ದಿಮಾಕು ಇಲ್ಲದ ನವೀನ್ ಕೃಷ್ಣರ 'ಧಿಮಾಕು'
ನವೀನ್ ಕೃಷ್ಣ ಹುಚ್ಚ ಅಂದ್ರೆ ಬೇಜಾರು ಮಾಡ್ಕೋ ಬಾರ್ದು, ದಡ್ಡ ಅಂದ್ರೆ ಚಿಂತೆ ಮಾಡಬಾರ್ದು! ಅಂದ ಹಾಗೆ ಹುಚ್ಚ, ದಡ್ಡ ಅಂತ ಯಾರನ್ನು ಕರೆಯಬಹುದು? ತಾವೇ ಬರೆದಿರುವ ಕಥೆ, ಚಿತ್ರಕಥೆಯೇ ಅತ್ಯದ್ಭುತ ಅಂತ ಬರೆದವರು ತಾವೊಬ್ರೇ ಅಂದ್ಕೊಂಡೋರನ್ನಾ? ಪ್ರತಿಬಾರಿ ಅರ್ಥವಿಲ್ಲದ ಚಿತ್ರಗಳನ್ನು ಆಯ್ದುಕೊಳ್ಳುತ್ತಾ ಚಿತ್ರ ಬರಕತ್ತಾಗದೆ ದುರಾದೃಷ್ಟವನ್ನ ಹಳಿಯುತ್ತಾ ಮತ್ತೊಂದು ಅಂಥದೇ ಚಿತ್ರಕ್ಕೆ ಅಣಿಯಾಗೋರನ್ನಾ? ಅಥವಾ ಈ ಬಾರಿಯಾದರೂ ಈ ಹುಡುಗನನ್ನ ಪ್ರೋತ್ಸಾಹಿಸಿ ಗೆಲ್ಲಿಸಲೇಬೇಕೆಂದು ನಲವತ್ತು ರುಪಾಯಿ ಬಾಲ್ಕನಿಗೆ ದುಡ್ಡು ಹಾಕಿ ನಿರಾಶರಾಗಿ ಮನೆಗೆ ಮರಳುವ ಪ್ರೇಕ್ಷಕನನ್ನಾ?
ಹುಚ್ಚುತನ ಎಲ್ಲರಿಗೂ ಇರುತ್ತದೆ. ನವೀನ್‌ಗೂ ಇದೆ ಹುಚ್ಚುತನ. ಹುಚ್ಚನ ಥರ ಅವರು ತಮ್ಮ ಸಿನೆಮಾವನ್ನು ಪ್ರೀತಿಸುತ್ತಾರೆ. ಪ್ರತಿಬಾರಿ ಗೆಲ್ಲಲೇಬೇಕಂತ ಶ್ರಮವಹಿಸಿ ಕೆಲಸ ಮಾಡ್ತಾರೆ. ಬಹುಶಃ ನವೀನ್ ಕೃಷ್ಣನಿಗಿಂತ ಎಲಿಗಂಟ್ ಆಗಿ ನಟಿಸುವ ಯುವನಟರು ಕನ್ನಡ ಚಿತ್ರರಂಗದಲ್ಲಿ ಜಾಸ್ತಿ ಸಿಗಲಿಕ್ಕಿಲ್ಲ. ಅಂಥಾ ಅದ್ಭುತ ಫ್ಲ್ಯುಯೆನ್ಸಿ ಅವರ ಅಭಿನಯದಲ್ಲಿದೆ. ಸಂಭಾಷಣೆ ಒಪ್ಪಿಸುವ ಪರಿ, ಮ್ಯಾನರಿಸಂನಲ್ಲಿ ನವೀನ್‌ಗೆ ನವೀನ್‌ನೇ ಸಾಟಿ. ಅವರ ನಟನೆಯಲ್ಲಿ ಧಿಮಾಕಿದೆ. ಆದರೆ ಈ 'ಧಿಮಾಕು' ಚಿತ್ರದಲ್ಲಿ ಧಿಮಾಕಿನೊಂದಿಗೆ ಕೊಂಚ 'ದಿಮಾಕು' ಸೇರಿಸಿಕೊಂಡಿದ್ದರೆ ಚಿತ್ರವೂ ಧಿಮಾಕಿನಿಂದ ಮೆರೆದಾಡಬಹುದಾಗಿತ್ತು. ಹಾಗಾಗದಿರುವುದೇ ವಿಪರ್ಯಾಸ.
ಅಸಲಿಗೆ ಕಥೆಯೇ ಇಲ್ಲದ ಪ್ರೇಮಕಥೆ. ಸತ್ವವಿಲ್ಲದ ಚಿತ್ರಕಥೆ, ನಿರ್ದೇಶಕ ಇದ್ದಾರೋ ಇಲ್ಲವೋ ಎಂಬಂಥ ನಿರೂಪಣೆ. ಬಾಲಸುಟ್ಟ ಬೆಕ್ಕಿನಂತ ಓಡಾಡುವ ಕ್ಯಾಮೆರಾ, ಅರ್ಥವಿಲ್ಲದ, ಅಪೀಲ್ ಮಾಡದ ದೃಶ್ಯ ಸಂಯೋಜನೆ, ಪಂಚ್ ಇಲ್ಲದ ನೀರಸ ಸಂಭಾಷಣೆ, ಕೆಟ್ಟ ಪಾತ್ರಗಳ ಪೋಷಣೆಯ ಒಟ್ಟಾರೆ ಸ್ವರೂಪವೇ 'ಧಿಮಾಕು'. ಆದರೆ, ಇವೆಲ್ಲ ಅಪಸವ್ಯಗಳ ನಡುವೆ ಸವ್ಯಸಾಚಿಯಂತೆ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅಭಿನಯಿಸಿದ್ದಾರೆ ನವೀನ್ ಕೃಷ್ಣ. ನಿರ್ದೇಶನದಲ್ಲಿ ಬಿಗಿತನ, ತಾಂತ್ರಿಕ ವರ್ಗ, ಪಾತ್ರಗಳ ಆಯ್ಕೆಯಲ್ಲಿ ನಿರ್ಮಾಪಕರು ಜಾಣತನ ತೋರಿಸಿಲ್ಲ.
ಧಿಮಾಕು ಒಂಥರಾ ಕೌಟುಂಬಿಕ ಚಿತ್ರ. ನಿರ್ಮಾಪಕಿ ಪುಷ್ಪಾ ಶ್ರೀನಿವಾಸಮೂರ್ತಿ, ನವೀನ್ ಅವರ ತಾಯಿ. ಚಿತ್ರವನ್ನು ಅರ್ಪಿಸಿದವರು ತಂದೆ ಶ್ರೀನಿವಾಸಮೂರ್ತಿ. ಪ್ರಮುಖ ಭೂಮಿಕೆಯಲ್ಲಿ ಸ್ವತಃ ನವೀನ್ ಕೃಷ್ಣ. ದೃಶ್ಯವೊಂದರಲ್ಲಿ ನವೀನ್ ಅವರ ಪುಟಾಣಿ ಮಗ ಕೂಡ ಕ್ಯಾಮೆರಾ ಎದುರಿಸಿದ್ದಾನೆ. ನವೀನ್ ಕೃಷ್ಣ ಅವರ ಯಶಸ್ಸಿಗೆ ಅಬಾಲವೃದ್ಧರಾದಿಯಾಗಿ ಇಡೀ ಕುಟುಂಬ ಅಕ್ಷರಶಃ ಟೊಂಕಕಟ್ಟಿ ನಿಂತಿದೆ. ಚಿತ್ರವೂ ಕೂಡ ಕುಟುಂಬ ಸಮೇತರಾಗಿ ನೋಡುವಂಥದ್ದು, ಅಷ್ಟೊಂದು ಕ್ಲೀನ್. ಸೆಕ್ಸ್ ಬಾಂಬ್ ಫ್ಲೋರಾ ಸೈನಿ ಅವರು ಚಿತ್ರದಲ್ಲಿದ್ದರೂ ಮುಜುಗರವಿಲ್ಲದೇ ನೋಡಬಹುದು, ಏಕೆಂದರೆ ಅವರಿಗೆ ಮೈತುಂಬ ಸೀರೆ ಹೊದ್ದಿರುವ ನಾಯಕಿಯ ಅಮ್ಮನ ಪಾತ್ರ!
ಈಗ ಒಂದಿಷ್ಟು ಪ್ರಶ್ನೆಗಳು...
ಆರಂಭದಲ್ಲಿ ನವೀನ್ ಕೃಷ್ಣ ದುರ್ಯೋಧನನ ಪಾತ್ರದಲ್ಲಿ ಬಂದಿದ್ದು ಯಾಕೆ? ನವೀನ್ ಕೃಷ್ಣ ಎಂಥ ಪಾತ್ರ ಮಾಡಲೂ ಸೈ ಎಂಬುದನ್ನು ತೋರಿಸಲೇ? ಟ್ರಾಫಿಕ್ ಪೊಲೀಸ್ ಧರಿಸುವ ಟೋಪಿಯ ಮಡಿಕೆ ಬಲಭಾಗದಲ್ಲಿರುತ್ತೋ, ಎಡಭಾಗದಲ್ಲಿರುತ್ತೋ? ಅಮ್ಮನ ಪಾತ್ರವಹಿಸುತ್ತಿದ್ದರೂ ಬಿನ್ನಾಣಗಿತ್ತಿ ಫ್ಲೋರಾ, ನವೀನ್ ಜೊತೆ ಡಾನ್ಸ್ ಮಾಡುವುದೇತಕ್ಕೆ? ನವೀನ್ ಜೈಲು ಸೇರಿದಾಗ ಇನ್‌ಸ್ಪೆಕ್ಟರ್ ಲಂಚ ತೆಗೆದುಕೊಳ್ಳುವುದನ್ನು ಮೊಬೈಲಲ್ಲಿ ಸೆರೆಹಿಡಿದಿದ್ದು ಹೇಗೆ? ನವೀನ್ ಜೈಲಿಂದ ಹೊರಬರೋದಕ್ಕೆ ಇಷ್ಟು ಕಾರಣ ಸಾಕಾ? ನಾಯಕಿ ಮುನಿಸಿಕೊಂಡಾಗ ನಾನೇ ನಿನ್ನ ಪ್ರೇಯಸಿ ಅಂತ ನಾಯಕನನ್ನು ಪೀಡಿಸೋ ಇನ್ನೊಬ್ಬ ಹುಡುಗಿ ಯಾರು? ನಾಯಕಿ ಸ್ನೇಹಿತೆಯೋ, ಹುಚ್ಚಿಯೋ?
ನಿರ್ದೇಶಕ ಮಹಾಶಯ ಮಗೇಶ್ ಕುಮಾರ್ ಉತ್ತರಿಸಬೇಕು.
ಚಿತ್ರದಲ್ಲಿ ಅಸಂಖ್ಯ ಪಾತ್ರಗಳಿವೆ. ರಂಗಾಯಣ ರಘು, ಸುಧಾ ಬೆಳವಾಡಿ, ನಾಯಕಿ ಪಾವನಿ, ಹೀಗೆ ಬಂದು ಹಾಗೆ ಹೋಗುವ ಜಗ್ಗೇಶ್, ಶರಣ್, ಯಶವಂತ ಸರದೇಶಪಾಂಡೆ, ಅಸಂಬದ್ಧವಾಗಿ ಮಾತನಾಡುವ ಓಂ ಪ್ರಕಾಶ್, ಬುಲೆಟ್ ಪ್ರಕಾಶ್, ಸುಂದರ್ ರಾಜ್. ಇವರೊಂದಿಗೆ ಮುಕ್ತ ಮುಕ್ತ ಟೀವಿ ಧಾರಾವಾಹಿಯ ಅರ್ಧ ಡಜನ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ತೋರಿಸಿರುವ ಅಭಿನಯ ಚಾತುರ್ಯಕ್ಕೆ ಇಲ್ಲಿ ನಯಾಪೈಸೆ ಅವಕಾಶವಿಲ್ಲ. ಎಲ್ಲರನ್ನೂ ಕೋಡಂಗಿಗಳಂತೆ ಚಿತ್ರಿಸಲಾಗಿದೆ. ರಂಗಾಯಣ ರಘು ಮತ್ತು ಸುಧಾ ಬೆಳವಾಡಿ ಅಭಿನಯದ ಫ್ಲಾಶ್‌ಬ್ಯಾಕ್ ದೃಶ್ಯವೊಂದೇ ಮನಸ್ಸಿಗೆ ತಟ್ಟುತ್ತದೆ.
ಇನ್ನೊಂದು ವಿಷಯ ಇಲ್ಲಿ ಪ್ರಸ್ತಾಪಿಸಲೇಬೇಕು. ಚಿತ್ರ ಬಿಡುಗಡೆಯಾದ ಮೊದಲನೇ ಭಾನುವಾರ ಸಾಯಂಕಾಲದ ಶೋಗೆ ಚಿತ್ರಮಂದಿರ ತುಂಬಿದ್ದು ಅರ್ಧಮಾತ್ರ. ಅರ್ಧ ಚಿತ್ರ ಮುಗಿಯುವ ಹೊತ್ತಿಗೆ ಚಿತ್ರಮಂದಿರ ಅರ್ಧ ಖಾಲಿ. ಮುಕ್ಕಾಲು ಮುಗಿಯುವ ಹೊತ್ತಿಗೆ ಉಳಿದದ್ದು ಕಾಲು ಭಾಗ ಮಾತ್ರ!
'ಹುಚ್ಚಾ ಅನ್ನು ಬೇಜಾರಾಗಲ್ಲ, ದಡ್ಡ ಅನ್ನು ಚಿಂತೆ ಮಾಡಲ್ಲ' ಅನ್ನುವ ಹಾಡು ನಾಡಿನ ಚಿತ್ರಪ್ರೇಮಿಗಳ ಬಾಯಲ್ಲಿ ಗಂಗುಡುತ್ತಿದೆ. ಜನ ಹಾಗೆ ಅಂತಾರೆ ಅಂತ ನವೀನ್ ಕೃಷ್ಣ ಮಾತ್ರ ಬೇಜಾರು ಮಾಡಿಕೋಬಾರ್ದು. ಮುಂದಿನ ಚಿತ್ರದಲ್ಲಾದ್ರೂ 'ಧಿಮಾಕು' ತೋರ್ಸೋದು ಬಿಟ್ಟು, ದಿಮಾಕು ಉಪಯೋಗಿಸಲಿ.


Click it and Unblock the Notifications











