ಓಕೆ ಸಾರ್... ಓಕೆ, ಪರವಾಗಿಲ್ಲ..
- ರಮೇಶ್ ಕುಮಾರ್ ನಾಯಕ್
ನಿರ್ದೇಶಕರು ಸೇರಿದಂತೆ ಬಹುತೇಕ ತಂತ್ರಜ್ಞರು ಹೊಸಬರು. ಟೀಂ ವರ್ಕ್‌ನ ಜತೆಗೆ ಚಿತ್ರದಲ್ಲಿ ಹೊಸಬರ ಶ್ರಮ ಎದ್ದು ಕಾಣುತ್ತದೆ.
ಮದನ್ ಪಟೇಲ್ ಕೆಲಸಕ್ಕಾಗಿ ಹಳ್ಳಿಯಿಂದ ಪಟ್ಟಣಕ್ಕೆ ಬಂದವನು. ಆತನಿಗೆ ಪಟ್ಟಣದ ಹುಡುಗಿಯರೆಂದರೆ ಅಲರ್ಜಿ. ರೊಮಾನ್ಸ್‌ಗೆ ಅಂಗಲಾಚುವ ಪಕ್ಕದ ಮನೆಯ ಹುಡುಗಿಯನ್ನು ಛೀ, ಥೂ ಎಂದು ದೂರ ತಳ್ಳುತ್ತಾನೆ. ಆದರೆ ಅನು ಪ್ರಭಾಕರ್‌ಳನ್ನು ಕಂಡಾಕ್ಷಣ ಪ್ರೀತಿಯಲ್ಲಿ ಮುಳುಗುತ್ತಾನೆ. ತುಂಟಾಟವನ್ನೇ ಫುಲ್ ಟೈಂ ವೃತ್ತಿಯನ್ನಾಗಿಸಿಕೊಂಡಿರುವ ದಾಮಿನಿ, ಸಿರಿ, ರಶ್ಮಿ ಮತ್ತು ವಿನಾಯಕ ಜೋಶಿಯ ತಂಡ ಮದನ್‌ನ ದಾರಿ ತಪ್ಪಿಸುತ್ತದೆ. ಅನು ಬದಲಿಗೆ ದಾಮಿನಿ ಫೋನ್‌ನಲ್ಲಿ ಸಲ್ಲಾಪ ನಡೆಸುತ್ತಾಳೆ. ತಾನು ಪ್ರೀತಿಸಿದ ಹುಡುಗಿ ಮದನ್‌ಗೆ ಮುಖಾಮುಖಿಯಾಗುವುದು ಆಕೆಯ ಮದುವೆ ಮಂಟಪದಲ್ಲಿ. ಇಷ್ಟಕ್ಕೂ ಆಕೆಯನ್ನು ವರಿಸಲಿರುವವನು ಮದನ್‌ನ ಆತ್ಮೀಯ ಸ್ನೇಹಿತ! ಮುಂದೆ ಕತೆ ಬೇರೆ ತಿರುವು ಪಡೆದಿರುತ್ತದೆ.
ಮೊದಲ 25 ನಿಮಿಷ ಹುಡುಗಿಯರ ತರಲೆಯಲ್ಲೇ ಮುಗಿಯುತ್ತದೆ. ಆದರೆ ಅಷ್ಟು ಅವಧಿಯಲ್ಲಿ ಪ್ರೇಕ್ಷಕರು ಕಿಸಕ್ಕನೆ ನಗುವುದು ಬ್ಯೂಟಿ ಪಾರ್ಲರ್ ದೃಶ್ಯದಲ್ಲಿ ಮಾತ್ರ. ದಢೂತಿ ಹೆಂಗಸಿಗೆ ಮೇಕಪ್ ಮಾಡುವುದನ್ನು ಎಮ್ಮೆಗೆ ಬಣ್ಣ ಬಳಿಯುವುದಕ್ಕೆ ಹೋಲಿಸಿದ್ದೇ ಆ ದೃಶ್ಯ. ಇಂಟರ್‌ವೆಲ್‌ನಲ್ಲೇ ನಾಯಕಿಯ ನಿಶ್ಚಿತಾರ್ಥದ ಪ್ರಸ್ತಾಪವಾಗುವ ಮೂಲಕ ಉದ್ಭವವಾಗುವ ಕುತೂಹಲ ಕೊನೆಯವರೆಗೆ ಚಿತ್ರವನ್ನು ಜೀವಂತವಾಗಿರಿಸುತ್ತದೆ.
ಸಾಮಾನ್ಯವಾಗಿ ಸ್ವಂತ ನಿರ್ಮಾಣದ ಚಿತ್ರದಲ್ಲಿ ಹೀರೊ ಆಗಿರುವವರು ತಮ್ಮನ್ನು ತಾವು ಸಿಕ್ಕಾಪಟ್ಟೆ ಉಬ್ಬಿಸಿಕೊಳ್ಳುತ್ತಾರೆ. ಪೃಷ್ಠದಲ್ಲಿ ಹಿಡಿ ಮಾಂಸ ಇಲ್ಲದಿದ್ದರೂ ಜೇಮ್ಸ್ ಬಾಂಡ್‌ನಂತೆ ಪೋಸ್ ಕೊಡುತ್ತಾರೆ. ನೆಟ್ಟಗೆ ನಡೆಯಲು ಬಾರದಿದ್ದರೂ ಮೈಕೆಲ್ ಜಾಕ್ಸನ್ ಥರ ಕುಣಿಯಬೇಕೆನ್ನುತ್ತಾರೆ. ಆದರೆ ಇದಕ್ಕೆ ಮದನ್ ಪಟೇಲ್ ಅಪವಾದ. ಸ್ಫುರದ್ರೂಪಿಯಾಗಿದ್ದರೂ ತಮ್ಮ ಇತಿ-ಮಿತಿ ಅರಿತು ಸಹಜವಾಗಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಪ್ರವೇಶವಾಗುವುದೇ 26ನೇ ನಿಮಿಷದಲ್ಲಿ. ನಾಯಕಿಯ ಮುಖ ತೆರೆಯ ಮೇಲೆ ಬರುವುದು 44 ನಿಮಿಷಗಳ ಬಳಿಕ.
ಚಂದ್ರು(ಛಾಯಾಗ್ರಹಣ), ನಾಗ ಮಹೇಶ್(ಸಂಗೀತ) ಮತ್ತು ವಿನೋದ್ ಮನೋಹರ್(ಸಂಕಲನ) ಭರವಸೆ ಮೂಡಿಸಿದ್ದಾರೆ.
ಬಾಲಿವುಡ್‌ನ ಗಾಯಕರಿಗೆ ದುಬಾರಿ ಸಂಭಾವನೆ ನೀಡಿ ದೇವರಾನೆ ಪ್ರೀತಿಯಾನೆ ಎಂದೆಲ್ಲ ವಿಕಾರವಾಗಿ ಹಾಡಿಸುವುದು ಯಾವ ಕರ್ಮಕ್ಕೋ ಗೊತ್ತಿಲ್ಲ. ಸಂಗೀತಗಾರ ಹೊಸೆಯುವ ರಾಗವೇ ನಿರ್ಣಾಯಕ. ಅದು ಇಂಪಾಗಿದ್ದು, ಅರ್ಥಪೂರ್ಣ ಸಾಹಿತ್ಯ ಇರುವ ಹಾಡು ಹಿಟ್ ಆಗಲು ಉದಿತ್ ನಾರಾಯಣ್ ಬೇಕಾಗಿಲ್ಲ. ನೆರೆಮನೆಯ ರಾಜೇಶ್ ಕೃಷ್ಣನ್, ಹೇಮಂತ್ ಸಾಕು. ಈ ಬಗ್ಗೆ ಕನ್ನಡ ಚಿತ್ರೋದ್ಯಮಿಗಳು ಚಿಂತನೆ ನಡೆಸಲಿ.
ಪೂರಕ ಓದಿಗೆ-
ಆಗ ಗಾಯಕ, ಈಗ ನಾ... ?
‘ನನ್ನ ಮಾತು ಕೇಳ್ದಿದ್ರೆ ಆಸಿಡ್ ಹಾಕಿ ಕೊಲ್ತೀನಿ’
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











