twitter
    For Quick Alerts
    ALLOW NOTIFICATIONS  
    For Daily Alerts

    ‘ಪ್ರಿಯತಮ’ನ ಆಧುನಿಕ ಪ್ರೇಮಾಯಣ

    By Staff
    |
    • ಚೇತನ್‌ ನಾಡಿಗೇರ್‌
    ಒಂದು ಸಣ್ಣ ಫ್ಲಾ ್ಯಷ್‌ಬ್ಯಾಕ್‌ಗೆ ಹೋಗಿಬರೋಣ.

    60ರ ದಶಕದ ಆಸುಪಾಸು. ಅದೊಂದು ಸುಖಿ ಕುಟುಂಬ. ಬಿ.ಆರ್‌. ಪಂತುಲು ಅದರ ಯಜಮಾನರು. ಅವರಿಗೆ ಎಂ.ವಿ. ರಾಜಮ್ಮ ‘ಯಜಮಾನ್ರು’. ಅವರಿಗೆ ಪ್ರೀತಿಯೇ ಊಟ, ನೆಮ್ಮದಿಯೇ ನಿದ್ದೆ. ಆ ದಂಪತಿಗಳಿಗೊಬ್ಬ ರಾಜಕುಮಾರ ರಾಜ್‌ಕುಮಾರ್‌. ಮಗನ ಸ್ನೇಹಿತರನ್ನೂ ಆ ದಂಪತಿಗಳು ಸ್ವಂತ ಮಕ್ಕಳಂತೆ ನೋಡಿಕೊಳ್ಳುವುದರಿಂದ ಕಲ್ಯಾಣ್‌ಕುಮಾರ್‌ ಕೂಡ ಒಂಥರಾ ಮನೆ ಮಗನೇ. ಒಟ್ನಲ್ಲಿ ಈ ಸಂಸಾರ ಒಂಥರಾ ಆನಂದ ಸಾಗರ. ಅಷ್ಟರಲ್ಲಿ ರಾಜ್‌ಕುಮಾರ್‌ಗೆ ಲೀಲಾವತಿ ಪರಿಚಯವಾಗುತ್ತದೆ.

    ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಆದರೆ ವಿಧಿ ವಿಪರೀತ. ಕಲ್ಯಾಣ್‌ಕುಮಾರ್‌, ಲೀಲಾವತಿಯನ್ನು ಮದುವೆಯಾಗುವ ಪ್ರಸಂಗ ಬರುತ್ತದೆ. ಮದುವೆ ಮನೆಯಲ್ಲಿ ಈ ವಿಷಯ ರಾಜ್‌ಕುಮಾರ್‌ಗೆ ಹೇಗೋ ಗೊತ್ತಾಗುತ್ತದೆ. ಪ್ರೀತಿಯ ಮಧ್ಯೆ ಸ್ನೇಹ ಅಡ್ಡ ಬರುತ್ತದಾದರೂ ಕೊನೆಗೆ ಸ್ನೇಹದ ಮೇಲೆ ಪ್ರೀತಿ ಮೇಲುಗೈ ಸಾಧಿಸುವಲ್ಲಿ ಚಿತ್ರ ಮುಗಿಯುತ್ತದೆ. ಇಂಥದೊಂದು ಕಾಲ್ಪನಿಕ ಹಂಡ್ರೆಡ್‌ ಡೇಸ್‌ ಚಿತ್ರಕ್ಕೆ ರವೋಸ್ಟು ನರಸಿಂಹರಾಜು ಹಾಸ್ಯ, ಡಿಕ್ಕಿ ಮಾಧವರಾಯರ ಆರ್ಭಟ, ಟಿ.ಜಿ. ಲಿಂಗಪ್ಪನವರ ಸಂಗೀತ ಸೇರಿಕೊಂಡು ಬಿಟ್ಟರೆ ಚಿತ್ರ 25 ವಾರ ಗ್ಯಾರಂಟಿ.

    ಈಗ ವಾಪಸು ಬನ್ನಿ 2006ಕ್ಕೆ.

    ಛೇ ಬಿಡಿ, ಈಗೆಲ್ಲಿ ಅಂಥ ಸದಭಿರುಚಿಯ ಚಿತ್ರಗಳು ತಯಾರಾಗುತ್ತವೆ ಎಂಬ ಬೇಸರ ಬೇಡ. ಅಂಥ ಚಿತ್ರಗಳನ್ನು ಈಗಲೂ ಮಾಡಬಹುದು ಎಂದು ಶಿವಪ್ರಭು ತಮ್ಮ ‘ಓ ಪ್ರಿಯತಮ...’ದ ಮೂಲಕ ತೋರಿಸಿಕೊಟ್ಟಿದ್ದಾರೆ. ಅದೇ ಕತೆಗೆ, ಅದೇ ಪಾತ್ರಗಳಿಗೆ ತಕ್ಕುದಾದ ಹೊಸ ಹೊಸ ಪಾತ್ರಧಾರಿಗಳನ್ನು ತಂದಿದ್ದಾರೆ. ಪಂತುಲು ರಾಜಮ್ಮನವರಷ್ಟೇ ಅನ್ಯೋನ್ಯ ದಂಪತಿಗಳನ್ನು ಶರತ್‌ಬಾಬು-ಗೀತಾರಲ್ಲಿ ಹುಡುಕಿದ್ದಾರೆ. ಮಗನಾಗಿ ಅಜಯ್‌ ರಾವ್‌, ಮನೆಮಗನಾಗಿ ಅಶ್ವಥ್‌ ನೀನಾಸಂ ಇದ್ದಾರೆ. ಲೀಲಾವತಿ ಪಾತ್ರಕ್ಕೆ ಸಿಂಚನಾ ಬಂದಿದ್ದಾರೆ. ನಗಿಸಲು ಕಾಮಿಡಿ ಟೈಂ ಗಣೇಶ್‌, ಆರ್ಭಟಿಸಲು ಸತ್ಯಜಿತ್‌, ಅನಂತ್‌ ವೇಲು ಇದ್ದಾರೆ. ವಲ್ಲೀಶ-ಸಂದೀಪ್‌ರ ನೆನಪಿನಲ್ಲುಳಿಯುವಂಥ ಹಾಡುಗಳಿವೆ.

    ತಮ್ಮ ಕತೆ ಹಾಗೂ ಚಿತ್ರಕತೆಯ ಮೇಲೆ ಬಹಳ ವಿಶ್ವಾಸವಿದ್ದರೂ ಶಿವೂ ಇಂದಿನ ಕಾಲಕ್ಕೆ ತಕ್ಕಂತೆ ಸಾಕಷ್ಟು ಅಪ್‌ಡೇಟ್‌ ಆಗಿದ್ದಾರೆ. ಹಿಂದೊಮ್ಮೆ ಗಂಡನಿಗೆ ‘ಏನೂಂದ್ರೆ’ ಅನ್ನುತ್ತಿದ್ದವರು ಈಗ ‘ಏನೋ ಸೋಡಾಬುಡ್ಡಿ’ ಎನ್ನುವಷ್ಟು ಮಹತ್ತರ ಬದಲಾವಣೆಗಳು ಈ ಚಿತ್ರದಲ್ಲಾಗಿವೆ. ಮಕ್ಕಳನ್ನು ಸ್ನೇಹಿತರಂತೆ ನಡೆಸಿಕೊಳ್ಳುವ ಬದಲಾವಣೆಯನ್ನೂ ಈ ಚಿತ್ರದಲ್ಲಿ ಕಾಣಬಹುದು. ಹಾಗೆಯೇ ಇಂದಿನ ಪ್ರೇಮಿಗಳ ‘ಕಣ್ಣಾಮುಚ್ಚಾಲೆಆಟ’ವನ್ನೂ ಶಿವು ಬಹಳ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ.

    ಅದು ಬಿಟ್ಟರೆ ‘ಓ ಪ್ರಿಯತಮ ... ನೀಟ್‌ ಚಿತ್ರ. ಇಲ್ಲಿ ಕೊಲೆ, ಆತ್ಮಹತ್ಯೆ, ರಕ್ತಪಾತಗಳಿಲ್ಲ. ಪ್ರೀತಿ, ತ್ಯಾಗ, ಸ್ನೇಹ, ಸೆಂಟಿಮೆಂಟುಗಳಿಗೆ ಪ್ರಾಶಸ್ತ್ಯ . ಈ ಎಲ್ಲ ಅಂಶಗಳನ್ನು ಶಿವೂ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಕೆಲವು ಕಡೆ ಸ್ವಲ್ಪ ಹೆಚ್ಚಾಗಿಯೇ ಇರುವುದರಿಂದ ಮೊದಲಾರ್ಧದಲ್ಲಿ ಚಿತ್ರ ಎಳೆದಂತಾಗಿದೆ. ಆದರೆ, ದ್ವಿತೀಯಾರ್ಧದಲ್ಲಿ ಚಿತ್ರ ಬಿಗಿಯಾಗಿದೆ.

    ಶಿವು ಜತೆಗೆ ಛಾಯಾಗ್ರಾಹಕ ಎ.ಸಿ. ಮಹೇಂದ್ರನ್‌ ಇಡೀ ಚಿತ್ರವನ್ನು ಚಂದಗಾಣಿಸುವುದರಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಇಲ್ಲೇ ಒಳ್ಳೆಯ ಸ್ಥಳಗಳಿರುವಾಗ ಹಾಡುಗಳಿಗೆ ಫಾರಿನ್‌ಗೆ ಹೋಗುವುದು ವೇಸ್ಟು ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

    ಅಭಿನಯದ ವಿಷಯಕ್ಕೆ ಬಂದರೆ ಶರತ್‌ಬಾಬು, ಗೀತಾ, ಅಜಯ್‌ ಹಾಗೂ ಸಿಂಚನಾ ಸಲೀಸಾಗಿ ಚಿತ್ರವನ್ನು ಮುನ್ನಡೆಸುತ್ತಾರೆ. ಸುಧಾರಾಣಿ, ಸತ್ಯಜಿತ್‌, ಚಿತ್ರಾಶೆಣೈ, ಅನಂತ್‌ವೇಲು ಚಿಕ್ಕ ಪಾತ್ರಗಳಲ್ಲಿ ಚೊಕ್ಕವಾಗಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ ಇಡೀ ಚಿತ್ರದುದ್ದಕ್ಕೂ ಒಂದೇ ಸೀರೆಯಲ್ಲಿ ಕಾಣಿಸಿಕೊಂಡು ತಾನು ಕಾಸ್ಟ್ಲಿ ನಟಿಯಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ‘ಕಾಮಿಡಿ ಟೈಂ’ ಗಣೇಶ್‌ರ ಕಾಮಿಡಿ ಕೊಂಚ ಅತಿ ಎನಿಸಬಹುದು.

    ಒಟ್ಟಾರೆ ಇಂದಿನ ಲಾಂಗು-ಮಚ್ಚಿನ ಟ್ರೆಂಡಿಗೆ ವಿರುದ್ಧವಾಗಿರುವ ಶಿವಪ್ರಭುರವರ ‘ಪ್ರಿಯತಮ’ನ ಪ್ರೇಮಾಯಣವನ್ನು ಮನೆಮಂದಿಯೆಲ್ಲ ಒಂದು ಸಾರಿ ನೋಡಲಡ್ಡಿಯಿಲ್ಲ.

    (ಸ್ನೇಹ ಸೇತು : ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 16, 2024, 15:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X