»   » ಮನದ ಉಲ್ಲಾಸಕ್ಕಾಗಿ ‘ಶಾಂತಿ ನಿವಾಸ’ ನೋಡಿ!

ಮನದ ಉಲ್ಲಾಸಕ್ಕಾಗಿ ‘ಶಾಂತಿ ನಿವಾಸ’ ನೋಡಿ!

Subscribe to Filmibeat Kannada


ಐಟಂ ಡ್ಯಾನ್ಸ್‌, ಲಾಂಗು, ಮಚ್ಚು, ಕಿಚ್ಚು, ಕೊಚ್ಚು ಯಾವುದೂ ಇಲ್ಲ. ಆ ಮಟ್ಟಿಗೆ ಸುದೀಪ್‌, ಇಡೀ ಫ್ಯಾಮಿಲಿಗೆ ಇನ್ನೊಂದು ಸದಭಿರುಚಿಯ ಚಿತ್ರವನ್ನು ಕೊಟ್ಟಿದ್ದಾರೆ. ‘ಶಾಂತಿ ನಿವಾಸ’ಕ್ಕೊಮ್ಮೆ ಹೋಗಿ ಬನ್ನಿ ...

  • ಚೇತನ್‌
ಅದು ಹೆಸರಿಗೆ ‘ಶಾಂತಿ ನಿವಾಸ’. ಆದರೆ, ಅಶಾಂತಿ ನಿವಾಸ ಎಂದು ಹೆಸರಿಟ್ಟಿದ್ದರೆ ಚೆನ್ನ ಎಂಬುದು ಆ ಮನೆಯ ಬಗ್ಗೆ ಗೊತ್ತಿರುವವರ, ಊರಿನವರ ಅಂಬೋಣ. ಆ ಮನೆಗೊಬ್ಬ ಹಿರಿಯರು. ಅವರಿಗೆ ನಾಲ್ಕು ಮಕ್ಕಳು. ನಂದಾದೀಪ ಹಚ್ಚಲು ಸೊಸೆಯರಿಬ್ಬರು. ಕುಲದ ಹೆಸರು ಉಳಿಸಲು, ಆಡಿಪಾಡಿ ಕುಣಿಯಲು ಇದ್ದರು ಮೂರು ಮೊಮ್ಮಕ್ಕಳು.

ಆ ಮನೆಯಲ್ಲಿ ಇಷ್ಟೇ ಮಂದಿ. ಹೇಳಿ ಕೊಳ್ಳುವುದಕ್ಕೆ ಏಳು ಮತ್ತೊಂದು. ಆದರೆ, ಅವರಲ್ಲಿ ಅದೆಷ್ಟು ವ್ಯತ್ಯಾಸಗಳು? ಹೆಂಗಸರ ಕಿಟಿಕಿಟಿ, ಗಂಡಸರ ಜಿಟಿಜಿಟಿ, ಮುದುಕನ ಪಿಟಿಪಿಟಿ ... ಅದೇ ಕಾರಣಕ್ಕೆ ಆ ಮನೆಗೆ ಕೆಲಸ ಮಾಡುವುದಕ್ಕೆ ಒಬ್ಬರೂ ಬರುವುದಿಲ್ಲ!

ಇಂಥದೊಂದು ಶಾಂತಿ ನಿವಾಸಕ್ಕೆ ಶಾಂತಿ ಎಂದರೇನು ಎಂದು ಹೇಳಿಕೊಡುವುದಕ್ಕೆ ಬರುತ್ತಾನೆ ಅಡುಗೆ ಭಟ್ಟ ರಘು. ಆತ ಅಡುಗೆ ಭಟ್ಟನೆಂದು ಬಂದರೂ, ಎಲ್ಲ ಕೆಲಸಕ್ಕೂ ಸೈ. ಕಾರಣ ಎಲ್ಲ ರಂಗಗಳಲ್ಲಿ ಜನಪ್ರಿಯರಾದವರ ಮನೆಯಲ್ಲಿ ಮಾಡಿದ ಕೆಲಸದ ಅನುಭವ. ಅದೇ ಕಾರಣಕ್ಕೆ ಆತ ಭರತನಾಟ್ಯ ಹೇಳಿಕೊಡುತ್ತಾನೆ, ತಾನೇ ರಾಗ ಹಾಕುತ್ತಾನೆ, ಗಣಿತ ತಿದ್ದುತ್ತಾನೆ, ಕೊನೆಗೆ ಬಚ್ಚಲೂ ಕೂಡ ತೊಳೆಯುತ್ತಾನೆ. ಒಟ್ಟಿನಲ್ಲಿ ನಮ್ಮ ಕೆಲಸದ ಜತೆಜತೆಗೆ ಬೇರೆಯವರ ಕೆಲಸ ಮಾಡಿ ಕೊಡುವಾಗ ಅವರಿಗೆ ಆಗುವ ಸಂತೋಷ ಇದೆಯಲ್ಲಾ? ಅದಕ್ಕಿಂತ ನಮ್ಮ ಸಂತೋಷ ನೂರ್ಮಡಿಯಾಗುತ್ತದೆ ಎಂದು ಅರ್ಥ ಮಾಡಿಸುತ್ತಾನೆ.

ಒಂದೇ ಮನೆಯಲ್ಲಿದ್ದರೂ ಪರಸ್ಪರ ದೂರವಾಗಿದ್ದ ಮನಸ್ಸುಗಳನ್ನು ಹತ್ತಿರ ತರುತ್ತಾನೆ. ನಂತರ ...

ಹೃಷಿಕೇಶ ಮುಖರ್ಜಿ 35 ವರ್ಷಗಳ ಹಿಂದೆ ಹಿಂದಿಯಲ್ಲಿ ಇದೇ ಕತೆಯಿರುವ ‘ಬಾವರ್ಚಿ’ ಮಾಡಿದ್ದರು. ಚಿತ್ರದಲ್ಲಿರುವ ಸಂದೇಶ ಸಾರ್ವಕಾಲಿಕವಾದ್ದರಿಂದ ಸುದೀಪ್‌ ಅದನ್ನು ಈಗ ರೀಮೇಕಿಸಿದ್ದಾರೆ. ಅದನ್ನು ಬದಲಾಯಿಸುವುದು ಕಷ್ಟವಾದ್ದರಿಂದ, ಮೂಲ ಚಿತ್ರಕ್ಕೆ ನಿಷ್ಠರಾಗಿದ್ದಾರೆ. ಒಂದೆರಡು ಹಾಡುಗಳನ್ನು ಸೇರಿಸಿದ್ದುಬಿಟ್ಟರೆ, ‘ಬಾವರ್ಚಿ’ ಯನ್ನೇ ಕನ್ನಡೀಕರಿಸಿದ್ದಾರೆ.

ಚಿತ್ರ ಇಷ್ಟವಾಗುವುದೇ ಅದಕ್ಕೆ. ಇದರಲ್ಲಿ ಐಟಂ ಡ್ಯಾನ್ಸ್‌, ಲಾಂಗು, ಮಚ್ಚು, ಕಿಚ್ಚು, ಕೊಚ್ಚು ಯಾವುದೂ ಇಲ್ಲ. ಆ ಮಟ್ಟಿಗೆ ಸುದೀಪ್‌ ಇಡೀ ಫ್ಯಾಮಿಲಿಗೆ ಇನ್ನೊಂದು ಸದಭಿರುಚಿಯ ಚಿತ್ರವನ್ನು ಕೊಟ್ಟಿದ್ದಾರೆ. ಆದರೆ, ಮೂಲ ಚಿತ್ರದಂತೆ ಇಲ್ಲೂ ಚುರುಕಾಗಿದ್ದರೆ ಇನ್ನಷ್ಟು ಚೆಂದವಾಗಿರುತ್ತಿತ್ತು.

ಏನೇ ಆದರೂ ನಿರ್ದೇಶಕ ಸುದೀಪ್‌ಗಿಂತ ನಟ ಸುದೀಪ್‌ ಇಷ್ಟವಾಗುತ್ತಾರೆ. ಅವರೊಬ್ಬರೇ ಅಲ್ಲ ಮಾ. ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ರಮೇಶ್‌ ಭಟ್‌, ವೈಶಾಲಿ ಕಾಸರವಳ್ಳಿ, ಚಿತ್ರಾ ಶೆಣೈ, ಅನು ಪ್ರಭಾಕರ್‌, ಕೋಮಲ್‌ ಕುಮಾರ್‌, ದೀಪು ಎಲ್ಲರೂ ತಮ್ಮ ತಮ್ಮ ಪಾತ್ರಗಳಲ್ಲಿ ಸೈ. ಸಣ್ಣ ಪಾತ್ರವಾದರೂ ಅರುಣ್‌ ಸಾಗರ್‌ ಗೆಲ್ಲುತ್ತಾರೆ. ಕಲಾವಿದರು ಮಾತ್ರವಲ್ಲ, ತಂತ್ರಜ್ಞರೂ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ಗೆಲ್ಲುವುದು ಛಾಯಾಗ್ರಾಹಕ ವೆಂಕಟ್‌. ಹಾಡುಗಳು ರೀಮೇಕ್‌ ಆದರೂ ಇಷ್ಟವಾಗುತ್ತವೆ.

ಶಾಂತಿ ನಿವಾಸಕ್ಕೊಮ್ಮೆ ಹೋಗಿ ಬನ್ನಿ ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada