»   » ‘ಒಳ್ಳೆ ಫಿಗರ್‌ ಕಣಮ್ಮ’ ಎನ್ನುವ ಡೈಲಾಗ್‌ ಹುಡುಗರ ಬಗ್ಗೆ ಹುಡುಗಿ ಹೇಳಿದರೆ ಹೇಗಿರುತ್ತೆ ಕಲ್ಪಿಸಿಕೊಳ್ಳಿ. ಅದು ಸಾಧ್ಯವಾಗದಿದ್ದರೆ ‘ಜೂಟ್‌’ ನೋಡಿ. ಇದು ಅಪ್ಪಟ ಸ್ವಮೇಕ್‌ ಚಿತ್ರ !

‘ಒಳ್ಳೆ ಫಿಗರ್‌ ಕಣಮ್ಮ’ ಎನ್ನುವ ಡೈಲಾಗ್‌ ಹುಡುಗರ ಬಗ್ಗೆ ಹುಡುಗಿ ಹೇಳಿದರೆ ಹೇಗಿರುತ್ತೆ ಕಲ್ಪಿಸಿಕೊಳ್ಳಿ. ಅದು ಸಾಧ್ಯವಾಗದಿದ್ದರೆ ‘ಜೂಟ್‌’ ನೋಡಿ. ಇದು ಅಪ್ಪಟ ಸ್ವಮೇಕ್‌ ಚಿತ್ರ !

Subscribe to Filmibeat Kannada

ಇದೊಂದು ಅಪ್ಪಟ ಸ್ವಮೇಕ್‌ ಚಿತ್ರ. ಎಲ್ಲ ವಿಭಾಗದಲ್ಲೂ ಏನೋ ಮಾಡಬೇಕೆಂದೇ ಗೋವಿಂದು ಹೊರಡುತ್ತಾರೆ. ಆದರೆ ವಿರಾಮದ ನಂತರ ಗಾಂಧಿನಗರದ ಮಾಮೂಲಿ ಶೈಲಿಗೆ ಇಳಿಯುತ್ತಾರೆ. ಅದಕ್ಕಾಗಿ ಸೆಂಟಿಮೆಂಟಿಗೆ ಜೋತು ಬಿದ್ದಿದ್ದಾರೆ. ನಾಯಕ ನಾಯಕಿಯನ್ನು ತಿರಸ್ಕರಿಸಿದಾಗ ಕತೆಗೊಂದು ಹೊಸ ಹೊಳಪು ಸಿಗುತ್ತದೆ. ಹಾಗಂತ ತಿಳಿದಾಗಲೇ ಅಂತಿಮವಾಗಿ ಅವರು ಜೊತೆಯಾಗುತ್ತಾರೆ. ಪ್ರೀತಿಗೆ ಜೈ ಅಂತಾರೆ. ಜೂಟ್‌ ಅಂತಾರೆ. ಕೆಲವು ದೃಶ್ಯ, ಕೆಲವು ಮಾತುಗಳಲ್ಲಿ ಉಪೇಂದ್ರನ ಛಾಯೆ ಇದೆ. ಆದರದು ವಿಕೃತವಾಗುವುದಿಲ್ಲ ಅನ್ನೋದು ಸಮಾಧಾನಕರ ಸಂಗತಿ.

ಕೊನೆಯ ಅರ್ಧ ಗಂಟೆಯಲ್ಲಿ ನಾಯಕ ಸೌರವ್‌ ತಮ್ಮೊಳಗಿನ ಕಲಾವಿದನ ಪರಿಚಯ ಮಾಡಿಸಿದ್ದಾರೆ. ಸ್ನೇಹಿತನ ಬಳಿ ನಿಂತು ಆರ್ದ್ರವಾಗಿ ಮಾತಾಡುವಾಗ ಆ ಪಾತ್ರವೇ ತಾವಾಗಿದ್ದಾರೆ. ಪ್ರೀತಿಸುವ ಹುಡುಗನಾಗಿಯೂ ಮೋಡಿ ಮಾಡುತ್ತಾರೆ. ಆದರೆ ಸಂಭಾಷಣೆ ಹೇಳುವ ಶೈಲಿಯಲ್ಲಿ ಇನ್ನಷ್ಟು ಫೋರ್ಸ್‌ ತಂದುಕೊಂಡರೆ ಒಳ್ಳೆಯದು.

ನೋಡಲು ಅಷ್ಟೇನೂ ಚೆಂದವಿಲ್ಲದ ನಾಯಕಿ ಮೋನಿಕಾ ತನ್ನ ವಿಶಿಷ್ಟ ಡೈಲಾಗ್‌ ಡೆಲಿವರಿಯಿಂದಲೇ ಆಪ್ತವಾಗುತ್ತಾಳೆ. ಇದು ಈಕೆಯ ಮೊದಲ ಚಿತ್ರವೆನ್ನೋದು ಅಚ್ಚರಿ. ಕಾಮಿಡಿ ಪಾತ್ರಧಾರಿ ವಿಶ್ವನಾಥ್‌ಗೆ ಉತ್ತಮ ಭವಿಷ್ಯವಿದೆ. ಇತ್ತೀಚೆಗೆ ಹಾಡು ಬರೆಯುವುದನ್ನು ಇನ್ನೊಬ್ಬರಿಂದ ಕಲಿಯಬೇಕೆನ್ನುವ ಸ್ಥಿತಿ ಮುಟ್ಟಿದ್ದ ಹಂಸಲೇಖಾ ಫೀನಿಕ್ಸ್‌ನಂತೆ ಮರುಹುಟ್ಟು ಪಡೆದಿದ್ದಾರೆ. ‘ನೀನು ಅವಳಾಗಬಹುದು’ ಹಾಡೊಂದೇ ಅವರೊಳಗಿನ ಕವಿಯ ಜೀವಂತಿಕೆಗೆ ಸಾಕ್ಷಿ . ಮೂರು ಹಾಡುಗಳು ಕೇಳುವಂತಿವೆ. ಹಿನ್ನೆಲೆ ಸಂಗೀತಕ್ಕೆ ಇದೇ ಮಾತನ್ನು ಹೇಳುವಂತಿಲ್ಲ . ಆರ್‌.ಗಿರಿ ಛಾಯಾಗ್ರಹಣ ಬಿಟ್ಟಗುಡ್ಡಗಳ ಹಸಿರನ್ನು ಕಣ್ಣಿಗೆ ಮುಟ್ಟಿಸಿ ಮುದ ನೀಡುತ್ತದೆ. ಹಾಡುಗಳಲ್ಲಿ ಅವರ ಕೆಮರಾ ಮಿಂಚಿನಂತೆ ಕೆಲಸ ಮಾಡಿದೆ.

ಸಂಕಲನದ ಕಾರ್ಯವನ್ನು ನಾಗೇಂದ್ರ ಅರಸು ಹುಡುಗಾಟವೆಂದು ತಿಳಿದಂತಿದೆ. ಅಂದಹಾಗೆ, ಇದು ಗೋವಿಂದು ಅವರ ನಿರ್ದೇಶನದ ಮೊದಲ ಚಿತ್ರ. ಕತೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಆದರೆ ಚಿತ್ರ ನೋಡುವಾಗ ಹುಡುಗ ಮೊದಲ ಸಲ ಕೆಮರಾ ಹಿಡಿದಿದ್ದಾನೆ ಅನ್ನಿಸುವುದೇ ಇಲ್ಲ . ಹಾಗಂತ ಇದರಲ್ಲಿ ತಪ್ಪುಗಳು ಇಲ್ಲವೆಂದಲ್ಲ . ವಿರಾಮದ ನಂತರ ಅಲ್ಲಲ್ಲಿ ಬೋರ್‌ ಹೊಡೆಸಿದರೂ ಕಾಲೇಜು ಹುಡುಗ ಹುಡುಗಿಯರಿಗೆ ಚಿತ್ರ ಇಷ್ಟವಾಗಬಹುದು.

ಕನ್ನಡದ ಮಟ್ಟಿಗೆ ಈ ರೀತಿಯ ಕತೆ, ಅದರಲ್ಲೂ ಹುಡುಗಿಯರ ಬೋಲ್ಡ್‌ ಮಾತು, ಬದುಕಿನ ರೀತಿ ಅರಗುವುದು ಕಷ್ಟ . ಅದರ ನಡುವೆಯೂ ಜೂಟ್‌ ನೋಡುಗರಿಗೆ ಇಷ್ಟವಾದರೆ ಗೋವಿಂದು ಪಾಲಿಗದು ಮೃಷ್ಟಾನ್ನ ಭೋಜನವಾದೀತು. (ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada