»   » ಕನ್ನಡಕ್ಕೊಬ್ಬರೇ ದೇಸಾಯಿ, ಪ್ರೇಮಾ: ಇದು ಬರಿ ಮರ್ಮವಲ್ಲ...

ಕನ್ನಡಕ್ಕೊಬ್ಬರೇ ದೇಸಾಯಿ, ಪ್ರೇಮಾ: ಇದು ಬರಿ ಮರ್ಮವಲ್ಲ...

Posted By:
Subscribe to Filmibeat Kannada

ಮಳೆಯ ಸಂಜೆಯಲ್ಲಿ ಪ್ರೇಮಾ ಆಕಸ್ಮಿಕವಾಗಿ ಊರ ಹೊರಗಿನ ‘ತಟ್ಟಿಗೆ ಮನೆ’ಗೆ ಕಾಲಿಡುತ್ತಾಳೆ. ಅಲ್ಲಿ ಹುಡುಗಿಯಾಬ್ಬಳು ಕೊಲೆಯಾಗಿರುತ್ತಾಳೆ. ಆ ಮನೆಯಲ್ಲಿದ್ದವನು ಇವಳನ್ನು ಕೊಲ್ಲಲು ಬರುತ್ತಾನೆ. ಅವನಿಂದ ತಪ್ಪಿಸಿಕೊಳ್ಳುವಾಗ ಮೇಲಿನಿಂದ ಬಿದ್ದು ಪ್ರಜ್ಞೆ ತಪ್ಪುತ್ತಾಳೆ. ಹಳ್ಳಿಗರು ಆಸ್ಪತ್ರೆಗೆ ಸೇರಿಸುತ್ತಾರೆ. ನಂತರ ಅವಳು ತನಗಾದದ್ದನ್ನು ಹೇಳಿದರೂ ಯಾರೂ ನಂಬುವುದಿಲ್ಲ. ಅದರಿಂದ ಅವಳು ಆಘಾತಕ್ಕೆ ಸಿಲುಕುತ್ತಾಳೆ. ತಟ್ಟಿಗೆ ಮನೆಯ ವ್ಯಕ್ತಿ ತನ್ನನ್ನು ಕೊಲ್ಲಲು ಬಂದಿದ್ದಾನೆಂದು ಭ್ರಮಿಸುತ್ತಾಳೆ. ನಿಜಕ್ಕೂ ಅದು ಭ್ರಾಂತಿಯಾ? ಆ ತಟ್ಟಿಗೆ ಮನೆಯಲ್ಲಿ ನಡೆದ ಕೊಲೆ ಮಾಡಿದವರು ಯಾರು? ಅಷ್ಟಕ್ಕೂ ಆ ಮನೆ ಕೇವಲ ನಾಯಕಿಯ ಕಲ್ಪನೆಯಾ? ಅಂತಿಮವಾಗಿ ಯಾವುದು ಸತ್ಯ? ಇಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು ದೇಸಾಯಿ ಬಿಗಿಯಾದ ಕತೆ ಹೆಣೆದಿದ್ದಾರೆ. ಮೊದಲಿನಿಂದ ಕೊನೆಯ ದೃಶ್ಯದ ತನಕ ಕುರ್ಚಿ ಬಿಟ್ಟು ಅಲ್ಲಾಡದಂತೆ ಕತೆಯನ್ನು ನಿರೂಪಿಸಿದ್ದಾರೆ. ಫ್ಲ್ಯಾಷ್‌ ಬ್ಯಾಕ್‌ಗಳನ್ನು ಬಳಸಿಕೊಂಡ ರೀತಿಯಂತೂ ಅವರೊಳಗಿನ ತಂತ್ರಜ್ಞನ ಕುಸುರಿತನ ತೋರಿಸುತ್ತದೆ. ಅಗತ್ಯವಿರುವಷ್ಟೇ ಪಾತ್ರಗಳನ್ನು ಸೃಷ್ಟಿಸಿದ್ದು, ಚಿಕ್ಕ ಪಾತ್ರಧಾರಿಗೂ ‘ಬೆಲೆ’ ತಂದುಕೊಟ್ಟದ್ದು ಅವರು ಬಳಸಿದ ಹೊಸ ಟ್ರಿಕ್ಕು.

ಇಡೀ ಚಿತ್ರವನ್ನು ದೇಸಾಯಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಎಲ್ಲ ವಿಭಾಗದವರಿಂದ ತಮಗೆ ಬೇಕಾದ ಕೆಲಸ ತೆಗೆದಿದ್ದಾರೆ. ಅದರಲ್ಲೂ ನಾಯಕಿ ಪ್ರೇಮಾಗೆ ಅತ್ಯುತ್ತಮ ಅಭಿನಯಕ್ಕೆ ಅವಕಾಶ ನೀಡಿದ್ದಾರೆ. ಹಾಗೆಯೇ ಪ್ರೇಮಾ ಕೂಡಾ ಆ ಪಾತ್ರವನ್ನು ತಮ್ಮೊಳಗೆ ಆವಾಹಿಸಿಕೊಂಡಿದ್ದಾರೆ. ಒಂದೊಂದು ದೃಶ್ಯವನ್ನೂ ಸವಾಲಾಗಿ ಸ್ವೀಕರಿಸಿದ್ದಾರೆ. ತಾವೇ ಧ್ವನಿ ನೀಡಿದ್ದು ಅಭಿನಯಕ್ಕೊಂದು ತಳೆ ತಂದಿದೆ. ‘ಹುಚ್ಚಿ ಅಂತ ಹೇಳಲ್ಲ ಕಣೇ, ಈಗಾಗಲೇ ಹುಚ್ಚಿ ಅಂತ ತಿಳ್ಕೊಂಡಿದಾರೆ’ ಎಂದು ಗೆಳತಿ ಎದುರು ಹೇಳುವ ದೃಶ್ಯವೊಂದರಿಂದಲೇ ತಮ್ಮೊಳಗೆ ಎಂತಹ ಕಲಾವಿದೆ ಇದ್ದಾಳೆನ್ನುವುದನ್ನು ತೋರಿಸಿದ್ದಾರೆ.

ಮೊದಮೊದಲು ಗೊಂಬೆಯಂತೆ ಕೈಕಾಲು ಆಡಿಸುವ ಹೊಸ ಹುಡುಗ ಆನಂದ್‌, ಕ್ಲೈಮ್ಯಾಕ್ಸ್‌ನಲ್ಲಿ ಅಚ್ಚರಿ ಮೂಡಿಸುತ್ತಾರೆ. ಅರುಣ್‌ಸಾಗರ್‌, ಎಲ್ಲವನ್ನು ಬಿಟ್ಟು ನಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕು. ಕೋಲು ಮುಖದ ಈ ಹುಡುಗ ಕಣ್ಣಿನಲ್ಲಿಯೇ ಎಲ್ಲವನ್ನೂ ಹೇಳುತ್ತಾನೆ. ಮತ್ತೆ ನೆನಪಿನಲ್ಲಿ ಉಳಿಯುತ್ತಾನೆ. ಯಶವಂತ ಸರದೇಶಪಾಂಡೆ, ಶಿವರಾಜ್‌ ಗಮನ ಸೆಳೆಯುತ್ತಾರೆ.

ವೇಣು ಛಾಯಾಗ್ರಹಣ, ಜನಾರ್ದನ್‌ ಸಂಕಲನ, ಗುಣಸಿಂಗ್‌ ಸಂಗೀತ. ಒಂದು ಪರಿಪೂರ್ಣ ಚಿತ್ರವಾಗಲು ಎಲ್ಲ ವಿಭಾಗದವರ ಇನ್‌ವಾಲ್ವ್‌ಮೆಂಟ್‌ ಎಷ್ಟು ಅಗತ್ಯ ಅನ್ನುವುದನ್ನು ತಮ್ಮ ಕೆಲಸದ ಕಾಳಜಿಯಿಂದ ಹೇಳಿದ್ದಾರೆ. ಸಿನಿಮಾ ವ್ಯಾಕರಣ ಕಲಿಯ ಬಯಸುವವರು ಇದೊಂದು ಚಿತ್ರದಿಂದ ಎಲ್ಲ ರೀತಿಯ ಪಾಠ ಕಲಿಯಬಹುದು. ಅಂದಹಾಗೆ, ಇಡೀ ಚಿತ್ರವನ್ನು ಮಾತಿಲ್ಲದೆ ನೋಡಿದರೂ ಅರ್ಥವಾಗುತ್ತದೆ. ಈ ದೃಶ್ಯ ಮಾಧ್ಯಮವನ್ನು ಸಮರ್ಥವಾಗಿ ದೇಸಾಯಿ ಬಳಸಿಕೊಂಡಿದ್ದಕ್ಕೆ ಅದು ಸಾಕ್ಷಿ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada