For Quick Alerts
  ALLOW NOTIFICATIONS  
  For Daily Alerts

  ಪಾಂಡವರ ವೀರತ್ವ ಮತ್ತು ವೈರತ್ವ!

  By Staff
  |

  ಐಟಂ ಸಾಂಗ್‌ನಿಂದ ಸೆಂಟಿಮೆಂಟಿನವರೆಗೂ ಎಲ್ಲವೂ ಚಿತ್ರದಲ್ಲಿವೆ. ವೇಗವನ್ನು ಸ್ವಲ್ಪ ಕಾಯ್ದುಕೊಂಡಿದ್ದರೆ, ಅಂಬರೀಷ್‌ ಹೇಳಿದಂತೆ, ‘ಪಾಂಡವರು‘ ಈ ವರ್ಷದ ಮನಿ ಸ್ಪಿನ್ನರ್‌ ಚಿತ್ರ!

  • ಚೇತನ್‌ ನಾಡಿಗೇರ್‌
  ಚಿತ್ರ : ಪಾಂಡವರು
  ನಿರ್ದೇಶನ : ಕೆ.ವಿ.ರಾಜು
  ನಿರ್ಮಾಪಕ : ರಾಮ್‌ ಕುಮಾರ್‌
  ಸಂಗೀತ : ಹಂಸಲೇಖ
  ತಾರಾಗಣ : ಅಂಬರೀಷ್‌, ಶಶಿಕುಮಾರ್‌, ಜಗ್ಗೇಶ್‌, ರಾಮ್‌ ಕುಮಾರ್‌, ಗುರ್ಲಿನ್‌ ಚೋಪ್ರಾ, ಐಶ್ವರ್ಯ ಮತ್ತಿತರರು

  ಆ ಐವರು ಗೌಡರ ಕುಟುಂಬಕ್ಕೆ ಸೇರಿದವರು. ಅವರು ಕಲಿಯುಗದವರು ಎನ್ನುವುದನ್ನು ಬಿಟ್ಟರೆ ಇನ್ನೆಲ್ಲ ವಿಷಯಗಳಲ್ಲೂ ದ್ವಾಪರಯುಗದ ಪಾಂಡವರ ಜತೆ ನೇರಾನೇರ ಹೋಲಿಸಬಹುದು. ಅದೇ ನೀತಿನಿಯಮ, ಅದೇ ಸದ್ಗುಣ.

  ಇಂಥ ಪಾಂಡವರು ಯಾರನ್ನೂ ಒಂದು ಸೂಜಿ ಮೊನೆಯಷ್ಟು ಜಾಗ ಕೊಡಿ ಎಂದು ಕೇಳಿದವರಲ್ಲ. ಆದರೆ ನಾಗಮಣಿ ಕುಟುಂಬದವರನ್ನು ನೆನೆಸಿಕೊಂಡರೆ ಪಾಂಡವರಿಗೆ ಹಳೆಯ ವೈರತ್ವ ಜಾಗೃತವಾಗುತ್ತದೆ. ಅದರ ಹಿಂದೆ ಹಿಂದೆಯೇ ವೀರತ್ವ ಕೂಡ ಸೇರಿ ನಾಲ್ಕಾರಾದರೂ ಮೂಳೆಗಳು ಸಲೀಸಾಗಿ ಪುಡಿಯಾದ ಸದ್ದು ಕೇಳಿ ಬರುತ್ತದೆ.

