twitter
    For Quick Alerts
    ALLOW NOTIFICATIONS  
    For Daily Alerts

    ಮೆಜೆಸ್ಟಿಕ್ ಹಳಿಯ ಮೇಲೆ ನಿಂತ ಮೆಟ್ರೋ 'ಮಾಗಡಿ'

    By * ಶ್ರೀರಾಮ್ ಭಟ್
    |

    ದರ್ಶನ್ ಅವರನ್ನು ತಮ್ಮ 'ಮೆಜೆಸ್ಟಿಕ್' ಚಿತ್ರದ ಮೂಲಕ 'ಚಾಲೆಂಜಿಂಗ್ ಸ್ಟಾರ್' ಮಾಡಿದ ನಿರ್ಮಾಪಕ ಭಾ ಮಾ ಹರೀಶ್, ಸಹೋದರ ಬಿ ಎಂ ದಿವಾಕರ್ ಗೌಡರ ಜೊತೆಗೂಡಿ ನಿರ್ಮಿಸಿರುವ ಮತ್ತೊಂದು ಚಿತ್ರ 'ಮಾಗಡಿ'. ಇಂದು (ಮಾರ್ಚ್ 16, 2012ರಂದು) ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಮಾಗಡಿ ಚಿತ್ರವನ್ನು ಕೆ ಸುರೇಶ್ ಗೋಸ್ವಾಮಿ ನಿರ್ದೇಶಿಸಿದ್ದಾರೆ. ನಿರ್ಮಾಪಕರ ಸಂಬಂಧಿಯೂ ಆಗಿರುವ ನಟ ದೀಪಕ್ ಈ ಚಿತ್ರದ ನಾಯಕ. ನಾಯಕಿಯಾಗಿ ಹೊಸ ಹುಡುಗಿ ರಕ್ಷಿತಾ ನಟಿಸಿದ್ದಾರೆ. ನಿರ್ದೇಶಕ ಸುರೇಶ್ ಅವರ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ ಮಾಗಡಿ.

    ಸುರೇಶ್ ಗೋಸ್ವಾಮಿ, ಅವರೇ ಹೇಳಿಕೊಂಡಂತೆ ಮೆಜೆಸ್ಟಿಕ್ ಚಿತ್ರದ ನಿರ್ದೇಶಕ ಪಿ ಎನ್ ಸತ್ಯಾ ಶಿಷ್ಯರು. ಮೆಜೆಸ್ಟಿಕ್ ನಂತೆ ಇಲ್ಲೂ ಅನಾಥ ಹುಡುಗ, ಹುಡುಗಿ, ಮಚ್ಚು, ಲಾಂಗು, ಸೆಂಟಿಮೆಂಟ್ ಎಲ್ಲವನ್ನೂ ಬಳಸಿಕೊಂಡೇ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಮೆಜೆಸ್ಟಿಕ್, ಮಾಸ್ ವರ್ಗದ ಜನರಿಗೆ ಹೇಳಿ ಮಾಡಿಸಿದ ಚಿತ್ರವಾಗಿ ಗೆದ್ದಿತ್ತು. ಅದೇ ಹ್ಯಾಂಗೋವರ್ ತಲೆಯಲ್ಲಿಟ್ಟುಕೊಂಡೇ ಮಾಡಿದ ಚಿತ್ರ ಮಾಗಡಿಯಾದರೂ ಅದರಲ್ಲಿರುವಷ್ಟು ಮಚ್ಚು-ಲಾಂಗುಗಳ ಸದ್ದಿಲ್ಲದೇ ಸೆಂಟಿಮೆಂಟ್ ಕಡೆ ಹೆಚ್ಚು ಒತ್ತುಕೊಟ್ಟಿರುವ ಚಿತ್ರವಿದು. ನಿರ್ದೇಶಕರ ಪ್ರಾಮಾಣಿಕ ಪ್ರಯತ್ನ ಚಿತ್ರದಲ್ಲಿ ದಾಖಲಾಗಿದೆ ಎನ್ನಬಹುದು.

    ಸ್ನೇಹ, ಪ್ರೀತಿಗಾಗಿಯೇ ಬೆಲೆಕೊಡುವ ನಾಯಕ ಅದಕ್ಕಾಗಿಯೇ ಕೊಲೆಗಾರ ಪಟ್ಟಗಿಟ್ಟಿಸಿಕೊಂಡರೂ ಕೊನೆಗೆ ಅವನು ಬಯಸಿದ ಪ್ರೀತಿ ಪಡೆಯುತ್ತಾನೆ. ಆದರೆ ನಾಯಕ ಬಯಸದ ದ್ವೇಷ ಆತ ಪಡೆದುಕೊಂಡ ಪ್ರೀತಿಗೂ ಮಿಗಿಲಾಗಿ ಹೇಗೆ ಅವನನ್ನು ಕಾಡಿ, ಪೀಡಿಸುತ್ತದೆ ಎಂಬುದು ಕಥೆಯ ಸಾರಾಂಶ. ನಾಯಕ, ಪಡೆದುಕೊಂಡ ಪ್ರೀತಿಯೊಂದಿಗೆ ಸುಖವಾಗಿರುತ್ತಾನಾ ಅಥವಾ ಅವನು ದ್ವೇಷಿಸುವ ದ್ವೇಷವೇ ಅವನ ಜೀವನವನ್ನು ಬಲಿತೆಗೆದುಕೊಳ್ಳತ್ತದೆಯೇ ಎಂಬುದನ್ನು ತೆರೆಯ ಮೇಲೆ ನೋಡಿ... ಸ್ವಲ್ಪ ವಿಭಿನ್ನವಾಗಿದೆ ಕ್ಲೈಮ್ಯಾಕ್ಸ್.

    ನಿರ್ದೇಶಕ ಸುರೇಶ್ ಗೋಸ್ವಾಮಿಯವರ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲದರಲ್ಲೂ ವಿಭಿನ್ನತೆ ಇಲ್ಲದಿದ್ದರೂ ತೀರಾ ನೀರಸ ಎನಿಸುವುದಿಲ್ಲ. ನಿರ್ದೇಶನದ ಸರಿಗಮ ಗೊತ್ತಿದೆಯಾದರೂ ರಾಗ, ಸಂಗೀತ ಇನ್ನೂ ಪಕ್ವವಾಗಬೇಕು ಎನ್ನಬಹುದು. ಚಿತ್ರಕಥೆ, ನಿರೂಪಣೆಯಲ್ಲಿ ಹೊಸತನ, ವೇಗ ಇನ್ನೂ ಇರಬೇಕಿತ್ತು. ನಿಧಾನಗತಿಯ ನಿರೂಪಣೆ ಕೆಲವೊಮ್ಮೆ ನೀರಸ ಎನಿಸಿದರೂ ಎಲ್ಲೂ ಹಳಿತಪ್ಪಿಹೋಗಿಲ್ಲ. ಆದರೆ, ಪ್ರಯತ್ನಪಟ್ಟರೆ ಅವರೇ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸದಿರದು.

    ನಾಯಕ ದೀಪಕ್ ಅವರು ನಟನೆ, ಡಾನ್ಸ್, ಫೈಟಿಂಗ್, ಸಂಭಾಷಣೆ ಎಲ್ಲದರಲ್ಲೂ ಚೆನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ. ನಾಯಕಿ ರಕ್ಷಿತಾಗೂ ಇದೇ ಮಾತು ಅನ್ವಯಿಸುತ್ತದೆ. ಆದರೆ ನೆಗೆಟೀವ್ ರೋಲ್ ನಿರ್ವಹಿಸಿರುವ ಅಮಿತ್, ಸುರೇಶ್ ಚಂದ್ರ, ಅಶೋಕ್, ಪದ್ಮಾವಾಸಂತಿ ಅವರೆಲ್ಲರೂ ಅಭಿನಯದಲ್ಲಿ ಮಿಂಚಿದ್ದಾರೆ. ರಾಜೇಶ್ ರಾಮನಾಥ್ ನೀಡಿರುವ ರಾಗಗಳು ಚೆನ್ನಾಗಿದ್ದರೂ ಹಿನ್ನೆಲೆ ಸಂಗೀತ ಅಷ್ಟಕಷ್ಟೇ ಆಗಿ ಹಾಡುಗಳು ನೆನಪಿನಲ್ಲುಳುಯವುದು ಕಷ್ಟ. ಟಪ್ಪಾಂಗುಚ್ಚಿ ಹಾಡು 'ಸುಮ್ನೆ ಸುಮ್ನೆ...' ಹಾಡು ಚೆನ್ನಾಗಿದೆಯಾದರೂ ಬಳಸಿಕೊಂಡ ಸಂದರ್ಭ ಸರಿಯಾಗಿಲ್ಲ.

    ಮಿಕ್ಕಂತೆ, ಎಸ್ ರಮೇಶ್ ಛಾಯಾಗ್ರಹಣ, ಎನ್ ಎಂ ವಿಶ್ವ ಸಂಕಲನದಲ್ಲಿ ವಿಶೇಷತೆಯಾಗಲೀ ದೋಷವಾಗಲೀ ಹೇಳುವಷ್ಟಿಲ್ಲ. ಒಟ್ಟಿನಲ್ಲಿ, ಅತಿಯಾದ ಲಾಂಗು-ಮಚ್ಚುಗಳ ಅಬ್ಬರವಿಲ್ಲದ, ಗೋಳಿನ ಸಂಕೋಲೆಯೂ ಅಲ್ಲದ, ಆದರೆ ವಿಶೇಷವೂ ಎನಿಸದ ಚಿತ್ರವಾಗಿ 'ಮಾಗಡಿ' ಚಿತ್ರವನ್ನು ಕುಟುಂಬ ಸಮೇತ ಹೋಗಿ ಒಮ್ಮೆ ನೋಡುವಂತೆ ಮಾಡಿದ್ದಾರೆ ಎನ್ನಬಹುದು. ಪ್ರೇಕ್ಷಕರು ಇಷ್ಟಪಟ್ಟು ಚಿತ್ರಮಂದಿರ ತುಂಬಿದರೆ ಯಾರೂ ಆಶ್ಚರ್ಯಪಡುವ ಅಗತ್ಯವಂತೂ ಇಲ್ಲ.

    English summary
    Read Kannda movie Magadi Review. The Movie leads Deepak and Rakshita, directed by K Suresh Goswamy. This is a Combination of Simple Story and Narration.
 
    Friday, March 16, 2012, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X