twitter
    For Quick Alerts
    ALLOW NOTIFICATIONS  
    For Daily Alerts

    ಪಾಕಿಸ್ತಾನವನ್ನು ಮಟ್ಟ ಹಾಕಬೇಕು ಎಂದು ದೊಡ್ಡ ಗಂಟಲನಲ್ಲಿ ಅಬ್ಬರಿಸುವವರು ತಪ್ಪುದೇ ಸೈನಿಕ ಚಿತ್ರವನ್ನು ನೋಡಬೇಕು. ಆನಂತರವೂ ಅವರು ಯುದ್ಧ ಬೇಕು ಅನ್ನುವುದಾದರೆ...

    By Staff
    |

    ಇದು ನೋಡಿದ ನಂತರ ಮೆಲುಕು ಹಾಕುವ ಚಿತ್ರ. ಥಿಯೇಟರ್‌ನಿಂದ ಹೊರಗೆ ಬಂದ ನಂತರವೂ ಸೈನಿಕ ಗುಂಗಾಗಿ ಕಾಡುತ್ತಾನೆ. ನಮ್ಮ ಪಾಪ ಪ್ರಜ್ಞೆಯ ಕೆಣಕುತ್ತಾನೆ. ಆತ್ಮಸಾಕ್ಷಿಯ ಪ್ರಶ್ನಿಸುತ್ತಾನೆ. ರಾಷ್ಟ್ರಕ್ಕಾಗಿ ಗಡಿಯಲ್ಲಿ ಹಗಲಿರುಳು ಕಾಯುವ ಸೈನಿಕನಿಗೆ ಕೊನೆಗೆ ದಕ್ಕುವುದೇನು? ತ್ಯಾಗವೇ ಸುಖ ಎಂದು ಆತ ನಿರಾಳವಾಗಬೇಕಾ? ಅವನು ಹುಟ್ಟಿದ್ದೇ ತ್ಯಾಗ ಮಾಡುವುದಕ್ಕಾ? ಎನ್ನುವುದು ಸಿನಿಮಾ ಕೇಳುವ ಪ್ರಶ್ನೆ . ಚಿತ್ರದ ಯಶಸ್ಸು ಅಡಗಿರುವುದೇ ಈ ಪ್ರಶ್ನೆಯನ್ನು ಕತೆಯಾಗಿಸಿರುವ ಕುಸುರಿ ಕಲೆಯಲ್ಲಿ .

    ಸೈನಿಕ ಕಾರ್ಗಿಲ್‌ ಕದನದ ಸ್ಫೂರ್ತಿಯಲ್ಲಿ ಹುಟ್ಟಿಕೊಂಡ ಚಿತ್ರ. ಯುದ್ಧದಲ್ಲಿ ಮೃತರಾದ ಸೈನಿಕರ ದೇಹಗಳು ತವರಿಗೆ ವಾಪಸ್ಸಾದಾಗ ದೊರೆತ ಪ್ರತಿಕ್ರಿಯೆ, ಆನಂತರದ ಘಟನೆಗಳ ನೋವಿನ ಮಡುವಿನಿಂದ ಮೊಳೆತ ಚಿತ್ರ. ಸೈನಿಕನೊಬ್ಬನ ಬದುಕಿನ ಪುಟಗಳ ತೆರೆದಿಡುತ್ತಾ ಸಾಗುವ ಸೈನಿಕ, ಅದೇ ಕಾಲಕ್ಕೆ ಗಡಿಯಾಳಗಿನ ವೈರಿಗಳ ಮುಖವಾಡಗಳನ್ನೂ ಕಳಚುತ್ತಾ ಸಾಗುತ್ತದೆ. ಸಿನಿಮಾ ನೋಡುತ್ತಾ ನೋಡುತ್ತಾ - ಯುದ್ಧದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ದೇಶಪ್ರೇಮದ ಬುಗ್ಗೆಯ ನಶ್ವರತೆ ಕಣ್ಣಿಗೆ ಕಟ್ಟುತ್ತದೆ. ಎದೆಯಲ್ಲಿ ವಿಷಾದ ಮಡುಗಟ್ಟುತ್ತದೆ.

    ಪಾಕಿಸ್ತಾನವನ್ನು ಮಟ್ಟ ಹಾಕಬೇಕು ಎಂದು ದೊಡ್ಡ ಗಂಟಲನಲ್ಲಿ ಅಬ್ಬರಿಸುವವರಿಗೆ ಒಮ್ಮೆ ಸೈನಿಕ ಚಿತ್ರವನ್ನು ತಪ್ಪದೇ ತೋರಿಸಬೇಕು. ಆನಂತರವೂ ಅವರು ಯುದ್ಧ ಬೇಕು ಅನ್ನುವುದಾದರೆ, ಅವರನ್ನು ನಾರಾಯಣ ಹೃದಯಾಲಯದಲ್ಲಿ ಬಗ್ಗೆ ಡಾ। ದೇವಿ ಪ್ರಸಾದ್‌ ಶೆಟ್ಟಿ ಅವರಿಂದ ಅವರಿಗೆ ಹೃದಯವಿರುವ ತಪಾಸಣೆ ಮಾಡಿಸಬೇಕು!

    ಸಾಕ್ಷಿ ಅವಳಿ ಅವಾಂತರ, ಕಾರ್ಗಿಲ್‌ನಲ್ಲಿ ಚಿತ್ರೀಕರಣದ ಬೂಸಿ... ಮುಂತಾದ ಕಾರಣಗಳಿಗಾಗಿ ಬಿಡುಗಡೆಗೆ ಮುನ್ನವೇ ಸುದ್ದಿಯಾದ ಚಿತ್ರವದು. ಆದರೆ, ಹಳೆಯ ಕಹಿಗಳನ್ನೆಲ್ಲ ಮರೆತು ಯೋಗೇಶ್ವರ್‌ ಬೆನ್ನು ತಟ್ಟುವಷ್ಟು ಚಿತ್ರ ಪ್ರಭಾವಶಾಲಿಯಾಗಿದೆ. ಯೋಗೇಶ್ವರ್‌ ತಮ್ಮ ಮಿತಿಗಳನ್ನು ಅರಿತು ನಟಿಸಿದ್ದಾರೆ ; ಗೆಲುವು ಅವರದೇ.

    ಚಿತ್ರದ ಪ್ರತಿ ಫ್ರೇಂನಲ್ಲೂ ನಿರ್ದೇಶಕ ಮಹೇಶ್‌ ಸುಖಧರೆ ತಮ್ಮ ಅಸ್ತಿತ್ವದ ರುಜು ಹಾಕಿದ್ದಾರೆ. ಯೋಗೇಶ್ವರ್‌ನಂಥ ನಿರ್ಭಾವುಕ ಮುಖಕ್ಕೆ ಜೀವ ತುಂಬಿದ ಕಲೆಗಾರಿಕೆ ಅವರದು. ಚಿತ್ರದ ನಿಜವಾದ ಅಚ್ಚರಿ- ಸಾಕ್ಷಿ ಶಿವಾನಂದ್‌. ಗೌರಿಯ ಪಾತ್ರವನ್ನು ಆವಾಹಿಸಿಕೊಂಡಿರುವ ಸಾಕ್ಷಿ ಚಿತ್ರಜೀವನದ ಶ್ರೇಷ್ಠ ಅಭಿನಯ ನೀಡಿದ್ದಾಳೆ. ಪ್ರೇಮಿ, ವಿಧವೆ, ಮುಗ್ಧೆ, ಸಿಡಿದೇಳುವ ಹೆಣ್ಣು , ಹೀಗೆ ಪಾತ್ರದ ಎಲ್ಲ ಆಯಾಮಗಳಿಗೂ ಸಾಕ್ಷಿ ನ್ಯಾಯ ಒದಗಿಸಿದ್ದಾಳೆ. ಮತ್ತೆ ಸುಖಧರೆಗೇ ಸ್ಕೋರ್‌.

    ಆಶೀಶ್‌ ವಿದ್ಯಾರ್ಥಿ, ದೊಡ್ಡಣ್ಣ ನಟನೆಯಲ್ಲಿ ಮಿಂಚಿಂಗ್‌. ದೇವಾ ಅವರ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಹಾಡುಗಳೂ ಕೇಳುವಂತಿವೆ. ಆದರೆ, ಚಿತ್ರಕ್ಕೆ ಸುವರ್ಣ ಚೌಕಟ್ಟು ಒದಗಿಸಿದ ಕೀರ್ತಿ ಛಾಯಾಗ್ರಾಹಕ ಎ.ಸಿ.ಮಹೇಂದ್ರನ್‌ ಅವರದು. ಲೇಹ್‌ನ ಹಿಮ ಸಿಂಚನ, ಗಂಧಕನ ನೆರಳು, ಮಡಿಕೇರಿಯ ಮಳೆ, ರಣರಂಗದ ನಿಟ್ಟುಸಿರು-ನೆತ್ತರು, ಪ್ರಕೃತಿಯ ಎರಡೂ ಮುಖಗಳು.. ಮಹೇಂದ್ರನ್‌ ಕೆಮರಾ ಸೋತಿದ್ದೇ ಇಲ್ಲ .

    ಮಧು ಸಂಭಾಷಣೆ ಚುರುಕಾಗಿದೆ. ಒಂದು ಸ್ಯಾಂಪಲ್‌ ನೋಡಿ :
    ಬಡವರ ಮಕ್ಕಳಷ್ಟೇ ಸೈನಿಕರಾಗುತ್ತಾರೆ. ರಾಜಕಾರಣಿಗಳು ಮತ್ತು ಶ್ರೀಮಂತರು ತಮ್ಮ ಮಕ್ಕಳನ್ನು ಯಾಕೆ ಸೈನ್ಯಕ್ಕೆ ಕಳಿಸುವುದಿಲ್ಲ . ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದಕ್ಕೆ ಅವರಿಗೆ ಈ ದೇಶ ಬೇಕು. ಅದನ್ನು ಕಾಪಾಡುವ ಕೆಲಸ ಮಾತ್ರ ಬೇಡ.

    ಸಿನಿಮಾ ನೋಡುವ ಅಭ್ಯಾಸ ಬಿಟ್ಟವರು, ತುಂಬಾ ದಿನಗಳಿಂದ ಸಿನಿಮಾ ನೋಡಲು ಪುರುಸೊತ್ತು ಸಿಗದೆ ಇರುವವರು- ಮತ್ತೆ ಸಿನಿಮಾ ನೋಡುವ ಅಭ್ಯಾಸ ಶುರು ಮಾಡಿಕೊಳ್ಳಲು ಅಪರೂಪದ ಅವಕಾಶ. ಪ್ರತಿಯಾಬ್ಬರೂ ನೋಡಬೇಕಾದ ಸಿನಿಮಾ ; ಯುದ್ಧ ದಿನವೂ ಸಂಭವಿಸುವುದಿಲ್ಲ , ಸೈನಿಕದಂಥ ಚಿತ್ರವೂ!

    ಸೈನಿಕನ ಸದ್ದುಗದ್ದಲ
    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X