»   » ಗುಂಡಿನ ಚಕಮಕಿ, ಸೆಂಟಿಮೆಂಟ್‌ ಸಪ್ಪಳ

ಗುಂಡಿನ ಚಕಮಕಿ, ಸೆಂಟಿಮೆಂಟ್‌ ಸಪ್ಪಳ

Subscribe to Filmibeat Kannada
  • ಮಹಾಂತೇಶ ಬಹಾದುಲೆ
ಹೆಸರೇ ಹೇಳುವಂತೆ ಇಲ್ಲಿ ಗುಂಡಿನ ಸುರಿಮಳೆ ಇದೆ. ಆ ಸಪ್ಪಳದ ನಡುವೆಯೇ ತಾಯಿ-ಮಗನ ಸೆಂಟಿಮೆಂಟ್‌ ಇದೆ. ನಿಷ್ಠೆ, ಪ್ರಾಮಾಣಿಕತೆಯನ್ನು ನಾವು ಉಳಿಸಿಕೊಂಡರೆ ಅವೇ ಮುಂದೊಂದು ದಿನ ನಮ್ಮನ್ನು ರಕ್ಷಿಸುತ್ತವೆ ಎಂಬ ನೀತಿ ಪಾಠವಿದೆ. ಇಷ್ಟೆಲ್ಲ ಸಂಗತಿಗಳನ್ನು ಎನ್‌ಕೌಂಟರ್‌ ದಯಾನಾಯಕ್‌ ಚಿತ್ರದಲ್ಲಿ ಹಿಡಿದಿರುವ ಸಫಲ ಯತ್ನ ಮಾಡಿದ್ದಾರೆ ನಿರ್ದೇಶಕ ಡಿ.ರಾಜೇಂದ್ರಸಿಂಗ್‌ ಬಾಬು.

ಪೋಲೀಸ್‌ ಅಧಿಕಾರಿಯ ಜೀವನ ಆಧರಿಸಿ ಚಿತ್ರ ಮಾಡುವುದು ಹೊಸ ಪ್ರಯತ್ನವೇನಲ್ಲ. ಆದರೆ ಈ ಸಿನಿಮಾ ಕೆಲವು ಅಂಶಗಳಿಂದಾಗಿ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ವಾಸ್ತವಾಂಶಗಳನ್ನು ಆಧರಿಸಿ ಕಥೆ ಹೆಣೆಯಲಾಗಿದ್ದರೂ, ಮೂಲಕಥೆಗೆ ಧಕ್ಕೆ ಬಾರದಂತೆ ಕೆಲವು ಕಾಲ್ಪನಿಕ ಸನ್ನಿವೇಶಗಳನ್ನು ಸೇರಿಸಲಾಗಿದೆ. ಅವು ನೈಜ ಕಥೆಗೆ ಇನ್ನಷ್ಟು ಸಪೋರ್ಟಿವ್‌ ಆಗಿ ಕಾಣಿಸಿಕೊಳ್ಳುವಂತೆ ಮಾಡುವಲ್ಲಿ ಕಥೆಗಾರ ಮೈಸೂರು ಹರೀಶ್‌ ಅವರ ಜಾಣ್ಮೆ ಇದೆ.

ಕಥಾನಾಯಕ ದಯಾನಾಯಕ್‌ ಮಂಗಳೂರು ಭಾಗದವರಾದರೂ ಅವರ ಕಾರ್ಯಕ್ಷೇತ್ರ ಮುಂಬಯಿ. ಆದರೆ ಕನ್ನಡಿಗರ ಭಾವನೆಗಳಿಗೆ ಹತ್ತಿರವಾಗಲೆಂದು ಚಿತ್ರದಲ್ಲಿ ಅವರ ಕರ್ಮಭೂಮಿಯನ್ನು ಮಂಗಳೂರಿಗೆ ಸ್ಥಳಾಂತರಿಸಲಾಗಿದೆ. ‘ಖಂಡವಿದೆಕೊ ಮಾಂಸವಿದೆಕೊ’ ಎಂಬಂಥ ಶರೀರವುಳ್ಳ ಸಚಿನ್‌, ಪೋಲೀಸ್‌ ಅಧಿಕಾರಿ ದಯಾನಾಯಕ್‌ ಪಾತ್ರಕ್ಕೆ ಪುಷ್ಠಿ ತುಂಬಿದ್ದಾರೆ. ಸೆಣಸಾಟದ ದೃಶ್ಯಗಳಲ್ಲಿ ಸಿಂಧೂರ ಲಕ್ಷ್ಮಣನಂತೆ ಕಾಣಿಸಿಕೊಳ್ಳುವ ಅವರು, ಅಮ್ಮನ ಎದುರು ಮಾತ್ರ ಮುಗ್ಧ ಮಗು.