  ಏನಪ್ಪಾ ಆ ವೈರತ್ವ ಎಂದರೆ 20 ವರ್ಷಗಳ ಹಿಂದೆ ಗೌಡರ ಕುಟುಂಬದ ಹೆಣ್ಣು, ನಾಗಮಣಿ ಕುಟುಂಬದ ಗಂಡಿನಿಂದ ನೀರುಪಾಲಾಗಿರುತ್ತದೆ. ಅದಕ್ಕೆ ಬದಲಿಯಾಗಿ ನಾಗಮಣಿ ಕುಟುಂಬದವರ ರಕ್ತ, ಗೌಡರ ಕುಟುಂಬದ ಲಾಂಗು-ಮಚ್ಚುಗಳಿಗೆ ಅಂಟಿರುತ್ತದೆ. ಅಲ್ಲಿಂದ ಶುರುವಾಗುತ್ತದೆ ಆ ಎರಡೂ ಕುಟುಂಬಗಳ ಮಧ್ಯೆ ದಿವ್ಯ ಕಲಹ.

  ಗೌಡರ ಕೊನೆಯ ತಮ್ಮ ಹಾಗೂ ನಾಗಮಣಿ ಮೊಮ್ಮಗಳು ಒಬ್ಬೊರನ್ನೊಬ್ಬರು ಪ್ರೀತಿಸುವ ತನಕ ಈ ಕುರುಕ್ಷೇತ್ರ 20 ವರ್ಷಗಳ ಕಾಲ ಸತತವಾಗಿ ಮುಂದುವರಿಯುತ್ತದೆ. ಪ್ರೀತಿಸಿದ ನಂತರ ಅದು ಇನ್ನಷ್ಟೂ, ಮತ್ತಷ್ಟೂ ಹೆಚ್ಚಾಗುತ್ತದೆ. ಮೊದಲು ಅವೆರೆಡೂ ಕುಟುಂಬಗಳ ಮಧ್ಯೆ. ಕೊನೆಗೆ ಗೌಡ ಅಂಡ್‌ ನಾಗಮಣಿ ಫ್ಯಾಮಿಲಿ ವೆಲ್‌ಕಮ್ಸ್‌ ಯು ಎಂಬ ಹೂವಿನ ಬೋರ್ಡು ಕಲ್ಯಾಣ ಮಂಟಪದ ಎದುರು ಎದ್ದು ನಿಲ್ಲುವಲ್ಲಿಗೆ ಚಿತ್ರ ಸುಖಾಂತ್ಯ ಕಾಣುತ್ತದೆ.

  ಇದು ಕೆ.ವಿ. ರಾಜು ಬಹಳ ದಿನಗಳ ನಂತರ ನಿರ್ದೇಶಿಸುತ್ತಿರುವ ಚಿತ್ರ. ಕತೆ ಕೂಡ ಅವರದ್ದೇ. ಆದರೆ, ಇದೇ ಕತೆ ಮಲಯಾಳಂನಲ್ಲಿ ‘ಗಾಡ್‌ ಫಾದರ್‌’ ಹೆಸರಿನಲ್ಲಿ 15 ವರ್ಷಗಳ ಹಿಂದೆ, ತೀರಾ ಎರಡು ವರ್ಷಗಳ ಹಿಂದೆ ಹಿಂದಿಯಲ್ಲಿ ‘ಹಲ್‌ಚಲ್‌’ ಹೆಸರಿನಲ್ಲಿ ಮಾಡಿಬಿಟ್ಟಿದ್ದಾರೆ. ಅವೆರೆಡನ್ನೂ ನೋಡಿರುವವರಿಗೆ ಚಿತ್ರ ಸವಕಲಾಗಿ ಕಾಣುವ ಸಾಧ್ಯತೆಗಳಿವೆ. ನೋಡದ ಅಭಿಮಾನಿಗಳಿಗೆ ಚಿತ್ರ ಹಬ್ಬವಾಗುವುದರಲ್ಲಿ ಸಂಶಯವೇ ಇಲ್ಲ.

  ಹೊಡೆದಾಟದಿಂದ ಕಾಮಿಡಿಯವರೆಗೂ, ಐಟಂ ಸಾಂಗ್‌ನಿಂದ ಸೆಂಟಿಮೆಂಟಿನವರೆಗೂ ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರಕ್ಕೆ ಏನೇನು ಬೇಕೋ ಅವೆಲ್ಲ ಈ ಚಿತ್ರದಲ್ಲಿವೆ. ಕಡಿಮೆಯಾಗಿರುವುದು ವೇಗ ಒಂದೇ. ಅದೇಕೋ ಇಡೀ ಚಿತ್ರ ನಿಧಾನವಾಗಿ ಸಾಗುತ್ತದೆ. ಇದೆಲ್ಲ ದ್ವಿತೀಯಾರ್ಧದಲ್ಲಿ ಜಗ್ಗೇಶ್‌ ನಗಿಸುವ ತನಕ. ಆ ಕಾಮಿಡಿ ಮುಗಿದು ಚಿತ್ರ ಗಂಭೀರವಾಗುವ ತನಕ. ಆ ವೇಗವನ್ನು ಸ್ವಲ್ಪ ಕಾಯ್ದುಕೊಂಡಿದ್ದರೆ, ಅಂಬರೀಷ್‌ ಹೇಳಿದಂತೆ, ‘ಪಾಂಡವರು‘ ಈ ವರ್ಷದ ಮನಿ ಸ್ಪಿನ್ನರ್‌ ಚಿತ್ರ.

  ಸ್ವಲ್ಪ ನಿಧಾನವಾದರೂ ಖುಷಿಯಾಗುವುದು ಪಾಂಡವರ ಅಭಿನಯದಿಂದ. ಐವರಲ್ಲಿ ಪ್ರತಿಯಾಬ್ಬರೂ ಚಿತ್ರದಲ್ಲಿ ಒಂದು ಬಾರಿಯಾದರೂ ಶಿಳ್ಳೆ ಬೀಳುವಂತೆ ಕಾಣಿಸಿಕೊಂಡಿದ್ದಾರೆ. ಜಗ್ಗೇಶ್‌ ದೃಶ್ಯಗಳಿಗೆ ಶಿಳ್ಳೆ, ಚಪ್ಪಾಳೆ ಹೆಚ್ಚು ಬೀಳುವುದರಿಂದ ಅವರ ಕಾಮಿಡಿ ಟೈಮಿಂಗ್‌ ಇನ್ನೂ ಮಾಸಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಜಗ್ಗೇಶ್‌ ಬಿಟ್ಟರೆ ನಾಗಶೇಖರ್‌ ಗಮನ ಸೆಳೆಯುತ್ತಾರೆ.

  ಬಹಳ ದಿನಗಳ ನಂತರ ಕನ್ನಡಕ್ಕೆ ಬಂದಿರುವ ಲಕ್ಷ್ಮಿ ಮಗಳು ಐಶ್ವರ್ಯ ಮಾತಿಗಿಂಥ ಹೆಚ್ಚು ಆರ್ಭಟಿಸುತ್ತಾರೆ. ಶಶಿಕುಮಾರ್‌ ಸೀಮಿತ ಅವಕಾಶದಲ್ಲಿ ಗೆಲ್ಲುತ್ತಾರೆ. ಗುರ್ಲಿನ್‌ ಚೋಪ್ರಾ ಬಿಟ್ಟರೆ ಯಾರೂ ಸಿಗಲಿಲ್ಲವಾ? ಎನ್ನುವಂತೆ ಅವರು ನಟಿಸಿದ್ದಾರೆ. ಹಂಸಲೇಖ ಎರಡು ಒಳ್ಳೆಯ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ ಎನ್ನುವಲ್ಲಿಗೆ ಮಹಾಭಾರತ ಮುಕ್ತಾಯ.

  ‘ಪಾಂಡವರು’ ಕತೆ ಕೇಳಿದಿರಿ, ಇನ್ನು ಸುದೀಪ್‌-ರಕ್ಷಿತಾ ಜೋಡಿಯ ‘ಹುಬ್ಬಳ್ಳಿ’ ಕತೆ ಕೇಳಿ...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X