ಚಿತ್ರ ವಿಮರ್ಶೆ: ತಾಜಾ ಹುಡುಗ, ಮಹಾ ಹುಡುಗಿ
ಎಲ್ಲ ಸಿನಿಮಾಗಳಲ್ಲಿ ಇರುವಂತೆ ಇಲ್ಲಿಯೂ ನವಿರು ಪ್ರೇಮವಿದೆ.ವಿಷಾದಗಾಥೆಯಿದೆ. ಫ್ಲ್ಯಾಷ್‌ಬ್ಯಾಕ್ ಇದೆ. ತಿಳಿ ಹಾಸ್ಯವಿದೆ. ಪುಟ್ಟದೊಂದು ಫೈಟ್ ಇದೆ. ಕೊನೆಯಲ್ಲಿ ಟೈಂಪಾಸ್‌ಗೆ ಪ್ರೀತಿಸುವ ಹುಡುಗಿಯರಿಗೆ ಸಂದೇಶವೂ ಇದೆ. ಆದಾಗ್ಯೂ ಉಳಿದ ಸಿನಿಮಾಗಳಿಗಿಂತ ಭಿನ್ನ, ಏಕೆಂದರೆ ಕಥೆ ಹೇಳುವಲ್ಲಿ ಹೊಸತನ ವಿದೆ; ಬೋರ್ ಹೊಡೆಸದ ತಾಜಾತನವಿದೆ.
ಅದೇ ಶುಕ್ರವಾರ ತೆರೆ ಕಂಡಿರುವ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಹುಡುಗಹುಡುಗಿ' ವಿಶೇಷ. ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರದ್ದು
ಮಾಮೂಲು ಪ್ರೇಮ ಕಥೆಯೇ. ನಾಯಕ (ಧ್ಯಾನ್), ನಾಯಕಿ (ಲೇಖಾ ವಾಷಿಂ ಗ್ಟನ್) ಇಬ್ಬರೂಟಿವಿ ಚಾನೆಲ್ ನಿರೂಪಕರು.
ಇಬ್ಬರೂ ಸೇರಿ ನಡೆಸುವ ಕಾರ್ಯಕ್ರಮದಿಂದ ಚಾನೆಲ್ ಟಿಆರ್‌ಪಿ ಏರುತ್ತದೆ ನಿಜ, ಆದರೆ ಪ್ರೀತಿ ವಿಚಾರದಲ್ಲಿ ಇಬ್ಬರೂ ಉತ್ತರ ದಕ್ಷಿಣ. ಶ್ರೀಮಂತನನ್ನು
(ಪ್ರಮೋದ್ ಹೆಗಡೆ) ಮದುವೆಯಾಗಲು ಬಯಸುವ ನಾಯಕಿಗೆ ನಾಯಕ ನೆರವಾ ಗುತ್ತಾನೆ. ತನಗೇ ಗೊತ್ತಿಲ್ಲದಂತೆ ನಾಯಕಿಯ ಪ್ರೇಮಪಾಶಕ್ಕೆ ಸಿಲು ಕುತ್ತಾನೆ.
ಚಿತ್ರದ ಅಂತ್ಯವನ್ನು ಯಾರೂ ಊಹಿಸಬಹುದು ಬಿಡಿ.ಇಂದ್ರಜಿತ್‌ಗೆ ಸ್ಟಾರ್ ನಿರ್ದೇಶಕ ಎಂಬ ಬಿರುದಿದೆ. ಅವರ ಸಿನಿಮಾಗಳೆಂದರೆ ಪ್ರೇಕ್ಷಕರು ಭಾರಿ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಇಂದ್ರಜಿತ್ ಮನಸ್ಸು ಮಾಡಿದ್ದರೆ 'ಹುಡುಗ ಹುಡುಗಿ'ಯನ್ನು ಒಂದೊಳ್ಳೆ ಪ್ರೇಮಕಾವ್ಯವಾಗಿ ಕಟ್ಟಿಕೊಡಬಹುದಿತ್ತು.
ಧ್ಯಾನ್ ಮತ್ತು ಲೇಖಾ ಲವಲವಿಕೆಯ ಅಭಿನಯವೇ ಪ್ಲಸ್ ಪಾಯಿಂಟ್. ತೆಲುಗು ಬೆಡಗಿ ಇಲಿಯಾನ, ಬಿಯಾಂಕಾ ದೇಸಾಯಿ, ಸ್ವತಃ ಇಂದ್ರಜಿತ್ ಒಂದೊಂದು ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವು ಪಡ್ಡೆ ಹುಡುಗರಿಗೆ ಖುಷಿ ನೀಡುವುದರಲ್ಲಿ ಅನುಮಾನವಿಲ್ಲ. ಸದಾ ಅವರದು ವಿಶೇಷ ಪಾತ್ರದಲ್ಲಿ ಚೊಕ್ಕ ಅಭಿನಯ.
ಶರಣ್‌ರದು ಎಂದಿನಂತೆ ಚಿನಕುರಳಿ ನಟನೆ. ಕಿರುತೆರೆಗಳಲ್ಲಿ ಭವಿಷ್ಯ, ಪುನರ್ಜನ್ಮಗಳ ಬಗ್ಗೆ ಪ್ರಸಾರ ವಾಗುವ ಕಾರ್ಯಕ್ರಮಗಳನ್ನು ತಮಾಷೆ ಮೂಲಕವೇ ಲೇವಡಿ ಮಾಡಿದ್ದಾರೆ ಇಂದ್ರಜಿತ್. ರಂಗಾಯಣ ರಘು,ಬಿರಾದಾರ್, ನಾಗರಾಜ್ ಕೋಟೆ, ಪೋಷಕ ಪಾತ್ರಗಳಲ್ಲಿ ರಾಮಕೃಷ್ಣ, ರೇಖಾ ಮತ್ತಿತರರಿಗೆ ಪ್ರತಿಭೆ ತೋರಿಸಲು ಆಸ್ಪದವೇ ಇಲ್ಲ.
ಸಂಭಾಷಣೆಯಲ್ಲಿ ಬಿ.ಎ.ಮಧು, ಛಾಯಾಗ್ರಹಣದಲ್ಲಿ ಗುಂಡ್ಲುಪೇಟೆ ಸುರೇಶ್ ಗೆದ್ದಿದ್ದಾರೆ. ಪ್ರಕಾಶ್ ಸಂಕಲನದ ಬಗ್ಗೆಯೂ ಎರಡನೇ ಮಾತಿಲ್ಲ. ಸಂಗೀತದಲ್ಲಿ ಜೋಶುವಾ ಶ್ರೀಧರ್ ಮತ್ತಷ್ಟು ಮಾಧುರ್ಯ ನೀಡಲು ಅವಕಾಶವಿತ್ತು. (ಸ್ನೇಹಸೇತು: ವಿಜಯ ಕರ್ನಾಟಕ)


Click it and Unblock the Notifications