ಅನವಶ್ಯಕ ವಿಷಯಗಳನ್ನು ಪ್ರಸ್ತಾಪಿಸದೇ ಅವಶ್ಯಕ ಸನ್ನಿವೇಶಗಳನ್ನಷ್ಟೇ ಹೆಕ್ಕಿ ತೆಗೆದುಕೊಳ್ಳಲಾಗಿದೆ. ಬಾಲ್ಯದಲ್ಲಿ ದಯಾನಾಯಕ್‌ ಅವರ ಸಂಕಷ್ಟದ ಸ್ಥಿತಿ. ಓದಲೇ ಬೇಕೆಂಬ ಹಠದಿಂದ ಬೆಂಗಳೂರಿಗೆ ಬರುವುದು. ಅಲ್ಲೊಬ್ಬ ನಿಷ್ಠಾವಂತ ಪೋಲೀಸ್‌ ಅಧಿಕಾರಿ(ಅನಂತನಾಗ್‌)ಯ ಪರಿಚಯ. ಅವರ ಪ್ರೋತ್ಸಾಹದಿಂದಲೇ ಮುಂದೆ ಪೋಲೀಸ್‌ ಅಧಿಕಾರಿಯಾಗುವ ದಯಾನಾಯಕ್‌, ಆ ಅಧಿಕಾರಿಯ ಸಲಹೆಯನ್ನು ದೇವರ ಆದೇಶದಂತೆ ಪಾಲಿಸುವುದು ಕಥೆಯ ಬೆನ್ನೆಲುಬಿನಂತಿದೆ.

ತಮ್ಮ ಹುಟ್ಟೂರಿನಲ್ಲಿ ಶಾಲೆ ತೆರೆದು ಸಮಾಜ ಸೇವೆಗೆ ಮುಂದಾಗುವ ದಯಾನಾಯಕ್‌, ರಾಜಕಾರಣಿಗಳ ಕುತಂತ್ರದಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಹಾಗೂ ಸಮಾಜದ ಬೆಂಬಲದಿಂದಲೇ ಆರೋಪದಿಂದ ಪಾರಾಗುವ ದೃಶ್ಯ ಚೆನ್ನಾಗಿ ಮೂಡಿಬಂದಿದೆ. ಇಂಥವೇ ಸಂಚಿನಿಂದ ಅವರ ಹತ್ಯೆಗೆ ಯತ್ನ ನಡೆದಾಗ ಅದನ್ನು ಹತ್ಯೆಗಾರರಿಗೆ ತಿರುಗು ಬಾಣವಾಗಿಸುವ ಮತ್ತು ಸರಕಾರದ ಬೆಂಬಲದಿಂದಲೇ ರೌಡಿಗಳನ್ನು ಮಟ್ಟ ಹಾಕುವ ಸನ್ನಿವೇಶಗಳು ಪ್ರೇಕ್ಷಕರನ್ನು ಫೂಲ್‌ ಮಾಡುತ್ತವೆ. ಬಿಗಿ ನಿರೂಪಣೆಯಿಂದ ನಿರ್ದೇಶಕ ಬಾಬು ಎಲ್ಲಿಯೂ ಬೋರ್‌ ಹೊಡೆಸುವುದಿಲ್ಲ. ಪ್ರದ್ಯುಮ್ನ ಕುಮಾರ್‌ ಸಾಹಸ ನಿರ್ದೇಶನ ಮೆಚ್ಚುಗೆಯನ್ನು ಪಡೆಯುತ್ತದೆ. ದುಬೈನಲ್ಲಿ ನಡೆಯುವ ಫೈಟಿಂಗ್‌ ದೃಶ್ಯಗಳು ಚಿತ್ರಕ್ಕೆ ತಾಕತ್ತು ತಂದಿವೆ. ಖಳನಾಯಕನಾಗಿ ಮಹೇಶ್‌ ಮಾಂಜ್ರೇಕರ್‌ ಮಿಂಚಿದ್ದಾರೆ.

ಎಡಿಟಿಂಗ್‌ಗೆ ಅವಕಾಶ ಇಲ್ಲದಂತೆ ಮೈಸೂರು ಹರೀಶ್‌ ಕಥೆ ಬರೆದಿದ್ದಾರೆ. ಇದು ಅವರಿಗೆ 10ನೇ ಚಿತ್ರ. ಇದರೊಂದಿಗೆ ವಾಸ್ತವ ಅಂಶಗಳನ್ನು ಆಧರಿಸಿ ವಿಶಿಷ್ಟವಾಗಿ ಕಥೆ ಬರೆಯುವವರು ಕನ್ನಡದಲ್ಲೂ ಇದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಾಯಕಿ ಸ್ಫೂರ್ತಿ ಚೆಲುವು ಚಿತ್ರಕ್ಕೆ ಸ್ಫೂರ್ತಿದಾಯಕವಾಗೇ ಇದೆ. ಎಲ್ಲ ರೀತಿಯ ಮಸಾಲೆಗಳನ್ನು ಅರೆದು ಹಾಕಿದ ಮೇಲೂ ಇದೊಂದು ಸದಭಿರುಚಿಯ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಅಂಥದೊಂದು ಖುಷಿ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಮೊಗದಲ್ಲಿದೆ.

(ಸ್ನೇಹಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada