»   » ಪಲ್ಲವಿ ಇಲ್ಲದ ಚರಣ, ಮಸಾಲೆ ಇಲ್ಲದ ಚಿತ್ರಾನ್ನ!

ಪಲ್ಲವಿ ಇಲ್ಲದ ಚರಣ, ಮಸಾಲೆ ಇಲ್ಲದ ಚಿತ್ರಾನ್ನ!

Subscribe to Filmibeat Kannada

*ವಿನಾಯಕರಾಮ್ ಕಲಗಾರು

Pallavi Illada Charana
ಉಪ್ಪು ಇಲ್ಲದ ಅಡುಗೆ, ಸುದ್ದಿ ಇಲ್ಲದ ದಿನ ಪತ್ರಿಕೆ, ಜನ ಇಲ್ಲದ ಟಾಕೀಸು, ಹಗಲು ಇಲ್ಲದ ಬದುಕು, ಆತ್ಮ ಇಲ್ಲದ ದೇಹ, ನಿರ್ದೇಶಕ ಇಲ್ಲದ ಚಿತ್ರ, ನಿದ್ರೆ ಇಲ್ಲದ ರಾತ್ರಿ, ವೀಸಾ ಇಲ್ಲದ ವಿದೇಶ ಪ್ರಯಾಣ, ಹುಚ್ಚರಿಲ್ಲದ ನಿಮಾನ್ಸ್, ಅಡಕೆ ಇಲ್ಲದ ಪಾನ್‌ಬೀಡಾ, ನಟನೆ ಬಗ್ಗೆ ಗಂಧ ಗಾಳಿ ಇಲ್ಲದ ನಾಯಕ, ಅಭಿನಯದ ಅರ್ಥ ಗೊತ್ತಿಲ್ಲದ ನಾಯಕಿ, ಕತ್ತರಿ ಇಲ್ಲದ ಸಂಕಲನ, ಬೇಲಿ ಇಲ್ಲದ ಸಂಭಾಷಣೆ, ಮಿತಿ ಇಲ್ಲದ ದೃಶ್ಯಗಳು... ಇವೆಲ್ಲವುಗಳ ಇನ್ನೊಂದು ರೂಪ ಪಲ್ಲವಿ ಇಲ್ಲದ ಚರಣ!

ನಿರ್ದೇಶಕ ಶಿವಪ್ರಭು ತಮ್ಮಲ್ಲಿರುವ ಅಪ್ರತಿಮ 'ಪ್ರತಿಭೆ"ಯನ್ನು ಪಲ್ಲವಿ... ಮೇಲೆ ಸುರಿದಿದ್ದಾರೆ. ಒಂದು ಥ್ರಿಲ್ಲರ್ ಸಿನಿಮಾ ಮಾಡುವಾಗ ಹೋಮ್‌ವರ್ಕ್ ಮಾಡಿಕೊಳ್ಳಬೇಕು. ಕತೆಯ ಆಯ್ಕೆ, ಅದನ್ನು ಹೇಳುವ ಪರಿಯಲ್ಲಿ ಇನ್ನಷ್ಟು ಶ್ರಮ ವಹಿಸಿದ್ದರೆ ಪಲ್ಲವಿಯ ಘಮಲು ಎಲ್ಲೆಡೆ ಪಸರಿಸುತ್ತಿತ್ತು. ಆದರೆ ಪ್ರಭುಗಳು ಒಂದು ಮರ್ಡರ್ ಮಿಸ್ಟರಿ ಕತೆಯನ್ನು ಎತ್ತಿಕೊಂಡಿದ್ದಾರೆ. ಅದಕ್ಕೊಂದಿಷ್ಟು ಅದು ಇದು ಸೇರಿಸಿದ್ದಾರೆ. ಸಿನಿಮಾ ಮಾಡಿದ್ದಾರೆ. ಮಾಡಿ, ಜನರ ಮೇಲೆ ಪ್ರಯೋಗ ಮಾಡಿದ್ದಾರೆ. ಹಾಗಂತ ಕೆಟ್ಟಾಕೊಳಕು ಚಿತ್ರವಂತೂ ಅಲ್ಲ.

ಒಬ್ಬ ಹುಡುಗ, ಕಾಲೇಜು, ಹುಡುಗಿ, ಅವಳ ಜತೆ ಮದುವೆ, ಮೊದಲ ರಾತ್ರಿ... ಅದೇ ರಾತ್ರಿ ಅವಳ ತಿಥಿ. ಕೊಲೆಗೆ ಕಾರಣ ಯಾರು? ಗಂಡನಾ, ಸ್ನೇಹಿತರಾ, ಆತ್ಮಹತ್ಯೆಯಾ ಅಥವಾ ಮತ್ತೇನೋ ನಡೆದಿದೆಯಾ? ಹೀಗೆ ಒಂದು ಕೊಲೆಯ ಸುತ್ತ ಕತೆ ಗಿರುಕಿ ಹೊಡೆಯುತ್ತದೆ. ನಾಗಕಿರಣ್ ಎಂಬ ಅದ್ಭುತ ಆಸಾಮಿ ನಾಯಕ. ನೋಡಲು ಮಾತ್ರ ಮನ್ಮಥ, ಅಭಿನಯ ಜಗ್ಗೇಶ್ ನಟಿಸಿರುವ 'ಮನ್ಮಥ"ಚಿತ್ರದ ಪಾತ್ರದಂತಿದೆ. ಇಲ್ಲಿ ಹೆಚ್ಚು ಕಾಮಿಡಿಯಿಲ್ಲ. ಏಕೆಂದರೆ ನಾಗಕಿರಣ್ ಎಲ್ಲಾ ಕಡೆ ಅದನ್ನೇ ಮಾಡಿ, ನುಲಿದಾಡುತ್ತಾರೆ. ಶಂಖನಾದ ಅರವಿಂದ್, ಲಂಬು ನಾಗೇಶ್ ಪಾತ್ರ ನಾಲ್ಕು ದಿನದಿಂದ ತೊಳೆಯದ ಪಾತ್ರೆಯಂತಿದೆ. ಇನ್ನು ನಾಯಕಿ ಪಾಯಲ್. ಆಕೆ ಫಲ ನೀಡದ, ಫಲವತ್ತಾಗಿ ಬೆಳೆದುನಿಂತ ತೆಂಗಿನಮರ. ದೂರದಲ್ಲಿ ನಿಂತು ನೋಡಿದರೆ ಅದು ಆ ಕಡೆ ಈ ಕಡೆ ನುಲಿಯುತ್ತದೆ. ಛಾಯಾಗ್ರಹಣ ಕೆಲವು ಕಡೆ ಚೆನ್ನಾಗಿದೆ. ನೃತ್ಯ ಸಂಯೋಜನೆಯಲ್ಲಿ ಹೊಸತನವಿದೆ.

ಅಂದಹಾಗೆ ನಿರ್ಮಾಪಕ ವಿನೋದ್ ಸಿಂಗ್ ಎಸಿಪಿ ಪಾತ್ರ ಮಾಡಿದ್ದಾರೆ. ಸಮುದ್ರ ತೀರದಲ್ಲಿ, ತೀರದ ದಾಹದಲ್ಲಿ ಲಕಲಕ ಕುಣಿದಿದ್ದಾರೆ. ಆದರೆ ಕಾರಣ ಮಾತ್ರ ಕೇಳಬೇಡಿ. ಏಕೆಂದರೆ ಅವರ ದುಡ್ಡು, ಅವರು ಶೋಕಿ... ಅವರವರ ಭಾವಕೆ, ಭಕುತಿಗೆ ಬಿಟ್ಟ ವಿಷಯ. ಚಾರುಲತಾ ಬಹಳ ವರ್ಷಗಳ ನಂತರ ಕಾಣಿಸಿಕೊಂಡಿದ್ದಾರೆ. ಆದರೆ ಹತ್ತು ನಿಮಿಷದ ನಂತರ ಮಂಗಮಾಯ. ಕೊನೆಗೆ ಎಲ್ಲ ಮಾಯ, ನಾಳೆ ನೀವೂ ಮಾಯ...

ನಿರ್ದೇಶಕರು ಈ ಥರದ ಚಿತ್ರಕತೆ ಮಾಡಿ, ಮಣ್ಣು ಪಾಲಾಗುವುದಕ್ಕಿಂತ ಇಂಗ್ಲಿಷ್‌ನ ವ್ಯಾಂಟೇಜ್ ಪಾಯಿಂಟ್ ಚಿತ್ರವನ್ನು ನಕಲು ಮಾಡಿದ್ದರೆ ಪಲ್ಲವಿಯಲ್ಲಿ ಇನ್ನಷ್ಟು ಪವರ್ ಕಾಣಬಹುದಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada