ : ಸಾಯಿಕುಮಾರ್‌, ರಾಕ್‌ಲೈನ್‌ ವೆಂಕಟೇಶ್‌, ಸನಾ, ಜೀವಿ, ಪೊನ್ನಾಬಲಂ, ಶೋಭರಾಜ್‌ ಮತ್ತಿತರರು.

ಅಗ್ನಿ ಈಸ್‌ ಬ್ಯಾಕ್‌!

ಅಗ್ನಿ ‘ದಿ ಬ್ಯಾಡ್‌ ಪೊಲೀಸ್‌ ಆಫೀಸರ್‌’ 10 ವರ್ಷಗಳ ನಂತರ ಮತ್ತೆ ವಾಪಸಾಗಿದ್ದಾನೆ. ನಿಮಗೆ ಗೊತ್ತು. ಒಳ್ಳೆಯವರ ಪಾಲಿಗೆ ಅಗ್ನಿ ಯಾವಾಗಲೂ ಗುಡ್‌. ದುಷ್ಟರ ಪಾಲಿಗೆ ಮಾತ್ರ ಬ್ಯಾಡ್‌ ಅಂಡ್‌ ಅಗ್ಲಿ.

ಅಗ್ನಿ ಸುಮ್ಮನೆ ತಪ್ಪು ಮಾಡುವುದಿಲ್ಲ, ತಪ್ಪು ಮಾಡಿದವರು ಯಾರೇ ಇರಲಿ, ಅವರಿಗೆ ನೀರು ಇಳಿಸದೇ ಬಿಡುವುದಿಲ್ಲ. ರೌಡಿಗಳನ್ನು ಅಡ್ಡಾದಲ್ಲಿ, ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ, ಜನಕ್ಕೆ ಪಬ್ಲಿಕ್ಕಿನಲ್ಲಿ ಹೊಡೆಯುತ್ತಾನೆ. ಇನ್ನೂ ಅಗತ್ಯ ಬಿದ್ದರೆ ಅವರ ಹೆಸರನ್ನು ವೋಟರ್‌ ಲಿಸ್ಟ್‌ನಿಂದಲೇ ಕಿತ್ತು ಬಿಸಾಕುತ್ತಾನೆ. ನೋ ಎಫ್‌ಐಆರ್‌, ನೋ ಎನ್‌ಕ್ವೈರಿ ... ಸೀದಾ ಎನ್‌ಕೌಂಟರ್‌. ಇದು ಅವನ ಮೂಲಮಂತ್ರ. ಖಾಕಿ ಡ್ರೆಸ್ಸಿರುವವರೆಗೂ ಯಾರೇ ಬಂದರೂ ಅಗ್ನಿಗೆ ಏನು ಮಾಡೋಕಾಗಲ್ಲ. ಆ ಗ್ಯಾರಂಟಿಯಿಂದಲೇ ಅದೇ ಸಮವಸ್ತ್ರ ಹಾಕಿಕೊಂಡು ಹೆತ್ತ ಪೊಲೀಸ್‌ ತಾಯಿಯ ಋಣ ತೀರಿ ಸುತ್ತಾನೆ.

ಇದು ‘ಪೊಲೀಸ್‌ ಸ್ಟೋರಿ-2’ರ ಸಂಕ್ಷಿಪ್ತ ಕತೆ. ಇದೊಂದು ಆ್ಯಕ್ಷನ್‌ ಹಾಗೂ ‘ಥ್ರಿಲ್ಲರ್‌’ ಚಿತ್ರವಾದ್ದರಿಂದ ಒಂದು ಗಟ್ಟಿ ಕತೆ ನಿರೀಕ್ಷಿಸಲಾಗದು. ಇಲ್ಲಿ ಕತೆಗಿಂತ ಘಟನೆಗಳೇ ಮುಖ್ಯ, ಅದಕ್ಕಿಂತ ಮಾತೇ ಮುಖ್ಯ. ಥ್ರಿಲ್ಲರ್‌ ಮಂಜು ಬುದ್ಧಿವಂತರು. ಸುಮ್ಮನೆ ಯಾವುದೋ ಹೊಸ ಪಾತ್ರ ಸೃಷ್ಟಿಸಿ ರಿಸ್ಕ್‌ ತೆಗೆದುಕೊಳ್ಳುವುದಕ್ಕಿಂತ 10 ವರ್ಷಗಳ ಹಿಂದೆ ತಾವೇ ಸೃಷ್ಟಿಸಿದ ಅಗ್ನಿ ಹಾಗೂ ಬ್ಲಾಕ್‌ ಟೈಗರ್‌ ಪಾತ್ರಗಳನ್ನು ಮತ್ತೆ ವಾಪಸು ತಂದಿದ್ದಾರೆ. ಅವರ ಸುತ್ತ ಒಂದು ಕತೆ ಹೆಣೆದಿದ್ದಾರೆ.

ಹಳೆಯ ‘ಪೊಲೀಸ್‌ ಸ್ಟೋರಿ’ ಚಿತ್ರವನ್ನು ನೋಡಿರುವವರು ಬ್ಲಾಕ್‌ ಟೈಗರ್‌ ಸತ್ತು ಹೋದ ಅಲ್ವಾ? ಎಂದು ತಲೆ ಕೆರೆದುಕೊಳ್ಳಬಹುದು. ಆದರೆ, ಥ್ರಿಲ್ಲರ್‌ ಮಂಜು ಅವನನ್ನು ಬದುಕಿಸಿದ್ದಾರೆ. ಮತ್ತೆ ಅಗ್ನಿಯ ವಿರುದ್ಧ ಛೂ ಬಿಟ್ಟಿದ್ದಾರೆ. ಹಾಗಂತ ಇದು ಹಳೆಯ ಪೊಲೀಸ್‌ ಸ್ಟೋರಿಗಿಂಥ ವಿಭಿನ್ನವಾಗೇನೂ ಇಲ್ಲ ಎಂದುಕೊಳ್ಳಬೇಡಿ. ಹೇಳಲಿಲ್ಲವಾ ಥ್ರಿಲ್ಲರ್‌ ಮಂಜು ಬುದ್ಧಿವಂತರು ಅಂತ! ನಿಮ್ಮ ನಿರೀಕ್ಷೆಯನ್ನು ಅವರು ಒಂದಷ್ಟು ಹುಸಿ ಮಾಡಿದ್ದಾರೆ. ಇನ್ನೊಂದಷ್ಟು ಅಪ್‌ಡೇಟ್‌ ಆಗಿದ್ದಾರೆ.

ಇಲ್ಲೂ ಬಹಳಷ್ಟು ಪಾತ್ರಧಾರಿಗಳು ಮೈಮೇಲೆ ದೆವ್ವ ಬಂದವರಂತೆ ಆಡುತ್ತಾರೆ. ಜತೆಗೆ ಕಾಲ್‌ಸೆಂಟರ್‌ ಉದ್ಯೋಗಿಗೆ ರೇಪ್‌ ಮಾಡಿಸಿ ಸಮಕಾಲೀನತೆಯ ಟಚ್‌ ಕೊಟ್ಟಿದ್ದಾರೆ. ಒಂದಿಷ್ಟು ಗ್ರಾಫಿಕ್ಸ್‌ ಬಳಸಿ, ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಸಿ, ಒಂದಿಷ್ಟು ಎನ್‌ಕೌಂಟರ್‌ ಮಾಡಿಸಿ ಇಂದಿನ ಟ್ರೆಂಡ್‌ಗೆ ಸರಿಹೊಂದಿಸಿದ್ದಾರೆ. ತಿಮ್ಮಕ್ಕ, ಸತ್ಯಪ್ರಕಾಶ್‌, ಧರ್ಮರಾಜ್‌ ಮುಂತಾದ ಹೊಸ ಪಾತ್ರಗಳನ್ನು ಸೃಷ್ಟಿಸಿದ್ದಾರೆ.

ಯಾರನ್ನೇ ತಂದರೂ, ಎಲ್ಲರನ್ನೂ ನಿವಾಳಿಸಿ ಬಿಸಾಕುವುದು ಸಾಯಿಕುಮಾರ್‌. ಅವರಿನ್ನೂ ಬದಲಾಗಿಲ್ಲ ಎಂದು ಈ ಚಿತ್ರವೂ ‘ಸಾರಿ’ಹೇಳುತ್ತದೆ. ಏನೇ ಆದರೂ, ಅವರು ಅಭಿಮಾನಿಗಳ ಕೈ ಬಿಡುವುದಿಲ್ಲ, ಮೋಸ ಮಾಡುವುದಿಲ್ಲ. 10 ವರ್ಷಗಳ ನಂತರವೂ ‘ಅವರು ಬದಲಾಗಿಲ್ಲ’ ಎನ್ನುವುದು ಕೆಲವರಿಗೆ ಖುಷಿ ಕೊಡಬಹುದು.

ಈ ಚಿತ್ರಕ್ಕಾಗಿಯೇ ತೆಲುಗಿನಿಂದ ಸನಾ, ರಾಮಿರೆಡ್ಡಿ ಹಾಗೂ ಜೀವಿ ಬಂದಿದ್ದಾರೆ. ತಮಿಳಿನ ಪೊನ್ನಾಂಬಲಂ ಜತೆಯಾಗಿದ್ದಾರೆ. ಆರ್ಭಟಿಸುವುದರಲ್ಲಿ ಯಾರು ಯಾರನ್ನು ಸೋಲಿಸುತ್ತಾರೆ ಎಂದು ಹೇಳುವುದು ಕಷ್ಟ. ಕನ್ನಡದವರೇ ಆದ ರಾಕ್‌ಲೈನ್‌ ವೆಂಕಟೇಶ್‌, ಅಂಕಲ್‌ ಲೋಕನಾಥ್‌, ಗಿರಿಜಾ ಲೋಕೇಶ್‌, ಕರಿಬಸವಯ್ಯ ಇಷ್ಟವಾಗುತ್ತಾರೆ. ನಿರ್ದೇಶಕ ಥ್ರಿಲ್ಲರ್‌ ಮಂಜುಗಿಂತ, ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಖುಷಿ ಕೊಡುತ್ತಾರೆ. ಇರುವ ಒಂದೇ ಒಂದು ಹಾಡು ಸಹ ಗಲಾಟೆಯಲ್ಲಿ ಕೇಳುವುದಿಲ್ಲ.

ಏನೇ ಆದರೂ ಈ ಚಿತ್ರ ಆ್ಯಕ್ಷನ್‌ ಅಭಿಮಾನಿಗಳಿಗಂತೂ ಮೋಸ ಮಾಡುವುದಿಲ್ಲ.

‘ಪೊಲೀಸ್‌ ಸ್ಟೋರಿ-2’ ಗ್ಯಾಲರಿಗೆ ಸ್ವಾಗತ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada