For Quick Alerts
  ALLOW NOTIFICATIONS  
  For Daily Alerts

  ಚಿತ ್ರಸಂಪದ : ಗುಟ್ಟೊಂದ ಹೇಳುವೆ... ‘ಗುಟ್ಟು’ ಫಿಲಂ ಚೆನ್ನಾಗಿದೆ!

  By Staff
  |


  ಶಿಲ್ಪಾ ಜಗದೀಶ್‌(ಪ್ರಿಯಭಾರತಿ) ಅಮೆರಿಕಾದಲ್ಲೆ ಹುಟ್ಟಿಬೆಳೆದ ಕನ್ನಡತಿ. ಭಾರತೀಯ ಸಂಸ್ಕೃತಿ ಪರಿಸರದಿಂದ ದೂರವಿದ್ದರೂ, ನಮೆಗೆಲ್ಲರಿಗೂ ಅಚ್ಚಕನ್ನಡದ ಚೊಕ್ಕ ಚಿತ್ರ ಕೊಟ್ಟದ್ದಕ್ಕೆ ಥ್ಯಾಂಕ್ಸ್‌ ಹೇಳೋಣ. ಅವರ ಉತ್ಸಾಹ ಮತ್ತು ಕೌಶಲ್ಯಕ್ಕೆ ಭೇಷ್‌ ಅನ್ನೋಣ.

  ವರ್ಜೀನಿಯ : ಅತ್ತ ಬಾಲಿವುಡ್‌ನ ಕನ್ನಡತಿ ಶಿಲ್ಪಾ ಶೆಟ್ಟಿ ಬ್ರಿಟನ್‌ದೇಶದಲ್ಲಿ ವರ್ಣಭೇದಕ್ಕೊಳಗಾಗಿ ಸುದ್ದಿಯಲ್ಲಿರುವಾಗ ಇಲ್ಲಿ ಅಮೆರಿಕದಲ್ಲಿ ಇನ್ನೊಬ್ಬ ಕನ್ನಡತಿ ‘ಶಿಲ್ಪಾ’ ಚಂದದ ಕನ್ನಡ ಚಲನಚಿತ್ರವೊಂದನ್ನು ಗುಟ್ಟಾಗಿ-ಅಚ್ಚುಕಟ್ಟಾಗಿ ಮಾಡಿ ಪೂರೈಸಿ ಈಗ ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರವನ್ನು ನಿರ್ದೇಶಿಸಲು ಸಹಿಮಾಡಿದ್ದಾರೆ!

  ಬಾಲಿವುಡ್‌ ಶಿಲ್ಪಾಳ ಸೌಂದರ್ಯಾರಾಧಕರು ಆಕೆಯನ್ನು ‘ಶಿಲ್ಪ’ವೆಂದು ಪರಿಗಣಿಸಬಹುದು; ಈ ಅಮೆರಿಕನ್ನಡತಿ ಶಿಲ್ಪಾಳನ್ನು ‘ಶಿಲ್ಪಿ’ ಎಂದರೆ ಸರಿಹೋಗಬಹುದೇನೊ - ಆಕೆ ಕೆತ್ತಿದ ಚೊಚ್ಚಲ ಚಿತ್ರ ‘ಗುಟ್ಟು’ !

  ಶಿಲ್ಪಾ ಜಗದೀಶ್‌ ‘ಪಕ್ಕಾ ಎರಡನೆ ತಲೆಮಾರಿನ’ ಅಮೆರಿಕನ್ನಡತಿ. ತಂದೆ ಡಾ।ಜಿ.ಜಗದೀಶ್‌ ಮತ್ತು ತಾಯಿ ಜಯಶ್ರೀ ಜಗದೀಶ್‌ ಸುಮಾರು ಮೂವತ್ತು ವರ್ಷಗಳ ಹಿಂದೆ ಅಮೆರಿಕೆಗೆ ಬಂದವರು. ಇಲ್ಲಿ ವಾಷಿಂಗ್ಟನ್‌ನಲ್ಲಿರುವ ಆಹಾರ-ಮತ್ತು-ಔಷಧಿ ನಿಯಂತ್ರಣ ಸಂಸ್ಥೆ (FDA)ಯಲ್ಲಿ ವಿಜ್ಞಾನಿಗಳಾಗಿರುವವರು. ಅವರ ಮಗಳು ಶಿಲ್ಪಾ ಜಗದೀಶ್‌ ಕಾಲೇಜಿನಲ್ಲಿರುವಾಗಲೇ (ರಾಜನೀತಿಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ಕ್ಷೇತ್ರದಲ್ಲಿ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದ ಪದವಿ) ಪೂರ್ಣಪ್ರಮಾಣದ ಚಿತ್ರನಿರ್ದೇಶನವನ್ನು ಪ್ರವೃತ್ತಿ (ಸಾಧ್ಯವಾದರೆ ವೃತ್ತಿಯೂ?) ಆಗಿ ಪರಿಗಣಿಸಿದವಳು.

  ‘ಚಿತ್ರ ನಿರ್ದೇಶನಕ್ಕಾಗಿ ಮೊದಲು ಬೆಂಗಳೂರಲ್ಲಿ ಕಾಲಿಟ್ಟಾಗ ಸ್ವಲ್ಪ ನಡುಕ ಇತ್ತು. ನನ್ನ ಕನ್ನಡ ಅಷ್ಟೇನೂ ಚೆನ್ನಾಗಿಲ್ಲವಲ್ಲ (ಬೆಂಗಳೂರಲ್ಲಿ ಸ್ವಚ್ಛ ಕನ್ನಡ ಬೇಕಾಗಿಲ್ಲ ಎಂದು ಆಮೇಲೆ ತಿಳೀತು!). ಭಾರತದಲ್ಲಿ/ಕರ್ನಾಟಕದಲ್ಲಿ ಚಿತ್ರೋದ್ಯಮದ ಆಗುಹೋಗು/ರೀತಿರಿವಾಜುಗಳಾವುವೂ ಪರಿಚಯವಿರಲಿಲ್ಲ. ಆದರೂ ಗಟ್ಟಿ ಧೈರ್ಯ ಮಾಡಿ ‘ಗುಟ್ಟು’ ರಟ್ಟಾಗಿಸಿದೆ. ಕರ್ನಾಟಕದಲ್ಲಿನ ನನ್ನ ಸಂಬಂಧಿಕರು, ಹಾಗೆಯೇ ಚಿತ್ರದ ನಿರ್ಮಾಪಕರು ಮತ್ತು ತಂಡದ ಎಲ್ಲರೂ ತುಂಬಾ ಸಹಕರಿಸಿ ನನ್ನ ಕನಸು ನನಸಾಗುವುದಕ್ಕೆ ಪೂರ್ತಿ ಸಹಕಾರವಿತ್ತರು. ಒಟ್ಟಿನಲ್ಲಿ ಒಳ್ಳೆಯ ಕಲಿಕೆಯ ಅನುಭವ...’ ಎನ್ನುತ್ತಾರೆ ಶಿಲ್ಪಾ.

  ಭಾರತೀಯ/ಕನ್ನಡ ಚಿತ್ರರಂಗ ತನಗೆ ಪ್ರಿಯವೆನಿಸಿರುವುದಕ್ಕಾಗಿಯೋ ಎಂಬಂತೆ ‘ಪ್ರಿಯಭಾರತಿ’ ಎಂದು ತನ್ನ ಸ್ಕಿೃೕನ್‌ ನೇಮ್‌ ಇಟ್ಟುಕೊಂಡಿದ್ದಾರೆ.

  ‘ಗುಟ್ಟು’ ಬಚ್ಚಿಟ್ಟಿರುವ ಗುಟ್ಟಿನ ಸುತ್ತಮುತ್ತಲ ವಿಚಾರಗಳು ಹೀಗಿವೆ. ಕಿಡ್ನಾಪ್‌ ಆಗಿರುವ ತರುಣಿ ಶ್ರೇಯಾ ಪ್ರಕಾಶ್‌ಳ ಶೋಧ ನಡೆಸಿದ್ದಾರೆ ಭಾರತದಲ್ಲಿ ಪೊಲಿಸರು. ಶ್ರೇಯಾಳ ತಾಯಿ ವಿಜಯಾ ಅಮೆರಿಕದಿಂದ ಬಂದು ಪೊಲಿಸ್‌ ತನಿಖೆಗೆ ಹೆಚ್ಚಿನ ಒತ್ತಡ ತರುತ್ತಾಳೆ. ಮತ್ತೆ ನೋಡಿದರೆ ಶ್ರೇಯಾ ತಪ್ಪಿಸಿಕೊಂಡದ್ದು ಪೂರ್ವನಿಯೋಜಿತ ಕೃತ್ಯವೆಂದು ಗೊತ್ತಾಗುತ್ತದೆ. ಅವಳೀಗ ದೀಪಕ್‌ ನಾರಾಯಣ್‌ ಎಂಬ ಯುವಕನ ಸಂಗಡ ಇದ್ದಾಳೆಂದು ತಿಳಿಯುತ್ತದೆ. ಪೂರಕವಾಗಿ ಟಿವಿ ಕಾರ್ಯಕ್ರಮವೊಂದರಲ್ಲಿ ದೀಪಕ್‌-ಶ್ರೇಯಾ ಗಂಡಹೆಂಡಿರಾಗಿರುವ ದೃಶ್ಯ ಮೂಡಿಬರುತ್ತದೆ. ಕಂಗೆಟ್ಟ ವಿಜಯಾ, ದೀಪಕ್‌ ಮೇಲೆ ಕೇಸ್‌ ಹಾಕುತ್ತಾಳೆ - ಇನ್ನೂ ಪ್ರಾಯ ಸಂದಿರದ ಶ್ರೇಯಾಳನ್ನು ಕಿಡ್ನಾಪ್‌ ಮಾಡಿ ಮದುವೆಯಾದ ಬಗ್ಗೆ!

  ಬಡಪಾಯಿ ದೀಪಕ್‌ಗೆ ಇದೊಂದೂ ಅರ್ಥವಾಗುತ್ತಿಲ್ಲ. ಕೊನೆಗೂ ಆತ ಶ್ರೇಯಾಳ ಬಳಿ ಅವಳ ಯೋಜನೆಯ ಪೂರ್ವಾಪರಗಳನ್ನೆಲ್ಲ ಅರಿತುಕೊಳ್ಳುತ್ತಾನೆ. ಅಗಲಿದ ತಂದೆಯ ಆಸೆಯನ್ನು ಈಡೇರಿಸಬೇಕೆಂಬ ಶ್ರೇಯಾಳ ಯೋಜನೆಗೆ ನೆರವಾಗಲು ದೀಪಕ್‌ ಒಪ್ಪುತ್ತಾನೆ. ಅಲ್ಲಿ ಮತ್ತೊಂದು ತಿರುವು, ಇನ್ನೊಂದು ಸವಾಲು. ಕಾಲದ ಓಟ, ಪ್ರೀತಿಪಾತ್ರರನ್ನು ಜತೆಗೂಡಿಸಬೇಕೆಂಬ ತಾಕಲಾಟ; ಕಾಲಸೀಮೆಯಾಳಗೆ ಗತವೈಭವದ ಅವಶೇಷಗಳ ಮೇಲೆ ಪ್ರೀತಿಸೇತು ಕಟ್ಟುವ ರೋಚಕ ಅಭಿಯಾನ! ಗುಟ್ಟು ರಟ್ಟಾಗಿಸುವಾಗ ಕೊನೆಗೂ ತಾನು ಯಾರು ಎಂಬ ಗುಟ್ಟೇ ರಟ್ಟಾಗುವ ವಿಶಿಷ್ಟ ಅನುಭವ!

  ‘ಗುಟ್ಟು’ ಕಲ್ಪನೆ ಶಿಲ್ಪಾಗೆ ಸುಮಾರು ಐದಾರು ವರ್ಷಗಳ ಹಿಂದೆಯೇ ಮೂಡಿತ್ತು. ಹಂತಹಂತಗಳಲ್ಲಿ ಚಿತ್ರೀಕರಣವೂ ಆಗಿಂದಲೇ ನಡೆದಿತ್ತು. ಹೆಚ್ಚಿನ ಭಾಗ ಬೆಂಗಳೂರು ಮತ್ತು ಆಸುಪಾಸಿನ ಪ್ರದೇಶಗಳಲ್ಲೂ ಮತ್ತು ಸ್ವಲ್ಪ ಭಾಗ, ಕಥಾಹಂದರಕ್ಕೆ ತಕ್ಕಂತೆ ಅಮೆರಿಕದಲ್ಲಿ (ವಾಷಿಂಗ್ಟನ್‌ ಡಿಸಿ ಪರಿಸರದಲ್ಲಿ) ಚಿತ್ರೀಕರಣ. ಛಾಯಾಸಿಂಗ್‌, ಗಣೇಶ ಕೆ, ಶ್ರುತಿ ನಾಯ್ಡು - ಹೀಗೆ ಉದಯೋನ್ಮುಖ ಪ್ರತಿಭಾವಂತರನ್ನು ಸಮರ್ಥವಾಗಿ ದುಡಿಸಿ ಒಂದು ಒಳ್ಳೆಯ ಉತ್ಪನ್ನವನ್ನು ಸಿದ್ಧಗೊಳಿಸುವಲ್ಲಿ ಶಿಲ್ಪಾ ಯಶಸ್ವಿಯಾಗಿದ್ದಾರೆ.

  ರಾಜೇಶ್‌ ರಾಮನಾಥ್‌ ಅವರ ಸಂಗೀತ, ಸತ್ಯ ಹೆಗಡೆ ಅವರ ಸಿನೆಮಾಟೊಗ್ರಫಿ, ರಾಮಯ್ಯ ಕೊಟಗನಹಳ್ಳಿ ಮತ್ತು ಮಂಜುನಾಥ್‌ ಸರಕ್ಕಿ ಸಂಭಾಷಣೆ, ರಮೇಶ್‌ ದೇಸಾಯಿ ಅವರ ಕಲಾನಿರ್ದೇಶನ - ಇವೆಲ್ಲ ಗುಟ್ಟಿನ ಯಶಸ್ಸಿನಲ್ಲಿ (ಅಥವಾ ಯಶಸ್ಸಿನ ಗುಟ್ಟಲ್ಲಿ ಎನ್ನೋಣವೇ?) ಪಾತ್ರವಹಿಸಿವೆ.

  ಕಳೆದ ಸಪ್ಟೆಂಬರ್‌ನಲ್ಲಿ ಬಾಲ್ಟಿಮೋರ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ವೇಳೆ ‘ತುಂಬಿದ ಸಭಾಗೃಹ’ದಲ್ಲಿ ಪ್ರದರ್ಶಿತವಾಗಿ ಮೆಚ್ಚುಗೆ ಗಳಿಸಿರುವ ಗುಟ್ಟು ಇದೀಗ ವಾಷಿಂಗ್ಟನ್‌ ಡಿಸಿ ಮತ್ತು ಉತ್ತರ/ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕದ ವಿವಿಧ ನಗರಗಳಲ್ಲೂ ಈ ಚಿತ್ರವನ್ನು ಪ್ರದರ್ಶಿಸುವ ಯೋಜನೆ ಶಿಲ್ಪಾ ಅವರಿಗಿದೆ. ಸಂಪರ್ಕ ವಿಳಾಸ- shilpajag@yahoo.com

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X