For Quick Alerts
  ALLOW NOTIFICATIONS  
  For Daily Alerts

  ತುಂತುರು ಮಳೆಯಲ್ಲೊಂದು ಪ್ರೇಮಕತೆ ; ಜೊತೆಗೊಂದಿಷ್ಟು ಕ್ರೌರ್ಯವು

  By Staff
  |
  • ಮಹೇಶ್‌ ದೇವಶೆಟ್ಟಿ
  ‘ಊರ ಬೀದಿ ತುಂಬಾ ಬರಿ ಗಂಡು ನಾಯಿಗಳೇ ತುಂಬ್ಕೊಂಡಿವೆ. ನೀ ನೋಡಿದ್ರೆ ಹುಡುಗ್ರ ಜೊತೆನೇ ಬೀದಿ ಸುತ್ತುತೀಯ. ಎಲ್ಲಾ ಮರೆತು ಶಿವ ಪರಮಾತ್ಮ ಅಂತ ಹಾಯಾಗಿರೋಣ ಅಂದ್ರೆ ಆ ಶಿವನೂ ಗಂಡ್ಸೆ ತಾನೇ...’ ಗಂಡೆಂಬ ಅಹಂನಿಂದ ಮೆರೆಯುತ್ತಿರುವವರನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಕಪಾಳಕ್ಕೆ ಹೊಡೆದಂತಿದೆ ಈ ಮಾತು. ಅದರೊಂದಿಗೆ ಗಂಡಿನ ಅತ್ಯಾಚಾರ, ದಬ್ಬಾಳಿಕೆಗೆ ಸಿಕ್ಕಿ ನರಳುವ ಹೆಂಗಸರ ಪ್ರಾತಿನಿಧಿಕ ವೇದನೆಯನ್ನೂ ಹೇಳುತ್ತದೆ.

  ನೀವು ಪುಟ್ಟಣ್ಣನವರ ‘ಗೆಜ್ಜೆಪೂಜೆ’ ನೋಡಿರಬಹುದು. ಅದರಲ್ಲಿ ದೇವದಾಸಿಯರ ನೋವು ಕೇವಲ ಅವರದಷ್ಟೇ ಆಗಿಬಿಡುತ್ತದೆ. ಆದರೆ ಇಲ್ಲಿ ವೇಶ್ಯೆಯಾಬ್ಬಳ ಬದುಕು ಇಡೀ ಮಹಿಳಾ ಸಂಕುಲದ ಕತೆಯಾಗುವ ಅಚ್ಚರಿ ಇದೆ. ಹೆಣ್ಣನ್ನು ಕೇವಲ ಮಾರಾಟದ ಸರಕಿನಂತೆ ಬಳಸಿಕೊಳ್ಳುವ ಇಂದಿನ ಚಿತ್ರರಂಗಕ್ಕೆ ಭಾರತೀಯ ಹೆಣ್ಣಿನ ನಿಜರೂಪ ತೋರಿಸುತ್ತದೆ. ಅವರ ಸನಾತನ ಅತಂತ್ರ ಹಾಗೂ ಅಸಹಾಯಕತೆಯನ್ನು ಅನಾವರಣಗೊಳಿಸುತ್ತದೆ.

  ಇದಷ್ಟೇ ಆಗಿದ್ದರೆ ಇದೊಂದು ಸಾಕ್ಷ್ಯಚಿತ್ರವಾಗುವ ಅಪಾಯವಿತ್ತು. ಆದರೆ ನಿರ್ದೇಶಕನ ಸೂಕ್ಷ್ಮಜ್ಞತೆ ಮತ್ತು ಕಲೆಯ ಪ್ರೀತಿ ಕನ್ನಡಕ್ಕೊಂದು ಅಪರೂಪದ ಚಿತ್ರ ಕೊಟ್ಟಿದೆ. ನಿಜಕ್ಕೂ ಇದು ಕನ್ನಡ ಚಿತ್ರವೇ ಎನ್ನುವ ಅಚ್ಚರಿಗೆ ಕಾರಣವಾಗುತ್ತದೆ. ಅದ್ಯಾರೋ ಯೋಗರಾಜ ಭಟ್‌ ಎನ್ನುವ ನಿರ್ದೇಶಕ ಪ್ರತಿಯಾಂದನ್ನೂ ಅನುಭವಿಸಿ ಈ ಸಿನಿಮಾ ಮಾಡಿದ್ದಾರೆ. ಪ್ರತಿಯಾಂದು ವಿಭಾಗದಿಂದಲೂ ಬೆವರಿಳಿಸಿ ಕೆಲಸ ತೆಗೆದಿದ್ದಾರೆ. ‘ಅಸಹಜತೆ’ ಅಂದರೆ ಏನು? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದು ಹೇಗೆ? ಅದಕ್ಕೆ ತಮ್ಮ ಚಿತ್ರದಿಂದಲೇ ಉತ್ತರ ಕೊಟ್ಟಿದ್ದಾರೆ.

  ರಂಗಾಯಣ ರಘು ತಲೆಹಿಡುಕ. ಆತನ ಮೋಹಕ್ಕೆ ಸಿಕ್ಕಿ ಉಮಾಶ್ರೀ ವೇಶ್ಯೆಯಾಗುತ್ತಾಳೆ. ಅನಾಥ ಮಗುವೊಂದನ್ನು ಸ್ವಂತ ಮಗಳಂತೆ ಬೆಳೆಸುತ್ತಾಳೆ. ಮತ್ತೊಬ್ಬ ಅನಾಥ ಹುಡುಗನೊಂದಿಗೆ ಮಗಳ ಸ್ನೇಹ ಬೆಳೆಯುತ್ತದೆ. ಅದು ಪ್ರೇಮಕ್ಕೆ ತಿರುಗುತ್ತದೆ. ರಘು ಕಣ್ಣು ಚೆಲುವೆ ಮಗಳ ಮೇಲೆ ಬೀಳುತ್ತದೆ. ಆದರೆ ಮಗು ತನ್ನಂತೆ ಮೋಸಹೋಗಬಾರದೆಂದು ಉಮಾಶ್ರೀ ಹಠ ಹಿಡಿಯುತ್ತಾಳೆ. ಅಲ್ಲಿಂದ ವ್ಯವಸ್ಥೆ ವಿರುದ್ಧ ಹೋರಾಟಕ್ಕೆ ಇಳಿಯುತ್ತಾಳೆ. ಒಂದೊಂದೆ ಗಂಡಾಂತರ ಎದುರಾಗುತ್ತದೆ. ನಾಯಕ ಕೂಡಾ ಅವಳ ಜೊತೆಯಾಗುತ್ತಾನೆ. ಮನುಷ್ಯನ ಕ್ರೌರ್ಯ, ಹೆಣ್ಣಿನ ಅಸಹಾಯಕತೆ ಬಿಚ್ಚಿಕೊಳ್ಳುವುದು ಹೀಗೆ...

  ಒಂದೊಂದು ದೃಶ್ಯ, ಒಂದೊಂದು ಪಾತ್ರ, ಒಂದೊಂದು ಮಾತಿನ ಸಾಲುಗಳನ್ನು ಎಷ್ಟು ಜತನದಿಂದ ರೂಪಿಸಲಾಗಿದೆಯೆಂದರೆ, ಸ್ಕಿೃೕನ್‌ಪ್ಲೇ ಬರೆಯುವವರಿಗೆ ಇದು ಮಾದರಿಯಾಗಬಲ್ಲದು. ದೃಶ್ಯವೊಂದರ ಯಾವ ‘ಕ್ಷಣ’ಕ್ಕೆ ಸಂಗೀತ ನೀಡಬೇಕು, ವಾತಾವರಣದ ಸಮಗ್ರತೆಯನ್ನು ಬಳಸಿಕೊಳ್ಳುವುದು ಹೇಗೆ ಅನ್ನುವುದನ್ನು ಭಟ್‌ ಜಾಗರೂಕತೆಯಿಂದ ನಿರ್ವಹಿಸಿದ್ದಾರೆ. ಅಂದಹಾಗೆ ಇದವರ ಮೊದಲ ಚಿತ್ರವಂತೆ ! ಕನ್ನಡದಲ್ಲಿ ಇನ್ನೆಷ್ಟು ಚಿನ್ನದ ನಿಕ್ಷೇಪಗಳಿವೆಯೋ !

  ಹಾಂ, ಇಷ್ಟಕ್ಕೇ ಬೆರಗಾಗಬೇಡಿ. ಇನ್ನೂ ಅನೇಕ ಅಚ್ಚರಿಗಳು ಇದರಲ್ಲಿವೆ. ಸಂಭಾಷಣೆ ಬರೆದ ಸೂರಿಯಾಗಲಿ, ಅಡಪರ ಕಲಾ ನಿರ್ದೇಶನವಾಗಲಿ, ರಾಜ್‌ ಮತ್ತು ರಾಜೇಶ್‌ ಸಂಗೀತವಾಗಲಿ, ಕರಿಸುಬ್ಬು ಕತೆಯಾಗಲಿ, ಜ್ಞಾನಮೂರ್ತಿ ಛಾಯಾಗ್ರಹಣವಿರಲಿ ಎಲ್ಲವೂ ಒಂದೊಂದು ತೂಕವಾದರೆ ತನ್ನದೊಂದು ತೂಕ ಎನ್ನುತ್ತಾರೆ ಉಮಾಶ್ರೀ. ನಾನೇನು ಕಡಿಮೆ ಎನ್ನುತ್ತಾರೆ ರಂಗಾಯಣ ರಘು. ಒಬ್ಬರಿಗೊಬ್ಬರು ಸವಾಲು ಹಾಕಿ ಅಭಿನಯಿಸಿದ್ದಾರೆ. ಉಹುಂ, ಅನುಭವಿಸಿದ್ದಾರೆ. ಮಗಳನ್ನು ಪ್ರೀತಿಸುವ, ಹೊಡೆಯುವ, ಅವಳನ್ನು ಹೇಗಾದರೂ ಕಾಪಾಡಬೇಕೆನ್ನುವ ಅಮ್ಮನಾಗಿ ಉಮಾಶ್ರೀ ಪ್ರತಿಭೆಗೆ ಹೇಳಿ ಮಾಡಿಸಿದ ಪಾತ್ರ. ‘ಸಾಮಿ (ರಘು) ಬರ್ತಾನೆ ಸುಮ್ಮಿರು’ ಅಂದರೆ ಅಳುವ ಮಕ್ಕಳು ಗಪ್‌ಚುಪ್‌ ಆಗಬಹುದು. ಅವರಿಗಷ್ಟೇ ಸರಿ ಹೊಂದುವ ನಗು, ಮಾತು, ಹೊಟ್ಟೆ ಕೆರೆದುಕೊಳ್ಳುವ ಮ್ಯಾನರಿಸಂ ಭಯಂಕರವಾಗಿದೆ. ಕಟುಕನೆಂದರೆ ಹೀಗೇ ಇರ್ತಾರೋ ಏನೋ. ಎರಡು ಮೂರು ದೃಶ್ಯಗಳಲ್ಲಿ ಬಂದು ಹೋಗುವ ಮೈನಾ ಚಂದ್ರುವನ್ನು ಇಷ್ಟು ದಿನ ಚಿತ್ರರಂಗ ಬಳಸಿಕೊಳ್ಳದಿರುವುದು ದೊಡ್ಡ ನಷ್ಟ.

  ಸುಮಾರು ಚಿತ್ರಗಳಲ್ಲಿ ನಟಿಸಿ ಬಂದಂತಿರುವುದು ನಾಯಕ ಮಯೂರ್‌. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ಗಂಭೀರ ಅಭಿನಯ ಹೇಗೆ ಸಾಧ್ಯವಾಯಿತು ಅನ್ನುವುದೇ ಕುತೂಹಲಕಾರಿ. ಆತನ ಸಂಭಾಷಣೆ ಹೇಳುವ ನಿರ್ಲಿಪ್ತತೆ, ಪ್ರೇಮ ನಿವೇದನೆ ಮಾಡಲಾರದೆ ಒಳಗೊಳಗೆ ನೋವು ನುಂಗುವ ಯಾತನೆ, ಒಂದೇ ಒಂದು ಹೊಡೆತದಲ್ಲಿ ಎದುರಿಗಿದ್ದವರನ್ನು ಮಲಗಿಸುವ ಫೋರ್ಸು... ಕನ್ನಡಕ್ಕೊಬ್ಬ ಹೊಸ ರೀತಿಯ ಹೀರೋನನ್ನು ಕೊಟ್ಟಿದೆ. ನಾಗಶೇಖರ್‌, ರಾಧಿಕಾ, ಕರಿಸುಬ್ಬು, ಆನಂದ್‌, ಸಂಕೇತ್‌, ಕಾಶಿ... ಎಲ್ಲರೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

  ಬರೆದಿರುವುದು ಹನಿಯಷ್ಟು, ಬರೆಯದಿರುವುದು ಹೊಳೆಯಷ್ಟು. ಹೊಳೆಯ ಹೊಳಪು, ಭೀಕರತೆ, ಮಾನವೀಯತೆ, ಪ್ರೀತಿ ಅದರಲ್ಲಿ ಈಜಾಡಿದಾಗಲೇ ಅರಿವಾಗುತ್ತದೆ. ಅನುಭವಕ್ಕೆ ದಕ್ಕುತ್ತದೆ. ಅಕಸ್ಮಾತ್‌ ಇದನ್ನು ನೋಡದಿದ್ದರೆ ಏನೋ ಒಂದು ಭಾವನೆಯನ್ನು ಕಳೆದುಕೊಳ್ಳುವುದಂತೂ ಖಂಡಿತ.

  (ಸ್ನೇಹಸೇತು- ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X