»   » ಊ ಲಾ ಲಾ : ಚಿಗುರಿದ ಕನಸಿನೊಂದಿಗೆ ಏಕ್‌ ಜಾಲಿ ರೈಡ್‌...

ಊ ಲಾ ಲಾ : ಚಿಗುರಿದ ಕನಸಿನೊಂದಿಗೆ ಏಕ್‌ ಜಾಲಿ ರೈಡ್‌...

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಪ್ರಪೋಸ್‌ ಮಾಡಿಸಿಕೊಂಡವನು ಸಾರಿ ಅಂದನಾ ? ಪ್ರೀತಿಸಿದವಳು ಎರಡೂ ಕೈ ಎತ್ತಿ ಬಿಟ್ಟಳಾ ? ಪರಿಹಾರ ಸಿಂಪಲ್‌. ಎರಡು ಚಮಚ ಕಣ್ಣೀರು ಸುರಿಸಿ, ನಾಲ್ಕು ದಮ್‌ ಸಿಗರೇಟು ಎಳೆದು, ಎಂಟು ಗುಟುಕು ವಿಸ್ಕಿ ಜಮಾಯಿಸಿದರೆ ಆತ /ಆಕೆ ಮನಸ್ಸಿನಿಂದ ಬುರ್‌ಬುಶ್‌. ಎರಡನೇ ದಿನಕ್ಕೆ ಮತ್ಯಾರೋ ಹಲ್ಲು ಕಿರಿದರೆ ಅವನ ಎದೆಯಲ್ಲಿ ಜೋಗದ ಸಿರಿ. ಅವಳ ಕಣ್ಣಲ್ಲಿ ಸುರಸುರಬತ್ತಿ. ಜಗತ್ತಿನ ತುಂಬಾ ಹೋಳೀ ಹಬ್ಬ. ಇದು ಇಂದಿನ ಹರೆಯದವರ ಪಾಲಿಸಿ. ಮೈ ಮುಚ್ಚಿದವಳನ್ನೇ ಮದುವೆಯಾಗಬೇಕು. ಮನಸ್ಸು ಕೊಟ್ಟವನಿಗೇ ಮೈ ಕೊಡಬೇಕು. ಬೈಕ್‌ ಕಲಿಸಿದವನ ಕೈಗೇ ಬದುಕು ಇಕ್ಕಬೇಕು. ‘ಅದೆಲ್ಲಾ ಬುಲ್‌ಶಿಟ್‌ ಕಣ್ರೀ. ಜೀವ ಇರೋದೆ ಇನ್ನು ಮೂವತ್ತು ವರ್ಷ. ಅದರಲ್ಲಿ ಒಬ್ಬನಿ/ಳಿಗಾಗಿ ಎಲ್ಲಾ ಬಿಡೋಕ್ಕಾಗುತ್ತಾ ? ಅಷ್ಟಕ್ಕೂ ಬಿಟ್ಟು ಏನು ಸಾಧಿಸುತ್ತೇವೆ ?’. ನಿರ್ದೇಶಕ ಹೇಮಂತ್‌ ಹೆಗ್ಡೆ ಜಾಣ. ಜತೆಗೆ ಆಧುನಿಕ ಮನಸ್ಸಿನ ಹುಡುಗ ಅನ್ನುವುದಕ್ಕೆ ಚಿತ್ರದ ಕತೆಯೇ ಸಾಕ್ಷಿ. ಇಂದಿನ ಹುಡುಗ ಹುಡುಗಿಯರ ಮನಸ್ಸುಗಳನ್ನು ಅವರು ಸೂಕ್ಷ್ಮವಾಗಿ ಅರಿತಿದ್ದಾರೆ. ಅವರ ಜೀವನ ಶೈಲಿಯನ್ನೇ ಕತೆ ಮಾಡಿ ಅದಕ್ಕೆ ಗಾಂಧಿನಗರದ ರಮ್‌ ಸುರಿದಿದ್ದಾರೆ.

ಇದನ್ನು ಚತುಷ್ಕೋನ ಕತೆ ಎನ್ನಲು ಅಡ್ಡಿಯಿಲ್ಲ . ಹುಡುಗ- ಹುಡುಗಿ ಬರಿ ‘ಫ್ರೆಂಡ್ಸ್‌’ ಆಗೋಕೆ ಯಾಕೆ ಸಾಧ್ಯವಿಲ್ಲ ಅನ್ನುವ ಹುಡುಗಿಯೇ ಆತ ಮಳೆಯಲ್ಲಿ ನೆನೆದು ಸಮೋಸ ತಂದುಕೊಟ್ಟಾಗ ‘ಕುಸಿ’ಯಾಗುತ್ತಾಳೆ. ಆದರೆ ಅವನು ಇನ್ನೊಬ್ಬಳ ಜತೆ ಗಾಡಿ ಹತ್ತಿ ಸುತ್ತಿದಾಗ ಬಿಸಿಯಾಗುತ್ತಾಳೆ. ತಮಾಷೆ ಅಂದರೆ ಅಥವಾ ನಿಜವೆಂದರೆ ಅವಳನ್ನು ಮದುವೆಯಾಗಬೇಕಿದ್ದ ಹುಡುಗ ಇವಳ ಬಗ್ಗೆ ಹಾಗೇ ಅಸೂಯೆಪಟ್ಟಿರುತ್ತಾನೆ. ಅದನ್ನೇ ಅನುಮಾನವೆಂದು ತಿಳಿದು ಅವನ ಸಂಬಂಧಕ್ಕೆ ಕತ್ತರಿ ಹಾಕಿರುತ್ತಾಳೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಪ್ರೇಮಂಟೆ ಇದೇರಾ ?

ಹೇಮಂತ್‌ಗೆ ಇದು ಪ್ರಥಮ ನಿರ್ದೇಶನ. ಅದಕ್ಕವರು ಸ್ವಂತ ಕತೆಯನ್ನೇ ಆರಿಸಿಕೊಂಡಿದ್ದಾರೆ. ಆದರೆ ಅದೇ ಸಿದ್ಧ ಮಾದರಿಗೆ ಜೋತು ಬಿದ್ದಿದ್ದಾರೆ. ಒಂದು ಕಾಲೇಜು ಕ್ಯಾಂಪಸ್ಸು . ಅಲ್ಲಿ ಹುಡುಗಿಯರನ್ನು ಕಾಡುವ ಹುಡುಗರ ಟೋಳಿ. ಮಾಮೂಲಿ ಜೋಕು, ಪೆದ್ದ ಮಾಸ್ತರು, ಸ್ಟ್ರಿಕ್ಟು ಪ್ರಿನ್ಸಿಪಾಲು. ಎರಡನೇ ಭಾಗದಲ್ಲಿ ಕತೆ ಶುರು. ಬೀಗಿದ್ದರೂ ಇದು ಇಷ್ಟವಾಗುತ್ತದೆ. ಹೇಮಂತ್‌ ಮೊದಲ ಸಲ ಎಂಬ ಕಾರಣಕ್ಕೆ ರಿಯಾಯಿತಿ ಬೇಡುವುದಿಲ್ಲ. ಒಂದು ಕಮರ್ಷಿಯಲ್‌ ಚಿತ್ರಕ್ಕೆ ಏನೇನು ಎಷ್ಟೆಷ್ಟು ಬೇಕೆನ್ನುವುದು ಅವರಿಗೆ ಗೊತ್ತು. ಅಷ್ಟಷ್ಟನ್ನೇ ಪ್ರೇಕ್ಷಕರಿಗೆ ಕಷ್ಟವಾಗದಂತೆ ಸೇರಿಸಿದ್ದಾರೆ. ಬಣ್ಣಗಳನ್ನು ಹೇಗೆ ಬಳಸಿದರೆ ಮೋಹ ಹುಟ್ಟಿಸಬಹುದು ಎಂದು ತೋರಿಸಿದ್ದಾರೆ. ಸಂಭಾಷಣೆಯಲ್ಲಿ ಹೊಸತನವಿದ್ದರೂ ಸ್ವಾನುಭವ ಇದ್ದರೂ ಅಸೂಯೆ ಪ್ರೇಮ ಕುರಿತ ಮಾತುಗಳಲ್ಲಿ ಇನ್ನಷ್ಟು ಆಳ ಬೇಕಿತ್ತು. ಎರಡನೇ ಭಾಗದ ಚಿತ್ರಕತೆಗೆ ಮತ್ತಷ್ಟು ಬಿಗಿತನ ತೋರಿಸಬೇಕಿತ್ತು. ಪರ್ವಾಗಿಲ್ಲ ಬಿಡಿ. ಮುಂದಿನ ಸಲ ಸರಿ ಮಾಡ್ಕೋತಾರೆ....

ಎರಡು ಹಾಡುಗಳು ತನ್ನ ವೇಗದ ರಿಧಂನಿಂದಲೇ ಗುಂಗು ಹಿಡಿಸುತ್ತವೆ. ಉಳಿದವು ಯಾಕೋ ನಾಟುವುದೇ ಇಲ್ಲ. ಕೃಷ್ಣಕುಮಾರ್‌ ಛಾಯಾಗ್ರಹಣದಲ್ಲಿ ಎಲ್ಲವೂ ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು... ಕಲಾ ನಿರ್ದೇಶಕ ಒಂದಿಡೀ ಭಾಗವನ್ನು ಭುಜದ ಮೇಲೆ ಹೊತ್ತುಕೊಂಡಿದ್ದಾನೆ. ಹೊಸ ಹೀರೋ ಕೃಷ್ಣ ಮೋಹನ್‌ ಪರ್ವಾಗಿಲ್ಲ. ಇನ್ನೊಬ್ಬ ಹೀರೋ ಆರ್ಯಪ್ರಸಾದ್‌ಗೆ ಹೋಲಿಸಿದರೆ ಮತ್ತಷ್ಟು ಚೆಂದವೆನಿಸುತ್ತಾನೆ. ರಾಧಿಕಾ ತೆರೆ ಮೇಲೆ ಕಾಣಿಸಿದರೆ ಸಿಳ್ಳೆ ಬೀಳುತ್ತವೆ. ಪಕ್ಕದ ಮನೆ ಹುಡುಗಿಯಂತೆ ಹೊಟ್ಟೆ ಕಿಚ್ಚು ಪಡುವ ಇವಳ ಮುನಿಸನ್ನು ನೋಡೋದೇ ಒಂದು ಸಡಗರ. ಆದರೆ ಇವರ ಕುಣಿತ ನೋಡಿದರೆ ತಲೆ ಗಿರ ಗಿರ... ಗಾಂಪರ ಗುಂಪಿನ ರಾಜು ಅನಂತ ಸ್ವಾಮಿ ಫುಲ್‌ಸ್ಕೋರ್‌ ಮಾಡಿದ್ದಾನೆ. ಜಗ್ಗೇಶ್‌ ಮ್ಯಾನರಿಸಂ ನೆನಪಿಸುವ ನಾಗಶೇಖರ್‌ ಸ್ವಂತಿಕೆಯತ್ತ ಹೆಜ್ಜೆ ಹಾಕುವುದು ಒಳ್ಳೆಯದು.

ತೆಲುಗಿನಲ್ಲಿ ಯಶಸ್ವಿಯಾದ ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್‌ ಮಾಡುತ್ತಿದ್ದ ರಾಮೋಜಿ ರಾವ್‌ ಬಹುಶಃ ಮೊದಲ ಬಾರಿಗೆ ಸ್ವಮೇಕ್‌ ಚಿತ್ರಕ್ಕೆ ಕೈ ಹಾಕಿದ್ದಾರೆ. ಕನ್ನಡದ ಹುಡುಗನಿಗೆ ನಿರ್ದೇಶನ ವಹಿಸಿದ್ದಾರೆ. ಹೇಮಂತ್‌ ಕೂಡ ಅದರಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಇದು ಅವರ ನಿರ್ದೇಶನ ಸಾಮರ್ಥ್ಯಕ್ಕೆ ಸವಾಲಿಲ್ಲದ ಕತೆ. ಕಂಗ್ರಾಟ್ಸ್‌ ಹೇಳಿದರೂ ಅದು ಫಿಫ್ಟಿ : ಫಿಫ್ಟಿ ಅಷ್ಟೇ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada