»   » ಅಂತು ಇಂತು ಒಳ್ಳೆ ಸಿನಿಮಾ ಬಂತು

ಅಂತು ಇಂತು ಒಳ್ಳೆ ಸಿನಿಮಾ ಬಂತು

Subscribe to Filmibeat Kannada

ಶಿವು, ಸಾಫ್ಟ್‌ವೇರ್ ಓದಿದ ಸಾಫ್ಟ್ ಹುಡುಗ. ಕೈಯಲ್ಲೊಂದು ಕೆಲಸ ಇಲ್ಲದೇ ಖಾಲಿ ಕುಳಿತಿರುತ್ತಾನೆ. ಅಪ್ಪನಿಗೆ ಮಗನನ್ನು ಕಂಡರೆ ಬೆಟ್ಟದಷ್ಟು ಪ್ರೀತಿ. ಅದು ಅಂತರಂಗದ ಕದದೊಳಗೆ ಬೆಚ್ಚಗೆ ಮಲಗಿರುತ್ತದೆ. ಹೊರನೋಟಕ್ಕೆ ಆತ ಮಗನ ಮೇಲೆ ಹರಿಹಾಯುತ್ತಿರುತ್ತಾನೆ. ವೃತ್ತಿಯಲ್ಲಿ ತಾನು ಮೇಷ್ಟ್ರು ಎನ್ನುವುದನ್ನು ಮಗನಿಗೆ ಸರಿಯಾಗಿ ಮನದಟ್ಟು ಮಾಡಿರುತ್ತಾನೆ. ಅಂತೂ ಇಂತೂ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಅವನಿಗೂ ಕೆಲಸ ಸಿಕ್ಕಿಬಿಡುತ್ತದೆ. ಅಲ್ಲಿಂದ ಕತೆ ಪ್ರೀತಿಯ ದಿಕ್ಕಿನೆಡೆಗೆ ದಾಪುಗಾಲಿಡತೊಡಗುತ್ತದೆ.

*ವಿನಾಯಕರಾಮ್ ಕಲಗಾರು

ಆ ಆಫೀಸಿನಲ್ಲಿ ಪ್ರೀತಿ ಎಂಬ ಹುಡುಗಿ, ಈ ಹುಡುಗನ ಸೀನಿಯರ್ ಆಗಿರುತ್ತಾಳೆ. ಆಕೆಯೊಂದಿಗೆ ಈತ ಕೆಲಸದ ಮೇಲೆ ಪ್ಯಾರಿಸ್‌ಗೆ ಹೋಗುತ್ತಾನೆ. ಹೋಗುತ್ತಾ ಹೋಗುತ್ತಾ ಮುಝೆ ತುಮ್ಸೆ ಪ್ಯಾರ್ ಹೋಗಯಾ' ಎನ್ನಲು ಶುರುಮಾಡುತ್ತಾನೆ. ಆದರೆ ಆ ಹುಡುಗಿಗೆ ಅದಾಗಲೇ ಇನ್ನೊಬ್ಬನ ಜತೆ ನಿಶ್ಚಿತಾರ್ಥ ಆಗಿಬಿಟ್ಟಿರುತ್ತದೆ. ಮುಂದೇನಾಗುತ್ತದೆ? ಇದು ಅಂತೂ ಇಂತು ಪ್ರೀತಿ ಬಂತು' ಚಿತ್ರದ ಕತೆ. ಅದು ರಿಮೇಕ್ ಅಥವಾ ಯಥಾವತ್ ಪಡಿಯಚ್ಚಾಗಿರಲಿ. ನಿರೂಪಣೆಯಲ್ಲಿ ನಿಚ್ಚಳ ವೇಗ ಇರಬೇಕು. ಅಚ್ಚುಕಟ್ಟಾದ, ಅತಿರೇಕ ಎನಿಸದ ಚಿತ್ರಕತೆ ಬೇಕೇಬೇಕು. ಸಂಭಾಷಣೆಯಲ್ಲಿ ಸಮ್‌ಥಿಂಗ್ ಸ್ವಾದತೆ ಸೇರಿರಬೇಕು. ನೋಡಿಸಿಕೊಂಡು ಹೋಗಬಲ್ಲ ಸಿನಿಮಾ ಅದಾಗಿರಬೇಕು. ಹಾಗಿದ್ದಾಗ ಮಾತ್ರ ಅದು ಪಕ್ವಾನ್ನ' ಆಗುತ್ತದೆ.

ಈ ಮಾತನ್ನು ವೀರಶಂಕರ್ ನಿರ್ದೇಶನದ ಅಂತು ಇಂತು ಪ್ರೀತಿ ಬಂತು' ನಿರೂಪಿಸಿದೆ. ಚಿತ್ರದಲ್ಲಿ ಲವಲವಿಕೆಯಿದೆ. ಎಲ್ಲಿಯೂ ಆಭಾಸವೆನಿಸದ ಪಾತ್ರಪೋಷಣೆ ಯಿದೆ. ಕತೆಯ ಧಾಟಿಗೆ ಜೀವ ತುಂಬಬಲ್ಲ ಶ್ರೀನಿವಾಸ ಮೂರ್ತಿ ಅವರ ಅಮೋಘ ಅಭಿನಯವಿದೆ. ಪಾತ್ರ ಹಾಗೂ ನೇಪಥ್ಯ ದೃಶ್ಯಗಳಿಗೆ ಸರಿಸಾಟಿಯಾಗಬಲ್ಲ ಗುರುಕಿರಣ್ ಸಂಗೀತವಿದೆ.

ಇದು ತೆಲುಗಿನ ಆಡುವಾಳ್ಳ ಮಾಟಲುಕು ಅರ್ಥಾಲು ವೇರುಲೆ' ಚಿತ್ರದ ರಿಮೇಕ್. ಅನ್ಯಭಾಷೆಯ ಕತೆಯೊಂದನ್ನು ಕನ್ನಡಿಗರ ಅಭಿರುಚಿಗೆ ತಕ್ಕಂತೆ ಚಿತ್ರಿಸುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ.

ಆದರೆ ನಾಯಕ ಆದಿತ್ಯಬಾಬುಗೆ ನಿರ್ದೇಶಕರ ಪರಿಕಲ್ಪನೆಗೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ. ಆತ ಕೆಲವು ಕಡೆ ಮಾತ್ರ ಇಷ್ಟವಾಗುತ್ತಾನೆ. ಇನ್ನು ಕೆಲವೆಡೆ ಸಹಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಆದರೆ ಅಪ್ಪ ಸತ್ತಾಗ, ಅವರ ಹಳೇ ಮೋಟಾರ್ ಸೈಕಲ್‌ಗೆ ಮುತ್ತಿಕ್ಕಿ, ಕಣ್ಣೀರಿಡುವಾಗ ಎದೆ ಭಾರವಾಗುತ್ತದೆ. ರಮ್ಯಾಗೆ ನೂರಕ್ಕೆ ನೂರು ಅಂಕ ಕೊಡ ಬಹುದು. ನಾಯಕನ ಜತೆ ಚಂದವಾಗಿ ಕುಣಿಯುವಾಗ 5 ವರ್ಷ ಚಿಕ್ಕವರಾಗಿ ಕಾಣಿಸುತ್ತಾರೆ! ಒಂದು ಲೆಕ್ಕದಲ್ಲಿ ಅವರು ಲಕ್ಕಿ. ಆದಿತ್ಯ ನಾಯಕನಾಗದೇ ಸುದೀಪೋ ಮತ್ತಿನ್ಯಾರೋ ಆಗಿದ್ದರೆ ಆಗ ರಮ್ಯಾ ಇಮೇಜ್ ಕಡಿಮೆಯಾಗಿಬಿಡುತ್ತಿತ್ತು. ಎರಡು ಹಾಡುಗಳು ಕೇಳಲು ಯೋಗ್ಯವಾಗಿವೆ. ಆದರೆ ಆ ಎಲ್ಲ ಟ್ಯೂನ್‌ಗಳೂ ಮೂಲ ಸಿನಿಮಾದ ಸಂಗೀತ ನಿರ್ದೇಶಕರದ್ದು ಎನ್ನುವುದು ನಿಮಗೂ ಗೊತ್ತಿರಲಿ.

ಮೊದಲಾರ್ಧವನ್ನು ಶ್ರೀನಿವಾಸಮೂರ್ತಿ ಲೀಲಾಜಾಲವಾಗಿ ದೂಡಿಸಿಕೊಂಡು ಹೋಗುತ್ತಾರೆ. ವಿರಾಮಕ್ಕೆ ಅವರ ಪಾತ್ರ ಅಂತ್ಯವಾಗುತ್ತದೆ. ಆಗ ಕತೆ ಇನ್ನೊಂದು ಆಯಾಮಕ್ಕೆ ತಿರುಗಿಕೊಳ್ಳುತ್ತದೆ. ಪೇಟೆಯಿಂದ ಹಳ್ಳಿಯೆಡೆಗೆ ಮುಖ ಮಾಡುತ್ತದೆ. ಅಲ್ಲಿಂದ ಪ್ರೇಕ್ಷಕರನ್ನು ಲೋಕನಾಥ್, ರಂಗಾಯಣ ರಘು ಮುಂತಾದವರು ಕ್ಲೈಮ್ಯಾಕ್ಸ್‌ವರೆಗೂ ಕೊಂಡೊಯ್ಯತ್ತಾರೆ.

ಬಹಳ ದಿನಗಳ ನಂತರ ಇಡೀ ಫ್ಯಾಮಿಲಿ ಕುಳಿತು ನೋಡುವ ಚಿತ್ರವೊಂದು ಬಂದಿದೆ. ಅದಕ್ಕಿಂತ ಹೆಚ್ಚಾಗಿ ರಿಮೇಕ್ ಮಾಡುವರರಿಗೆ ಸರಕಾರ ಪೂರ್ಣ ಸ್ವಾತಂತ್ರ್ಯ ಕೊಟ್ಟಿರುವ ಹಿನ್ನೆಲೆಯಲ್ಲಿ, ಕತೆಯ ಆಯ್ಕೆ ಹೇಗಿರಬೇಕು? ಮೇಕಿಂಗ್ ಆಫ್ ರಿಮೇಕ್ ಸಿನಿಮಾ ಎಂದರೇನು ? ಎಂಬುದಕ್ಕೆ ಅಂತು ಇಂತು...' ಚಿತ್ರ ಸ್ಪಷ್ಟ ಉದಾಹರಣೆ ಎಂದರೆ ಅದು ಅತಿಶಯೋಕ್ತಿ ಆಗಲಾರದು !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada