»   » ಚಂದ್ರ ಚಕೋರಿ : ಇದು ನಾರಾಯಣ ಪಾಯಸ ಕಣ್ರೀ..

ಚಂದ್ರ ಚಕೋರಿ : ಇದು ನಾರಾಯಣ ಪಾಯಸ ಕಣ್ರೀ..

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ನಮ್ಮ ನೆಲದ ಘಮವನ್ನು ಹೇಗೆ ತೋರಿಸಿದರೆ ಚೆಂದ? ಗ್ರಾಮೀಣ ಹಿನ್ನೆಲೆಯ ಚಿತ್ರಕ್ಕೆ ಅಲ್ಲಿಯ ಮುಗ್ಧ ಸಂಪ್ರದಾಯಗಳನ್ನು ಪೂರಕವಾಗಿಸುವುದು ಹೇಗೆ? ಕಮರ್ಷಿಯಲ್‌ ಕತೆಯಲ್ಲಿ ಅಚ್ಚರಿ ಹುಟ್ಟಿಸುವ ತಿರುವುಗಳು ಹೇಗಿರಬೇಕು? ಮತ್ತು ಒಂದು ಸುಂದರ ಚಿತ್ರಕತೆಗೆ ಎಷ್ಟೊಂದು ಶ್ರಮಪಡಬೇಕು? ಇವೆಲ್ಲ ಪ್ರಶ್ನೆಗಳಿಗೆ ನಿರ್ದೇಶಕ ಎಸ್‌.ನಾರಾಯಣ್‌ ತಮ್ಮ ಒಂದೇ ಚಿತ್ರದಲ್ಲಿ ಜಬರ್‌ದಸ್ತ್‌ ಉತ್ತರ ನೀಡಿದ್ದಾರೆ.

‘ಅನುರಾಗದ ಅಲೆಗಳು’ ಚಿತ್ರವನ್ನು ನಿರ್ದೇಶಿಸಿದ್ದು ತಾವೇ ಅನ್ನುವುದನ್ನು ನೆನಪು ಮಾಡಿಕೊಟ್ಟಿದ್ದಾರೆ. ‘ಪಕ್ಕಾ ಚುಕ್ಕಾ’ದಂತಹ ಚಿತ್ರಕ್ಕೆ ಕ್ಯಾಮರಾ ಹಿಡಿದದ್ದು ಇವರೇನಾ ಎನ್ನುವ ಅಚ್ಚರಿಗೂ ಕಾರಣವಾಗಿದ್ದಾರೆ. ಏನೇ ಆದರೂ ಒಂದಂತೂ ನಿಜ. ಇದುವರೆಗೆ ನಾರಾಯಣ್‌ ನಿರ್ದೇಶಿಸಿದ ಚಿತ್ರಗಳಲ್ಲಿ ‘ಚಂದ್ರಚಕೋರಿ’ ದಿ ಬೆಸ್ಟ್‌ !

ಅದನ್ನು ಪ್ರೂವ್‌ ಮಾಡಲು ಅವರು ಆರಿಸಿಕೊಂಡದ್ದು ಹಳ್ಳಿಗಾಡಿನ ನವಿರು ಪ್ರೇಮಕತೆ. ತನ್ನ ಪ್ರೀತಿಗಾಗಿ ಮಾತನ್ನೇ ಬಲಿಕೊಡುವ ಮುಗ್ಧ ಪ್ರೇಮಿಯಾಬ್ಬನ ದಗ್ಧ ಪ್ರೇಮಕಾವ್ಯವಿದು. ಒಬ್ಬ ನಾಯಕ ಇಬ್ಬರು ನಾಯಕಿಯರಿದ್ದರೂ ಇದು ತ್ರಿಕೋನ ಪ್ರೇಮಕತೆಯಲ್ಲ. ಇದಕ್ಕಿಂತ ಒಂದು ರವಷ್ಟು ಹೆಚ್ಚಿಗೆ ಹೇಳಿದರೆ ಸಿನಿಮಾ ನೋಡುವ ಕುತೂಹಲಾನೇ ಹೊರಟು ಹೋಗುತ್ತಲ್ರಿ. ಹೀಗಾಗಿ ನಾರಾಯಣ್‌ ಬಡಿಸಿದ ರಾಗಿ ಮುದ್ದೆ- ಬಸ್ಸಾರಿನ ರುಚಿ ನೀವೇ ಚಪ್ಪರಿಸಿ. ಹೋಳಿಗೆ, ಪಲ್ಯ, ಹಪ್ಪಳ, ಉಪ್ಪಿನಕಾಯಿ ಸ್ವಾದ ಹ್ಯಾಗಿದೆ ಎನ್ನುವುದನ್ನು ಕೇಳುವಂತವರಾಗಿ...

ಮದುವೆ ಸಡಗರ ಹೇಗಿರುತ್ತದೆಂದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಒಂದು ಚಿತ್ರದಲ್ಲಿ- ನೀವೇ ಅಲ್ಲಿ ಅಡ್ಡಾಡಿದಂತೆ- ಕಟ್ಟಿಕೊಡುವುದು ಚಿಕ್ಕ ವಿಷಯವೇನಲ್ಲ. ಮೊದಲ ದೃಶ್ಯದಿಂದ ಕೊನೆಯವರೆಗೂ ಮದುವೆ ಸಡಗರ ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ. ಹರೆಯದ ಹುಡುಗರ ಕಣ್ಣಾಟ, ಹುಡುಗಿಯರ ತುಂಟಾಟ, ಹಿರಿತಲೆಗಳ ವರಾತ, ಜೊತೆಗೆ ಹೂ ತುಂಬಿದ ಬುಟ್ಟಿಗಳ ಪರಿಮಳ, ಹಂಡೆಗಟ್ಟಲೆ ಬೇಯಿಸಿದ ಅನ್ನಸಾರಿನ ಹಬೆಹಬೆ, ಚಿಗುರು ಮಾವಿನೆಲೆಗಳ ತುಂತುರು, ಸೀರೆಗಳ ಸರಬರ, ಪಂಚೆಗಳ ಓಡಾಟ... ಇದೆಲ್ಲವನ್ನೂ ನಾರಾಯಣ್‌ ಎಷ್ಟೊಂದು ಮುತುವರ್ಜಿ ವಹಿಸಿ ಚಿತ್ರಿಸಿದ್ದಾರೆಂದರೆ ನೋಡ್ತಾನೋಡ್ತಾ ಮದುವೆಯೇ ಒಂದು ಪಾತ್ರವಾಗಿಬಿಡುತ್ತದೆ. ಹುಡುಗಿಗೆ ಮೂಗು ಚುಚ್ಚುವುದಾಗಲಿ, ಹೆಂಗಸರಿಗೆ ಬಳೆ ತೊಡೆಸುವ ಆಚಾರವಿರಲಿ, ಮದುವೆ ಮನೆಯಲ್ಲಿನ ಹೆಣ್ಣಿನ ಕಡೆಯವರ ಕೀಳರಿಮೆ ಇರಲಿ. ಗಂಡಿನ ಕಡೆಯವರ ದರ್ಬಾರಿರಲಿ ಕೊಂಚ ತಮಾಷೆಯಾಗಿ ತೋರಿಸಿದರೂ ಮರೆತ ನೆನಪಿಗೆ ಒಗ್ಗರಣೆ ಹಾಕಿದಂತಿದೆ. ಪ್ರತಿಯಾಂದು ದೃಶ್ಯದಲ್ಲೂ ಶ್ರೀಮಂತಿಕೆ ಕಣ್ಣಿಗೆ ಹೊಡೆಯುತ್ತದೆ. ಜೀವಂತಿಕೆ ಉಸಿರಾಡುತ್ತದೆ. ಹಾಡುಗಳಲ್ಲಿ ಮಣ್ಣಿನ ಸೊಗಡಿದೆ. ಯಾವುದೇ ಹಾಡು ಬೋರಾಗುವುದಿಲ್ಲವೆಂದರೆ ಅದರ ಪೂರ್ತಿ ಕ್ರೆಡಿಟ್ಟು ಸಂಗೀತ ನಿರ್ದೇಶಕ ಎಸ್‌.ಎ.ರಾಜಕುಮಾರ್‌ಗೆ ಸಲ್ಲಬೇಕು. ಹಾಡುಗಳನ್ನು ಚಿತ್ರಿಸಿದ ರೀತಿಯೂ ಅದರ ಯಶಸ್ಸಿಗೆ ಗರಿ ಮೂಡಿಸಿದೆ. ದಾಸ್‌ ಛಾಯಾಗ್ರಹಣದಲ್ಲಿ ಎಲ್ಲವೂ ತಾಜಾ ತಾಜಾ. ಚಿತ್ರಕ್ಕೆ ಬಳಸಿದ ಲೊಕೇಷನ್‌ಗಳು ಫ್ರೆಶ್‌ ಆಗಿವೆ.

ಮೊದಲ ಬಾರಿ ನಾಯಕ ನಟನಾಗಿ ನಟಿಸಿರುವ ಮುರಳಿ ಎಲ್ಲವನ್ನೂ ಕಣ್ಣಿನ ಮೂಲಕವೇ ಹೇಳಿದ್ದಾನೆ. ಮುಖದ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾನೆ. ಎಮೊಷನಲ್‌ ದೃಶ್ಯಗಳಲ್ಲಿ ತಾದ್ಯಾತ್ಮ್ಯವಾಗಿ ನಟಿಸಿದ್ದಾನೆ. ಪ್ರೀತಿಯ ಗೆಜ್ಜೆ ಕಳೆದಾಗ, ಸಾಕಿದ ಅಮ್ಮ ಮನೆ ಬಿಟ್ಟು ಹೋಗೆಂದು ಹೇಳಿದಾಗ ಆತ ತನ್ನ ಇಡೀ ಜೀವವನ್ನೇ ಅಂಗೈಯಲ್ಲಿ ಹಿಡಿದುಕೊಂಡಂತೆ ಕ್ಯಾಮರಾ ಮುಂದೆ ನಿಂತಿದ್ದಾನೆ. ಈತನಿಂದ ಇನ್ನಷ್ಟು ನಿರೀಕ್ಷೆ ಮಾಡಬಹುದು. ಮೊದಲ ಚಿತ್ರದಲ್ಲಿ ಈ ರೀತಿಯ ಪಾತ್ರವನ್ನು ಮಾಡಲು ಯಾವ ನಾಯಕನೂ ಒಪ್ಪುವುದಿಲ್ಲ. ಅಂತಹದೊಂದು ರಿಸ್ಕ್‌ ಪಡೆದದ್ದು ಮುರಳಿ ಒಳಗಿನ ಕಲಾವಿದನಿಗೆ ಸವಾಲು. ಹೊಸ ಹುಡುಗ ಶ್ರೀನಗರ ಕಿಟ್ಟಿ ಕೆಲವೊಂದು ಸಲ ನಾಯಕನನ್ನೇ ಸೈಡಿಗೆ ಸರಿಸುವಂತೆ ನಟಿಸಿದ್ದಾನೆ. ಹೆಸರಿಗೆ ವಿಲನ್‌ ಆದರೂ ಹೀರೋ ಆಗುವ ಅರ್ಹತೆಯೂ ಈತನಿಗೆ ಇದ್ದಂತಿದೆ. ಉಳಿದಂತೆ ನಾಝ್‌, ಪ್ರಿಯಾ, ಶೋಭ ರಾಜ್‌, ದೊಡ್ಡಣ್ಣ, ಸುಂದರರಾಜ್‌, ಅಶೋಕ್‌, ಹೊನ್ನವಳ್ಳಿ ಕೃಷ್ಣ ತಮ್ಮ ಪಾತ್ರವನ್ನು ನೀಟಾಗಿ ಮಾಡಿದ್ದಾರೆ.

ಪ್ರತಿಯಾಂದರಲ್ಲೂ ಹೊಸತನ ನೀಡಲು ಯತ್ನಿಸಿರುವ ನಾರಾಯಣ್‌ ಎರಡು ಕೋಟಿಯ ಚಿತ್ರದಲ್ಲೂ ಎರಡು ಕಾಸಿನ ಕಕ್ಕಸ್‌ ಕಾಮಿಡಿಗೇ ಜೋತು ಬಿದ್ದಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿ ತರ್ಕವೇ ಇಲ್ಲ. ಮೂರು ಗಂಟೆ ಅವಧಿಯ ಈ ಚಿತ್ರವನ್ನು ನೋಡಿದಾಗ ಎರಡು ಸಿನಿಮಾ ನೋಡಿದಂತೆ ಅನಿಸುತ್ತದೆ. ಎರಡು ವಾರಗಳಿಂದ ಯಾವುದೇ ಚಿತ್ರ ತೆರೆ ಕಂಡಿಲ್ಲ. ಆ ಅಂತರ ತುಂಬಿಸುವ ಅಭಿಲಾಷೆಯಿಂದ ನಾರಾಯಣ್‌ ಕನ್ನಡಿಗರಿಗೆ ಈ ಬೋನಸ್‌ ಕೊಟ್ಟಿರಬಹುದೇ ?

(ಸ್ನೇಹ ಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada