»   » ತುಂಬಿ ತುಳುಕುವ ‘ಐಶ್ವರ್ಯ’

ತುಂಬಿ ತುಳುಕುವ ‘ಐಶ್ವರ್ಯ’

Posted By:
Subscribe to Filmibeat Kannada


ಕತೆಯ ಜತೆಜತೆಯಲ್ಲೇ ಹಾಸ್ಯ, ಸುಂದರ ಲೊಕೇಷನ್ನು, ಮೆಲುಕು ಹಾಕುವ ಹಾಡು, ಪಂಚಿಂಗ್‌ ಮಾತು... ಒಟ್ಟಿನಲ್ಲಿ ಉಪ್ಪಿ ಹೇಳಿದಂತೆ ಈ ಚಿತ್ರನೋಡಿದಾಗ, ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅಲೆದ ಅನುಭವ.

  • ದೇವಶೆಟ್ಟಿ ಮಹೇಶ್‌
ನೀವು ನೀರಿಗಾಗಿ ಪಕ್ಕದ ಮನೆಯವರ ಜತೆ ಕಿತ್ತಾಡಿದ್ದರೆ, ಟ್ರಾಫಿಕ್‌ನಲ್ಲಿ ಸಿಕ್ಕು ನಲುಗಿದ್ದರೆ, ಮೆಚ್ಚಿದ ಹುಡುಗ/ಗಿ ಕೈ ಕೊಟ್ಟಿದ್ದರೆ, ಯಾವುದೋ ರೀತಿ ಮೂಡ್‌ ಹಾಳಾಗಿದ್ದರೆ ಸುಮ್ಮನೆ ಈ ಸಿನಿಮಾಕ್ಕೆ ಹೋಗಿ. ಎರಡೂವರೆ ಗಂಟೆಯಲ್ಲಿ ಮನಸು ಮಂದಾರ. ಕನಸುಗಳ ಮಹಾಪೂರ. ತುಟಿಯಲ್ಲಿ ನಗೆಯ ಕಾರಂಜಿ ಹಂಗೇ...ತಂಪಾದವೋ ಎಲ್ಲ ತಂಪಾದವೊ...

ಇದೆಲ್ಲಾ ಐಶ್ವರ್ಯ ಎಫೆಕ್ಟ್‌ !

ಒಂದು ಕಡೆ ಪಂಕ್‌ ಉಪ್ಪಿ, ಇನ್ನೊಂದು ಕಡೆ ದೀಪಿಕಾ ದೀಪಾವಳಿ, ಮತ್ತೊಂದು ಕಡೆ ಕ್ಯಾಡ್‌ಬರೀಸ್‌ನಂಥ ಡೈಸಿ... ಈ ಮೂವರೇ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಮಾಡಿದಷ್ಟು ಸಿನಿಮಾ ಸಕತ್‌ ಹಾಟ್‌ ಮಗಾ... ಆದರೆ ಇಂದ್ರಜಿತ್‌ ಅಷ್ಟೇ ಕೊಟ್ಟು ಪ್ರೇಕ್ಷಕರ ಕಾಸಿಗೆ ಮೋಸ ಮಾಡುವುದಿಲ್ಲ. ಪೈಸೆಪೈಸೆಯ ಲೆಕ್ಕಾ ಚುಕ್ತಾ ಮಾಡುತ್ತಾರೆ. ಆಗ ಬರುತ್ತಾರೆ ಕೋಮಲ್‌, ಸಾಧು ಕೋಕಿಲಾ, ದೊಡ್ಡಣ್ಣ, ಚಿದಾನಂದ, ಚಿತ್ರಾ ಶೆಣೈ, ರಾಮಕೃಷ್ಣ, ಮನದೀಪರಾಯ್‌....

ಸೈಡ್‌ವಿಂಗ್‌ನಲ್ಲಿ ರಾಜೇಶ್‌ ರಾಮನಾಥ್‌ ರಂಗು ರಂಗಿನ ಸಂಗೀತ, ಮಧು ಬರೆದ ಮಧು ಬಾಂಡಲದಂಥ ಮಾತು, ಇಲ್ಲೇ ಇದ್ದು ಅಲ್ಲಿಯ ಲೋಕ ನೋಡಿರಿ ಎನ್ನುವ ಕ್ಯಾಮೆರಾಮನ್‌ ಕೃಷ್ಣಕುಮಾರ್‌... ಜತೆಗೆ ಎಲ್ಲರ ಪ್ರತಿಭೆಯನ್ನು ಸೂರೆ ಹೊಡೆದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌.

ಇಂದ್ರಜಿತ್‌ಗೆ ಕತೆಯ ಓಘ ಸಿಕ್ಕಿಬಿಟ್ಟಿದೆ. ಒಂದು ಸಾಮಾನ್ಯ ಕತೆಯನ್ನು ಹೇಗೆ ಹೇಳಿದರೆ ಚೆಂದ ಅನ್ನುವುದು ದಕ್ಕಿದೆ. ಇನ್ನೇನು ಇಷ್ಟೇನಾ ಎನ್ನುವ ಹೊತ್ತಲ್ಲಿ ಹೊಸ ಪಾತ್ರವೊಂದರ ಎಂಟ್ರಿ ಮಾಡುವ ಐಡಿಯಾ ಮತ್ತೊಮ್ಮೆ ಕ್ಲಿಕ್‌ ಆಗಿದೆ. ಸಾಧ್ಯವಿರುವಷ್ಟು ಚಿಕ್ಕ ಚಿಕ್ಕ ದೃಶ್ಯಗಳಿಂದ ಕತೆಗೆ ಫೋರ್ಸ್‌ ನೀಡುವ ಲೆಕ್ಕಾಚಾರ ಕೈ ಹಿಡಿದಿದೆ. ಯಾವ ಹೊತ್ತಿನಲ್ಲಿ ಎಂಥ ಹಾಡಿರಬೇಕೆನ್ನುವ ಉದ್ದೇಶ ಸಾರ್ಥಕವಾಗಿದೆ. ಕತೆಯ ಜತೆಜತೆಯಲ್ಲೇ ಹಾಸ್ಯವನ್ನು ಬೆರೆಸಿದ್ದು ಬೆಲ್ಲದ ಪಾನಕ. ಸುಂದರ ಲೊಕೇಷನ್ನು, ಮೆಲುಕು ಹಾಕುವ ಹಾಡು, ಪಂಚಿಂಗ್‌ ಮಾತು... ಒಟ್ಟಿನಲ್ಲಿ ಉಪ್ಪಿ ಹೇಳಿದಂತೆ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅಲೆದ ಅನುಭವ...

ಇಷ್ಟೆಲ್ಲ ಹೇಳಿದ ಮೇಲೆ ಕತೆ ಹೇಳದಿದ್ದರೆ ಹೇಗೆ? ಉಪ್ಪಿ, ಜಾಹೀರಾತು ಕಂಪನಿಯ ಮ್ಯಾನೇಜರ್‌. ಆತನಿಗೆ ಹುಡುಗಿ ಅಂದರೆ ಅಲರ್ಜಿ. ಮನೆ ಕೆಲಸದ ಎಲ್ಲ ಆಳುಗಳೂ ಪುರುಷ ಪುಂಗವರೇ. ಆದರೆ ಆಫೀಸಿನಲ್ಲಿ ಮಾತ್ರ ಹುಡುಗಿಯರ ದರ್ಬಾರು. ಕಾರಣ ಈತನ ಚಿಕ್ಕಪ್ಪನ ಆರ್ಡರ್ರು. ಅಲ್ಲಿಗೆ ದೀಪಿಕಾ ಬರುತ್ತಾಳೆ. ಅವಳನ್ನು ಕಂಡರೆ ನಾಯಕ ಉರಿದು ಬೀಳುತ್ತಾನೆ; ವಿನಾ ಕಾರಣ. ಆಕೆ ಇನ್ನೇನು ರಾಜೀನಾಮೆ ಕೊಡಬೇಕು...ಆಗ ಆತನ ಸ್ತ್ರೀ ದ್ವೇಷದ ಕಾರಣ ಬಹಿರಂಗ. ಅಲ್ಲೊಂದು ಫ್ಲ್ಯಾಶ್‌ಬ್ಯಾಕ್‌. ಅಲ್ಲಿರುತ್ತಾಳೆ ಡೈಸಿ. ಆಕೆ ಸಾಮಾನ್ಯ ಮಾಡೆಲ್‌. ಆಕಸ್ಮಿಕವಾಗಿ ಆಕೆಗೆ ಉಪ್ಪಿಯಂಥ ದೊಡ್ಡ ಸಂಸ್ಥೆಯ ಮಾಲೀಕನೊಂದಿಗೆ ಲವ್‌ ಇದೆ ಎಂದು ಹೇಳಬೇಕಾಗುತ್ತದೆ... ಮುಂದೆ ಏನೋ ಆಗುತ್ತದೆ. ಅದರಿಂದ ನಾಯಕ ಗರ್ಲ್ಸ್‌ ಅಲರ್ಜಿ ಕಾಯಿಲೆಗೆ ಬೀಳುತ್ತಾನೆ. ಇದು ಗೊತ್ತಾದ ನಂತರ ದೀಪಿಕಾ ಆತನಿಗೆ ಹತ್ತಿರವಾಗುತ್ತಾಳೆ. ಆಮೇಲೆ ಏನೇನು ಆಗುತ್ತಾಳೆ ಅನ್ನೊದನ್ನ ತೆರೆ ಮೇಲೇ ನೋಡಿ ಬಿಡೀಪ್ಪಾ...

ಕೇಳಲು ಮಾಮೂಲಿ ಕತೆ. ಆ ಕತೆಗೆ ತೆಲುಗಿನ ‘ಮನ್ಮಥಡು’ ಮತ್ತು ತಮಿಳಿನ ‘ಘಜನಿ’ ಚಿತ್ರಗಳಿಂದ ಸ್ಫೂರ್ತಿ ಪಡೆಯಲಾಗಿದೆ. ಅದಕ್ಕೆ ಕನ್ನಡದ ನೀರು, ಕರಿಬೇವು, ಸಾಸಿವೆಯ ವಗ್ಗರಣೆ ಹಾಕಿದ್ದಾರೆ ಇಂದ್ರಜಿತ್‌. ಅದೇನೆ ಇರಲಿ, ಇಡೀ ಚಿತ್ರವನ್ನು ಇಂದ್ರಜಿತ್‌ ನಿರೂಪಿಸಿದ ರೀತಿ ಮಾತ್ರ ಅನನ್ಯ. ಪ್ರತಿಯಾಂದು ವಿಭಾಗದಲ್ಲೂ ಅವರ ಕೈಚಳಕ ಕಾಣುತ್ತದೆ. ಕಾಸ್ಟ್ಯೂಮ್‌ನಲ್ಲಂತೂ ಅವರ ಅಭಿರುಚಿ ಮತ್ತು ರುಚಿ ಎರಡೂ ಇದೆ.

ಪರಮ ಪ್ರೀತಿಯ ಕೂದಲನ್ನು ಕತ್ತರಿಸಿದ ಉಪ್ಪಿ, ಕಾಲೇಜು ಹುಡುಗನಂತೆ ಕಾಣುತ್ತಾರೆ. ಅಷ್ಟೇ ಯೂಥ್‌ ಆಗಿ ನಟಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಬರುವ ಡೈಸಿ, ತಾವೆಂಥ ಅದ್ಭುತ ಕಲಾವಿದೆ ಎಂಬುದನ್ನು ನಿರೂಪಿಸಿದ್ದಾರೆ. ದೀಪಿಕಾ ಮುದ್ದು ಮುದ್ದಾಗಿ ಕಾಣುತ್ತಾರೆ. ಅಭಿನಯದಲ್ಲಿ ಇನ್ನೂ ದೂರ ಸಾಗಬೇಕಿದೆ.

ಕೋಮಲ್‌ ಬಂದಾಗ ತೆರೆ ಮೇಲೆ ನಗೆ ನವಿಲಿನ ನಾಟ್ಯ. ಚಿದಾನಂದ, ದೊಡ್ಡಣ್ಣ, ರಾಮಕೃಷ್ಣ, ಚಿತ್ರಾ ಶೆಣೈ, ಸಾಧು...ಎಲ್ಲರೂ ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.

ಇದೆಲ್ಲ ಎಫೆಕ್ಟ್‌ ನಿಮ್ಮ ಮೇಲೂ ಆಗಬೇಕೆಂದರೆ ‘ಐಶ್ವರ್ಯ’ಳನ್ನು ಲೂಟಿ ಮಾಡಿ...!

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada