»   » ಚಾಲೆಂಜಿಂಗ್ ಸ್ಟಾರ್ 'ಗಜ' ದರ್ಶನ್ ನಡೆದಿದ್ದೇ ದಾರಿ

ಚಾಲೆಂಜಿಂಗ್ ಸ್ಟಾರ್ 'ಗಜ' ದರ್ಶನ್ ನಡೆದಿದ್ದೇ ದಾರಿ

Posted By:
Subscribe to Filmibeat Kannada

ಈ ಚಿತ್ರದ ಎಳೆ ಚಿಕ್ಕದು, ಆದರೂ ದರ್ಶನ್ ಅಭಿಮಾನಿಗಳಿಗೆ ಏನೇನು ಬೇಕೊ ಎಲ್ಲವನ್ನೂ ತೂಕವಾಗಿ ಉಣಬಡಿಸಿದ್ದಾರೆ ನಿರ್ದೇಶಕ ಮಾದೇಶ. ಪಕ್ಕಾ ಮಾಸ್ ಚಿತ್ರವನ್ನು ಅದೇ ರೀತಿ ಚಿತ್ರಿಸಿದ್ದಾರೆ. ತಲೆಗೆ ಹೆಚ್ಚು ಕೆಲಸ ಕೊಡದೆ, ಕಣ್ಣು ಮತ್ತು ಕಿವಿ ತೆರೆದುಕೊಂಡರೆ ಮಜಾ ನೀಡುವುದು ಗ್ಯಾರಂಟಿ.

ದೇವಶೆಟ್ಟಿ ಮಹೇಶ್

ದರ್ಶನ್ ಸಿನಿಮಾಕ್ಕೆ ಕತೆ ಹೆಣೆಯುವುದು ಇಷ್ಟು ಸುಲಭನಾ? ಗಜ ನೋಡಿದರೆ ನಿಮಗೆ ಹಾಗನ್ನಿಸುತ್ತದೆ. ಮೂರು ಫೈಟು, ಸುಂಟರಗಾಳಿಯಂಥ ಒಂದು ಹಾಡು, ತಂಗಿ ಸೆಂಟಿಮೆಂಟು, ಒಂದಿಷ್ಟು ತಮಾಷೆ, ಪಂಚಿಂಗ್ ಡೈಲಾಗು, ಒಂದು ಚೇಸಿಂಗ್....ಇಷ್ಟಿದ್ದರೆ ಅವರ ಸಿನಿಮಾ ಕತೆ ಮುಗಿಯುತ್ತದೆ. ನಮ್ಮ ಪ್ರೀತಿಯ ರಾಮು ಬಿಟ್ಟರೆ ಅವರ ಉಳಿದ ಚಿತ್ರಗಳಲ್ಲಿ ಬಹುತೇಕ ಇದನ್ನು ಕಾಣಬಹುದು. ಅಲ್ಲಲ್ಲಿ ತಂಗಿ ಬದಲಿಗೆ ತಾಯಿ, ಪ್ರೇಯಸಿ ಸಿಗಬಹುದು. ಒಟ್ಟಾರೆಯಾಗಿ ದರ್ಶನ್ ಅಂದರೆ ಇಷ್ಟು ಎಂದು ಹೇಳಬಹುದು. ಅದೇ ಸಾಲಿಗೆ ಗಜ ಸೇರುತ್ತದೆ.ಹೀಗೆಂದಾಕ್ಷಣ ಅಷ್ಟೇನಾ ಎನ್ನುವಂತಿಲ್ಲ. ಅದೇ ಇದ್ದರೂ ಇದು ಬೇರೆಯಾಗಿ ನಿಲ್ಲುತ್ತದೆ. ಹೊಸ ಚಿತ್ರಕತೆಯಿಂದ ನೋಡುವಂತೆ ಮಾಡುತ್ತದೆ.

ಮೊದಲಾರ್ಧದಲ್ಲಿ ಕೊಂಚ ನೀರಸ ಅನಿಸಿದರೂ ಆಮೇಲೆ ನಿರ್ದೇಶಕ ಮಾದೇಶ ಕ್ಯಾಮರಾವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ತೆರೆ ಮೇಲೆ ಮುದ್ದಾಗಿ ಕಾಣಿಸುತ್ತಾರೆ. ಹೊಸ ಹೇರ್ ಸ್ಟೈಲ್ ಅವರಿಗೆ ಫ್ರೆಶ್ ನೆಸ್ ನೀಡಿದೆ. ಕಾಸ್ಟ್ಯೂಮ್ ನಲ್ಲೂ ಒಂದು ಕಳೆ ಇದೆ. ಅದಕ್ಕೆ ತಕ್ಕಂತೆ ಲೀಲಾಜಾಲ ಅಭಿನಯಕ್ಕೆ ಮನಸು ಮಾಡಿದ್ದಾರೆ. ಅವರಿದ್ದ ಕಡೆ ಲವಲವಿಕೆ ಇದೆ. ಇಲ್ಲಿವರೆಗೆ ಫೈಟಿಂಗ್ ನಲ್ಲಿ ಸೈ ಎನಿಸಿಕೊಂಡಿದ ದರ್ಶನ್ ಕಾಮಿಡಿ ದೃಶ್ಯಗಳನ್ನು ಇಷ್ಟು ನೀಟಾಗಿ ನಿಭಾಯಿಸುತ್ತಾರೆಂದು ಗೊತ್ತಿರಲಿಲ್ಲ. ಅದು ಮೊದಲ ಬಾರಿ ಸಾಬೀತಾಗಿದೆ. ಏನನ್ನಾದರೂ ಮಾಡಬಹುದು. ಆದರೆ ಕಾಮಿಡಿ ಮಾಡಿ ನಗಿಸುವುದು ಅಷ್ಟು ಸುಲಭವಲ್ಲ ಎನ್ನುವ ಕಮಲ್ ಹಾಸನ್ ಮಾತು ನೆನಪು ಮಾಡಿಕೊಂಡರೆ ದರ್ಶನ್ ಪ್ರತಿಭೆ ತೆಕ್ಕೆಗೆ ಸಿಗುತ್ತದೆ.

ಬಹುತೇಕ ಎಲ್ಲಾ ದೃಶ್ಯಗಳಲ್ಲಿ ದರ್ಶನ್ ಸಿಗುತ್ತಾರೆ ಹಾಗೆ ಸಿಕ್ಕ ಮೇಲೂ ಬೋರ್ ಹೊಡೆಸದಂತೆ ಎಚ್ಚರ ವಹಿಸಿದ್ದಾರೆ. ಮಾವನೆದುರು ನಿಂತು ಸೆಡ್ಡು ಹೊಡೆವಾಗ, ಕನ್ನಡದ ಹುಡುಗರನ್ನೇ ಇಲ್ಲಿಯ ಹುಡುಗಿಯರು ಮದುವೆಯಾಗಬೇಕು ಎಂದು ಹೇಳುವ ಶೈಲಿಯಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ಅದಕ್ಕೆ ಸರಿಯಾಗಿ ಹರಿಕೃಷ್ಣ ಸಂಗೀತದ ಮೂರು ಹಾಡುಗಳು ಕಿಕ್ ಕೊಡುತ್ತವೆ.'ಐತ್ ಲಕಡಿ ಕಮ ಕಮ ಕಮ ಕಮಲಾಕ್ಷಿ..'ಹಾಡಂತೂ ಕಾಲು ಕುಣಿಸುತ್ತದೆ. ಕೆ.ವಿ.ರಾಜು ಸಂಭಾಷಣೆ ಅಲ್ಲ್ಲಲ್ಲಿ ಪಂಚ್ ಕೊಡುತ್ತದೆ.ಕೆಲವೊಮ್ಮೆ ಸಪ್ಪೆಯಾಗಿವೆ.ಆದರೂ ಮಾತುಗಳು ಇಷ್ಟವಾಗುತ್ತವೆ. ರಮೇಶ್ ಬಾಬು ಕ್ಯಾಮರಾ ಕೆಲಸದ ನಿಯತ್ತು ಎದ್ದು ಕಾಣುತ್ತದೆ. ಹಿಮದ ಬಂಡೆಗಳನ್ನು ಚಿತ್ರಿಸಿದ ರೀತಿ ಕಣ್ಣುಗಳನ್ನು ತಂಪಾಗಿಸುತ್ತವೆ. ಫೈಟಿಂಗ್ ನಲ್ಲಿ ವಿಶೇಷ ಇಲ್ಲದಿದ್ದರೂ ಎಂದು ಚೇಸಿಂಗ್ ದೃಶ್ಯ ಮೈ ನವಿರೇಳಿಸುತ್ತದೆ.

ಬೋನಸ್ ಆಗಿ ಸಿಕ್ಕಿರುವುದು ನವ್ಯಾ ನಾಯರ್ ಎನ್ನುವ ಮಲಯಾಳಿ ಹುಡುಗಿಯ ಅದ್ಭುತ ಅಭಿನಯ. ಆಕೆ ತೆರೆ ಮೆಲೆ ಬಂದರೆ ಪಾದರಸ. ಕುಣಿತದಲ್ಲಿ ತೋರಿಸಿದಷ್ಟೇ ಶ್ರದ್ಧೆಯನ್ನು ಅಭಿನಯದಲ್ಲಿ ತೋರಿಸಿದ್ದಾಳೆ. ಕನ್ನಡದ ಹುಡುಗಿ ಅಲ್ಲ ಎಂದೇ ಅನಿಸುವುದಿಲ್ಲ. ಇದು ಆಕೆಯ ಮುಖದ ಪ್ಲಸ್ ಪಾಯಿಂಟ್ ಹೊರಗಿ ನಿಂದ ಕರೆಸುವುದಿದ್ದರೆ ಇಂಥ ಹುಡುಗಿಯನ್ನು ಕರೆಸಬೇಕು ಅಂತನಿಸುವಂತಿದ್ದಾಳೆ. ಮುಂಬೈ ನಿಂದ ಬಂದ ಏಕ್ತಾ ಕೋಸ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಉಳಿದಂತೆ ಹಿರಣ್ಣಯ್ಯ, ಶ್ರೀನಾಥ್, ಚಿತ್ರಾ ಶೈಣೈ, ತೇಜಸ್ವಿನಿ, ಕೋಮಲ್ ಕುಮಾರ್ ,ದೇವರಾಜ್, ಸೌರಭ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕೋಮಲ್ ಗೆ ಇನ್ನಷ್ಟು ಚಾನ್ಸ್ ಕೊಟ್ಟಿದ್ದಾರೆ ಚೆನ್ನಾಗಿತ್ತೇನೊ.

ಇಷ್ಟೆಲ್ಲಾ ಹೇಳಿ ಕತೆಯನ್ನು ಹೇಳದಿದ್ದರೆ ಹೇಗೆ? ಒಂದು ಕುಟುಂಬಕ್ಕೆ ನಾಯಕ ಒಂದು ಹುಡುಗಿಯನ್ನು ಕರೆತರುತ್ತಾನೆ. ಆಕೆಯ ಅಪ್ಪ, ಅಮ್ಮ ಮತ್ತು ಅಣ್ಣನನ್ನು ಮೈಸೂರಿನಲ್ಲಿ ಗೂಂಡಾ ಪಡೆ ಕೊಂದಿರುತ್ತದೆ. ಅದನ್ನು ಮನೆಯವರಿಗೆ ಹೇಳದೆ ಮುಚ್ಚಿಟ್ಟಿರುತ್ತಾನೆ. ಆಕೆಯನ್ನು ಅವರಿಂದ ಬಿಡಿಸಿಕೊಂಡು ಬರುವಾಗ ರೌಡಿಯ ತಮ್ಮನ ರುಂಡ ಚೆಂಡಾಡಿರುತ್ತಾನೆ. ಅದಕ್ಕೆ ಆ ರೌಡಿ, ನಾಯಕನನ್ನು ಹುಡುಕಿಕೊಂಡು ಬರುತ್ತಾನೆ. ಈ ನಡುವೆ ನಾಯಕಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳದೆ ಒದ್ದಾಡುತ್ತಾನೆ. ಆಗ ರೌಡಿಗಳಿಗೆ ಈತ ಸಿಗುತ್ತಾನೆ. ಮುಂದೆ ಏನಾಗುತ್ತದೆ ಎಂದು ಈಗಲೇ ಹೇಳಿದರೆ ಹೇಗೆ?

ಎಳೆ ಚಿಕ್ಕದು, ಆದರೂ ದರ್ಶನ್ ಅಭಿಮಾನಿಗಳಿಗೆ ಏನೇನು ಬೇಕೊ ಎಲ್ಲವನ್ನೂ ತೂಕವಾಗಿ ಉಣಬಡಿಸಿದ್ದಾರೆ ನಿರ್ದೇಶಕ ಮಾದೇಶ. ಪಕ್ಕಾ ಮಾಸ್ ಚಿತ್ರವನ್ನು ಅದೇ ರೀತಿ ಚಿತ್ರಿಸಿದ್ದಾರೆ. ತಲೆಗೆ ಹೆಚ್ಚು ಕೆಲಸ ಕೊಡದೆ, ಕಣ್ಣು ಮತ್ತು ಕಿವಿ ತೆರೆದುಕೊಂಡರೆ ಮಜಾ ನೀಡುವುದು ಗ್ಯಾರಂಟಿ...

ಪೂರಕ ಓದಿಗೆ:
ಜ.11ಕ್ಕೆ ದರ್ಶನ್‌ರ 'ಗಜ' ಪ್ರಸವ
ಐಕ್ಕಲಕಡಿ 'ಗಜ' ರಿಮೇಕ್ ಅಂದವ ದಾರಿಬಿಟ್ಟು ಸೈಡಿಗೆ ನಡಿ
ಮಲಯಾಳಿ ಚೆಲುವೆ ನವ್ಯಾ ನಾಯರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada