For Quick Alerts
  ALLOW NOTIFICATIONS  
  For Daily Alerts

  ಗಣೆಶ, ನಿನ್ನ ಮಹಿಮೆ ಅಪಾರ...

  By Staff
  |
  • ರಮೇಶ ಕುಮಾರ್‌ ನಾಯಕ್‌
  ಕುತೂಹಲಕಾರಿ ಕತೆಯಾಂದನ್ನು ಥ್ರಿಲ್ಲರ್‌ ಮಂಜು ಅವರ ಬೊಗಸೆಯಲ್ಲಿಟ್ಟು, ‘ಫೈಟ್‌ ಡೈರೆಕ್ಷನ್ನು ಮತ್ತು ಡೈರೆಕ್ಷನ್ನು ಎರಡನ್ನೂ ನೀವೇ ಮಾಡಿ ಬಿಡ್ರಲ್ಲ’ ಎಂದು ಬಿಟ್ಟರೆ?

  ಚಿತ್ರದ ಮೊದಲ ಭಾಗ ನಾಯಕನ ಮಾತಿಗೆ ಮೀಸಲಾದರೆ, ಎರಡನೇ ಭಾಗ ಕೃತಿಗೆ ಮೀಸಲು. ಅಂದರೆ, ಇಂಟರ್‌ವೆಲ್‌ ನಂತರ ಹೋದರೂ ಪೂರ್ತಿ ಚಿತ್ರ ನೋಡಬಹುದು. ಚಿತ್ರದ ದೌರ್ಬಲ್ಯ ಇರುವುದು ಇಲ್ಲೇ. ‘ಎರಡು ನಿಮಿಷ ಡೈಲಾಗ್‌, ಐದು ನಿಮಿಷ ಫೈಟ್‌’ ಎಂಬ ಥಿಯರಿ ಅಳವಡಿಸಿಕೊಂಡಿರುವ ಮಂಜು, ಅಸಲಿ ಕತೆಯ ಗಂಟು ಬಿಚ್ಚುವುದೇ ಇಂಟರ್‌ವಲ್‌ ಬಳಿಕ.

  ತಂದೆ(ಸಿ.ಆರ್‌.ಸಿಂಹ)ಯಂತೆಯೇ ಗಣೇಶ (ಸಾಯಿಕುಮಾರ್‌) ಆದರ್ಶ ವ್ಯಕ್ತಿ. ಪ್ರತಿಭಾವಂತನಾದರೂ ಸರಕಾರಿ ನೌಕರಿಗಾಗಿ ವಶೀಲಿಬಾಜಿಗಿಳಿಯದೆ ಕೇಬಲ್‌ ಆಪರೇಟರ್‌ ವೃತ್ತಿಯಲ್ಲಿರುತ್ತಾನೆ. ಅನ್ಯಾಯ ಆದಾಗಲೆಲ್ಲ ಪ್ರತಿಭಟಿಸುವುದು ಆತನ ಪ್ರವೃತ್ತಿ. ಮುಖ್ಯಮಂತ್ರಿ(ಅಂಬಿಕಾ) ಹಣೆಯಲ್ಲೂ ಆತ ಬೆವರು ಮೂಡಿಸುತ್ತಾನೆ. ಈ ನಡುವೆ ಮುಖ್ಯಮಂತ್ರಿಯ ಮಗಳು ವಿದ್ಯಾ(ಸಪ್ನಾ) ಆತನನ್ನು ಪ್ರೀತಿಸುತ್ತಾಳೆ. ಅವರಿಬ್ಬರ ನಿಶ್ಚಿತಾರ್ಥದ ದಿನವೇ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿ ಗಣೇಶನ ಬಂಧನವಾಗುತ್ತದೆ. ನಿಜಕ್ಕೂ ಆತ ಅಪರಾಧಿಯೆ? ಇದರಲ್ಲಿ ಮುಖ್ಯಮಂತ್ರಿಯ ಪಾತ್ರವೇನು ಎನ್ನುವುದು ಸಸ್ಪೆನ್ಸ್‌.

  ಮಧ್ಯಂತರಕ್ಕೆ 45 ನಿಮಿಷ ಮೊದಲೇ ಕತೆಯ ಕಡತ ಬಿಚ್ಚಿ ಕತೆಗೆ ಮತ್ತಷ್ಟು ತಿರುವು ನೀಡಿದರೆ, ಅಥವಾ ಮೊದಲಾರ್ಧದಲ್ಲಿ ನಾಯಕನ ಜನೋಪಕಾರಿ ದೃಶ್ಯಗಳನ್ನು ಮತ್ತಷ್ಟು ಸಶಕ್ತವಾಗಿ ಪೋಣಿಸಿದರೆ ಚಿತ್ರ ಬಲಗೊಳ್ಳುತ್ತಿತ್ತು. ಆದರೆ ಥ್ರಿಲ್ಲರ್‌ ಮಂಜು, ದಯಾಳ್‌ ಅವರ ಕತೆಗೆ ನಿರ್ದಯತೆಯಿಂದ ಫೈಟ್ಸ್‌ನ ಪೇಂಟಿಂಗ್‌ ಮಾಡಿದ್ದಾರೆ. ಆದರೆ ಮಾರಾಮಾರಿ ದೃಶ್ಯಗಳಲ್ಲಿ ಅವರು ಎಂದಿನಂತೆ ಸೈ ಎನಿಸಿಕೊಂಡಿದ್ದಾರೆ. ಕೆಲವು ದೃಶ್ಯಗಳಂತೂ ಹಾಲಿವುಡ್‌ನ ‘ಕ್ರೌಚಿಂಗ್‌ ಟೈಗರ್‌ ಹಿಡನ್‌ ಡ್ರಾಗನ್‌’ ನ್ನು ನೆನಪಿಸಿತ್ತದೆ. ಸ್ಟಂಟ್‌ ಸನ್ನಿವೇಶಗಳಿಗೆ ಜೆ.ಜಿ. ಕೃಷ್ಣ ಅವರ ಛಾಯಾಗ್ರಹಣ ಹೋಳಿಗೆ ಮೇಲಿನ ತುಪ್ಪ.

  ಪಾತ್ರ ಪೋಷಣೆಯ ಮಟ್ಟಿಗೆ ಇಷ್ಟವಾಗುವವರು ಮುಖ್ಯಮಂತ್ರಿ ಪಾತ್ರದ ಅಂಬಿಕಾ. ಕ್ಲೈಮ್ಯಾಕ್ಸ್‌ನಲ್ಲಿ ಪೊಲೀಸ್‌ ಅಧಿಕಾರಿಯಾಬ್ಬರು, ‘ಎಂಥಾ ಅದ್ಭುತ ಆ್ಯಕ್ಟಿಂಗ್‌ ಮೇಡಂ ನಿಮ್ಮದು. ಆರಂಭದಿಂದ ಕೊನೆಯವರೆವಿಗೂ ಎಂಥಾ ಆ್ಯಕ್ಟಿಂಗ್‌ ಮಾಡಿದ್ರಿ’ ಎನ್ನುತ್ತಾರೆ. ಈ ಹೇಳಿಕೆ ಚಿತ್ರದ ಹೊರಗೂ ಅನ್ವಯಿಸುತ್ತದೆ. ತೀರ ನೈಜ ಅಭಿನಯ ಅವರದು.

  ಭಾವಾಭಿವ್ಯಕ್ತಿಯಲ್ಲಿ ಅನುಪ್ರಭಾಕರ್‌ ಮತ್ತು ಎಕ್ಸ್‌ಪೋಸ್‌ನಲ್ಲಿ ಇಷಾ ಕೊಪ್ಪಿಕರ್‌ರನ್ನು ನೆನಪಿಸುವ ನಾಯಕಿ ಸ್ವಪ್ನಾ ಭರವಸೆ ಮೂಡಿಸಿದ್ದಾರೆ.

  ‘ಯುವ ಜನರ ಅಭ್ಯುದಯದ ಕಡೆಗೆ ಗಮನ ಹರಿಸದೆ ಹೋದ್ರೆ ಪೆನ್‌ ಹಿಡಿಯೋ ಕೈಯಲ್ಲಿ ಗನ್‌ ಬರತ್ತೆ’, ‘ರೈತ ನಕ್ಕರೆ, ಬಯಲು ನಗುತ್ತೆ’, ‘ನೀವು ರಾಜಕಾರಣಿಗಳು ಹೀಗೆ ಹುಸಿ ಹುಸಿ ಭರವಸೆ ಕೊಡ್ತಾ ಹೋದರೆ ಇತಿಹಾಸ ಸೇರುತ್ತೀರಿ, ಇತಿಹಾಸ ಬರೆಯೋದಿಲ್ಲ’.. ಅಲ್ಲಲ್ಲಿ ಇಂಥ ಸಂಭಾಷಣೆಗಳು ಶಿಳ್ಳೆ ಗಿಟ್ಟಿಸುತ್ತವೆ. ಆದರೆ ಎಂ.ಎಸ್‌.ರಮೇಶ್‌ರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿಯ ಸಂಭಾಷಣೆ ಸಪ್ಪೆ . ಸಾಯಿಕುಮಾರ್‌ರ ತಾಕತ್ತಿರುವುದೇ ಮ್ಯಾರಥಾನ್‌ ಸಂಭಾಷಣೆಯಲ್ಲಿ. ಆದರೆ ಇಲ್ಲಿ ಅಂಥ ಸಂಭಾಷಣೆಗಳ ಜಾಗವನ್ನು ಫೈಟ್‌ ಆಕ್ರಮಿಸಿಕೊಂಡಿದೆ. ಕೃಪಾಕರ್‌ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡುಗಳಲ್ಲಿ ಕೆಲವು ಹಿಂದೆಲ್ಲೋ ಕೇಳಿದಂತೆ ಭಾಸವಾಗುತ್ತದೆ. ಆದರೆ, ‘ಮಸ್ತ್‌ ಮಸ್ತ್‌ ಗಣಪತಿಯೆ ಕೋಟಿ ವಂದನೆ’ ಎಂಬ ಹಾಡು ಪರ್ಯಾಯ ನಾಡಗೀತೆಯಾಗುವ ಎಲ್ಲ ಲಕ್ಷಣ ಹೊಂದಿದೆ!

  ಉಳಿದ ಗುಣಾವಗುಣಗಳೇನೇ ಇರಲಿ, ಫೈಟ್‌ ಪ್ರಿಯರು ನೋಡಲೇಬೇಕಾದ ಚಿತ್ರ ಇದು.

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X