twitter
    For Quick Alerts
    ALLOW NOTIFICATIONS  
    For Daily Alerts

    ಜಾಕ್‌ಪಾಟ್‌ : ಇದೂ ಒಂಥರಾ ‘ಕ್ರಾಂತಿಕಾರಕ’ ಸಿನಿಮಾ!

    By Staff
    |


    ಗಂಡು ಹೆಣ್ಣಾಗಿ ಗಂಡಿನಂತೆ ಆಡುವ ವಸ್ತುವುಳ್ಳ ಶಂಕರನಾಗ್‌ರ ‘ಸೀತಾರಾಮು’ ವೈಜ್ಞಾನಿಕವಾಗಿ ದಶಕಗಳಷ್ಟು ಮುಂದಿದ್ದರೆ, ಜಾಕ್‌ಪಾಟ್‌ ಶತಮಾನದಷ್ಟು ಹಿಂದಿದೆ!

    • ಚೇತನ್‌ ನಾಡಿಗೇರ್‌
    ನಿಮಗೆ 80ರ ದಶಕದ ‘ಕ್ರಾಂತಿಕಾರಕ’ ಚಿತ್ರ ‘ಸೀತಾರಾಮು’ ನೆನಪಿರಬಹುದು.

    ಕ್ರಾಂತಿಕಾರಕ ಏಕೆಂದರೆ, ಆ ಚಿತ್ರದಲ್ಲಿ ರಾಮು ಸತ್ತ ನಂತರ ಅವನ ಮೆದುಳನ್ನು, ಸೀತಾ ತಲೆಗೆ ಜೋಡಿಸಲಾಗುತ್ತದೆ. ನಂತರದ್ದೆಲ್ಲ ಉಲ್ಟಾಪಲ್ಟಾ ಕತೆ. ದೇಹ ಸೀತಾದ್ದೇ ಆದರೂ ನಡವಳಿಕೆ ರಾಮೂದು. ರಾಮುವಿನಂತೆ ಸೀತಾ ಸಿಗರೇಟು ಸೇದುತ್ತಾಳೆ, ಹೊಡೆದಾಡುತ್ತಾಳೆ, ತನಗಾಗದವರನ್ನು ಹಂತಹಂತವಾಗಿ ಮಟ್ಟಹಾಕುತ್ತಾಳೆ. ಏನೇ ಇರಲಿ, ವೈಜ್ಞಾನಿಕವಾಗಿ ಆ ಚಿತ್ರ ಭವಿಷ್ಯದಲ್ಲಿ ನಡೆಯಬಹುದಾದುದನ್ನು ತೋರಿಸಿದ್ದರಿಂದ ಚಿತ್ರ ಕ್ರಾಂತಿಕಾರಕ ಎನ್ನಿಸಿಕೊಂಡಿತ್ತು.

    ‘ಜಾಕ್‌ಪಾಟ್‌’ ಕೂಡ ಒಂಥರಾ ‘ಕ್ರಾಂತಿಕಾರಕ’ ಚಿತ್ರ. ಇಲ್ಲೂ ಗಂಡು, ಹೆಣ್ಣಾಗುತ್ತಾಳೆ. ಹೆಣ್ಣಾಗಿದ್ದುಗೊಂಡು ಗಂಡಿನಂತೆ ಆಡುತ್ತಾಳೆ. ಅದು ವಿಜ್ಞಾನದಿಂದಲ್ಲ, ಮಾಟಮಂತ್ರದಿಂದಾಗಿ. ‘ಸೀತಾರಾಮು’ ವೈಜ್ಞಾನಿಕವಾಗಿ ದಶಕಗಳಷ್ಟು ಮುಂದಿದ್ದರೆ, ಜಾಕ್‌ಪಾಟ್‌ ಶತಮಾನದಷ್ಟು ಹಿಂದಿದೆ.

    ಅವರಿಬ್ಬರು ಸ್ನೇಹಿತರು. ಅದು ಸ್ನೇಹದ ವಿಷಯಕ್ಕೆ ಮಾತ್ರ. ಪ್ರೀತಿಯ ವಿಷಯದಲ್ಲಿ ಅವರಿಬ್ಬರೂ ಪ್ರತಿಸ್ಪರ್ಧಿಗಳು. ಏಕೆಂದರೆ ಇಬ್ಬರೂ ಒಬ್ಬಳನ್ನೇ ಪ್ರೀತಿಸುತ್ತಾರೆ. ಅವಳೊಂದಿಗೆ ಮಾತಾಡಲು, ಓಡಾಡಲು ಹಪಹಪಿಸುತ್ತಿರುತ್ತಾರೆ. ಆದರೆ, ಅವಳಿಗೆ ಮಾತ್ರ ಎಂದಿನಂತೆ ನಾಯಕನನ್ನು ಕಂಡರೆ ಬಹಳ ಇಷ್ಟ. ಇದು ಇನ್ನೊಬ್ಬನಿಗೆ ಗೊತ್ತಾಗುತ್ತದೆ.

    ಸರಿ, ನಾಯಕನನ್ನು ನೇರವಾಗಿ ಮುಗಿಸುವ ಬದಲು ಹೊಸ ಸ್ಕೆಚ್‌ ಹಾಕುತ್ತಾನೆ. ಪ್ರಖ್ಯಾತ ಮಾಂತ್ರಿಕ ಸಾಧು ಮಹಾರಾಜ್‌ನಿಂದ ಮಾಟ ಮಂತ್ರ ಮಾಡಿಸಿ ನಾಯಕನನ್ನು ಹೆಣ್ಣಾಗಿ ಮಾಡಿಬಿಡುತ್ತಾರೆ. ಸರಿ, ರಾತ್ರಿ ಮಲಗಿದ್ದ ಗಂಡು ಬೆಳಗ್ಗೆ ಹೆಣ್ಣಾಗಿ ಬಿಟ್ಟರೆ ಏನೇನು ಸಮಸ್ಯೆ ಎದುರಿಸಬಹುದು, ಮತ್ತೆ ವಾಪಸು ಗಂಡು ಹೇಗಾಗಬಹುದು ಎಂಬ ಕುತೂಹಹವಿದ್ದರೆ ‘ಜಾಕ್‌ಪಾಟ್‌’ ನೋಡಬಹುದು.

    ಕಳೆದ ವರ್ಷ ತಾನೇ ಹಿಂದಿಯಲ್ಲಿ ‘ಮಿಸ್ಟರ್‌ ಯಾ ಮಿಸ್‌’ ಎಂಬ ಇದೇ ಮಾದರಿಯ ಚಿತ್ರ ಬಂದಿತ್ತು. ಅದಕ್ಕೂ ಮುನ್ನ ‘ಜಂಬಲಕಡಿ ಪೊಂಬ’ ಎಂಬ ಚಿತ್ರ ಬಂದಿತ್ತು. ಆ ಚಿತ್ರಗಳ ಹಾಗೆ ನಿರ್ದೇಶಕ ನಿರಂಜನ್‌ ಗುರಿ ಕೂಡ ಕಾಮಿಡಿ. ಲಾಜಿಕ್‌ ಇಲ್ಲದಿದ್ದರೂ ಮ್ಯಾಜಿಕ್‌ ಇರಬೇಕೆಂದು ಓಬಿರಾಯನ ಕಾಲದ ಮಾಟಮಂತ್ರ ತಂದು ನಗಿಸುವುದಕ್ಕೆ ಯತ್ನಿಸಿದ್ದಾರೆ. ಆದರೆ, ಜಾಕ್‌ಪಾಟ್‌ ವಿಶೇಷ, ಅದು ಅತ್ಲಾಗೆ ಕಾಮಿಡಿಯೂ ಅಲ್ಲ, ಇತ್ಲಾಗೆ ‘ಸೀತಾರಾಮು’ ತರಹ ಗಂಭೀರ ಚಿತ್ರವೂ ಅಲ್ಲ. ಆ ಮಟ್ಟಿಗಿದೊಂದು ಬ್ರಿಡ್ಜ್‌ ಸಿನಿಮಾ. ಹಾಗಾಗಿ ಜಾಕ್‌ಪಾಟ್‌ ನಗಿಸುವುದೂ ಇಲ್ಲ, ಅಳಿಸುವುದೂ ಇಲ್ಲ, ಸುಮ್ನೆ ಕುಂದ್ರಾಕೂ ಬಿಡುವುದಿಲ್ಲ.

    ವಿಶೇಷವೆಂದರೆ, ಚಿತ್ರದಲ್ಲಿ ಬಹಳಷ್ಟು ಗೆಸ್ಟ್‌ ಕಲಾವಿದರಿದ್ದಾರೆ. ಒಂದು ಹಾಡಿಗೆ ಡೈಸಿ ಬರುತ್ತಾರೆ. ಇನ್ನೊಂದರಲ್ಲಿ ಸುನೀಲ್‌ ಕುಣಿಯುತ್ತಾರೆ, ಮತ್ತೊಂದರಲ್ಲಿ ಸುದೀಪ್‌ ಕುಣಿಯುತ್ತಾರೆ. ಈ ಮೂವರನ್ನೂ ಬಿಟ್ಟರೆ ಧ್ಯಾನ್‌ ಹಾಗೂ ಅಂತರಾ ಬಿಸ್ವಾಸ್‌ ಕೂಡಾ ಒಂಥರಾ ಅತಿಥಿ ಕಲಾವಿದರೇ, ಏಕೆಂದರೇ ಮೊದಲಾರ್ಧದ ಧ್ಯಾನ್‌, ದ್ವಿತೀಯಾರ್ಧದ ಅಂತರ ಆಗುತ್ತಾಳೆ. ಹಾಗಾಗಿ ಅಲ್ಲಿ ಅವರಿಲ್ಲ, ಇಲ್ಲಿ ಇವರಿಲ್ಲ. ಕಾಣಿಸಿಕೊಳ್ಳುವುದು ಬರೀ ಅರ್ಧ ಚಿತ್ರದಲ್ಲಾದರೂ, ಅಂತರಾ ಲವಲವಿಕೆಯಿಂದ ಅಭಿನಯಿಸಿದ್ದಾರೆ. ಅದೇ ಮಾತು ಧ್ಯಾನ್‌ಗೆ ಹೇಳಲು ಬೇಜಾರಾಗುತ್ತದೆ.

    ಚಿತ್ರದುದ್ದಕ್ಕೂ ಶುಭ ಗೊಂಬೆಯಂತೆ ಕಾಣಿಸುತ್ತಾರೆ. ಚಿಕ್ಕ ಪಾತ್ರವಾದರೂ ಹರ್ಷ ಚೊಕ್ಕದಾಗಿ ನಟಿಸಿದ್ದಾರೆ. ಮಾಂತ್ರಿಕನಾಗಿ ಸಾಧು ಕೋಕಿಲ ಅಭಿನಯ ಭಯಂಕರ.

    ಚಿತ್ರಕ್ಕೆ ಒಬ್ಬರಲ್ಲ ಆಲ್ವಿನ್‌-ಹಮೀದ್‌-ಕೃಪಾಕರ್‌ ಎಂಬ ಮೂರು ಜನ ಸಂಗೀತ ನಿರ್ದೇಶಕರಿದ್ದಾರೆ. ಅದರಲ್ಲಿ ‘ಸಖ-ಸಖ’ ಹಾಡು ಚೆನ್ನಾಗಿದೆ. ಆದರೂ ನಿಜವಾಗಲೂ ಖುಷಿ ಕೊಡುವುದು ‘ಸೀತಾರಾಮು ’ವಿನ ‘ಒಂದೇ ಒಂದು ಆಸೆಯು...’ ರೀಮಿಕ್‌ ಹಾಡು. ಪಿ.ಕೆ.ಎಚ್‌.ದಾಸ್‌ ಕ್ಯಾಮೆರಾದಲ್ಲಿ ಹಿಂದಿನ ಚಿತ್ರಗಳ ಜಾದೂವಿಲ್ಲ.

    Post your views

    Wednesday, April 24, 2024, 11:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X