For Quick Alerts
  ALLOW NOTIFICATIONS  
  For Daily Alerts

  ಬಾಲ ನಟರ ಕರಾಳ ಮುಖದ ಪ್ರತಿ ಬಿಂಬ

  By Staff
  |
  ಸಾಮಾಜಿಕ ಸಮಸ್ಯೆಗಳ ಒಳ ಹೊರಗುಗಳನ್ನು ಸೆಲ್ಯಲಾಯ್ಡ್‌ ಮಾಧ್ಯಮದಲ್ಲಿ ಬಟಾಬಯಲು ಮಾಡುವುದೆಂದರೆ- ಎತ್ತಿನ ಗಾಡಿಯಷ್ಟು ನಿ...ಧಾ...ನವಾಗಿ ಚಿತ್ರಓಡಿಸುವುದು, ಪ್ರೇಕ್ಷಕರ ಮುಖ ಒಮ್ಮೆಯೂ ಸಡಿಲವಾಗದಂತೆ ಎಚ್ಚರವಹಿಸುವುದು, ನೂರಕ್ಕೆ ನೂರರಷ್ಟು ನೈಜತೆಗೆ ಒತ್ತು ನೀಡುವುದು. ಉದಾಹರಣೆಗೆ ಒಂದು ಪಾತ್ರ ಚಹಾ ಕುಡಿಯುವ ಸಂದರ್ಬ ಬಂದಾಗ ಒಲೆ ಹೊತ್ತಿಸುವುದರಿಂದ ಹಿಡಿದು ಚಹ ಸಿದ್ಧವಾಗುವವರೆಗಿನ ಪ್ರತಿ ಕ್ಷಣವನ್ನೂ ತೋರಿಸುವುದು, ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಸನ್ನಿವೇಶ ಬಂದಾಗ, ಆ ಆ್ಯಂಬುಲೆನ್ಸ್‌ ಯಾವ ದಾರಿಯಲ್ಲಿ ಹೋಗುತ್ತದೆ, ಯಾವ ಯಾವ ಸಿಗ್ನಲ್‌ನಲ್ಲಿ ನಿಲ್ಲುತ್ತದೆ ಎನ್ನುವುದನ್ನೆಲ್ಲ ತೋರಿಸುವುದು! ಇದು ಕಲಾತ್ಮಕ ಚಿತ್ರದ ಮುಖ್ಯ ಲಕ್ಷಣ. ಹೀಗೆ ಮಾಡಿದರೆ ಮಾತ್ರ ಅವಾರ್ಡ್‌ ಗ್ಯಾರೆಂಟಿ!!

  ಆದರೆ, ಗಂಭೀರ ಸಮಸ್ಯೆಯನ್ನು ಜನಪ್ರಿಯ ಮಾರ್ಗದಲ್ಲೆ ತುಸು ರಂಜನೆಯ ಜೊತೆ ಪ್ರತಿಬಿಂಬಿಸಬಹುದು ಎಂಬುದನ್ನು ಕವಿತಾ ಲಂಕೇಶ್‌ ‘ಬಿಂಬ’ ಮೂಲಕ ಸಾಬೀತು ಪಡಿಸಿದ್ದಾರೆ.

  ಬೇಬಿ ಶಾಲಿನಿ, ಬೇಬಿ ಶ್ಯಾಮಿಲಿಯಂತಹ ಪುಟಾಣಿಗಳು ತೀರಾ ಚಿಕ್ಕ ವಯಸ್ಸಿನಲ್ಲೇ ಭಾರೀ ಸುದ್ದಿ ಮಾಡುತ್ತಾರೆ. ಬೇಬಿ ಶ್ಯಾಮಿಲಿಯಂತೂ ದೇಶದಲ್ಲೇ ಅತಿ ಹೆಚ್ಚಿನ ಸಂಭಾವನೆ ಪಡೆದ ನಟಿ, ಅತ್ಯಂತ ಹೆಚ್ಚಿನ ತೆರಿಗೆ ಪಾವತಿಸಿದ ನಟಿ ಅಂತಲೇ ಹೆಸರು ಮಾಡಿದ್ದಳು. ಆಗ ಆಕೆಯ ವಯಸ್ಸು ಬರೀ ಮೂರು! ಆವರ ಮುದ್ದು ಮುದ್ದು ಮಾತು ವಿಶಿಷ್ಟ ಹಾವ ಭಾವಗಳು ಚಿತ್ರರಂಗದಲ್ಲಿ ಸಂಚಲನ ಉಂಟು ಮಾಡುತ್ತದೆ. ಇಂಥ ಚೋಟುದ್ದ ಪುಟಾಣಿಗಳ ಮೇಲೆ ನಿರ್ಮಾಪಕರು ಕೋಟ್ಯಂತರ ರೂ. ಬಂಡವಾಳ ಹೂಡಿ ಹಲವು ಪಟ್ಟು ಹೆಚ್ಚು ಲಾಭ ಗಿಟ್ಟಿಸುತ್ತಾರೆ. ಮೂರು ವರ್ಷದ ಪುಟಾಣಿಯು ರೌಡಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದನ್ನು ಕಂಡು ಪ್ರೇಕ್ಷಕರು ಕೇಕೆ ಹಾಕುತ್ತಾರೆ. ಹಾಡಿ ನರ್ತಿಸುವಾಗ ಚಪ್ಪಾಳೆ ಹೊಡೆಯುತ್ತಾರೆ. ಅಬ್ಬಾ! ಎಷ್ಟು ಚೂಟಿ ಇದ್ದಾಳೆ ಈ ಹುಡುಗಿ ಎನ್ನುತ್ತಾರೆ. ನೀವೂ ಇದ್ದೀರಿ ‘ದಂಡಪಿಂಡ’ ಗಳು ಎಂದು ತಮ್ಮ ಮಕ್ಕಳ ಪೃಷ್ಠ ಹಿಂಡುತ್ತಾರೆ. ಆದರೆ ಆ ಬಾಲನಟರ ರಂಗುರಂಗಿನ ಪ್ರಪಂಚದ ಹಿಂದಿನ ಕರಾಳ ಚಿತ್ರಣ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ.

  ಕವಿತಾ ಇಲ್ಲಿ ಆರಿಸಿಕೊಂಡಿರುವುದು ಅಂಥ ಮಕ್ಕಳ ಮೂಕ ವೇದನೆಯನ್ನು. ಇಂಥದೊಂದು ಮೂಕ ವಿಶಿಷ್ಟ ವಸ್ತು ಆರಿಸಿಕೊಂಡದ್ದೇ ಮೊದಲ ಸುತ್ತಿನಲ್ಲಿ ಅವರಿಗೆ ಸಿಕ್ಕ ಜಯ.

  ಮಧ್ಯಮ ವರ್ಗದ ಗೃಹಿಣಿ ಸರೋಜ (ಡೈಸಿ ಬೋಪಣ್ಣ)ಗೆ ಸ್ವಲ್ಪ ಸಿನಿಮಾ ಕ್ರೇಜ್‌. ಮಗಳು ಬಿಂದು( ಬೇಬಿ ರಕ್ಷಿತಾ) ವನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಾಳೆ. ಆಕಸ್ಮಿಕವಾಗಿ ಸಿನಿಮಾದಲ್ಲಿ ನಟಿಸುವ ಅವಕಾಶ ಬರುತ್ತದೆ. ಕೇವಲ ಹದಿನೈದು ದಿನಗಳ ಮಟ್ಟಿಗೆ ಮಾತ್ರ ಎಂಬ ಕರಾರಿನ ಮೇರೆಗೆ ಬಿಂದುವನ್ನು ಕ್ಯಾಮರಾ ಮಂದೆ ನಿಲ್ಲಿಸುತ್ತಾರೆ. ಆದರೆ ಮುಂದೆ ಹೊಸ ಹೊಸ ಅವಕಾಶಗಳ ಲಭಿಸುತ್ತಲೇ ಹೋಗುತ್ತದೆ. ದೊಡ್ಡ ಮೊತ್ತದ ಸಂಭಾವನೆಯ ಆಮಿಷದ ಎದುರು ಆಕೆಯ ಬಾಲ್ಯಾವಸ್ಥೆ ಕಮರುತ್ತದೆ. ಶಿಕ್ಷಣ ಮೊಟಕುಗೊಳ್ಳುತ್ತದೆ. ಶೂಟಿಂಗ್‌ ನೆಪದಲ್ಲಿ ಬಿಂದು ನಾನಾ ರೀತಿಯ ಹಿಂಸೆ ಅನುಭವಿಸುತ್ತಾಳೆ. ಮುಂದೊಂದು ದಿನ ನಟನೆ ಆಕೆಯ ಅಪ್ಪ-ಅಮ್ಮನ ನಡುವಿನ ಕಲಹಕ್ಕೂ ಕಾರಣವಾಗುತ್ತದೆ...

  ಸೂಕ್ಷ್ಮಮತ್ತು ಗಂಭಿರ ಸಮಸ್ಯೆಯಾಂದನ್ನು ತುಸು ರಂಜನೆ ಮತ್ತು ಹಾಸ್ಯ ಲೇಪನದೊಂದಿಗೆ ಚಿತ್ರಿಸಿದ್ದು ಕವಿತಾ ಹೆಗ್ಗಳಿಕೆ. ಬಾಲ ನಟರ ಸಮಸ್ಯೆ ಮಾತ್ರವಲ್ಲ, ಇಲ್ಲಿ ಮಧ್ಯಮ ವರ್ಗದವರ ಚಡಪಡಿಕೆಯ ನೆರಳೂ ಇದೆ. ಹೇಳಹೇಕಾದ ಅಂಶಗಳನ್ನು ನಿರ್ದೇಶಕರು ಅಲ್ಲಲ್ಲಿ ಮಾರ್ವಿಕ ಸನ್ನಿವೇಶಗಳ ಮೂಲಕ ಹೊರಗೆಡವಿದ್ದಾರೆ.

  ಬಿಂದುವಿನ ಅಪ್ಪ-ಅಮ್ಮನಾಗಿ ಡೈಸಿ ಬೋಪಣ್ಣ ಮತ್ತು ಸಂಪತ್‌ ಕುಮಾರ್‌ ಗಮನ ಸೆಳೆಯುತ್ತಾರೆ. ‘ನಟ’ ನ ಪಾತ್ರದಲ್ಲಿರುವ ಪ್ರಕಾಶ್‌ ರೈ ನಟನೆಯಲ್ಲಿ ಎಂದಿನ ಲವಲವಿಕಯಿದೆ. ಸ್ವತ ನಿರ್ದೇಶಕರಾದ ಜೋಸೈಮನ್‌ ಮತ್ತು ರಾಜೇಂದ್ರಕುಮಾರ್‌ ಆರ್ಯ ನಿರ್ದೇಶಕರಾಗಿಯೇ ನಟಿಸಿದ್ದಾರೆ. ಸುಧಾರಾಣಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಎನ್‌. ಸ್ವಾಮಿ ಸಂಕಲನ ಅಚ್ಚರಿ ಮೂಡಿಸುತ್ತದೆ. ಇಲ್ಲೊಂದು ದೃಶ್ಯವಿದೆ, ಅದು ಮಗಳು ಮತ್ತೊಂದು ಚಿತ್ರದಲ್ಲಿ ನಟಿಸಬೇಕೋ ಬೇಡವೋ ಎಂಬ ಬಗ್ಗೆ ಅಪ್ಪ-ಅಮ್ಮನ ನಡುವೆ ನಡೆಯುವ ಸಂವಾದ ಮಗಳು ನಟನೆ ಮುಂದುವರಿಸಿ ಶಾಲೆಗೆ ಚಕ್ಕರ್‌ ಹೊಡೆಯುವುದು ಅಪ್ಪನಿಗೆ ಇಷ್ಟವಿಲ್ಲ . ಆತನ ಮಾತು ಮುಗಿಸಿದ ತಕ್ಷಣ ಅಮ್ಮನ ಕ್ಲೋಸ್‌ ಅಪ್‌. ಆಕೆಯೆ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ಪ್ರೇಕ್ಷಕರಿಗೆ. ‘ಸ್ವಲ್ಪ ದಿನ ಎಡ್ಜಸ್ಟ್‌ ಮಾಡಿಕೊಳ್ಳಿ ’ ಎಂಬ ಮಾತು ಆಕೆಯಿಂದ ಬರುತ್ತದೆ. ಆದರೆ ಆಕೆಯ ಮುಂದಿರುವುದು ಗಂಡ ಅಲ್ಲ, ಶಾಲೆಯ ಮುಖ್ಯೋಪಾಧ್ಯಾಯಿನಿ, ಮನೆಯಲ್ಲಿದ್ದ ಸನ್ನಿವೇಶ ಯಾರ ಅರಿವಿಗೂ ಬಾರದಂತೆ ಶಾಲೆಗೆ ವರ್ಗಾವಣೆಯಾಗುತ್ತದೆ. ನಿರ್ದೇಶಕಿಯ ಕಲ್ಪನೆಗೆ ಮುಕ್ಕಾಗದಂತೆ ಸ್ವಾಮಿ ಸಂಕಲಿಸಿದ್ದಾರೆ.

  ನಿರ್ದೇಶಕಿಯ ಪ್ರಭುತ್ವ ಸಾರುವ ಮತ್ತೊಂದು ದೃಶ್ಯ, ಪುಟಾಣಿ ಇಂದು ಆತ್ಮಹತ್ಯೆಗೆ ಯತ್ನಿಸಿದಾಗ , ಸಿನಿಮಾ ಸಹವಾಸದಿಂದ ಆಕೆ ಏನೆಲ್ಲ ಕಲಿತು ಬಿಟ್ಟಿದ್ದಾಳೆ. ಲವ್‌, ಡೈವೋರ್ಸ್‌ ಎಂಬ ವಯಸ್ಕ ಪದಗಳೆಲ್ಲ ಆಕೆಗೆ ಬಾಯಿ ಪಾಠ. ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆಂಬುದು ಆಕೆಗೆ ಗೊತ್ತು. ತನ್ನಿಂದಾಗ ಅಪ್ಪ-ಅಮ್ಮನ ಮಧ್ಯ ಕಲಹ ಉಂಟಾದಾಗ ಆಕೆ ಕೋಣೆಯ ಬೀಗ ಹಾಕಿಕೊಂಡು ಫ್ಯಾನಿಗೆ ನೇಣು ಹಾಕಿಕೊಳ್ಳಲು ಯತ್ನಿಸುತ್ತಾಳೆ. ಈ ದೃಶ್ಯ ನೋಡುವಾಗ ಪ್ರೇಕ್ಷಕರಿಗೆ ನಗಬೇಕೋ ಅಳಬೇಕೋ ಗೋತ್ತಾಗುವುದಿಲ್ಲ. ಏಕೆಂದರೆ ಆ ಕೋಣೆಯ ಫ್ಯಾನಿಗೆ ಉರುಳು ಹಾಕಲು ಇಂದೂಗೆ ಆಕೆಯ ಅಣ್ಣನೆ ಹೆಲ್ಫ್‌ ಮಾಡುತ್ತಾನೆ! ದೊಡ್ಡವರ ಅತಿಯಾಸೆ, ಅಹಂ ಎದುರು ಮಕ್ಕಳ ಮುಗ್ಧತೆ ಎದ್ದು ಕಾಣುತ್ತದೆ.

  ಎಚ್‌. ಎಂ.ರಾಮಚಂದ್ರ ಅವರ ಛಾಯಾಗ್ರಹಣ ಚೆನ್ನಾಗಿದೆ. ಐಸಾಕ್‌ಥಾಮಸ್‌ ಕುಟ್ಟುಪಲ್ಲಿ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

  ಆದರೆ, ತೆರೆಯ ಮೇಲೆ ವಿಜೃಂಭಿಸುವ ಬಾಲ ನಟರು ಮರೆಯಲ್ಲಿ ಅನುಭವಿಸುವ ನೋವನ್ನು ಅನಾವರಣಗೊಳಿಸಲು ಇಲ್ಲಿ 9 ವರ್ಷದ ಬೇಬಿ ರಕ್ಷಾ ನಟಿಸಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ!

  (ಸ್ನೇಹಸೇತು : ವಿಜಯ ಕರ್ನಾಟಕ)

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X