For Quick Alerts
  ALLOW NOTIFICATIONS  
  For Daily Alerts

  ನೊಂದಿರುವ ಮನಸಿಗೆ ಆಸರೆ, ಮುಸ್ಸಂಜೆ ಮಾತು

  By Staff
  |

  ಸೆಂಟಿಮೆಂಟ್ ಎಂಬ ಸಣ್ಣ ಎಳೆಯನ್ನಿಟ್ಟುಕೊಂಡು ನಿರ್ದೇಶಕ ಮಹೇಶ್ ಮುಸ್ಸಂಜೆಗೆ ಹೊಸ ರೂಪ ಕೊಟ್ಟಿದ್ದಾರೆ. ಬರೀ ಮಚ್ಚು, ಚಚ್ಚು, ಕೊಚ್ಚು ಎನ್ನುವ ಬದಲು ಒಂದು ಚಿಕ್ಕ ಚೇಂಜ್ ಕೊಡಲು ಅವರು ಪ್ರಯತ್ನಿಸಿದ್ದಾರೆ.

  *ವಿನಾಯಕರಾಮ್ ಕಲಗಾರು

  ಅಮ್ಮ ಹೆಣವಾಗಿ ಮಲಗಿರುತ್ತಾಳೆ. ಅವಳ ಚಿರ ನಗು' ಮಗಳ ಕಣ್ಣಿನ ಹನಿಯಾಗಿ ತೊಟ್ಟಿಕ್ಕುತ್ತಿರುತ್ತೆ. ಆದರೆ ಅಪ್ಪ ಕುಡಿದು ಪಕ್ಕದಲ್ಲೇ ಜೀವಂತ ಶವವಾಗಿರುತ್ತಾನೆ! ಅತ್ತ ಅಮ್ಮನ ದೇಹ ಅಗ್ನಿಯಲ್ಲಿ ಬೇಯುತ್ತಿದ್ದರೆ ಇತ್ತ ಅಪ್ಪನನ್ನು ಆ ಪರಮಾತ್ಮ' ಸುಡುತ್ತಿರುತ್ತಾನೆ.

  ಅದೇ ಅಪ್ಪ ಮುಂದೆ ಬೀದಿ ಪಾಲಾಗುತ್ತಾನೆ. ಕಂಡೋಳ ಮಾತು ಕೇಳಿ, ಯಾವ ಮಗಳ ಕೆನ್ನೆಗೆ ಬಾರಿಸಿ, ಮನೆ ಬಿಟ್ಟು ತೊಲಗು' ಎಂದು ತಾತ್ಸಾರ ತೋರಿರುತ್ತಾನೋ ಅದೇ ಮಗಳ ಕಾಲು ಹಿಡಿದು ಗೋಗರೆಯುತ್ತಾನೆ: ನನ್ನನ್ನು ಕ್ಷಮಿಸಿಬಿಡಮ್ಮಾ ಮಗಳೇ...'. ಆಗವನು ಪಶ್ಚಾತ್ತಾಪದ ಬೆಂಕಿಯಲ್ಲಿ ಸುಡುತ್ತಿರುತ್ತಾನೆ !

  *******
  ರಂಗಣ್ಣ, ಆಟೊ ಡ್ರೈವರ್. ಆ ರಾತ್ರಿ ಯಾರೋ ಒಬ್ಬ ರಂಗಣ್ಣ, ಯಾರೋ ಒಬ್ಬರಿಗೆ ಆಕ್ಸಿಡೆಂಟ್ ಆಗಿದೆ. ದಯವಿಟ್ಟು ಆಸ್ಪತ್ರೆಗೆ ಹೋಗೋಣ ಬಾ' ಅಂತ ಅವನಲ್ಲಿ ಅಂಗಲಾಚುತ್ತಾನೆ. ಆದರೆ ರಂಗಣ್ಣ ಐವತ್ತು ರೂ. ಜಾಸ್ತಿ ಕೇಳ್ತಾನೆ. ಅವ ನನ್ ಹತ್ರ ಅಷ್ಟೊಂದ್ ದುಡ್ಡು ಎಲ್ಲಿಂದ ಬರಬೇಕು' ಅಂತ ಸುಮ್ನಾಗ್ತಾನೆ.
  ರಂಗಣ್ಣ ರಾತ್ರಿ ಮನೆಗೆ ಬರುತ್ತಾನೆ. ಅಲ್ಲೊಂದಿಷ್ಟು ಜನ ಜಮಾಯಿಸಿರುತ್ತಾರೆ. ಏನಾಗಿದೆ ಎನ್ನುವಷ್ಟರಲ್ಲಿ ಅವನ ತಾಯಿಯ ಪ್ರಾಣಪಕ್ಷಿ ಮುನಿಸಿಕೊಂಡು ಹಾರಿಹೋಗಿರುತ್ತೆ. ಅವಳ ಪಕ್ಕದಲ್ಲಿ ಐವತ್ತು ರೂಪಾಯಿಗೆ ಚೌಕಾಶಿ ಮಾಡಿದವ ನಿಂತಿರುತ್ತಾನೆ !

  *******
  ಆತ ಚಿಂಟು. ಮನೆತುಂಬ ಓಡಾಡಿಕೊಂಡು, ಶ್ವೇತಾ, ತನು ಇಬ್ಬರನ್ನೂ ಡಾರ್ಲಿಂಗ್ ಎಂದು ಕಿಚಾಯಿಸುತ್ತ, ಮನೆ ಓನರ್ ಮಗನಾಗಿದ್ದರೂ ಮನೆಮಗನಂತೇ ಆಟವಾಡಿಕೊಂಡಿರುತ್ತಾನೆ. ಅಪ್ಪನಿಗೇ ಟೊಪ್ಪಿ ಹಾಕಿ, ಅವನ ದುಡ್ಡಿನಿಂದ ಅಕ್ಕಂದಿರಿಂದ ಹೊಸ ಬಟ್ಟೆ ತರಿಸಿಕೊಳ್ಳುವ ಭೂಪ.

  ಅದೇ ಚಿಂಟು ಅಂದು ಅಕ್ಕಾ, ಇನ್ಯಾವತ್ತೂ ನಿನ್ನನ್ನ ಡಾರ್ಲಿಂಗ್ ಅಂತ ಕರೆಯೊಲ್ಲ. ಯಾಕಂದ್ರೆ ನಾನು ಇನ್ನು ಬದುಕೊಲ್ಲ. ಅದು ನನಗೆ ಮೊದಲೇ ಗೊತ್ತಿತ್ತಕ್ಕ. ಅದಕ್ಕೇ ನಿಮ್ ಹತ್ರ ನಗ್ತಾ ನಗ್ತಾ ಇರುತ್ತಿದ್ದೆ.... ಅಲ್ಲಿಗೆ ಉಸಿರು ನಿಲ್ಲಿಸಿಬಿಡುತ್ತಾನೆ. ಕಾರಣ ಆ ಪುಟ್ಟ ಎದೆಯಲ್ಲಿ ಕ್ಯಾನ್ಸರ್ ಎಂಬ ಪಿಶಾಚಿ ಟೆಂಟ್ ಕಟ್ಟಿರುತ್ತೆ !

  *******
  ಪ್ರದೀಪ್, ವೃತ್ತಿಯಲ್ಲಿ ರೇಡಿಯೊ ಜಾಕಿ. ಪ್ರತಿನಿತ್ಯ ಮುಸ್ಸಂಜೆ ಮಾತು' ಕಾರ್ಯಕ್ರಮ ನಡೆಸಿಕೊಡುತ್ತಿರುತ್ತಾನೆ. ಅದು ಎಷ್ಟು ಜನಪ್ರಿಯ ಎಂದರೆ ಆ ಅರ್ಧಗಂಟೆ ಎಲ್ಲರೂ ಗಪ್ ಚುಪ್. ನೊಂದ ಮನಗಳಿಗೆ ಭರವಸೆಯ ಆಶಾಕಿರಣವಾಗುವುದೇ ಅವನ ಮಾತುಗಾರಿಕೆಯ ಮಹತ್ವ; ಆ ಕಾರ್ಯಕ್ರಮದ ತತ್ವ.

  ಎಲ್ಲರ ನೋವನ್ನೂ ಉಪಶಮನ ಮಾಡುವ ಪ್ರದೀಪ್ ತನು ಎಂಬ ಹುಡುಗಿಯ ಮನಸ್ಸಿನ ಮಾತಾಗುತ್ತಾನೆ. ತನುವು ನಿನ್ನದು ಮನವು ನಿನ್ನದು' ಎನ್ನುತ್ತಾನೆ. ಅವಳ ಕಷ್ಟದ ಹಾದಿಗೆ ಹೂವಿನ ಹಾಸಿಗೆಯಾಗಲು ಹಂಬಲಿಸುತ್ತಾನೆ. ಆದರೆ ಅವಳಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾಗಿಬಿಡುತ್ತೆ. ಪ್ರದೀಪ್ ತಂತಿ ಹರಿದ ವೀಣೆಯಾಗುತ್ತಾನೆ !

  ಇವು ಮುಸ್ಸಂಜೆ ಮಾತು ಚಿತ್ರದ ಸ್ಯಾಂಪಲ್‌ಗಳು. ಇವಿಷ್ಟು ಶೋ ರೂಮ್‌ನ ಐಟಂಗಳಷ್ಟೇ. ಇನ್ನು ಗೋಡೌನ್‌ನಲ್ಲಿ ಇಂಥದ್ದು ಲೆಕ್ಕವಿಲ್ಲದಷ್ಟಿದೆ. ಅವನ್ನು ನೋಡಬೇಕಾ? ಹಾಗಾದರೆ ಸಿನಿಮಾಕ್ಕೆ ಹೋಗಿ !

  ಸೆಂಟಿಮೆಂಟ್ ಎಂಬ ಸಣ್ಣ ಎಳೆಯನ್ನಿಟ್ಟುಕೊಂಡು ನಿರ್ದೇಶಕ ಮಹೇಶ್ ಮುಸ್ಸಂಜೆಗೆ ಹೊಸ ರೂಪ ಕೊಟ್ಟಿದ್ದಾರೆ. ಬರೀ ಮಚ್ಚು, ಚಚ್ಚು, ಕೊಚ್ಚು ಎನ್ನುವ ಬದಲು ಒಂದು ಚಿಕ್ಕ ಚೇಂಜ್ ಕೊಡಲು ಅವರು ಪ್ರಯತ್ನಿಸಿದ್ದಾರೆ. ಅದು ಕೆಲವು ಕಡೆ ಫಲ ನೀಡಿದೆ; ಇನ್ನು ಕೆಲವು ಕಡೆ ತುಸು ಎಡವಿದ್ದಾರೆ. ಅದಕ್ಕೆ ಲಗೆ ರಹೋ ಮುನ್ನಾಬಾಯಿ'ಯ ಚಿಕ್ಕ ಎಳೆಯೂ ಒಂದು ಕಾರಣವಾಗಬಹುದು.

  ಒಂದು ಕಡೆ ಎಂಟಾನೆಂಟು ಅಪರೂಪವೆನಿಸುವ, ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳಿವೆ. ಜತೆಗೆ ಈ ಮನುಷ್ಯ ಎಲ್ಲಿ ಕ್ಯಾಮರಾ ಇಟ್ಟಿದ್ದಾನೆ ಎಂಬ ಅನುಮಾನ ಕಾಡುವಂತೆ ಮಾಡುವ ಸುಂದರ್‌ನಾಥ್ ಸುವರ್ಣ ಅವರ ಖತರ್‌ನಾಕ್ ಕ್ಯಾಮೆರಾ ವರ್ಕ್ ಇದೆ. ಯಾವುದೇ ಆಂಗಲ್‌ನಲ್ಲೂ ಸೋಲದ ಸುದೀಪ್ ಅಭಿನಯವಿದೆ. ಆದರೂ ಒಸಿ ಎಡವಲು ಕಾರಣ? ಅವರು ಎಡವಿದ್ದು ಕತೆಯ ನಿರೂಪಣೆಯಲ್ಲಿ. ಮೊದಲಾರ್ಧ ಅಡ್ಡಿಯಿಲ್ಲ. ಉಳಿದಂತೆ ಅದು ಗಜನಡಿಗೆಯನ್ನೇ ಮೀರಿಸುವಂತಿದೆ. ಕ್ಲೈಮ್ಯಾಕ್ಸ್ ಅಬ್ಬಬ್ಬಾ ಎಂದರೆ ಎಷ್ಟಿರಬಹುದು ಹೇಳಿ. 10ರಿಂದ 15 ನಿಮಿಷ. ಆದರೆ ಮುಸ್ಸಂಜೆ ಮಾತಿನಲ್ಲಿರುವುದು ಸುಮಾರು ಒಂದು ಗಂಟೆ !

  ಸುದೀಪ್ ಇನ್ನಷ್ಟು ಉದ್ದವಾಗಿ ಕಾಣಿಸುತ್ತಾರೆ. ಆದರೆ ರಮ್ಯಾ ಅದಕ್ಕೆ ತದ್ವಿರುದ್ದ ! ಆಕೆಗಿಂತ ಅನು ಪ್ರಭಾಕರ್ ಇಷ್ಟವಾಗ್ತಾರೆ. ಪ್ರಾಣೇಶ್ ಗಂಗಾವತಿ ಹಾಗೂ ಮಂಡ್ಯ ರಮೇಶ್ ಹರಟೆ' ಸಹಿಸೋದು ಸ್ವಲ್ಪ ಕಷ್ಟ. ಕೊನೆವರೆಗೂ ನೆನಪಿನಂಗಳದಲ್ಲಿ ಕಂಬಳಿ ಹೊದ್ದು ಮಲಗುವುದು ಮಹೇಶ್ ಸಂಭಾಷಣೆ. ಅದರಲ್ಲಿ ಕೆಲವು ಹೀಗಿವೆ - ಮಕ್ಕಳು ದೇವರಿಗೆ ಸಮಾನ, ಆ ದೇವ್ರ ದೇವ್ರನ್ನೇ ಸಾಯಿಸ್ತಾನಾ? ಭವಿಷ್ಯ ಅನ್ನೋದೇ ಸತ್ಯ, ಅದನ್ನು ನಾವ್ಯಾಕೆ ಇನ್ನೊಬ್ಬರ ಹತ್ತಿರ ಕೇಳಬೇಕು? ಉಳಿದದ್ದು ಏನನ್ನು ಕಿತ್ತುಕೊಂಡರೂ ಜೀವಕ್ಕೆ ಹಾನಿ ಮಾಡಲ್ಲ. ಆದರೆ ಈ ಪ್ರೀತಿ ಅದನ್ನೇ ಕಿತ್ತುಕೊಳ್ಳುತ್ತೆ !

  (ವಿನಾಯಕರಾಮ್ ಅವರ ಬ್ಲಾಗ್ : ಪೂರ್ಣವಿ-ರಾಮ )

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X