»   » ‘ಶಾಸ್ತ್ರೀ’ಯ ರಕ್ತಪಾತ ಶಿಬಿರ

‘ಶಾಸ್ತ್ರೀ’ಯ ರಕ್ತಪಾತ ಶಿಬಿರ

Posted By:
Subscribe to Filmibeat Kannada
  • ಚೇತನ್‌ ನಾಡಿಗೇರ್‌
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ಹಾಗೂ ಜನಪ್ರಿಯ ಸ್ಟಾರ್‌ಗಳಾರು? ದರ್ಶನ್‌ ಜೊತೆಗೆ ಲಾಂಗು ಎಂದುತ್ತರಿಸುತ್ತದೆ ಗಾಂಧೀನಗರ. ಹಾಗಾಗಿ ದರ್ಶನ್‌ರನ್ನು ಹಾಕಿಕೊಂಡು ಒಂದು ಚಿತ್ರ ಮಾಡಿ, ಅದರಲ್ಲಿ ಅವರಿಗೊಂದು ಲಾಂಗು ಕೊಟ್ಟರೆ ಚಿತ್ರ ಬಾಕ್ಸ್‌ ಆಫೀಸ್‌ ಚಿಂದಿ ಮಾಡುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದೇ ನಂಬಿರುವ ನಿರ್ಮಾಪಕರು ಸಾಲು ಸಾಲಾಗಿ ತಮ್ಮ ಚಿತ್ರಗಳಲ್ಲಿ ದರ್ಶನ್‌ ಹಾಗೂ ಲಾಂಗನ್ನು ತೋರಿಸಿ ದುಡ್ಡು ಮಾಡಿದ್ದಾರೆ. ಅಂಥ ಚಿತ್ರಗಳ ಪಟ್ಟಿಗೆ ಶಾಸ್ತ್ರಿ ಕೂಡಾ ಸೇರುತ್ತದೆ.

ಎಲ್ಲೇ, ಯಾರೇ ಶಾಸ್ತ್ರಿ ಅಂತ ಕರೆದ್ರೂ ಅಲ್ಲಿ ಶಾಸ್ತ್ರಿ ಇರ್ತಾನೆ. ಎಲ್ಲೆಲ್ಲಿ ತಪ್ಪು ನಡೆಯುತ್ತೋ ಅಲ್ಲೆಲ್ಲಾ ಶಾಸ್ತ್ರಿ ಇರ್ತಾನೆ. ಇದು ಶಾಸ್ತ್ರಿ ತಪ್ಪುಲ್ಲ. ಏಕೆಂದರೆ ಚಿತ್ರದ ಪೂರಾ ತಪ್ಪು ನಡೆಯುತ್ತಿರುವಾಗ ಮತ್ತು ಆ ತಪ್ಪನ್ನು ಸರಿಪಡಿಸಲು ಯಾರಾದರೂ ಕರೆದಾಗ ಶಾಸ್ತ್ರಿಯಂಥವನು ಸುಮ್ಮನೆ ಇರಲು ಸಾಧ್ಯವೇ? ಹಾಗಾಗಿ ಶಾಸ್ತ್ರಿ ಚಿತ್ರದ ತುಂಬಾ ಆವರಿಸಿಕೊಂಡಿರುತ್ತಾನೆ. ಆಗಾಗ ನ್ಯಾಯ, ನೀತಿ, ಧರ್ಮಗಳ ಬಗ್ಗೆ ಒಳ್ಳೊಳ್ಳೆ ಡೈಲಾಗ್‌ ಹೊಡೆಯುತ್ತಾನೆ. ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುತ್ತಾನೆ. ಉಚಿತ ರಕ್ತಪಾತ ಶಿಬಿರವನ್ನೇ ಏರ್ಪಡಿಸುತ್ತಾನೆ. ರುಂಡ-ಮುಂಡ ಚಂಡಾಡಿ ತೃಪ್ತನಾಗುತ್ತಾನೆ. ಮತ್ತಷ್ಟೂ ಬೇಜಾರಾದಾಗ ಹಾಡಿ ಕುಣಿಯುತ್ತಾನೆ. ಎರಡು ಬಾರಿ ಸಾವಿನ ಮನೆಯ ಕದ ತಟ್ಟಿ ಅಜೇಯನಾಗಿ ಉಳಿದು ಬರುತ್ತಾನೆ. ಈ ಎಲ್ಲಾ ಆರ್ಭಟಗಳ ಮಧ್ಯೆ ಕಥೆ ಕೂಡಾ ಮೆಲ್ಲಗೆ ಸದ್ದಿಲ್ಲದೆ ಹಾದು ಹೋಗುತ್ತದೆ. ಆ ಕಥೆಯನ್ನು ಸಾಧ್ಯವಾದರೆ ಚಿತ್ರಮಂದಿರದಲ್ಲಿ ನೋಡಿ ಎಂಜಾಯ್‌ ಮಾಡಿ.

ಶಾಸ್ತ್ರಿ ಪಾತ್ರ ದರ್ಶನ್‌ಗೆ ಹೇಳಿ ಮಾಡಿಸಿದ ಹಾಗಿದೆ. ಕೆಲವು ದೃಶ್ಯಗಳಲ್ಲಿ ಅವರ ಅಭಿನಯದಲ್ಲಿ ಸಾಯಿಕುಮಾರ್‌ ಇಣುಕುವುದೂ ಇದೆ. ನಾಲ್ಕೈದು ಹಾಡುಗಳಲ್ಲಿ, ಕಾಮೆಂಟರಿ ಕೊಡುತ್ತಾ ಫೈಟ್‌ ಮಾಡುವ ದೃಶ್ಯವಂತೂ ಅಭಿಮಾನಿಗಳಿಗೆ ಹಬ್ಬ. ಬೇರೆ ಯಾರಿಗಲ್ಲದಿದ್ದರೂ ಅವರು ತಮ್ಮ ಅಭಿಮಾನಿಗಳಿಗಂತೂ ಮೋಸ ಮಾಡುವುದಿಲ್ಲ. ನಾಯಕಿ ಮಾನ್ಯ ಮುದ್ದಾಗಿ ಕಾಣಿಸುತ್ತಾರೆ. ಅಭಿನಯವೂ ಸಲೀಸು. ಚಿತ್ರ ಶೆಣೈ, ಜಿ.ಕೆ. ಗೋವಿಂದರಾವ್‌, ಬಿ.ವಿ.ರಾಧಾ, ಆದರ್ಶ ಮುಂತಾದ ಕಲಾವಿದರೂ ಈ ಚಿತ್ರದಲ್ಲಿದ್ದಾರೆ. ಆದರೆ ದರ್ಶನ್‌ರ ಅಭಿನಯದ ದರ್ಶನ(!)ದ ಮುಂದೆ ಅವರೆಲ್ಲಾ ತುಸು ಡಲ್ಲು.

ಕಥೆ, ಚಿತ್ರಕಥೆ, ಸಂಭಾಷಣೆ ಜತೆ ಸತ್ಯು ನಿರ್ದೇಶನವನ್ನೂ ಮಾಡಿದ್ದಾರೆ. ಆದರೆ, ಗೆಲ್ಲುವುದು ಮಾತ್ರ ಸಂಭಾಷಣೆಯಲ್ಲಿ,‘ಬೇಡಿದ ವರ ಕೊಡೋವ್ನು ದೇವ್ರು’, ‘ಪ್ರಾಣ ಉಳಿಸೋನು ಶಾಸ್ತ್ರಿ’, ‘ಮಹಾತ್ಮ ಕಟ್ಟಿದ್ದು ದೇಶಾನ, ಈ ಶಾಸ್ತ್ರಿ ಕಟ್ಟಿದ್ದು ಸ್ನೇಹಾನ’, ‘ಪೊಲೀಸ್‌ ಸ್ಕೆಚ್‌ ಹಾಕಿದ್ರೆ ಬೇಲ್‌ ಸಿಗುತ್ತೆ’, ‘ಶಾಸ್ತ್ರಿದೀಪಾವಳಿ ರಾಕೆಟ್‌ ಅಲ್ಲ , ರಾಮನ ಬತ್ತಳಿಕೇಲಿರೋ ಬಾಣ’ ಎಂದು ಶಾಸ್ತ್ರಿಯ ಬಗ್ಗೆ ಅವನು ಹಾಗೂ ವೈರಿಗಳು ಹೇಳುವ ಶಾಸ್ತ್ರ ಚಪ್ಪಾಳೆ ಗಿಟ್ಟಿಸುತ್ತದೆ.

ವೀನಸ್‌ ಮೂರ್ತಿಯವರ ಛಾಯಾಗ್ರಹಣದಲ್ಲಿ ಹೊಡೆದಾಟದ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ. ಅದೇ ರೀತಿ ಸಂಕಲನಕಾರ ಎಸ್‌. ಮನೋಹರ್‌ ಕೂಡಾ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದ್ದಾರೆ. ಇದೊಂದು ಮಾರಾಮಾರಿ ಚಿತ್ರವೆಂದೋ ಏನೋ ಸಾಧು ಕೋಕಿಲ ಸಂಗೀತದಲ್ಲಿ ಸಾಕಷ್ಟು ಮಾರಾಮಾರಿ ತುಂಬಿದ್ದಾರೆ. ಅದು ಅವರ ಸಂಗೀತದ ತಪ್ಪೋ, ಚಿತ್ರಮಂದಿರದ ಮಿಸ್ಟೇಕೋ ಗೊತ್ತಿಲ್ಲ? ಒಟ್ಟಿನಲ್ಲಿ ಹಾಡುಗಳುದ್ದಕ್ಕೂ ಬರೀ ಆರ್ಭಟ ತುಂಬಿದೆ. ಅಲ್ಲದೆ ಈ ಚಿತ್ರದಲ್ಲೂ ಅವರು ತಮ್ಮ ಎಂದಿನ ಚೋರಿ ಚೋರಿ ಚುಪ್ಕೆ ಚುಪ್ಕೆ ಮುಂದುವರಿಸಿದ್ದಾರೆ. ಒಂದು ಹಾಡಿನಲ್ಲಂತೂ ಹಿಂದಿಯ‘ಕಾಂಟೆ’ ಚಿತ್ರದ ‘ಜಾನೆ ಕ್ಯಾ ಹೋಗಾ ರಾಮಾ ರೆ’ಹಾಡಿನ ಟ್ಯೂನನ್ನು ನೇರವಾಗಿ ಬಳಸಿಕೊಂಡಿದ್ದಾರೆ. ಇನ್ನು ನೇರವಾಗಿರುವ ಹಾಡುಗಳಿದ್ದರೂ ಅದು ಸರಿಯಾಗಿ ಅರ್ಥವಾಗುವುದಿಲ್ಲ. ಒಟ್ಟಿನಲ್ಲಿ ಈಗಾಗಲೇ ಒಮ್ಮೆ ಹೇಳಿದ ಹಾಗೆ ಶಾಸ್ತ್ರಿ ಅಭಿಮಾನಿಗಳಿಗಂತೂ ಮೋಸ ಮಾಡುವುದಿಲ್ಲ. ಹಾಗಾಗಿ ಅಭಿಮಾನಿಗಳೂ ಕೂಡಾ ಒಂದು ಬಾರಿ ಚಿತ್ರ ನೋಡಿದರೆ ಅಡ್ಡಿಯಿಲ್ಲ!

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada