ನಮ್ಮಣ್ಣ ಡಾನ್ : ಪ್ರಚಾರ ಜೋರು, ಸಿನಿಮಾ ಬಲು ಬೋರು.

By * ಶ್ರೀರಾಮ್ ಭಟ್

ಸದಾ ಕ್ರಿಯಾಶೀಲತೆಗೆ ಹೆಸರಾಗಿರುವ ಅಚ್ಚಕನ್ನಡಿಗ ರಮೇಶ್ ಅರವಿಂದ್, ಕುಟುಂಬ ಸಮೇತ ಹೋಗಿ ನೋಡಬಹುದಾದ ಸಿನಿಮಾ ಮಾಡುವುದರಲ್ಲಿ ಹೆಸರುವಾಸಿ. ಆದರೆ 'ನಮ್ಮಣ್ಣ ಡಾನ್' ಎಂಬ ಚಿತ್ರವನ್ನು, ಅವರ ಈ ಮೊದಲಿನ ಸಿನಿಮಾಗಳ ನಿರೀಕ್ಷೆಯಿಂದ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ನಂತರ 'ನಿದ್ದೆ' ಮಾಡುವಂತೆ ಮಾಡಿದ್ದಾರೆ ಎನ್ನಬಹುದು.

ಹೃದಯ ಸಮಸ್ಯೆ ಹೊಂದಿದ ಮಕ್ಕಳ ಬಗ್ಗೆ ಮಾನವೀಯತೆ ಮೆರೆಯುವ ಕಥೆಯ ಎಳೆ ಚೆನ್ನಾಗಿದೆ. ರಮೇಶ್ ಹೇಳಬೇಕೆಂದಿದ್ದ ಮೆಸೇಜ್ ಒಳ್ಳೆಯದೇ. ಆದರೆ ಚಿತ್ರಕಥೆ ಹಳಿತಪ್ಪಿದೆ. ಈ ಮೊದಲಿನ ಕೆಲವು ಸಿನಿಮಾಗಳಲ್ಲಿದ್ದಂತೆ ಅದೇ ಡಾಕ್ಟರ್ ಪಾತ್ರ, ಪಕ್ಕದಲ್ಲೊಂದು ಸುಂದರಿ ನರ್ಸ್, ಆಗಾಗ ಬಂದು ಕಾಡುವ ಲವರ್, ಆಂಟಿ ಕಾಟ, ಮಕ್ಕಳ ಸೈನ್ಯ, ಸ್ವಿಮ್ಮಿಂಗ್ ಫೂಲ್ಸ್, ಹೀಗೆ ಹಳಸಲು ದೃಶ್ಯಗಳ ಚಿತ್ರಾನ್ನವನ್ನೇ ಮತ್ತೆ ಬಡಿಸಿದಂತಿದೆ, ಯಾಕೋ...!?

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಟಿಸಿರುವ ರಮೇಶ್, ಆಕ್ಷನ್, ಕಟ್ ಕೂಡ ಹೇಳಿದ್ದಾರೆ. ಸಂಭಾಷಣೆಯನ್ನು ಬರೆದಿರುವವರು ಡಿ. ಬಿ. ಚಂದ್ರಶೇಖರ್. ಆದರೆ ಅದರಲ್ಲಿಯೂ ರಮೇಶ್ ಕೈವಾಡ ಎದ್ದುಕಾಣುವಂತಿದೆ. ಪಾತ್ರದಲ್ಲಿ ಟೆನ್ಷನ್ ನಟಿಸಬೇಕಾಗಿದ್ದ ರಮೇಶ್, ಕಥೆ, ಚಿತ್ರಕಥೆ ಮಾಡುವಾಗ ಟೆನ್ಷನ್ ಸಾಗರದಲ್ಲಿ ಮುಳುಗಿದ್ದರೇನೋ ಎನ್ನುವಂತಿದೆ. ಸಂಭಾಷಣೆ ಕೆಲವೊಮ್ಮೆ ನಕ್ಕುನಗಿಸಿದರೆ ಬಹಳಷ್ಟು ಸಾರಿ ನೀರಸ. ಪ್ರಚಾರ ಕಾರ್ಯದಲ್ಲಿ ತೋರಿಸಿದ ಕ್ರಿಯಾಶೀಲತೆ ಸಿನಿಮಾದಲ್ಲಿ ಕಾಣುವುದಿಲ್ಲ.

ಡಾನ್ ಒಬ್ಬನ ತಮ್ಮನಿಗಿರುವ 'ಬ್ರದರ್ ಸೆಂಟಿಮೆಂಟ್' ಕಥೆಯಲ್ಲಿ ಹೆಚ್ಚು ಹೈಲೈಟ್ ಆಗಿದೆ. ಶೀರ್ಷಿಕೆ ಹೆಸರು 'ನಮ್ಮಣ್ಣ ಡಾನ್' ಪಾತ್ರ, ಒಂದೇ ನಿಮಿಷ ಜೀವಂತವಾಗಿ ತೆರೆಯ ಮೇಲೆ ಬಂದು ನಂತರ ಇಡೀ ಚಿತ್ರದಲ್ಲಿ ಶವಸಂಚಾರ. ಗೊಂದಲದ ಗೂಡಾಗಿರುವ ಚಿತ್ರಕಥೆ ಜೇಡರ ಬಲೆಯಂತೆ ಗೋಚರಿಸುತ್ತದೆ. ಪ್ರೇಕ್ಷಕರು ತಪ್ಪಿಸಿಕೊಂಡರೆ ಬಚಾವ್ ಎಂಬಂತೆ ಸಿನಿಮಾ ಅದರಪಾಡಿಗದು ಮುಂದುವರಿಯುತ್ತಿರುತ್ತದೆ, ಪರದೆಯ ಮೇಲೆ ಪಾತ್ರಗಳ ಪಗಡೆಯಾಟ...

ರಮೇಶ್ ನಟನೆ ಎಂದಿನಂತೆ ಲವಲವಿಕೆಯಿಂದ ಕೂಡಿದೆ. ರಮೇಶ್ ಅವರಿಗೆ ನಾಯಕಿಯರಾಗಿ ಮೋನಾ ಪರ್ವೇಶ್ ಹಾಗೂ ಸನಾತನಿ ಇದ್ದಾರೆ. ರಮೇಶ್ ಅವರ 'ಕ್ರೇಜಿ ಕುಟುಂಬ'ದಲ್ಲಿ ನಟಿಸಿದ್ದ ಸನಾತನಿ ನಟನೆ ಚೆನ್ನಾಗಿದೆ. ಆದರೆ ಮೋನಾ ಪರ್ವೇಶ್ ನಟನೆ, ಸಂಭಾಷಣೆ ಹಾಗೂ ಚೆಂದ(?) ನೋಡಿ ಪ್ರೇಕ್ಷಕರು ಮೂರ್ಛೆ ಹೋದರೆ ತೆರೆಯ ಮೇಲೆ ಡಾಕ್ಟರ್ ಆಗಿ ಬರುವ ರಮೇಶ್ ಅವರೇ ಕಾಪಾಡಬೇಕೇನೋ!

ರಾಜು ತಾಳಿಕೋಟೆ, ರಾಜೇಂದ್ರ ಕಾರಂತ್, ಎಂ ಎಸ್ ಉಮೇಶ್ ಮುಂತಾದ ಹಾಸ್ಯನಟರ ದಂಡೇ ಇದೆ. ಇಡೀ ಚಿತ್ರ ಹಾಸ್ಯದ ಟ್ರಾಕ್ ನಲ್ಲಿ ಸಾಗುವುದರಿಂದ ಅವರ ಅಭಿನಯದ ಬಗ್ಗೆ ಹೇಳುವುದೇನು? ಡಾನ್ ತಮ್ಮನಾಗಿ ನಟಿಸಿರುವ ರಾಜು ತಾಳಿಕೋಟೆಯ ಪಾತ್ರದ ಕಲ್ಪನೆಯೇ ಹಾಗಿದೆಯೋ ಅಥವಾ ಅವರಿಗೆ ಆ ರೀತಿ ಮಾತ್ರ ಸಂಭಾಷಣೆ ಹೇಳಲು, ನಟಿಸಲು ಬರುತ್ತೋ ಏನೋ ಎಂಬ ಪ್ರಶ್ನೆ ಮೂಡುವಂತಿದೆ. ನೆಗೆಟಿವ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅಭಿನಯ ಸಹನೀಯ.

ಕಡಿಮೆ ಬಜೆಟ್ ಚಿತ್ರವಾಗಿರುವುದರಿಂದಲೋ ಏನೋ, ಚಿತ್ರ 'ಧಾರಾವಾಹಿ' ದೃಶ್ಯಗಳನ್ನು ಪೋಣಿಸಿದಂತೆ ಗೋಚರಿಸುತ್ತದೆ. ಕ್ಯಾಮರಾ ಕೆಲಸ ಅಲ್ಲಲ್ಲಿ ಓಕೆ. ಸಂಗೀತ, ಹಾಡುಗಳು ಈಚೆ ಬಂದಮೇಲೆ ನೆನಪಾಗದಿದ್ದರೂ ಸಹನೀಯ. ಆದರೆ ಚಿತ್ರಕಥೆಯೇ ಚೆನ್ನಾಗಿಲ್ಲದ ಸಿನಿಮಾಕ್ಕೆ ಅಲಂಕಾರ ಮಾಡಿದಂತೆನಿಸಿ ಬೇಸರ ಮೂಡಿಸುತ್ತದೆ. ಒಟ್ಟಿನಲ್ಲಿ ರಮೇಶ್ ಅರವಿಂದ್, ಅವರ ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲೂ ವಿಫಲವಾಗಿದ್ದಾರೆ ಎನ್ನಬಹುದು. ಅರ್ಜೆಂಟ್ ಅಡುಗೆ ಎನ್ನಬಹುದೇ ಎಂದು ನೋಡಿದ ಪ್ರೇಕ್ಷಕರೇ ಹೇಳಬೇಕು...

More from Filmibeat

English summary
Ramesh Aravind 'Nam Anna Don' movie Review. This movie produced by Ravi Joshi, Directed and acted by Ramesh Aravind. Mona and Sanatani are the Heroines. This movie released out of Karnataka including all over the Karnataka. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X