»   » ಲವಕುಶ : ಉಪ್ಪಿ ಮಸಾಲೆಗೆ ಶಿವಣ್ಣ ಒಗ್ಗರಣೆ!

ಲವಕುಶ : ಉಪ್ಪಿ ಮಸಾಲೆಗೆ ಶಿವಣ್ಣ ಒಗ್ಗರಣೆ!

Posted By:
Subscribe to Filmibeat Kannada


ಉಪ್ಪಿ ಮತ್ತು ಶಿವಣ್ಣ ಪರಸ್ಪರ ಸವಾಲು ಹಾಕುವಂತೆ ನಟಿಸದಿದ್ದರೂ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ಮಾಡಿ ಬಿಸಾಕಿದ್ದಾರೆ. ಕಾಮಿಡಿ, ಸೆಂಟಿಮೆಂಟ್ ಮತ್ತು ಫೈಟಿಂಗ್ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ನಾಯಕಿಯರಾಗಿ ಜೆನ್ನಿಫರ್ ಓಕೆ. ಚಾರ್ಮಿ 'ಷೌಷ್ಠಿಕ'ಹುಡುಗಿಯಾಗಿ ಪಡ್ಡೆ ಹೈಕಳಿಗೆ ತಲೆ ಕೆಡಿಸುತ್ತಾಳೆ.

  • ದೇವಶೆಟ್ಟಿ ಮಹೇಶ್

ಆತ ಚಕ್ರಿ, ಈತ ಚಿನ್ನಿ, ಒಬ್ಬಾತ ಟೋಪಿ ಹಾಕುವ ಗಿರಾಕಿ. ಇನ್ನೊಬ್ಬಾತ ದುಡ್ಡು ಕೊಟ್ಟರೆ ಏನಾದರೂ ಮಾಡುವ ಮನುಷ್ಯ. ಇವರಿಬ್ಬರೂ ಒಂದೇ ಮನೆಯಲ್ಲಿ ಇರುತ್ತಾರೆ. ಯಾಕೆಂದರೆ ಅವರು ಗೆಳೆಯರಾಗಿರುತ್ತಾರೆ. ಸ್ನೇಹಕ್ಕಿಂತ ಯಾವುದೂ ದೊಡ್ಡದಿಲ್ಲ ಎಂದು ತಿಳಿದಿರುತ್ತಾರೆ. ಅದಕ್ಕಾಗಿ ಜೀವ ಕೊಡಲು ಹಿಂದೇಟು ಹಾಕದ ಮನಸು ಹೊಂದಿರುತ್ತಾರೆ. ಆದರೆ ಒಂದು ಹಂತದಲ್ಲಿ ಅವರು ಸೇಡಿನ ಕಿಡಿಗೆ ಸ್ನೇಹವನ್ನು ಕಳೆದುಕೊಳ್ಳುತ್ತಾರೆ ಅಥವಾ ಹಾಗಂತ ತಿಳಿಯುತ್ತಾರೆ. ಅಪಾರ್ಥದಿಂದ ದೂರ ಸರಿಯುತ್ತಾರೆ. ಇನ್ನೇನು ಅವರ ನಡುವಿನ ಬಿರುಕು ದೊಡ್ಡದಾಗಬೇಕು.. ಅಷ್ಟರಲ್ಲಿ.. ಮುಂದೇನಾಗುತ್ತದೆ ಎನ್ನುವುದನ್ನು ತೆರೆಮೇಲೆಯೇ ನೋಡಿ.

ಇದು ಉಪ್ಪಿ ಮತ್ತು ಶಿವಣ್ಣ ಜತೆಯಾಗಿ ನಟಿಸಿದ ಮತ್ತೊಂದು ಚಿತ್ರ. ಪ್ರೀತ್ಸೆ ಚಿತ್ರದ ನಂತರ ಸಾಯಿಪ್ರಕಾಶ್ ಇವರನ್ನು ಒಂದು ಮಾಡಿದ್ದಾರೆ. ಅದಕ್ಕಾಗಿಯೇ ಲವಕುಶ ಎಂದು ಹೆಸರೂ ಇಟ್ಟಿದ್ದಾರೆ. ಇಬ್ಬರು ಅಭಿಮಾನಿಗಳಿಗೆ ಏನೇನು ಬೇಕೋ ಅದೆಲ್ಲಾ ಮಸಾಲೆಯನ್ನೂ ಭರ್ಜರಿಯಾಗಿ ತುಂಬಿದ್ದಾರೆ. ಮೊದಲಾರ್ಧದಲ್ಲಿ ಕಾಮಿಡಿಯೇ ಜೀವಾಳ. ಎರಡನೇ ಭಾಗದಲ್ಲಿ ಸೆಂಟಿಮೆಂಟ್, ಫೈಟು ಆಧಾರ.ಆದರೆ ಕತೆ ಮಾತ್ರ ತುಂಬಾ ಹಳೆಯದು. ಅದನ್ನೇ ಇಂದಿನ ಕಾಲಕ್ಕೆ ತಕ್ಕಂತೆ ಉಣಿಸಿದ್ದಾರೆ ಸಾಯಿ. ಅವರು ಚಿತ್ರಕತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಉಪ್ಪಿ ಮತ್ತು ಶಿವಣ್ಣ ಇದ್ದ ಮೇಲೆ ಎಲ್ಲಾ ಅವರೇ ತೂಗಿಕೊಂಡು ಹೋಗುತ್ತಾರೆ ಎನ್ನುವ ಭರವಸೆ. ಅದನ್ನು ಇಬ್ಬರೂ ಹೀರೋಗಳು ಮಾಡಿದ್ದಾರೆ.

ಉಪ್ಪಿ ಮತ್ತು ಶಿವಣ್ಣ ಪರಸ್ಪರ ಸವಾಲು ಹಾಕುವಂತೆ ನಟಿಸದಿದ್ದರೂ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ಮಾಡಿ ಬಿಸಾಕಿದ್ದಾರೆ. ಕಾಮಿಡಿ, ಸೆಂಟಿಮೆಂಟ್ ಮತ್ತು ಫೈಟಿಂಗ್ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ನಾಯಕಿಯರಾಗಿ ಜೆನ್ನಿಫರ್ ಓಕೆ. ಚಾರ್ಮಿ 'ಷೌಷ್ಠಿಕ'ಹುಡುಗಿಯಾಗಿ ಪಡ್ಡೆ ಹೈಕಳಿಗೆ ತಲೆ ಕೆಡಿಸುತ್ತಾಳೆ. ಹಾಗೆಯೇ ಅಭಿನಯದಲ್ಲೂ ಸೈ ಅನ್ನಿಸಿಕೊಳ್ಳುತ್ತಾರೆ. ಆಕೆಯ ಕಾಮಿಡಿ ಹೆಚ್ಚು ರಿಲ್ಯಾಕ್ಸ್ ಕೊಡುತ್ತದೆ. ಮೂರು ಹಾಡುಗಳು ಗುನುಗುವಂತಿವೆ. ಫೈಟಿಂಗ್ ಕಿಕ್ ಕೊಡುತ್ತದೆ.

ಟೆನ್ನಿಸ್ ಕೃಷ್ಣ ಒಂದು ಹಂತದ ವರೆಗೆ ಹೊಟ್ಟೆ ತುಂಬ ನಗಿಸುತ್ತಾರೆ. ರಕ್ತ ಕಣ್ಣೀರು ಚಿತ್ರದ ಅನುಕರಣೆಯಲ್ಲಿ ಉಪ್ಪಿ ಶಿಳ್ಳೆ ಗಿಟ್ಟಿಸುತ್ತಾರೆ. ಜನ ಈಗಲೂ ಅವರನ್ನು ಹಾಗೇ ನೋಡಲು ಇಷ್ಟ ಪಡೋದು ಅವರ ಮಿತಿಯೂ ಹೌದು, ವಿಶೇಷತೆಯೂ ಹೌದು. ಒಂದು ಮಾತು, ನಿರ್ಮಾಪಕ ಪ್ರಭಾಕರ್ ಮಾತ್ರ ಇಷ್ಟು ಸರಳ ಕತೆಗೆ ದುಡ್ಡು ಖರ್ಚು ಮಾಡಲು ಹಿಂದೇಟು ಹಾಕಿಲ್ಲ. ಪ್ರತಿಯೊಂದು ದೃಶ್ಯ ಅದ್ಧೂರಿಯಾಗಿ ತೋರಿಸಲು ಭರ್ಜರಿ ಲೋಕೇಶನ್ ಗಳನ್ನು ಆಯ್ಕೆ ಮಾಡಿದ್ದಾರೆ. ವಿದೇಶದಲ್ಲಿ ಚಿತ್ರೀಕರಣ ಮಾಡಿಸಿದ್ದಾರೆ. ಕಣ್ಣಿಗೆ ಹಬ್ಬ ನೀಡುವಂತೆ ತೆರೆಯನ್ನು ಸಿಂಗರಿಸಿದ್ದಾರೆ.

ಅಂದ ಹಾಗೆ, ಮೊಬೈಲ್ ಮೂಲಕ ಲವಕುಶ ಅಣ್ಣ ತಮ್ಮ ಎಂದು ಗೊತ್ತಾಗುವುದು, ಶಿವಣ್ಣ ಮನೆಯಲ್ಲಿ ನಗ್ನವಾಗಿ ಓಡಾಡುವುದು.. ಇವೆಲ್ಲಾ ಸಾಯಿ ಕಂಡು ಹಿಡಿದಿರುವ ಹೊಸ ಸಂಶೋಧನೆ. ಅಲ್ಲಿಗೆ ಅವರು ಅಪ್ ಡೇಟ್ ಆಗಿದ್ದಾರೆ. ಹಾಗೆಯೇ ಕೆಲವು ಡಬಲ್ ಮೀನಿಂಗ್ ಸಂಭಾಷಣೆ ಹೇಳಿಸಿ, ಎಸ್.ನಾರಾಯಣ್ ಗೆ ಪ್ರತಿಸ್ಫರ್ಧಿ ಆಗಿದ್ದಾರೆ. ಡೈಲಾಗು ಎಷ್ಟು ಸರಳವಾಗಿದೆ ಅಂದರೆ ಅಕ್ಷಕ ಗೊತ್ತಿರದವನೂ ಇದನ್ನು ಬರೆಯಬಹುದು!

ಏನೇ ಇರಲಿ. ಶಿವಣ್ಣ ಮತ್ತು ಉಪ್ಪಿ ಅಭಿಮಾನಿಗಳಿಗೆ ಇದು ಹಬ್ಬದೂಟ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada