For Quick Alerts
  ALLOW NOTIFICATIONS  
  For Daily Alerts

  ಹೆಸರಿಗೆ ತಕ್ಕಂಥ ...ಪ್ರೀತಿಯ ರಾಮು

  By Staff
  |

  *ಮಹೇಶ್‌ ದೇವಶೆಟ್ಟಿ

  ಇದು ವಿಧಿಯಾಟಕ್ಕೆ ಸಿಕ್ಕಿದವರ ಕತೆ. ಅಸಹಾಯಕತೆಯಿಂದ ಶೋಷಿತರಾದವರ ಕತೆ. ಮುಗ್ಧತೆಯನ್ನು, ಬಡತನವನ್ನು ಶೋಷಣೆಗೆ ಬಳಸಿಕೊಂಡವರ ಕತೆ. ಸಾಮಾನ್ಯ ಬದುಕಿನಿಂದ ದೂರವಾದವರ ಕತೆ. ಅಷ್ಟೇ ಅಲ್ಲ, ಮನಸ್ಸಿನ ಎಲ್ಲ ಭಾವಗಳ ಎಲ್ಲ ಬಾಗಿಲುಗಳನ್ನು ತೆರೆದು ನೋಡಬೇಕಾದ ಕತೆ. ಒಂದರ್ಥದಲ್ಲಿ ವ್ಯಥೆ.

  ಕನ್ನಡದ ಮಟ್ಟಿಗೆ ಇಲ್ಲೊಂದು ಅಪರೂಪದ ಕತೆ ಇದೆ. ಇದುವರೆಗೆ ನೋಡದ ಹೊಸ ಲೋಕದ ಅನಾವರಣವಿದೆ. ಇದೊಂದು ಮನಕಲಕುವ ಕತೆಯಾದರೂ ಕರಳು ಕತ್ತರಿಸುವ ಹಿಂಸೆ ನೀಡುವುದಿಲ್ಲ. ಪ್ರತಿಯಾಂದು ಪಾತ್ರಗಳೂ ತಮ್ಮ ಇರುವಷ್ಟೇ ರೀತಿಯಿಂದ ಹತ್ತಿರವಾಗುತ್ತವೆ. ನಿಮ್ಮೊಳಗೆ ಒಂದಾಗುತ್ತವೆ.

  ಆತ ಹುಟ್ಟಾ ಕುರುಡ. ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ತಂಗಿ ಇದ್ದಾಳೆ. ಲಕ್ವಾ ಹೊಡೆದರೂ ಕೊಬ್ಬು ಬಿಡದ ರೋಗಿಷ್ಠ ಅಪ್ಪ ಇದ್ದಾನೆ. ಗೂರಲು ರೋಗದಿಂದ ನರಳುವ ಅಸಹಾಯಕ ತಾಯಿ ಇದ್ದಾಳೆ. ಇದ್ದೊಬ್ಬ ಅಣ್ಣ ಗುಂಡು ಮಾಸ್ಟರ್‌. ಇವರನ್ನು ಸಾಕುವ ಹೊಣೆ ಕುರುಡ ನಾಯಕನ ಹೆಗಲ ಮೇಲಿರುತ್ತದೆ. ಪೇಟೆಯಲ್ಲಿ ಹಾಡಿ ಅದರಿಂದ ಗಳಿಸುವ ದುಡ್ಡಿನಿಂದ ಮನೆ ನಡೆಯಬೇಕು. ನಾಯಕನ ತಂಗಿ ಮತ್ತು ಪ್ರೇಯಸಿ ಮೇಲೆ ಊರ ಪಟೇಲನ ಕಣ್ಣು ಬೀಳುತ್ತದೆ. ಪಟೇಲ ಮತ್ತು ಸ್ನೇಹಿತ ಸೇರಿ ಅವರಿಬ್ಬರನ್ನು ಹಾಳು ಮಾಡುತ್ತಾರೆ. ಬಾಯಿಬಿಟ್ಟರೆ ಕೊಲ್ಲುತ್ತೇನೆಂದು ಹೆದರಿಸುತ್ತಾರೆ. ಊರವರ ಕಣ್ಣಿಗೆ ದೇವರಾದ ಪಟೇಲನ ಬೆದರಿಕೆಯಿಂದ ಹುಡುಗಿಯರು ಒಳಗೊಳಗೆ ಅಳುತ್ತಾರೆ. ನಾಯಕನ ತಂಗಿಗೆ ಮದುವೆ ತಯಾರಿ ನಡೆಯುತ್ತದೆ. ಆದರೆ ಅವಳು ಮದುವೆ ಹಿಂದಿನ ದಿನ...

  ಮುಂದಾಗುವುದನ್ನು ತೆರೆ ಮೇಲೆ ನೋಡಬೇಕು. ಆದರೆ ಮಜಾ ಮಾಡುವುದು ಸಾಧ್ಯವಿಲ್ಲ. ಯಾಕೆಂದರೆ ಅಂತಿಮ ದೃಶ್ಯವೇ ಹಾಗಿದೆ. ಬಡವನ ಕೋಪ ಹೇಗಿರುತ್ತದೆಂದು ತೋರಿಸುತ್ತದೆ. ಸೂಕ್ಷ್ಮವಾಗಿ ನೋಡಿದರೆ ಎಡಪಂಥೀಯ ನಿಲುವು ಗೋಚರಿಸುತ್ತದೆ. ಇದು ಮಲೆಯಾಳಂ ಚಿತ್ರದ ರೀಮೇಕು. ತಮಿಳಿನಲ್ಲಿ ಕಾಶಿ ಹೆಸರಿನಲ್ಲೂ ಇದು ರೀಮೇಕಾಗಿತ್ತು. ಮಲೆಯಾಳಂನಲ್ಲಿ ಕಲಾಭವನ್‌ ಮಣಿ ಮತ್ತು ತಮಿಳಿನಲ್ಲಿ ವಿಕ್ರಮ್‌ ಮಾಡಿದ ಪಾತ್ರವನ್ನು ಇಲ್ಲಿ ದರ್ಶನ್‌ ತೂಗುದೀಪ್‌ ನಿರ್ವಹಿಸಿದ್ದಾರೆ.

  ಅವರ ಇದುವರೆಗಿನ ಚಿತ್ರಗಳಲ್ಲಿ ಇದು ನಂಬರ್‌ವನ್‌. ಕಣ್ಣಿನ ಕಪ್ಪುಗುಡ್ಡೆಯನ್ನು ನೆತ್ತಿಗೆ ಏರಿಸಿ ಇಡೀ ಸಿನಿಮಾದಲ್ಲಿ ಒಂದು ಆರ್ದ್ರತೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಾಗ ಅಂಗಿಯನ್ನು ಕೆಳಗೆ ಜಗ್ಗಿಕೊಳ್ಳುವುದಾಗಲಿ, ತಲೆಯನ್ನು ಎತ್ತಲೊ ಸುತ್ತಿಸುವ ಮ್ಯಾನರಿಸಂಗಳು ಕುರುಡುತನಕ್ಕೆ ಸಹಜತೆ ನೀಡಿವೆ. ಅವರ ಅಳು, ನಗುವಿನಲ್ಲೂ ಒಬ್ಬ ನಿಷ್ಪಾಪಿ ಕುರುಡನ ವಜನವಿದೆ. ಕೊನೆಯ ದೃಶ್ಯದಲ್ಲಂತೂ ದರ್ಶನ್‌ ಎಲ್ಲರನ್ನು, ಎಲ್ಲವನ್ನು ಸೈಡು ಒಗೆದು ನಿಂತು ಬಿಡುತ್ತಾರೆ. ಅವರು ಎಲ್ಲರ ಪ್ರೀತಿಯ ರಾಮು ಆಗುವುದು ಹಾಗೆ. ಸಂಭಾಷಣೆ ಹೇಳುವ ಶೈಲಿಯಲ್ಲಿ ಗ್ರಾಮೀಣ ಸೊಗಡಿದ್ದರೂ, ಆ ಸಾಲುಗಳಲ್ಲಿ ಗದ್ಯಭಾಷೆ ಹೊಕ್ಕುಬಿಟ್ಟಿದೆ. ಆದರೆ ಉಮಾಶ್ರೀಯವರಿಗೆ ಹಾಗಾಗಿಲ್ಲ. ಗದ್ಯಭಾಷೆಯನ್ನು ಅವರು ಗ್ರಾಮ್ಯ ಭಾಷೆಗೆ ಒಗ್ಗಿಸಿಕೊಂಡಿದ್ದಾರೆ. ಅದರೊಂದಿಗೆ ಪ್ರತಿಯಾಂದು ದೃಶ್ಯದಲ್ಲೂ ತಾವು ಹಿಂದೆ ಮಾಡಿದ ಪಾತ್ರಗಳಿಗೇ ಸವಾಲೆಸೆದಿದ್ದಾರೆ. ಅದು ಪುಟ್ನಂಜಿ ಪವಾಡ !

  ಕತೆಗಾರ ವಿನಯನ್‌ ಎಷ್ಟು ಪ್ರೀತಿಯಿಂದ ಈ ಕತೆ ಬರೆದಿದ್ದಾರೆಂದರೆ ಇದರಲ್ಲಿನ ಯಾವುದೇ ಒಂದು ಪಾತ್ರವೂ ಅನಗತ್ಯವೆನಿಸುವುದಿಲ್ಲ. ಅತ್ಯಾಚಾರಕ್ಕೆ ಬಲಿಯಾಗಿ ನೋವು ತಿನ್ನುವ ಹಂಸವಿಜೇತ, ಅವಳಂತಹ ಮತ್ತೊಬ್ಬ ದುರದೃಷ್ಟೆಯಾದ ಮೂಕಿ ನವ್ಯಾ, ಇನ್ನೊಬ್ಬರ ಕಣ್ಣೀರು ಒರೆಸುವುದರಲ್ಲಿ ಧನ್ಯತೆ ಕಾಣುವ ದೊಡ್ಡಣ್ಣ. ಕೈಗೆ ಸಿಕ್ಕರೆ ಹೊಡೆದು ಬಿಡಬೇಕೆನ್ನುವಷ್ಟು ಕೋಪ ತರಿಸುವ ತಿಕ್ಕಲ ರಮೇಶ ಪಂಡಿತ. ಹಾಸಿಗೆಗೆ ಅಂಟಿಕೊಂಡಿದ್ದರೂ ಕೊಬ್ಬು ಇಳಿಯದ ಕೃಷ್ಣೇಗೌಡ, ನಯವಂಚಕ ಪಟೇಲ, ಹೈಟೆಕ್‌ ನಿತ್ಯಸುಮಂಗಲಿ ಪವಿತ್ರಾ ಲೋಕೇಶ್‌... ಎಲ್ಲರೂ ಅವರವರ ಪಾತ್ರಗಳಿಗೆ ಜೀವ ತುಂಬಿದ್ದಾರೆ.

  ಇಳಯರಾಜ ನೀಡಿದ ಸಂಗೀತದಲ್ಲಿ ನಾಲ್ಕು ಹಾಡುಗಳು ಇಡೀ ಕತೆಯನ್ನೇ ಹೇಳುತ್ತವೆ. ರಮೇಶ್‌ ಬಾಬು ಛಾಯಾಗ್ರಹಣದಲ್ಲಿ ಜೀವಂತಿಕೆಯಿದೆ. ಸಂಕಲನಕಾರ ಗಿರೀಶ್‌ಕುಮಾರ್‌ನ ಶ್ರದ್ಧೆ ಕಾಣುತ್ತದೆ. ಕಲಾನಿರ್ದೇಶಕ ರಮೇಶ್‌ಬಾಬು ಕೆಲಸವೂ ಅಚ್ಚುಕಟ್ಟಾಗಿದೆ. ಹಳ್ಳಿ ಸೊಗಡಿಗೆ ಹೊಂದಿಕೊಳ್ಳುವಂತಿರುವ ವಸ್ತ್ರಾಲಂಕಾರವೂ ಪರ್‌ಫೆಕ್ಟ್‌. ಕತೆ ಕೊಂಚ ನಿಧಾನಗತಿಯಲ್ಲಿ ಸಾಗುವುದು, ರಾಮೇಗೌಡರ ಮಾತಿನಲ್ಲಿ ಗಾದೆಮಾತುಗಳು ಮಿಂಚಿದ್ದರೂ ಅವರು ಗ್ರಾಂಥಿಕ ಭಾಷೆಗೆ ಹೆಚ್ಚು ಒಲಿದಿದ್ದಾರೆ. ನಿರ್ದೇಶನ ಮಾಡಿರುವ ಸಂಜಯ್‌- ವಿಜಯ್‌ ಜೋಡಿ ಮೊದಲ ಸಲವೇ ಗೆದ್ದಿದೆ. ಕನ್ನಡದಲ್ಲಿ ಹೊಸ ರೀತಿಯ ಚಿತ್ರವನ್ನು ಹೊಸದಾಗಿಯೇ ಪ್ರಸ್ತುತಪಡಿಸಿದ್ದಾರೆ.

  (ಸ್ನೇಹಸೇತು- ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X