»   » ಹತ್ತು ಪರೀಕ್ಷೆಗಳಲ್ಲಿ ಸಲೀಸಾಗಿ ಪಾಸು ಮಾಡಿದವನಿಗೆ ಹನ್ನೊಂದನೆಯ ಯಾವ ಲೆಕ್ಕ?

ಹತ್ತು ಪರೀಕ್ಷೆಗಳಲ್ಲಿ ಸಲೀಸಾಗಿ ಪಾಸು ಮಾಡಿದವನಿಗೆ ಹನ್ನೊಂದನೆಯ ಯಾವ ಲೆಕ್ಕ?

Subscribe to Filmibeat Kannada

;?
‘ಸುಂಟರಗಾಳಿ’ಯಲ್ಲಿ ಸಾಧು ಕೋಕಿಲಾ ಚಿತ್ರಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಹಾಗಾಗಿಯೇ ಇರಬೇಕು ಚಿತ್ರ ಮೊದಲಾರ್ಧ ಪೂರ್ತಿ ಓತ್ಲಾ, ಓತ್ಲಾ...ಹಾಡು, ಫೈಟು, ನಂತರ ಸೆಂಟಿಮೆಂಟು, ಮುಂದೆ ಕಾಮಿಡಿ...

  • ಚೇತನ್‌ ನಾಡಿಗೇರ್‌
‘ಮಂಡ್ಯ’,‘ ಕಲಾಸಿ ಪಾಳ್ಯ’,‘ ಅಯ್ಯ’,‘ ಸ್ವಾಮಿ’,‘ ಶಾಸ್ತ್ರಿ’, ಮಾಡಿದವನಿಗೆ ‘ಸುಂಟರ ಗಾಳಿ’ ಏನು ಮಹಾ?

ಸುಂಟರಗಾಳಿ ಕೂಡ ಹತ್ತರ ಜತೆ ಹನ್ನೊಂದಾ?ದರ್ಶನ್‌ರ ಹೋರಾಟದ ಪರ್ವದ ಮುಂದಿನ ಭಾಗವಾ?ನಿರ್ಧರಿಸುವುದಕ್ಕೆ ಚಿತ್ರ ನೋಡಿ ಬಿಡಿ. ಅದಕ್ಕೂ ಮೊದಲು ಕತೆ ಓದಿಬಿಡಿ.

ಅವನು ಜಗ್ಗಿ. ಒಳ್ಳೆಯವರಿಗೆ ತಂಗಾಳಿ. ಕೆಟ್ಟವರ ಪಾಲಿನ ಸುಂಟರಗಾಳಿ. ಅವನದ್ದೇನಿದ್ದರೂ ಒಂಥರಾ ಅಲ್ಲೇ ಡ್ರಾ ಅಲ್ಲೇ ಬಹುಮಾನದಂಥ ಪಾಲಿಸಿ. ಕೆಟ್ಟವರಿಗೆ ನರಕದಲ್ಲೋ, ಮುಂದಿನ ಜನ್ಮದಲ್ಲೋ ಆ ಋಣ ತೀರಿಸುವ ಅವಕಾಶ ಕೊಡುವುದಿಲ್ಲ. ಸೀದಾ ಅವರ ಮನೆಗೇ ನುಗ್ಗಿ ಅಲ್ಲೇ ಬಂಪರ್‌ ಡ್ರಾಮಾಡಿಸಿ, ಬಹುಮಾನ ಕೊಟ್ಟು ಬರುವುದು ಅವನ ಸ್ಟೈಲು. ಅದಕ್ಕೇ ಅವನು ಅಣ್ಣಮ್ಮ ಲೇಔಟಿನಲ್ಲೆಲ್ಲ ‘ವರ್ಲ್ಡ್‌ ಫೇಮಸ್ಸು’. ಅವನ ಈ ಜನಪ್ರಿಯತೆಯಿಂದಲೇ ರಾಜಾ ಹುಲಿಯಂಥ ಫುಢಾರಿಗಳಿಗೆ, ಕಾಳಿಂಗಪ್ಪನಂಥ ಸಚಿವರಿಗೆ ಅವನು ಆಪ್ತ. ಇಂಥವನೊಬ್ಬ ಆಪ್ತಮಿತ್ರ ರಾಜಾಹುಲಿಗೆ ಚುನಾವಣೆಯಲ್ಲಿ ಸಹಾಯ ಮಾಡಬೇಕಾದರೆ, ಆತನ ಎದುರಾಳಿಯಾಗಿ ನಿಂತಿರುವ ಲಲಿತಮ್ಮ ತನ್ನ ತಾಯಿ ಎಂದು ಜಗ್ಗಿಗೆ ಗೊತ್ತಾಗುತ್ತದೆ. ಕೆಟ್ಟವರ ಮೇಲೆ ಮಾತ್ರ ಸುಂಟರಗಾಳಿಯಾಗುತ್ತಿದ್ದ ಜಗ್ಗಿಯ ಮನಸ್ಸಿನಲ್ಲೇ ಆಗ ಸುಂಟರಗಾಳಿ ಏಳುತ್ತದೆ. ಮುಂದಿನ ಚಿದಂಬರ ರಹಸ್ಯ ತೆರೆಯ ಮೇಲೆ ನೋಡಿ...

ಕತೆ ಸವಕಲು ಎಂದೆನಿಸುತ್ತಿದೆಯೇ?ಇರಬಹುದು. ಏಕೆಂದರೆ ಇಂಥ ಹತ್ತು, ಹಲವು ಕತೆಗಳು ಈಗಾಗಲೇ ಬಂದು ಹೋಗಿವೆ. ಅದಕ್ಕೆ ಸಾಧು ಕತೆ ಬಿಟ್ಟಾಕಿ, ಚಿತ್ರಕತೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅದಕ್ಕೇ ಇರಬೇಕು ಚಿತ್ರ ಮೊದಲಾರ್ಧ ಪೂರ್ತಿ ಓತ್ಲಾ, ಓತ್ಲಾ...ಹಾಡು, ಫೈಟು, ನಂತರ ಸೆಂಟಿಮೆಂಟು, ಮುಂದೆ ಕಾಮಿಡಿ...

ಮಿಕ್ಕೆಲ್ಲವನ್ನೂ ದರ್ಶನ್‌ ಒಬ್ಬರೇ ಚಿಂದಿ ಉಡಾಯಿಸಿದರೆ, ಕಾಮಿಡಿಗೆ ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌ ಇದ್ದಾರೆ. ಇವರಿಬ್ಬರು ಒಂದು ಕಡೆಯಾದರೆ, ರಂಗಾಯಣ ರಘು ಎಂಬ ರಾಜಾಹುಲಿ ಒಬ್ಬರೇ ಇನ್ನೊಂದು ಕಡೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಇನ್ನು ದ್ವಿತೀಯಾರ್ಧದಲ್ಲೂ ಹೆಚ್ಚು ಕಡಿಮೆ ಇದೇ ಇದೆ. ಹಾಗಾಗಿಯೇ ಸಾಧು ‘ಸಂತ’ರಾಗಿ ಚಿತ್ರವನ್ನು ಡ್ಯಾನ್ಸ್‌ ಮೇಷ್ಟ್ರಿಗೆ, ಫೈಟ್‌ ಮೇಷ್ಟ್ರಿಗೆ, ಡೈಲಾಗ್‌ ರೈಟ್ರಿಗೆ ಒಪ್ಪಿಸಿ ಸುಮ್ಮನಾಗಿದ್ದಾರೆ. ‘ರಕ್ತಕಣ್ಣೀರು’, ‘ರಾಕ್ಷಸ’ ಮಾಡಿದ್ದು ಇದೇ ಸಾಧುನಾ? ಗೊತ್ತಿಲ್ಲ.

ದರ್ಶನ್‌ ಸುಂಟರಗಾಳಿಯಂತೆಯೇ ಚಿತ್ರದ ಪೂರಾ ಅಪ್ಪಳಿಸಿದ್ದಾರೆ. ವೀರಗಾಸೆ ಗೆಟಪ್ಪಿನ ಅವರ ಎಂಟ್ರಿಗೆ ಚಿತ್ರಮಂದಿರ ಶಿಳ್ಳೆಯಿಂದ ತುಂಬುತ್ತದೆ. ರಕ್ಷಿತಾ ಬಂದಿದ್ದೂ ಗೊತ್ತಾಗಲ್ಲ, ಹೋಗಿದ್ದೂ ಗೊತ್ತಾಗಲ್ಲ. ಏಕೆಂದರೆ, ಒಂದು ಹಾಡು ಬಿಟ್ಟರೆ ಇನ್ನೆಲ್ಲೂ ಅವರ ತುಂಡು ಬಟ್ಟೆ ಹಾಕಿಲ್ಲ! ಉಮಾಶ್ರೀ, ಸೀತಾ, ರಂಗಾಯಣ ರಘು, ಸತ್ಯಜಿತ್‌ ಸುಂಟರಗಾಳಿಯ ಎದುರು ತರಗೆಲೆಗಳಂತೆ ಉದುರದೆಯೇ ಗಟ್ಟಿಯಾಗಿ ನಿಲ್ಲುತ್ತಾರೆ. ಆಶಿಶ್‌ ವಿದ್ಯಾರ್ಥಿ ರೇಜಿಗೆ ಹುಟ್ಟಿಸುತ್ತಾರೆ. ಪಾಪ ಅಂಥ ಒಳ್ಳೆಯ ನಟನನ್ನು ದೂರದ ಮುಂಬೈನಿಂದ ಕರೆದುಕೊಂಡು ಬಂದ ಆದ್ಯಾಕೆ ಗೋಳು ಹೊಯ್ದುಕೊಳ್ಳುತ್ತಾರೋ ಗೊತ್ತಿಲ್ಲ.

ಅಣಜಿ ನಾಗರಾಜ್‌ ಛಾಯಾಗ್ರಹಣ ಅಷ್ಟರಲ್ಲೇ. ಎರಡು ಹಾಡುಗಳನ್ನು ಬಿಟ್ಟರೆ ಸಾಧು ಸಂಗೀತದಲ್ಲೂ ಮಿಂಚುವುದಿಲ್ಲ. ಆದರೆ ರಂಗ, ಸೂರಿ ಮಾತ್ರ ಸಂಗೀತದಲ್ಲೂ ಮಿಂಚುವುದಿಲ್ಲ. ಆದರೆ ರಂಗ, ಸೂರಿ ಮಾತ್ರ ತಮ್ಮ ಸಂಭಾಷಣೆಗಳಿಂದ ಹಾಗೂ ಸ್ಲಂ ಜೀವನದ ಚಿತ್ರಣದಿಂದ ಸ್ವಲ್ಪ ಕಾಡದೇ ಬಿಡುವುದಿಲ್ಲ. ‘ಮೀನಿಗೆ ಯಾರ್ಯಾರೂ ಸ್ನಾನ ಮಾಡಿಸ್ತಾರ? ನಿನ್ನ ಮುಖಕ್ಕೆ ಯಾರಾದ್ರೂ ಮಸಿ ಬಳಿಯಕ್ಕೆ ಆಗತ್ತಾ? ಬರೆದ್ರೂ ಅದು ಕಾಣತ್ತಾ’ಮುಂತಾದ ಪಂಚಿಂಗ್‌ ಸಂಭಾಷಣೆಗಳು ಮಜಾ ಕೊಡುತ್ತವೆ.

(ಸ್ನೇಹ ಸೇತು: ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada