For Quick Alerts
  ALLOW NOTIFICATIONS  
  For Daily Alerts

  ‘ಮೋಹಿನಿ’ ನಿಜಕ್ಕೂ ಸಮ್ಮೋಹಿನಿ

  By Staff
  |


  ಎಲ್ಲ ಹಾರರ್‌ ಚಿತ್ರಗಳಂತೆ ಇಲ್ಲೂ ಪಾಪವಿದೆ, ಶಾಪವಿದೆ, ದೈವಭಕ್ತಿ ಯಿದೆ. ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಸಕತ್‌ ಸಸ್ಪೆನ್ಸ್‌ ಇದೆ! ಈ ಚಿತ್ರ ಸಸ್ಪೆನ್ಸ್‌ ಮತ್ತು ಥ್ರಿಲ್‌ ಬಯಸೋರಿಗೆ ಮಾತ್ರ!

  • ನಾಡಿಗೇರ್‌ ಚೇತನ್‌
  ಹಾರರ್‌ ಚಿತ್ರಗಳ ಒಂದಂಶದ ಕಾರ್ಯಕ್ರಮ ಶಾಪ ವಿಮೋಚನೆ. ಬೇಕಾದರೆ ಇದುವರೆಗೂ ಬಂದಿರುವ ಎಲ್ಲ ದೆವ್ವದ ಚಿತ್ರಗಳನ್ನು ಒಂದ್ಸಾರಿ ಸೂಕ್ಷ್ಮವಾಗಿ ಗಮನಿಸಿ.

  ಅಲ್ಲೊಂದು ಅತೃಪ್ತ ಆತ್ಮವಿರುತ್ತದೆ. ತನ್ನನ್ನು ಆ ಸ್ಟೇಜಿಗೆ ತಂದು ಕೂರಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿರುತ್ತದೆ. ಅದಕ್ಕಾಗಿ ನಾನಾ ಪ್ರಯತ್ನ ಮಾಡುತ್ತದೆ. ಕೊನೆಗೆ ಸೇಡು ತೀರುತ್ತದೆ. ಅಲ್ಲಿಗೆ ಪಾಪಿಗೆ ಮತ್ತು ಅತೃಪ್ತ ಆತ್ಮಕ್ಕೆ ವಿಮೋಚನೆ ಸಿಗುತ್ತದೆ. ಮೋಹಿನಿ ಕೂಡ ಅದೇ ನಿಟ್ಟಿನಲ್ಲಿ ಸಾಗುತ್ತದೆ ಎಂದು ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ.

  ಮೋಹಿನಿ ಎನ್ನುವ ಕಾಲೇಜು ಹುಡುಗಿ ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಮಾಯವಾಗುತ್ತಾಳೆ. ಅವಳ ಕಣ್ಮರೆಗೂ ಮಸಾಜ್‌ ಪಾರ್ಲರ್‌ ದಂಧೆಗೂ ಏನೋ ಸಂಬಂಧ ಇದೆ ಎಂದು ಶಂಕಿಸಿ ಪತ್ರಕರ್ತೆ ವರ್ಷಾ ತನಿಖೆಗೆ ಹೊರಡುತ್ತಾಳೆ. ಅದನ್ನು ಗಮನಿಸಿ ಮಸಾಜ್‌ ಪಾರ್ಲರ್‌ ‘ಗಣ್ಯರು’ ಅವಳ ಹಿಂದೆ ಬೀಳುತ್ತಾರೆ. ಇನ್ನೇನು ಅವಳ ಕತೆ ಮುಗಿಯಿತು ಎನ್ನುವಷ್ಟರಲ್ಲೇ ಅವಳ ಬಾಯ್‌ಫ್ರೆಂಡ್‌ ವರುಣ್‌ ಬರುತ್ತಾನೆ, ಹೊಡೆದಾಡಿ ಅವಳನ್ನು ರಕ್ಷಿಸುತ್ತಾನೆ.

  ಕೊನೆಗೆ ಅವಳು ಒಬ್ಬಳೇ ಇದ್ದರೆ ತೊಂದರೆ ಗ್ಯಾರಂಟಿ ಎಂದು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅವನ ಅಕ್ಕ ಮತ್ತುಭಾವ ಅವಳಿಗೆ ಹಳೆಯ ಅರಮನೆಯಾಂದರಲ್ಲಿ ಬಿಡಾರ ಹೂಡಲು ಏರ್ಪಾಡು ಮಾಡುತ್ತಾರೆ. ಮಜಾ ಗೊತ್ತಾ, ಮೋಹಿನಿ ಕೂಡ ಅದೇ ಅರಮನೆಯ ಒಂದು ರೂಮಿನಲ್ಲಿ ಮುಂಚೆಯೇ ಇರುತ್ತಾಳೆ. ವರ್ಷಾ ಅಲ್ಲಿಗೆ ಹೋಗುತ್ತಿದ್ದಂತೆಯೇ ಚಿತ್ರವಿಚಿತ್ರ ಘಟನೆಗಳು ಪ್ರಾರಂಭವಾಗುತ್ತವೆ.

  ಇನ್ನೊಂದು ಕಡೆ ಕೆಲವರಿಗೆ ಒಂದು ನಂಬರ್‌ನಿಂದ ಕಾಲ್‌ ಬರುತ್ತಿರುತ್ತದೆ. ಆ ಕಾಲ್‌ ಅಟೆಂಡ್‌ ಮಾಡಿದವರೆಲ್ಲ ನಿಗೂಢವಾಗಿ ಶವವಾಗುತ್ತಿರುತ್ತಾರೆ. ಮತ್ತೊಂದು ಕಡೆ ವರುಣ್‌ನ ಅಕ್ಕಭಾವನ ಮಗಳೊಳಗೆ ಆತ್ಮ ಸೇರಿಕೊಳ್ಳುತ್ತದೆ. ಇದೆಲ್ಲಕ್ಕೂ ಕಳಶವಿಟ್ಟಂತೆ ಮೋಹಿನಿ ಎಂಬ ಹುಡುಗಿ ಬರೀ ಕಣ್ಮರೆಯಾಗಿಲ್ಲ, ಸತ್ತೇ ಹೋಗಿದ್ದಾಳೆ ಎಂದು ಗೊತ್ತಾಗುತ್ತದೆ. ಈ ಎಲ್ಲ ರಹಸ್ಯಗಳನ್ನು ವರುಣ್‌, ವರ್ಷಾ ಕ್ರಮೇಣ ಬಯಲು ಮಾಡುತ್ತಾರೆ. ಆ ರಹಸ್ಯ ಅವರಿಗೆ ಗೊತ್ತು, ನಮಗೆ ಗೊತ್ತು. ನಿಮಗೂ ತಿಳ್ಕೋಬೇಕು ಅಂತ ಕುತೂಹಲವಿಲ್ವಾ? ಅದಕ್ಕೇ ಚಿತ್ರಮಂದಿರಕ್ಕೆ ಹೋಗಿ ಅನ್ನೋದು.

  ಎಲ್ಲ ಹಾರರ್‌ ಚಿತ್ರಗಳಂತೆ ಇಲ್ಲೂ ಪಾಪವಿದೆ, ಶಾಪವಿದೆ, ದೈವಭಕ್ತಿ ಯಿದೆ. ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಹಿಡಿದಿಡುವುದು ಸಸ್ಪೆನ್ಸ್‌. ಆರಂಭದಿಂದ ಅಂತ್ಯದವರೆಗೆ ಮುಂದೇನಾಗಬಹುದು ಎಂಬ ಕುತೂಹಲ ಕಾಡುತ್ತದೆ. ಕತೆಯನ್ನು ಹಂತ ಹಂತವಾಗಿ ಬಿಡಿಸಿ, ಕೊನೆಯವರೆಗೂ ನಿಗೂಢತೆ ಕಾಪಾಡಿಕೊಳ್ಳುವುದರಲ್ಲಿ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಯಶಸ್ವಿಯಾಗಿದ್ದಾರೆ.

  ಸಣ್ಣಪುಟ್ಟ ಸಮಸ್ಯೆಗಳನ್ನು ಸಹಿಸಿಕೊಂಡರೆ ಕನ್ನಡದಲ್ಲಿ ಬಹಳ ದಿನಗಳ ನಂತರ ಇಂಥದೊಂದು ಅಪರೂಪದ ಹಾರರ್‌ ಚಿತ್ರ ಬಂದಿದೆ ಎನ್ನಲಡ್ಡಿಯಿಲ್ಲ. ಆದಿತ್ಯ ಆಗಾಗ ಹೇಳುತ್ತಿದ್ದರು, ಈ ಚಿತ್ರದ ನಿಜವಾದ ಹೀರೋ ಕತೆ, ನಾವೆಲ್ಲ ಪಾತ್ರಗಳಷ್ಟೇ ಎಂದು. ಚಿತ್ರ ನೋಡಿ ಹೊರಬಂದರೆ ಅದು ನಿಜ ಎನಿಸುತ್ತದೆ.

  ಕತೆ ಹಾಗೂ ಚಿತ್ರಕತೆ ಬರೆದ ರಾಜೇಂದ್ರಸಿಂಗ್‌ ಬಾಬು ಸಲೀಸಾಗಿ ನಾಯಕನ ಪಟ್ಟ ಅಲಂಕರಿಸುತ್ತಾರೆ. ನಂತರದ ಸ್ಥಾನ ಕ್ಯಾಮೆರಾಮನ್‌ ಗಿರಿ ಹಾಗೂ ಸಂಗೀತ ನಿರ್ದೇಶಕ ಹಂಸಲೇಖರದ್ದು. ಅರಮನೆ ಹಾಗೂ ರಾತ್ರಿ ದೃಶ್ಯಗಳಲ್ಲಿ ಗಿರಿ ಛಾಯಾಗ್ರಹಣವನ್ನು ನೋಡೇ ಆನಂದಿಸಬೇಕು. ಹಾಗಂತ ತಾರಾಗಣ ವೀಕು ಅಂತ ತಿಳಿಯಬೇಡಿ. ಆದಿತ್ಯ ಮಿಂಚಿದ್ದಾರೆ. ಆ್ಯಕ್ಷನ್‌ ದೃಶ್ಯಗಳಲ್ಲಿ ಆದಿ ಸುಲಭವಾಗಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.

  ಸದಾಳ ನಗು ಮನಮೋಹಕ. ನಟನೆ ಬೇಡ ಬಿಡಿ. ಮೋಹಿನಿಯಾಗಿ ಪೂನಂ, ಮೇಕಪ್‌ ಹಾಗೂ ಗ್ರಾಫಿಕ್ಸ್‌ಗಳಿಲ್ಲದಿದ್ದರೂ ಹೆದರಿಸುತ್ತಾರೆ. ಸುಹಾಸಿನಿ, ನಾಜರ್‌, ರಾಜೇಶ್‌, ಅನು ಪ್ರಭಾಕರ್‌, ರವಿ ಎಲ್ಲರದ್ದೂ ಚಿಕ್ಕ ಪಾತ್ರಗಳೇ. ಆದರೂ ಚೊಕ್ಕವಾಗಿ ಅಭಿನಯಿಸಿದ್ದಾರೆ. ಕೋಮಲ್‌ ಕುಮಾರ್‌ ಹಾಗೂ ಬುಲೆಟ್‌ ಪ್ರಕಾಶ್‌ ಹಾಸ್ಯ ಕೆಲವು ದೃಶ್ಯಗಳಲ್ಲಿ ಸಫಲವಾಗಿದೆ.

  Post your views

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X