»   » ತಾಯಿಯ ಮಡಿಲು : ಮತ್ತೊಂದು ಕಂಬನಿಯ ಕುಯ್ಲು!

ತಾಯಿಯ ಮಡಿಲು : ಮತ್ತೊಂದು ಕಂಬನಿಯ ಕುಯ್ಲು!

Subscribe to Filmibeat Kannada


ಇಷ್ಟಕ್ಕೂ ತನ್ನಮ್ಮನ ಬಗ್ಗೆ ಅಪ್ಪ ಸುಳ್ಳು ಹೇಳಿದ್ದಾದರೂ ಏಕೆ ? ಅಪ್ಪನ ಉತ್ತರ ಕೇಳಿ ಮಗ(ಶಿವರಾಜ್‌ ಕುಮಾರ್‌) ಒಬ್ಬನೇ ಅಲ್ಲ ಚಿತ್ರ ನೋಡುತ್ತಿರುವ ಪ್ರೇಕ್ಷಕರೂ ಶಾಕ್‌ ಆಗುತ್ತಾರೆ!

ಚಿತ್ರ : ತಾಯಿಯ ಮಡಿಲು
ನಿರ್ದೇಶನ -ನಿರ್ಮಾಣ : ಎಸ್‌.ನಾರಾಯಣ್‌
ಸಂಗೀತ : ಎಸ್‌.ಎ.ರಾಜಕುಮಾರ್‌
ತಾರಾಗಣ : ಶಿವರಾಜ್‌ ಕುಮಾರ್‌, ರಕ್ಷಿತಾ, ಜಯಸುಧಾ, ದೊಡ್ಡಣ್ಣ, ಅವಿನಾಶ್‌, ವಿನಯ ಪ್ರಕಾಶ್‌ ಮತ್ತಿತರರು.

ರಹಸ್ಯಗೊತ್ತಾಗುವವರೆಗೂ ನಂದ ಅಲಿಯಾಸ್‌ ನಂದಕುಮಾರ್‌ ಜೀವನ ‘ಜಾಲಿ ಗೋ ಜಾಲಿ ಗೋ...’ ಅಪ್ಪನೊಂದಿಗೆ ಹಾಡುತ್ತಾ, ಕುಣಿಯುತ್ತಾ, ನಲಿಯುತ್ತಾ, ಸತ್ತು ಹೋಗಿರುವ ಅಮ್ಮನನ್ನು ಆಗಾಗ ನೆನೆಯುತ್ತಾ, ಅವಳಿಗಾಗಿ ಕಂಬನಿ ಮಿಡಿಯುತ್ತಾ ಇರುತ್ತಾನೆ. ಆದರೆ ಇದ್ದಕ್ಕಿದ್ದಂತೆ ತಾನೆಂದೂ ಊಹಿಸಲೂ ಆಗದ ಘಟನೆ ನಡೆದು ಹೋಗುತ್ತದೆ. ಯಾವಾಗ ತಾನು ಇಷ್ಟು ವರ್ಷಗಳ ಕಾಲ ಫೋಟೊದಲ್ಲಿ ಮಾತ್ರ ನೋಡಿರುವ, ಸತ್ತು ಹೋಗಿದ್ದಾಗಿ ತಿಳಿದಿರುವ ಅಮ್ಮ ಬದುಕಿ ಕಣ್ಣ ಮುಂದಿದ್ದಾರೆ ಎಂದು ಗೊತ್ತಾಗುತ್ತದೋ, ನಂದನ ಜೀವನವೇ ಬದಲಾಗುತ್ತದೆ.

ಅದರಲ್ಲೂ ಆ ಅಮ್ಮ, ‘ನೀನು ನನ್ನ ಮಗನೇ ಅಲ್ಲ, ನೀನ್ಯಾರೋ ಗೊತ್ತೇ ಇಲ್ಲ’ ಎನ್ನುವಾಗ ನಂದ ಚೂರುಚೂರಾಗುತ್ತಾನೆ. ಇಷ್ಟಕ್ಕೂ ಅಪ್ಪ ತನ್ನಮ್ಮನ ಬಗ್ಗೆ ಸುಳ್ಳು ಹೇಳಿದ್ದಾದರೂ ಏಕೆ ? ಉತ್ತರ ಕೇಳಿ ನಂದ ಒಬ್ಬನೇ ಅಲ್ಲ ಚಿತ್ರ ನೋಡುತ್ತಿರುವ ಪ್ರೇಕ್ಷಕರೂ ಶಾಕ್‌ ಆಗುತ್ತಾರೆ. ಹಾಗಿರುವಾಗ ಕತೆ ಹೇಳಿದರೆ ಏನು ಚೆನ್ನ ? ನಂದನ ಜನ್ಮರಹಸ್ಯವನ್ನು ತೆರೆಯ ಮೇಲೆ ನೀವೇ ನೋಡಿಬಿಡಿ.

ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಎಷ್ಟೋ ವರ್ಷಗಳ ನಂತರ ತಾಯಿ-ಮಗ ಭೇಟಿಯಾಗುವುದು, ತಮ್ಮ ನಡುವಿನ ಸಂಬಂಧವ ಹೇಳಿಕೊಳ್ಳುವುದಕ್ಕೆ ತಹತಹಿಸುವುದು, ಆಮೇಲೆ ಎಲ್ಲರೂ ಒಂದಾಗಿ ಬಾಳುವುದು ... ಇವೆಲ್ಲ ಮಾಮೂಲು. ಇಂಥ ಹಳೆಯ ಕತೆಯನ್ನು ಎಸ್‌. ನಾರಾಯಣ್‌ರಂಥ ಸೆಂಟಿಮೆಂಟ್‌ ತಜ್ಞರು ಹೊಸತಾಗಿ ದುಡಿಸಿಕೊಂಡಿದ್ದಾರೆ.

ಮೊದಲರ್ಧವೆಲ್ಲ ನಗಿಸಿ, ದ್ವಿತೀಯಾರ್ಧದಲ್ಲಿ ಕರ್ಚೀಫ ಹೊರಕ್ಕೆ ತೆಗೆಯುವಂತೆ ನೋಡಿಕೊಂಡಿದ್ದಾರೆ ನಾರಾಯಣ್‌. ಕರಳು ಕತ್ತರಿಸುವ, ಕಣ್ಣೀರು ತರಿಸುವ ದೃಶ್ಯಗಳ ಅಷ್ಟೇ ಸೂಕ್ಷ್ಮವಾಗಿ ನಿರೂಪಿಸಿ ಗೆದ್ದಿದ್ದಾರೆ. ಮಗನೇ ತಂದೆಯನ್ನು ಕೊಲ್ಲುತ್ತಾನೆ ಎಂದು ಜ್ಯೋತಿಷಿ ಹೇಳುವುದು ಮೂಢನಂಬಿಕೆ ಎನಿಸಬಹುದು. ಹಸುಗೂಸನ್ನು ತಂದೆಯಿಂದ ರಕ್ಷಿಸುವುದಕ್ಕೆ ತಾಯಿಯೇ ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ಎಸೆಯುವುದು, ಮತ್ತು ಆ ಮಗು ಸದೃಢವಾಗಿ ಬದುಕುಳಿಯುವುದು ... ಇವೆಲ್ಲ ಕೊಂಚ ಹೆಚ್ಚಾಯಿತು ಎನಿಸಬಹುದು. ಆದರೆ, ಚಿತ್ರ ನೋಡುವಾಗ ಇದ್ಯಾವುದನ್ನೂ ಗಮನಿಸಲು ಪುರುಸೊತ್ತು ಕೊಡದಷ್ಟು ವೇಗವಾಗಿ ನಿರೂಪಿಸಿದ್ದಾರೆ ನಾರಾಯಣ್‌.

ಚಿತ್ರವನ್ನು ಇನ್ನರ್ಧ ಗೆಲ್ಲಿಸಿಕೊಡುವುದು ಶಿವರಾಜ್‌ಕುಮಾರ್‌. ಸೆಂಟಿಮೆಂಟಿರಲಿ, ಕಾಮಿಡಿಯಿರಲಿ ಅವರ ಅಭಿನಯವನ್ನು ನೋಡಿಯೇ ಅನುಭವಿಸಬೇಕು. ಅದರಲ್ಲೂ ತಾಯಿಗಾಗಿ ಹಪಹಪಿಸುವ ಅವರ ಅಭಿನಯ ಸೂಪರ್‌.

ರಕ್ಷಿತಾಗಿದು ಕೊನೆಯ ಚಿತ್ರ. ಡಬ್‌ ಮಾಡಿಲ್ಲ ಎಂಬ ಕೊರಗನ್ನು ಬಿಟ್ಟರೆ, ಒಳ್ಳೆಯ ಪಾತ್ರದಿಂದಲೇ ನಿರ್ಗಮಿಸಿದ್ದೇನೆ ಎಂದು ಅವರು ಎದೆತಟ್ಟಿ ಹೇಳಬಹುದು. ಆದರೆ, ನಾಲ್ಕು ಹಾಡುಗಳಿಗೆ ಬರುವುದು ಬಿಟ್ಟು ಬೇರೇನೂ ಮಾಡುವುದಿಲ್ಲ ಎಂದು ಅವರ ಅಭಿಮಾನಿಗಳು ಕೊರಗದೆ ಇರಲಾರರು.

ಜಯಸುಧಾ, ದೊಡ್ಡಣ್ಣ, ಅವಿನಾಶ್‌ ಕೂಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಚಿಕ್ಕ ಪಾತ್ರವಾದರೂ ವಿನಯ ಪ್ರಕಾಶ್‌ ನೆನಪಿನಲ್ಲುಳಿಯುತ್ತಾರೆ.

ನಾರಾಯಣ್‌ರ ಫೇವರಿಟ್‌ ಸಂಗೀತ ನಿರ್ದೇಶಕ ಎಸ್‌.ಎ. ರಾಜ್‌ಕುಮಾರ್‌ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಆದರೆ, ಅವುಗಳಲ್ಲಿ ಒಂದು ಹಾಡನ್ನು ನೇರವಾಗಿ ಹಿಂದಿಯಿಂದ ಎತ್ತಲಾಗಿದೆ. ಇನ್ನೊಂದು ತಮಿಳು ಹಾಗೂ ಪಂಜಾಬಿ ಸಂಗೀತದ ರೀಮಿಕ್ಸ್‌ನಂತಿದೆ. ಇನ್ನು ನಾಲ್ಕು ಹಾಡುಗಳು ಕೇಳುವಂತಿವೆ.

ಹಾಡುಗಳು ಸೇರಿದಂತೆ ಇಡೀ ಚಿತ್ರವನ್ನು ನೋಡುವಂತೆ ಮಾಡುವುದು ಪಿ.ಕೆ.ಎಚ್‌. ದಾಸ್‌ ಕ್ಯಾಮೆರಾ. ಈಜಿಪ್ತ್‌, ಆಸ್ಟ್ರಿಯಾ, ಲಲಿತ್‌ಮಹಲ್‌ ಅರಮನೆ ಎಲ್ಲ ಸ್ಥಳಗಳೂ ದಾಸ್‌ ಕ್ಯಾಮೆರಾದಲ್ಲಿ ಸುಂದರವಾಗಿ ಕಾಣುತ್ತವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada