ಲವ್ಲೀ ಸ್ಟಾರ್ ಪ್ರೇಮ್, ರವೀಂದ್ರ ಮ್ಯಾಜಿಕ್ ನೋಡಿ
'ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರದಲ್ಲಿ, ಅನುಮಾನದ ಹುತ್ತ ತಲೆಯಲ್ಲಿ ಹೊತ್ತ ನಾಯಕನ ಪಾತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅಭಿನಯ ನಿಜಕ್ಕೂ ಅದ್ಭುತ, ಅಮೋಘ. ಪ್ರೇಮಿಯಾಗಿ, ಗಂಡನಾಗಿ, ಮಧ್ಯೆ ಸಂಶಯ ಪಿಶಾಚಿಯಾಗಿ ಸವಾಲಿನ ಪಾತ್ರ ನಿರ್ವಹಣೆಯಲ್ಲಿ 'ನೆನಪಿರಲಿ ಪ್ರೇಮ್' ರನ್ನು ಮರೆಯಲು ಅಸಾಧ್ಯ. ಮನ್ಮಥನ ಪ್ರತಿರೂಪದಂತಿರುವ ನಾಯಕ ಪ್ರೇಮ್ ಅಭಿನಯ ಮನೆಗೆ ಬಂದಮೇಲೂ ಕಾಡದಿದ್ದರೆ ಹೇಳಿ!
ಮುಂಬೈ ಬೆಡಗಿ ಎಂದರೆ ನಂಬಲು ಅಸಾಧ್ಯವೆಂಬಂತೆ ನಟಿಸಿದ್ದಾರೆ ನಾಯಕಿ ಕರಿಷ್ಮಾ ತನ್ನಾ. ಮುಂಬೈನವರು ಚೆನ್ನಾಗಿ ನಟಿಸುವುದಿಲ್ಲವೆಂದಲ್ಲ, ಕರಿಷ್ಮಾ ಮುಖದಲ್ಲಿ, ಹಾವ-ಭಾವ-ಭಂಗಿಗಳಲ್ಲಿ ಕನ್ನಡತನದ ಪ್ರತಿಬಿಂಬವಿದೆ. ಅಭಿನಯಿಸದೇ ಪಾತ್ರವೇ ಆಗಿಬಿಟ್ಟಿದ್ದಾರೆ, ನಾಯಕ್ ಪ್ರೇಮ್ ರಂತೆ.
ಕನ್ನಡದ ಹಾಟ್ ಬೆಡಗಿ ಸಂಜನಾ ಪಾತ್ರ 'ವೇಶ್ಯೆ' ಆದರೂ ಅದಕ್ಕೊಂದು ಘನತೆ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಸಂಜನಾ. ಪ್ರೇಮ್, ಕರಿಷ್ಮಾ ಹಾಗೂ ಸಂಜನಾ ಮೂವರೂ ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದವರಂತೆ ನಟಿಸಿ ಈ ಚಿತ್ರ ನೆನಪಿನಿಂದ ಮರೆಯಾಗದಂತೆ ಮಾಡಿದ್ದಾರೆ.
ಉಳಿದಂತೆ ಕುರುಡನ ಪಾತ್ರದಲ್ಲಿ ತಬಲಾ ನಾಣಿ ಹಾಗೂ ಎಲ್ಲ ಪೋಷಕ ಪಾತ್ರಗಳೂ ಚಿತ್ರಕ್ಕೆ ನ್ಯಾಯ ಒದಗಿಸಿವೆ. ಪಾತ್ರಗಳ ಆಯ್ಕೆ ಹಾಗೂ ನಿರ್ದೇಶನದ ವಿಷಯದಲ್ಲಿ ನಿರ್ದೇಶಕ ರವೀಂದ್ರರಿಗೆ 'ಫುಲ್ ಮಾರ್ಕ್ಸ್' ಕೊಡಲೇಬೇಕು. ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲವೂ ಸೂಪರ್. ಮೊದಲ ಬಾರಿಗೇ ಚಿತ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ 'ಭೇಷ್' ಅನ್ನಿಸಿಕೊಂಡಿದ್ದಾರೆ ನಿರ್ದೆಶಕ ರವೀಂದ್ರ.
ಚಿತ್ರದಲ್ಲಿ ಕೇವಲ ಮನೋರಂಜನೆಗೆ ಆದ್ಯತೆ ಕೊಡದೇ ಎಲ್ಲವನ್ನೂ ಕಟ್ಟಿಕೊಟ್ಟು ಸದಾಕಾಲ ನೆನಪಿನಲ್ಲುಳಿಯುವ ಚಿತ್ರ ಕೊಟ್ಟಿದೆ ಚಿತ್ರತಂಡ. ಚಿತ್ರ ನೋಡಿ ಎದ್ದ ತಕ್ಷಣ ನಿಮಗೆ ಅರಿವಿಲ್ಲದಂತೆ ನಿಮ್ಮ ಕೈ 'ಸಲಾಮ್' ಮಾಡಿದಾಗ ಗಾಬರಿ ಆಗಬೇಡಿ, ಕರೆಕ್ಟಾಗಿದ್ದೀರೆಂದು ಖುಷಿಪಡಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











