»   » ಅಭಿಮಾನಿಗಳ ಅಧಿಪತಿ, ಈ ಭೂಪತಿ!

ಅಭಿಮಾನಿಗಳ ಅಧಿಪತಿ, ಈ ಭೂಪತಿ!

Subscribe to Filmibeat Kannada


ದರ್ಶನ್‌ ಮೊನ್ನೆ ತಮ್ಮ 30ನೇ ಹುಟ್ಟಿದ ಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿಯೇ ದರ್ಶನ್‌ರ 25ನೇ ಚಿತ್ರ ‘ಭೂಪತಿ’ ಬಿಡುಗಡೆಯಾಗಿದೆ. ಇದೂ ಹತ್ತರ ಜೊತೆ ಹನ್ನೋಂದಾ? ಅಥವಾ?

ಚಿತ್ರ : ಭೂಪತಿ
ನಿರ್ಮಾಣ : ಕೆ.ಸಿ.ಎನ್‌.ಚಂದ್ರು
ನಿರ್ದೇಶನ : ಎಸ್‌. ಗೋವಿಂದ್‌
ಸಂಗೀತ : ಹರಿಕೃಷ್ಣ
ತಾರಾಗಣ : ದರ್ಶನ್‌, ಶಿರೀನ್‌, ಅಶ್ವಥ್‌, ಸುಮಲತಾ, ಮುಖೇಶ್‌ ತಿವಾರಿ ಮತ್ತಿತರರು.

ಐ ಆ್ಯಮ್‌ ಪರ್ಫೆಕ್ಟ್‌ !

ಹೀಗಂತ ಹೇಳುತ್ತಾನೆ ಭೂಪತಿ ಚಿಟಿಕೆ ಹೊಡೆಯುತ್ತಾ...

ಹೌದು, ಭೂಪತಿ ಯಾವಾಗಲೂ ಪರ್ಫೆಕ್ಟ್‌. ಅವನು ತಪ್ಪು ಮಾಡೋನಲ್ಲ, ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ತಾಯಿಯ ಮುದ್ದಿನ ಮಗನಾಗಿ, ಅಜ್ಜನ ಹೆಮ್ಮೆಯ ಮೊಮ್ಮಗನಾಗಿ, ಕರುನಾಡ ಜನರ ಕಣ್ಮಣಿಯಾಗಿ ಆತ ರಾರಾಜಿಸುತ್ತಿರುತ್ತಾನೆ. ಐ.ಎ.ಎಸ್‌. ಪರೀಕ್ಷೆ ಬರೆದು ರಿಸಲ್ಟ್‌ಗಾಗಿ ಕಾಯುತ್ತಿರುವುದರಿಂದ ಅವನಿಗೆ ಹೆಚ್ಚು ಕೆಲಸವಿಲ್ಲ. ಹಾಗಾಗಿ ಅಮ್ಮ ಕೊಡಿಸಿದ ಬೈಕ್‌ನಲ್ಲಿ ಸುತ್ತಾಡುತ್ತ, ಕೆಟ್ಟವರನ್ನು ಸದೆಬಡಿಯುತ್ತಾ, ಒಳ್ಳೆಯವರನ್ನು ಸಂರಕ್ಷಿಸುತ್ತಾ, ನೀತಿಪಾಠ ಹೇಳುತ್ತಾ ... ಎಲ್ಲರಿಗೂ ಬೇಕಾದವನಾಗಿರುತ್ತಾನೆ.

ನಾಯಕ ಇದ್ದ ಮೇಲೆ ನಾಯಕಿ ಇರಲೇ ಬೇಕಲ್ವಾ? ಇಲ್ಲೂ ಇದ್ದಾಳೆ. ಹೆಸರು ಐಸಿರಿ. ವೃತ್ತಿಯಲ್ಲಿ ಡಾಕ್ಟರ್‌. ಅದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಯ ಮುದ್ದಿನ ಮಗಳು. ಇಂಥ ನಾಯಕಿಗೆ ಭೂಪತಿ ಅದ್ಯಾಕೋ ಅದ್ಹೇಗೋ ಇಷ್ಟವಾಗುತ್ತಾನೆ. ಭೂಪತಿ ಕುಟುಂಬಕ್ಕೂ ಅವಳು ಇಷ್ಟವಾಗುತ್ತಾಳೆ. ಇಷ್ಟವಾಗದಿರುವುದು ಮುಖ್ಯಮಂತ್ರಿಯಾಬ್ಬರಿಗೆ ಮಾತ್ರ.

ರಾಜ್ಯದ ಸಮಸ್ತ ಜನತೆಯನ್ನೂ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ ಮುಖ್ಯಮಂತ್ರಿಗೆ ಭೂಪತಿಯನ್ನು ಕಂಡರೆ ಮಾತ್ರ ಕಿರಿಕಿರಿ. ಅದು ಕ್ರಮೇಣ ಉರಿಉರಿಯಾಗುತ್ತದೆ. ಕೊನೆಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರನ್ನೂ ತದುಕಿ ಐಸಿರಿಗೆ ಪತಿಯಾಗುತ್ತಾನೆ ಭೂಪತಿ ಎಂದು ಕತೆ ಹೇಳುತ್ತ ಕೂತರೆ, ಇಲ್ಲಿಯವರೆಗೂ ಇಂಥ ಅಸಂಖ್ಯ ಕನ್ನಡ ಚಿತ್ರಗಳನ್ನು ನೋಡಿರುವ ನಿಮಗೆ ಅವಮಾನ ಮಾಡಿದಂತೆ. ಹಾಗಾಗಿ ಇಲ್ಲಿಗೇ ಬುಟ್ಬಿಡಿ.

ಇಂಥ ಅದೆಷ್ಟು ಚಿತ್ರಗಳು ಕನ್ನಡದಲ್ಲಿ ಬಂದಿಲ್ಲ, ನೀವೇ ಹೇಳಿ. ಆ ದೊಡ್ಡ ಪಟ್ಟಿಗೆ ‘ಭೂಪತಿ’ಯನ್ನೂ ಸಲೀಸಾಗಿ ಸೇರಿ ಸಬಹುದು. ಈ ಚಿತ್ರದಲ್ಲಿ ದರ್ಶನ್‌ರ ಗೆಟಪ್‌ ಹೊಸದಾಗಿದೆ. ಅದೊಂದೇ ಗಟ್ಟಿ ಸ್ವಾಮಿ, ಹೊಸ ರೂಪ ಬಿಟ್ಟು ಹೊಸತನ್ನು ನಿರೀಕ್ಷಿಸಿದರೆ ಅದು ಪ್ರೇಕ್ಷಕರ ತಪ್ಪು. ದರ್ಶನ್‌ ಚಿತ್ರವನ್ನು ಅವರ ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದು ನಿರ್ದೇಶಕ ಗೋವಿಂದುಗೆ ಅದ್ಯಾರು ಹಳಿ ತಪ್ಪಿಸಿದರೋ ಗೊತ್ತಿಲ್ಲ ! ಅವರು ಮಾತ್ರ ಚಿತ್ರವನ್ನು ಸಂಪೂರ್ಣವಾಗಿ ದರ್ಶನ್‌ ಅಭಿಮಾನಿಗಳಿಗೇ ಅರ್ಪಿಸಿದ್ದಾರೆ. ಪ್ರತಿ ದೃಶ್ಯ, ಸಂಭಾಷಣೆ, ಚಲನವಲನವೂ ದರ್ಶನ್‌ ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟು ಕೊಂಡೇ ಮಾಡಲಾಗಿದೆ.

ಇನ್ನು ಕನ್ನಡ ನಾಡು, ನುಡಿ, ಜಲ, ನೆಲ, ಭಾಷೆ, ಅಭಿಮಾನದ ಬಗ್ಗೆ ತೀರಾ ಅತಿಯಾಯಾಯಿತು ಎನ್ನಿಸುವಂತಿರುವ ಭಾಷಣ ಕೂಡ ಅಭಿಮಾನಿಗಳನ್ನು ... ಏನೇ ಮಾಡಲಿ ಸ್ವಲ್ಪ ಬೋರಾಗದಂತೆ ನೋಡಿಸಿಕೊಂಡು ಹೋಗುವಂತೆ ಮಾಡಿದ್ದರೂ ಎಲ್ಲ ಆಪಾದನೆಗಳನ್ನು ಮರೆಯಬಹುದಿತ್ತು. ‘ಭೂಪತಿ’ ಅದನ್ನೂ ಮಾಡುವುದಿಲ್ಲ ಎಂಬುದು ಬೇಸರ ತರಿಸುತ್ತದೆ.

ಇಷ್ಟೆಲ್ಲ ಆದರೂ ಚಿತ್ರವನ್ನು ನೋಡಿಸುವುದು ದರ್ಶನ್‌. ಇಡೀ ಚಿತ್ರದಲ್ಲಿ ಕಾಣಿಸಿಕೊಂಡರೂ, ‘ನಟ’ ದರ್ಶನ್‌ ಕಾಣಿಸುವುದು ಕೊನೆಯ 10 ನಿಮಿಷಗಳಲ್ಲಿ ಮಾತ್ರ. ಕ್ಲೈಮ್ಯಾಕ್ಸ್‌ ಫೈಟ್‌ನ ನಂತರದ ಭಾಷಣದಲ್ಲಂತೂ ದರ್ಶನ್‌ ಗಿಂತ ಹೆಚ್ಚಾಗಿ ತೂಗುದೀಪ ಶ್ರೀನಿವಾಸ್‌ ನೆನಪಾಗುತ್ತಾರೆ. ಮಾತನಾಡುವ ಶೈಲಿ, ವೇಗ... ಎಲ್ಲವನ್ನೂ ನೋಡಿಯೇ ಅನುಭವಿಸಬೇಕು.

ನಾಯಕಿ ಶಿರೀನ್‌ ಪಾತ್ರ ಇರುವುದೇ ಹಾಗೋ ಅಥವಾ ಅವರು ಹಾಗಾಡುತ್ತಾರೋ? ಅರ್ಥವಾಗುವುದು ಕೊಂಚ ಕಷ್ಟ. ಒಟ್ಟಿನಲ್ಲಿ ಅವರ ಅಭಿನಯ... ಬೇಡ ಬಿಡಿ. ಅಶ್ವತ್ಥ್‌, ಸುಮಲತಾ ಪಾತ್ರಗಳು ಚಿಕ್ಕದಾಗಿ ಚೊಕ್ಕದಾಗಿವೆ. ಮುಖೇಶ್‌ ತಿವಾರಿ ಆರ್ಭಟ ಕೆಲವರಿಗೆ ಇಷ್ಟವಾಗಬಹುದು.

ಇಷ್ಟವಾಗುವ ಪಟ್ಟಿಯಲ್ಲಿ ಹರಿಕೃಷ್ಣ ಹಾಡುಗಳನ್ನೂ ಸುಲಭವಾಗಿ ಸೇರಿಸಬಹುದು. ಒಂದೆರಡು ಹಾಡುಗಳು ಮಾಸ್‌ ಜತೆ ಕ್ಲಾಸ್‌ಗೂ ಇಷ್ಟವಾಗಬಹುದು. ವೀನಸ್‌ ಮೂರ್ತಿ ಛಾಯಾಗ್ರಹಣಕ್ಕೂ ಭೇಷ್‌ ಎನ್ನಬಹುದು.

ನೀವು ದರ್ಶನ್‌ ಅಭಿಮಾನಿಗಳಾಗಿದ್ದರೆ ಚಿತ್ರಕ್ಕೂ ಭೇಷ್‌ ಎನ್ನಬಹುದೇನೋ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada