For Quick Alerts
  ALLOW NOTIFICATIONS  
  For Daily Alerts

  ಆಳಕ್ಕಿಳಿಯುವ ಭ್ರಷ್ಟಾಚಾರದ ‘ಬೇರು’

  By Staff
  |
  • ಚೇತನ್‌ ನಾಡಿಗೇರ್‌
  ಭ್ರಷ್ಟಾಚಾರ ಭಾರತೀಯ ಚಿತ್ರರಂಗಕ್ಕೆ ಹೊಸತೇನಲ್ಲ. ಕಳೆದ ಐವತ್ತು ವರ್ಷಗಳಿಂದ ಈ ಬಗ್ಗೆ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಅದರಲ್ಲೂ ಭ್ರಷ್ಟ ವ್ಯವಸ್ಧೆಯಾಂದರಲ್ಲಿ ಪ್ರಾಮಾಣಿಕ ಅಧಿಕಾರಿಯಾಬ್ಬನ ಹೋರಾಟ ನಿರಂತರವಾದದ್ದು. ಅಂಥದೊಂದು ಭ್ರಷ್ಟಾಚಾರವನ್ನು ಮತ್ತು ಅದರ ವಿರುದ್ಧದ ಹೋರಾಟದ ಬೇರನ್ನು ‘ಬೇರು’ ಮೂಲಕ ಹೇಳಿದ್ದಾರೆ ಶೇಷಾದ್ರಿ.

  ಬೇರು ಕಥೆ ಎರಡು ವಿಭಿನ್ನ ವಿಚಾರಧಾರೆಗಳ ಮೂಲಕ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಒಂದು ಎಳೆಯಲ್ಲಿ ಭಿಕ್ಷೆ ಬೇಡಿ ಬದುಕುವ ಗೊರವಯ್ಯ(ವೆಂಕಟರಾವ್‌)ನಿದ್ದರೆ, ಮತ್ತೊಂದು ಎಳೆಯಲ್ಲಿ ಯಾವುದೋ ಇಲಾಖೆಯ ನಿಷ್ಠಾವಂತ ಅಧಿಕಾರಿ ರಘುನಂದನ್‌(ಸುಚೇಂದ್ರ ಪ್ರಸಾದ್‌)ಇದ್ದಾನೆ. ಇಬ್ಬರೂ ಕೊನೆಯವರೆಗೂ ಸಂಧಿಸದಿದ್ದರೂ ಎಲ್ಲೋ ಒಂದು ಕಡೆ ತಮಗರಿವಿಲ್ಲದಂತೆಯೇ ಅವರಿಬ್ಬರು ಸಂಧಿಸುತ್ತಾ ಹೋಗುತ್ತಾರೆ. ಗೊರವಯ್ಯ ತನ್ನ ಪುಟ್ಟ ಮನೆಯ ಗೋಡೆಯಲ್ಲಿ ಬಿರುಕು ಮೂಡಿಸುತ್ತಿರುವ ಮರವೊಂದರ ಬೇರನ್ನು ಕಡಿಸಲು ಪ್ರಯತ್ನಿಸುತ್ತಾನೆ. ಇನ್ನೊಂದು ಕಡೆ ನಿಷ್ಠಾವಂತ ಅಧಿಕಾರಿ ತನ್ನ ಕಚೇರಿಯಲ್ಲಿ ಹಾಗೂ ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬೇರನ್ನು ಬುಡ ಸಮೇತ ಕಿತ್ತು ಹಾಕಲು ಹೆಣಗುತ್ತಾನೆ. ಆದರೆ ತನಗೆ ಅರಿವಿಲ್ಲದಂತೆಯೇ ಅನಿವಾರ್ಯವಾಗಿ ಮಾನವೀಯ ಅನುಕಂಪದ ಪರ ನಿಲ್ಲಲು ಹೋಗಿ ಆ ಭ್ರಷ್ಠಾಚಾರದ ಕೂಪದಲ್ಲಿ ಒಬ್ಬನಾಗುತ್ತಾ ಹೋಗಿ ಕೊನೆಗೆ ಸಿಕ್ಕಿ ಬೀಳುತ್ತಾನೆ. ಅಲ್ಲದೆ, ತಾನು ಅದರಿಂದ ಹೊರಬರಲು ಇಷ್ಟವಿಲ್ಲದಿದ್ದರೂ ಗೊರವಯ್ಯನನ್ನು ಸಿಲುಕಿಸಲು ಪ್ರಯತ್ನ ಪಡುತ್ತಾನೆ.

  ಇದು ಚಿತ್ರದ ಒಟ್ಟಾರೆ ಸಾರಾಂಶ. ಈ ಮಧ್ಯೆ ಇಲ್ಲದೇ ಇರುವ ಪ್ರವಾಸಿ ಬಂಗಲೆಯ ಹುಡುಕಾಟವಿದೆ. ಮಾನವೀಯತೆ ದೃಷ್ಟಿಯಿಂದಲೋ, ಇನ್ನಾವುದೋ ಕಾರಣದಿಂದಲೋ ಅಧಿಕಾರಿಯನ್ನು ದಾರಿ ತಪ್ಪಿಸುವ ಗುಮಾಸ್ತ ವೆಂಕಟೇಶಯ್ಯ(ದತ್ತಾತ್ರೇಯ), ಪತ್ನಿ ಸುಮ(ನೀತಾ)ಇದ್ದಾರೆ. ಚಿತ್ರದಲ್ಲಿ ಆರಂಭದಿಂದ ಅಂತ್ಯದವರೆಗೂ ಪ್ರಾಮಾಣಿಕವಾಗಿದ್ದು ಕೊನೆಗೆ ಒತ್ತಡದಿಂದ ಅಪ್ರಮಾಣಿಕತೆಗೆ ಶರಣಾಗುವ ಹಿರಿಯ ಅಧಿಕಾರಿ ಪುರಷೋತ್ತಮ್‌(ಟಿ.ಎನ್‌.ಸೀತಾರಾಂ)ಇದ್ದಾರೆ. ತನ್ನ ಮುಗ್ಧತೆಯಿಂದಲೇ ಗಮನ ಸೆಳೆದು ಕೊನೆಗೆ ಭ್ರಷ್ಟಾಚಾರದ ವಿರುದ್ಧ ಉರಿಯುವ ಗೌರಿ(ಬೇಬಿ ಸೌಮ್ಯ)ಯ ಪ್ರತಿಭಟನೆಯಿದೆ.

  ಶೇಷಾದ್ರಿ ಕಥೆಯನ್ನು ಅಲ್ಲಲ್ಲಿ ಸಂಕೇತಗಳ ಮೂಲಕ ಹೇಳುತ್ತಾ ಹೋಗುತ್ತಾರೆ. ಸರಕಾರಿ ಕಚೇರಿಯಲ್ಲಿ ಗಾಂಧಿ ಚಿತ್ರ ದೂಳು ಹಿಡಿದಿರುವುದು, ಅದರ ಪಕ್ಕದಲ್ಲಿರುವ ಲಕ್ಷ್ಮಿ ಚಿತ್ರ ಹೊಳೆಯುತ್ತಿರುವುದು ಸರಕಾರಿ ಕಚೇರಿಗಳಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಎಂಬ ಅಂಶವನ್ನು ಬಿಂಬಿಸುತ್ತದೆ.

  ಅದೇ ರೀತಿ ಮನೆಯಲ್ಲಿ ದೊಗರು ಮುಚ್ಚಿದಷ್ಟೂ ಹೆಗ್ಗಣ ಬೇರೆಬೇರೆ ದೊಗರು ಕೊರೆಯುವುದನ್ನು , ಸರಕಾರಿ ಕಚೇರಿಗಳಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಲಂಚ, ರುಷವತ್ತು ಹೆಚ್ಚಾಗುತ್ತಿರುವ ಸಂಕೇತವಾಗುತ್ತದೆ.

  ಚಿತ್ರದ ವೈಶಿಷ್ಟ್ಯವೆಂದರೆ ಇದೊಂದು ಕಲಾತ್ಮಕ ಚಿತ್ರವಾದರೂ ಎಲ್ಲೂ ಡಾಕ್ಯುಮೆಂಟರಿ ಎನಿಸುವುದಿಲ್ಲ. ಯಾವುದೇ ಕ್ಷಣದಲ್ಲೂ ಬೋರ್‌ ಹೊಡೆಸುವುದಿಲ್ಲ. ಕಮರ್ಷಿಯಲ್‌ ಚಿತ್ರದಷ್ಟೇ ವೇಗವಾಗಿದೆ. ಅದಕ್ಕೆ ಕಾರಣ ಜೆ.ಎಂ.ಪ್ರಹ್ಲಾದ್‌ರ ಗಟ್ಟಿ ಕಥೆ ಮತ್ತು ಅದನ್ನು ದೃಶ್ಯ ಮಾಧ್ಯಮಕ್ಕೆ ಸಮರ್ಥವಾಗಿ ಇಳಿಸಿರುವ ಶೇಷಾದ್ರಿ ಅವರ ನಿರ್ದೇಶನ. ಚಿತ್ರದ ಪಾತ್ರಗಳು ಕೇವಲ ಪಾತ್ರಗಳಾಗಿರದೆ ಒಂದು ಸಮಾಜದ ಪ್ರತಿನಿಧಿಗಳಾಗಿದೆ. ಹಾಗೆ ಮಾಡುವಲ್ಲಿ ಶೇಷಾದ್ರಿ ಅವರ ಜಾಣ್ಮೆ ಎದ್ದು ಕಾಣುತ್ತದೆ. ಛಾಯಾಗ್ರಾಹಕ ಎಸ್‌.ರಾಮಚಂದ್ರ ಅವರ ಕ್ಯಾಮರಾ ಕಣ್ಣಲ್ಲಿ ಕರಡೀಗುಡ್ಡದ ನಿಗೂಢತೆ, ಪಾಳು ಬಿದ್ದ ಮನೆಯಲ್ಲಿನ ಚಿತ್ರಣವನ್ನು ಹಾಗೂ ಮಂಚದ ಕೆಳಗೆ ಹೆಗ್ಗಣ ಹುಡುಕುವ ದೃಶ್ಯಗಳು ಸುಂದರವಾಗಿ ಮೂಡಿಬಂದಿವೆ. ಪ್ರವೀಣ್‌ ಹಾಗೂ ಕಿರಣ್‌ ಗೋಡ್ಖಿಂಡಿ ಅವರ ಸಂಗೀತ ಕಾಡುತ್ತದೆ. ಕಾಳಿಂಗರಾಯರ ಗಾಯನ ಮರೆತಿರುವವರಿಗೆ ಇಲ್ಲಿ ಅವರ ಒಂದು ಹಳೆಯ ಹಾಡಿದೆ.

  ಶೇಷಾದ್ರಿ ಚಿತ್ರ ಎಂದರೆ ಅಲ್ಲಿ ದತ್ತಣ್ಣ ಇರಲೇಬೇಕೆನ್ನುವಷ್ಟು ಅವರ ಅನಿವಾರ್ಯವಾಗಿಬಿಟ್ಟಿದ್ದಾರೆ. ಆ ಅನಿವಾರ್ಯತೆಯನ್ನು ದತ್ತಣ್ಣ ಬಹಳ ಸೊಗಸಾಗಿ ಬಳಸಿಕೊಂಡಿದ್ದಾರೆ. ಸರಕಾರಿ ನೌಕರನ ನಿರ್ಲಕ್ಷ್ಯ, ಮೂವರು ಹೆಣ್ಣು ಮಕ್ಕಳ ತಂದೆಯ ಸಂಕಟವನ್ನು ಅವರು ಬಹಳ ಸಲೀಸಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಚಿತ್ರದ ಇನ್ನೊಂದು ಹೈಲೈಂಟೆಂದರೆ ನಾಯಕ ಸುಚೇಂದ್ರ ಪ್ರಸಾದ್‌, ಅವರ ನಟನೆಯಲ್ಲಿ ನಾನಾ ಪಾಟೇಕರ್‌ ಹಾಗೂ ಪ್ರಕಾಶ್‌ ರೈ ಅಲ್ಲಲ್ಲಿ ಇಣುಕಿದರೂ, ಪ್ರಸಾದ್‌ ಅವರೆಲ್ಲರನ್ನೂ ಮೀರಿ ನಿಲ್ಲುತ್ತಾರೆ. ಅವರ ಕಂಚಿನ ಕಂಠ ಹಾಗೂ ಸಹಜಾಭಿನಯ ಗಮನ ಸೆಳೆಯುತ್ತದೆ. ಇದುವರೆಗೂ ಕಿರುತೆರೆಗೆ ಮಾತ್ರ ಮೀಸಲಾಗಿದ್ದ ಹಿರಿಯ ಪ್ರತಿಭೆ ವೆಂಕಟರಾವ್‌ ಮುಗ್ಧ ಗೊರವಯ್ಯನ ಪಾತ್ರದಲ್ಲಿ ಬಹಳ ಕಾಲ ನೆನಪಿನಲ್ಲುಳಿಯುವಂತೆ ಅಭಿನಯಿಸಿದ್ದಾರೆ.

  ಅಲ್ಲದೆ, ಇದುವರೆಗೂ ಹೆಚ್ಚಾಗಿ ಕಮರ್ಷಿಯಲ್‌ ಚಿತ್ರಗಳಲ್ಲೇ ನಟಿಸಿ ಗೆದ್ದಿದ್ದ ನೀತಾ, ಇದೇ ಮೊದಲ ಬಾರಿಗೆ ಕಲಾತ್ಮಕ ಚಿತ್ರವೊಂದರಲ್ಲಿ ನಟಿಸಿ, ಅದರಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.

  ಬೇಬಿ ಸೌಮ್ಯ ಹೆಸರಿಗೆ ತಕ್ಕಂತೆ ಸೌಮ್ಯವಾಗಿದ್ದರೂ, ಮೌನವಾಗಿದ್ದರೂ ಕಣ್ಣಿನಲ್ಲೇ ಎಲ್ಲವನ್ನೂ ಹೇಳಿ ಬಿಡುತ್ತಾಳೆ. ಇನ್ನು ಟಿ.ಎನ್‌.ಸೀತಾರಾಂ, ಲಕ್ಷ್ಮಿ ಚಂದ್ರಶೇಖರ್‌ ಹಾಗೂ ಮೂಗು ಸುರೇಶ್‌ ಅವರದ್ದು ಚಿಕ್ಕ ಪಾತ್ರಗಳಾದರೂ ಚೊಕ್ಕವಾಗಿ ಕಾಣಿಸಿಕೊಂಡಿದ್ದಾರೆ.
  (ಸ್ನೇಹ ಸೇತು : ವಿಜಯ ಕರ್ನಾಟಕ )

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X