»   » ಜೋಲಿ ಹೊಡೆದು ಮುಗ್ಗರಿಸಿದ ಜೂಲಿ

ಜೋಲಿ ಹೊಡೆದು ಮುಗ್ಗರಿಸಿದ ಜೂಲಿ

Posted By:
Subscribe to Filmibeat Kannada


ಸುಮಾರು 30ವರ್ಷಗಳ ಹಿಂದೆ ಲಕ್ಷ್ಮಿ ಅಭಿನಯಿಸಿದ್ದ ಈ ಚಿತ್ರವನ್ನು ಈಗ ಕನ್ನಡಕ್ಕೆ ತಂದಿದ್ದಾರೆ ಪೂರ್ಣಿಮಾ ಮೋಹನ್‌. ಬರೀ ಕತೆ ತಂದಿದ್ದಲ್ಲ. ಅಂದಿನ ಜನಜೀವನ, ಅದೇ ಪಾತ್ರಗಳು, ಆ ಚಿತ್ರದ ಉದ್ದೇಶ... ಕೊನೆಗೆ ಕಾರು, ಮನೆ, ಸೈಕಲನ್ನೂ ತಂದಿದ್ದಾರೆ. ಆದರೆ, ತರಲಿಕ್ಕಾಗದ್ದಿದುದು ಮೂಲ ಚಿತ್ರದ ಫೀಲ್‌ ಮಾತ್ರ!

  • ಚೇತನ್‌ ನಾಡಿಗೇರ್‌
ಅದೊಂದು ಕ್ಷಣ ಅವರಿಬ್ಬರು ಮೈಮರೆತು ಪ್ರಾಯದ ಬೇಲಿ ದಾಟುತ್ತಾರೆ. ಸುಖದ ಪರಾಕಾಷ್ಠೆ ತಲುಪಿ ವಾಪಸಾಗುತ್ತಾರೆ. ಸುಖದ ಹಿಂದೆ ದುಃಖವೂ ಬರುತ್ತದೆ. ಆದರೆ ಸಣ್ಣ ಚೇಂಜು. ಸುಖವನ್ನು ಅವರಿಬ್ಬರೂ ಹಂಚಿಕೊಂಡಿದ್ದರು. ದುಃಖ ಮಾತ್ರ ಅವಳ ಪಾಲಾಗುತ್ತದೆ. ಫಲವಾಗಿ ಅವಳಲ್ಲಿ ಚಿಗುರು ಮೊಳಕೆಯಾಡೆಯುತ್ತದೆ.

ಮಗುವನ್ನೇ ತೆಗೆಸಿಬಿಡೋಣ ಅನ್ನುತ್ತಾಳೆ ಅವಳ ಅಮ್ಮ. ನಾನು ಅಂತ ಪಾಪ ಮಾಡಲ್ಲ ಅಂತಾಳೆ ಮಗಳು. ಕೊನೆಗೆ ಮಗಳೇ ಗೆಲ್ಲುತ್ತಾಳೆ. ತನ್ನ ಮಗುವನ್ನು ಉಳಿಸಿಕೊಳ್ಳುತ್ತಾಳೆ. ಇಷ್ಟೆಲ್ಲ ದುಃಖ ಬಂದ ಮೇಲೆ ಸುಖಾಂತ್ಯಾ ಆಗಬೇಕಲ್ಲವೆ? ‘ಜೂಲಿ’ ಕೂಡ ಸುಖಾಂತ್ಯದಲ್ಲೇ ಮುಗಿಯುತ್ತದೆ.

ಇಷ್ಟೆಲ್ಲ ಆಗುವ ಮುನ್ನ ಚಿತ್ರದಲ್ಲಿ ಸುದೀರ್ಘ ಒಂದು ಗಂಟೆಯ ಮೊದಲಾರ್ಧವಿದೆ. ಅದರಲ್ಲಿ ಮೊದಲ ಐದು ನಿಮಿಷಕ್ಕೆ ಜೂಲಿ, ಇನ್ನೊಂದರೆರಡು ನಿಮಿಷಕ್ಕೆ ಜೂಲಿ, ಇನ್ನೊಂದೆರಡು ನಿಮಿಷಕ್ಕೆ ಅವರಪ್ಪ, ಇದಾಗಿ ಟೆನ್‌ ಮಿನಿಟ್ಸಿಗೆಲ್ಲ ಅವಳ ಫ್ಯಾಮಿಲಿ, ಅದಾಗಿ ಮತ್ತೂ ಹತ್ತು ನಿಮಿಷಕ್ಕೆ ನಾಯಕನ ಫ್ಯಾಮಿಲಿ... ಹೀಗೆ ಪರಿಚಯ ಮುಗಿದು ಬಿಡುತ್ತದೆ. ಅದರ ಜತೆಗೆ ಗ್ಯಾಲನ್‌ಗಟ್ಟಲೆ ವಿಸ್ಕಿ ಕುಡಿಯುವ ಅಪ್ಪ, ಸದಾ ಇಂಗ್ಲೆಂಡ್‌ ನೆನೆಯುವ ಅಮ್ಮ, ಅವರಿಬ್ಬರ ನಡುವಿನ ರಗಳೆ, ಪ್ರೇಮ ಇವೆಲ್ಲ ಇವೆ. ಈ ಮುಕ್ಕಾಲು ಗಂಟೆ ಸಹಿಸಿಕೊಳ್ಳುವಷ್ಟರಲ್ಲಿ ನಾಯಕ- ನಾಯಕಿ ಹತ್ತಿರವಾಗುತ್ತಾರೆ. ಇನ್ನೇನು ಮತ್ತಷ್ಟು ಹತ್ತಿರವಾದರು ಎನ್ನುವಷ್ಟರಲ್ಲಿ ಇಂಟರ್‌ ವೆಲ್‌ ಬಿಡುತ್ತದೆ. ಆಮೇಲಿನದೆಲ್ಲ ನಿಮಗೆ ಗೊತ್ತೇ ಇದೆ ಬಿಡಿ.

ಈಗಾಗ್ಲೇ ನಿಮಗೆ ಗೊತ್ತು ‘ಜೂಲಿ’ ರೀಮೇಕ್‌ ಚಿತ್ರ ಅಂತ. ಸುಮಾರು 30ವರ್ಷಗಳ ಹಿಂದೆ ಲಕ್ಷ್ಮಿ ಅಭಿನಯಿಸಿದ ಈ ಚಿತ್ರವನ್ನು ಈಗ ಕನ್ನಡಕ್ಕೆ ತಂದಿದ್ದಾರೆ ಪೂರ್ಣಿಮಾ ಮೋಹನ್‌. ಬರೀಕತೆ ತಂದಿದ್ದಲ್ಲ. ಅಂದಿನ ಜನಜೀವನ, ಜೀವನ ಶೈಲಿ, ಅದೇ ಪಾತ್ರಗಳು, ಆ ಚಿತ್ರದ ಉದ್ದೇಶ... ಕೊನೆಗೆ ಕಾರು, ಮನೆ, ಸೈಕಲನ್ನೂ ತಂದಿದ್ದಾರೆ. ಆದರೆ, ತರಲಿಕ್ಕಾಗದ್ದಿದುದು ಮೂಲ ಚಿತ್ರದ ಫೀಲ್‌ ಮಾತ್ರ.

ಚಿತ್ರದ ಮತ್ತೊಂದು ಮೈನಸ್‌ ಪಾಯಿಂಟ್‌ ವೇಗ. ಜೂಲಿಯ ನಿಧಾನಗತಿಯಿಂದಾಗಿಯೇ ಆಕೆಯ ಬಗ್ಗೆ ಜನರಿಗೆ ಏನೂ ಅನ್ನಿಸುವುದಿಲ್ಲ. ಮೊದಲಾರ್ಧದ ಪೂರಾ, ಚಿತ್ರ ಯಾವಾಗ ಪ್ರಾರಂಭವಾಗುತ್ತದೆ ಅಂತ ಜನ ತಲೆ ಕೆರೆದುಕೊಂಡರೆ, ದ್ವಿತೀಯಾರ್ಧದ ಪೂರಾ ಚಿತ್ರ ಯಾವಾಗ ಮುಗಿಯುತ್ತದೆ ಅಂತ ಕಾಯುತ್ತಾರೆ. ಅಲ್ಲಿಗೆ ಜೂಲಿ ಖಾಲಿ ಖಾಲಿ.

ರಮ್ಯ ತುಂಡುಡುಗೆಯಲ್ಲಿ ಲಕ್ಷ್ಮಿಗೆ ನೇರ ಸವಾಲೊಡ್ಡಿದ್ದಾರೆ. ಆದರೆ, ಅಭಿನಯದಲ್ಲಿ ಅದು ಸಾಧ್ಯವಾಗಿಲ್ಲ. ಇಲ್ಲಿಯವರೆಗೂ ಕಂಪ್ಯೂಟರೈಸ್ಡ್‌ ರೋಬೋಟ್‌ ನೋಡಿದವರಿಗೆ ಮಾನವ ರೋಬೋಟ್‌ ಸ್ಯಾಂಪಲ್‌ ಜೂಲಿಯಲ್ಲಿದೆ. ಹೆಸರು ಡೀನೋ ಮೋರಿಯಾ. ಚಿತ್ರದುದ್ದಕ್ಕೂ ಅವರ ನಗು, ಚಲನೆ, ಮಾತು, ಹಾವ-ಭಾವ ಎಲ್ಲ ಡಿಟ್ಟೋ ರೀಮೋಟ್‌ ಕಂಟ್ರೋಲ್ಡ್‌. ಕಂ ಸೆ ಕಂ ರೊಮ್ಯಾಂಟಿಕ್‌ ದೃಶ್ಯಗಳಲ್ಲಾದರೂ ಅವರು ಬದಲಾಗುತ್ತಾರೆ ಎಂದರೆ, ಡೀನೋ ಅಲ್ಲೂ ಹಂಗೇಯಾ.

ಇನ್ನು ಬಹಳ ದಿನಗಳ ನಂತರ ಸಿಹಿಕಹಿ ಚಂದ್ರುಗೆ ಈ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರ ಸಿಕ್ಕಿದೆ. ರಮೇಶ್‌ ಭಟ್‌ ಎಂದಿನಂತೆ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಆಶಾಲತಾಗೆ ಈ ಚಿತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಮಾತು ಮಾತಿಗೂ ‘ಎಸ್‌ ಮ್ಯಾನ್‌, ವೈ ಮ್ಯಾನ್‌, ನೋ ಮ್ಯಾನ್‌’ ಎಂದು ಕಿರಿಕಿರಿ ಮಾಡುತ್ತಾರೆ ಎನ್ನುವುದು ಬಿಟ್ಟರೆ ಚಿತ್ರಾ ಶೆಣೈ ಅಭಿನಯ ಕೂಡ ಮೋಸ ಇಲ್ಲ.

ಕಾಪಿಯ ವಿಷಯಕ್ಕೆ ಬಂದರೆ ರಾಜೇಶ್‌ ರಾಮನಾಥ್‌ ಕೂಡ ಹಿಂದೆ ಬಿದ್ದಿಲ್ಲ. ಇದ್ದುದರಲ್ಲಿ ಕ್ಯಾಮರಾಮನ್‌ ಟಿ.ಜನಾರ್ದನ್‌ ಮಾತ್ರ ಕಾಪಿಯಿಂದ ದೂರವಿದ್ದಾರೆ. ಕಾರವಾರವನ್ನು ಸಾಧ್ಯವಾದಷ್ಟೂ ಚೆನ್ನಾಗಿ ತೋರಿಸಲು ಯತ್ನಿಸಿದ್ದಾರೆ ಎನ್ನುವಲ್ಲಿಗೆ ಜೂಲಿಯ ಸತ್ವ ಪರೀಕ್ಷೆ ಮುಗಿಯುತ್ತದೆ.

(ಸ್ನೇಹ ಸೇತು : ವಿಜಯ ಕರ್ನಾಟಕ )

ಗ್ಯಾಲರಿ : ‘ಜೂಲಿ’ಯಲ್ಲಿ ರಮ್ಯಾ, ಡೀನೋ ಮೋರಿಯಾ ರೋಮ್ಯಾನ್ಸ್‌!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada