»   » ಜೊಳ್ಳು ಸಂಭಾಷಣೆ, ಪೊಳ್ಳು ನಿರ್ದೇಶನ, ಒಳ್ಳೆಯ ಸಂಗೀತ...

ಜೊಳ್ಳು ಸಂಭಾಷಣೆ, ಪೊಳ್ಳು ನಿರ್ದೇಶನ, ಒಳ್ಳೆಯ ಸಂಗೀತ...

Posted By:
Subscribe to Filmibeat Kannada
‘ಪ್ರೀತಿ ನೀನಿಲ್ಲದೆ ನಾ ಹೇಗಿರಲಿ’ ತಮಿಳಿನ ವಿಜಯಕಾಂತ್‌ ಮತ್ತು ರೇವತಿ ನಟಿಸಿದ ‘ವೈದೇಹಿ ಕಾತಿರುಂಡಾಳ್‌’ ಎಂಬ ಹಿಟ್‌ ಚಿತ್ರದ ರೀಮೇಕ್‌. ಆದರೆ ಚಿತ್ರದ ನಿರ್ದೇಶಕರು ಕಾಪಿ ಹೊಡೆಯುವುದಕ್ಕೂ ತನಗೆ ಬರದು ಎಂಬುದನ್ನು ಈ ಚಿತ್ರದ ಮೂಲಕ ಸಾರಿದ್ದಾರೆ.

ಕ್ಯಾತನಾಯಕನ ಹಳ್ಳಿ. ಕರಿಯ (ಸಿ.ಪಿ. ಯೋಗೇಶ್ವರ್‌) ಹಳ್ಳಿಗರಿಗೆ ತುಂಬ ಬೇಕಾದವನು. ಇಡೀ ಹಳ್ಳಿಯ ಜನ ತಮಗೆ ಬೇಕಾದ ಸಾಮಾನು, ತರಕಾರಿ ಎಲ್ಲವನ್ನೂ ಸಂತೆಯಿಂದ ತರಿಸುವುದು ಕರಿಯನಿಂದಲೇ. ಕರಿಯ ಸಂತೆಗೆ ಹೊರಟರೆ ಇಡೀ ಊರಿನ ಜನ ತಮಗೆ ಬೇಕಾದ ಸಾಮಾನುಗಳ ಪಟ್ಟಿಯನ್ನು ಒಂದೇ ಉಸಿರಿಗೆ ಉಸಿರಿಬಿಟ್ಟು ಹಣ ಕೊಟ್ಟು ಬಿಡುತ್ತಾರೆ. ಯಾವುದನ್ನೂ ‘ಮರೆಯದ’ ಕರಿಯ ಸೂರ್ಯ ಮುಳುಗುವ ಹೊತ್ತಿಗೆ ಅವರವರ ಸಾಮಾನು-ಸರಂಜಾಮುಗಳನ್ನು ತಂದುಬಿಡುತ್ತಾನೆ. ಅವನು ಯಾವುದೇ ಕೂಲಿ ತೆಗೆದುಕೊಳ್ಳುವವನಲ್ಲ; ಮಾತನಾಡುವುದಿಲ್ಲ.

ಕರಿಯನಿಗೆ ಊರಿನ ದೇವಸ್ಥಾನದ ಅರ್ಚಕರ( ಗಂಗಾಧರಯ್ಯ) ಮನೆಯಲ್ಲೇ ಊಟ, ವಸತಿ. ವಿಧವೆ ಚಂದ್ರಮತಿ (ಅನು ಪ್ರಭಾಕರ್‌) ಅರ್ಚಕರ ಮಗಳು. ಒಂದು ದಿನ ರಾತ್ರಿಯಾದರೂ ಕರಿಯ ಬಾರದ್ದನ್ನು ನೋಡಿ ‘ನಮ್‌ ದುಡ್ನೆಲ್ಲಾ ದೋಚ್ಕೊಂಡು ಹೋಗ್ಬಿಟ್ಟ ’ ಎಂದು ಊರವರೆಲ್ಲ ಕರಿಯನ ಬಗ್ಗೆ ವಿಚಾರಿಸಲು ಅಯ್ಯನೋರ ಮನೆಗೆ ಬರುತ್ತಾರೆ. ‘ದಿನಾಲೂ ಈ ಹೊತ್ತಿಗೆ ಬರಬೇಕಾದವನು, ನಾನೂ ಹಣ ಕೊಟ್ಟು ಕಡ್ಡಿ, ಕರ್ಪೂರ ತರಲು ಹೇಳಿರುವೆ, ಯಾಕೆ ಇನ್ನೂ ಬಂದಿಲ್ಲವೋ? ನಾ ಕಾಣೆ.. ’ ಎಂದು ಅರ್ಚಕರು ಊರ ಜನರಿಗೆ ಹೇಳುತ್ತಾರೆ. ಕರಿಯ ಊರ ಕೆರೆಯ ಬಳಿ ಎತ್ತಿನ ಗಾಡಿ ನಿಲ್ಲಿಸಿ ನೀರು ಕುಡಿಯುತ್ತಿರುವಾಗ ಊರ ಜನ ಕರಿಯನನ್ನು ಹೊಡೆಯಲು ಮುಂದಾಗುತ್ತಾರೆ. ಆಗ ಇನ್ಸ್‌ಪೆಕ್ಟರ್‌ ಬಂದು ‘ ನಿಲ್ಸಿ, ದಿನಾಲೂ ಕೆಲ್ಸಕ್ಕೆ ಹೋಗಿ ಬರೋ ನಿಮ್ಮ ಹೆಂಡ್ರು ಒಂದು ದಿನ ರಾತ್ರಿ ತಡವಾಗಿ ಬಂದ್ರೆ ಅವ್ಳು ಬೇರೆ ಗಂಡ್ಸಿನ್‌ ಜೊತೆ ಮಲಗಿದ್ಳು ಅಂತಾನಾ? ’ ಎಂದು ಕರಿಯ ಬರಲು ತಡವಾದುದಕ್ಕೆ ಕಾರಣ ವಿವರಿಸುತ್ತಾನೆ. ಇಂತಹ ‘ ಸಂಭಾಷಣೆಗಳ ಹರಿಕಾರ’ ಕೆ.ವಿ. ರಾಜು ಅವರಿಗೆ ಯಾವ ಪ್ರಶಸ್ತಿ ನೀಡಬೇಕೋ ತಿಳಿಯದು!

ಊರ ನಾಯಕನೆಂದೇ ಕರೆಯಲ್ಪಡುವ ರೌಡಿ(ರಮೇಶ್‌ ಪಂಡಿತ್‌) ಊರ ಜನರ ರಕ್ತ ಹೀರುವ ರಾಕ್ಷಸ. ರೈತ ತಾನೇ ಬಿತ್ತಿ ಬೆಳೆದ ತನ್ನ ಹೊಲದಿಂದ ಬಂದ ಭತ್ತ ಬಳಸಲೂ ನಾಯಕನ ಅನುಮತಿ ಪಡೆಯಬೇಕು. ಅನುಮತಿ ಪಡೆಯದಕ್ಕೆ ಉರಿವ ಒಲೆಯಲ್ಲೇ ರೈತನ ಮುಖವನ್ನೂ ಕಟ್ಟಿಗೆಯಂತೆ ಒಟ್ಟುವ ಕ್ರೂರಿ ಆ ನಾಯಕ. ಅಣ್ಣನ ಕೃತ್ಯ ಸಹಿಸದ ತಂಗಿ

‘ ನರ ಇಲ್ದೇ ಇರೋರ ಊರಲ್ಲಿ ನಾಮರ್ಧನೇ ನಾಯಕ ಅನ್ನೋ ಹಾಗೆ ನೀನು’ ಅಂತ ಅಣ್ಣನಿಗೇ ಬಯ್ತಾಳೆ.

ನಾಯಕ ದೇವಸ್ಥಾನದ ಗೋಡೆಯ ಮೇಲೆ ‘ ಚಂದ್ರಮತಿ’ ಅಂತ ಬರೆದು ತನ್ನ ಹಳೆಯ ಪ್ರೇಮಿಯನ್ನು ಚಿಂತಿಸಿ ಹಾಡುತ್ತಿದ್ದರೆ, ‘ ಅಯ್ಯನೋರ ಮಗಳು ವಿಧವೆಯ ಹೆಸರನ್ನ ದೇವಸ್ಥಾನದ ಗೋಡೆ ಮೇಲೆ ಬರೆದು ಅನ್ನ ಹಾಕಿದೋರ ಮನೆಗೇ ಕನ್ನ ಹಾಕ್ತಿದ್ದಾನೆ’ ಅಂತ ಊರೆಲ್ಲ ಗುಲ್ಲು. ಇದನ್ನು ತಿಳಿದ ನಾಯಕಿ ಕರಿಯನ ಬಳಿ ಬರುತ್ತಾಳೆ.

‘ಛೆ, ನಾನು ನಿನ್ನನ್ನ ಏನೋ ಅಂದ್ಕೊಂಡಿದ್ದೆ, ಇಷ್ಟು ನೀಚ ಮಟ್ಟಕ್ಕಿಳಿತೀಯಾಂತ ನಂಗೊತ್ತಿರಲಿಲ್ಲ ’ ಅಂತ ಬಾಯಿಗೆ ಬಂದಂತೆ ಬಯ್ತಾಳೆ. ಅಲ್ಲಿವರೆಗೂ ಮೂಕನಂತಿದ್ದ ಕರಿಯ ಮೊದಲ ಬಾರಿಗೆ ಬಾಯ್ತೆರೆದು ಮಾತನಾಡುತ್ತಾನೆ. ಎಷ್ಟೋ ವರ್ಷಗಳಿಂದ ಅರ್ಚಕರ ಮನೆಯಲ್ಲಿದ್ದ ನಾಯಕನಿಗೆ ಅರ್ಚಕರ ಮಗಳ ಹೆಸರೂ ‘ ಚಂದ್ರಮತಿ’ ಅನ್ನೋದೇ ಗೊತ್ತಿಲ್ಲದಿರುವುದು ನಿರ್ದೇಶಕರ ವಿಪರ್ಯಾಸ. ನಾಯಕನ ಪ್ರೇಯಸಿ ಹೆಸರು ಅರ್ಚಕರ ಮಗಳ ಹೆಸರು ಒಂದೇ ಆಗಿರುವುದು ಕಥೆಯ ವಿಪರ್ಯಾಸ!

ಆಗ ಕರಿಯ ತನ್ನ ಕಥೆಯನ್ನು ಪ್ರಾರಂಭಿಸುತ್ತಾನೆ- ‘ ಹೆಣ್ಣು ತಾಯಿಯಾಗ್ತಿದಾಳೆ ಅಂತ ತಿಳಿಯೋದಕ್ಕೆ ಮೂರು ತಿಂಗಳು ಬೇಕು; ಅದೇ ಹೆಣ್ಣಿನ ಮನಸನ್ನ ತಿಳಿಯೋದಕ್ಕೆ ಜನ್ಮ ಜನ್ಮಾಂತರವೂ ಸಾಲದು’ ಎಂಬ ಸೂ(ಪರ್ಬ್‌) ಸಂಭಾಷಣೆಯ ಸಾಲುಗಳು ಹೊಳೆಯುವುದು ರಾಜು ಅವರಿಗೆ ಮಾತ್ರವೇನೋ?!

ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಇಂತಹ ಅನೇಕಾನೇಕ ‘ಡೈ’ಲಾಗ್‌ಗಳು ಬರುತ್ತಲೇ ಹೋಗುತ್ತದೆ. ಈಶ್ವರ್‌ ಬಾಳೇಗುಂದಿಯವರ ನಿರ್ದೇಶನದಲ್ಲಿ ಮಾತ್ರ ‘ಹೆಣದ ಕೈಯಲ್ಲಿ ಕತ್ತಿ ಹಿಡಿಸಿ ನಿಲ್ಲಿಸುವುದು ಸಾಧ್ಯ’ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿದವರು ಯಾರಾದರೂ ಇರಬಹುದೇ ಎಂಬ ಪ್ರೇಕ್ಷಕರ ಅನುಮಾನಾಸ್ಪದ ಪ್ರಶ್ನೆಗೆ ಉತ್ತರ ಚಿತ್ರದಲ್ಲಿ ಸಿಗುವುದು ‘ ನಿರ್ದೇಶನ-ಈಶ್ವರ್‌ ಬಾಳೇಗುಂದಿ’ ಎಂಬ ‘ ಟೈಟಲ್‌ ಕಾರ್ಡ್‌’ನಿಂದ ಮಾತ್ರ.

ಇಡೀ ಚಿತ್ರದ ‘ ಹೈಲೈಟ್‌’ ಅಂದರೆ ಅನ ಪ್ರಭಾಕರ್‌ ಅವರ ಪರಿಪೂರ್ಣ ಅಭಿನಯ. ‘ಕನ್ನಡಕ್ಕೊಬ್ಬಳೇ ಅನು’ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿರುವುದು ಅನು ಪ್ರಭಾಕರ್‌ ಅವರ ಪ್ರೌಢ ನಟನೆ. ಅವರ ನೃತ್ಯ ಕೂಡ ಮನಸೆಳೆಯುತ್ತದೆ. ಚಿತ್ರವೇನಾದರೂ ಒಂದು ವಾರ ಓಡಿದರೆ ಅದರ ‘ ಕ್ರೆಡಿಟ್ಟು ’ ಸೇರಬೇಕಾದುದು ಚಿತ್ರದ ಸಾಹಿತ್ಯ, ಸಂಗೀತ ಮತ್ತು ‘ಎವರ್‌ಗ್ರೀನ್‌’ ಅನು ಪ್ರಭಾಕರ್‌ ಅವರಿಗೆ ಮಾತ್ರ. ‘ ಹ್ಯಾಟ್ಸ್‌ ಆಫ್‌ ಅನೂ...! ’

‘ ಹೆಣ್ಣಿನಾಸೆಯೆ ಕುಂಕುಮ ಒಡವೆ ಬಳೆಗಳ ಸಂಭ್ರಮ... ’ ಎಂಬ ಹಾಡು ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯಕ್ಕೆ ಸಾಕ್ಷಿ. ಜೊತೆಗೆ ‘ ಮುರಿದಿರುವ ಕೊಳಲ ನುಡಿಸುವವರ್ಯಾರು... ’ ಎಂಬ ಹಾಡು ಮತ್ತು ‘ ಸಂಗಾತಿ ನಿನ್ನ ಮನಸೆಲ್ಲ ತೇಲಾಡಿದೆ... ’ ಹಾಡುಗಳು ಮನ ತಟ್ಟುತ್ತದೆ. ಸತೀಶ್‌ ಅವರ ಛಾಯಾಗ್ರಹಣದಲ್ಲಿ ಹಳ್ಳಿಗಾಡಿನ ಚಿತ್ರಣ ಮನೋಜ್ಞವಾಗಿ ಮೂಡಿ ಬಂದಿದೆ. ಚೈತನ್ಯ ಅವರ ಸಂಗೀತ ತಂಪನ್ನೆರಚುತ್ತದೆ.

ನಟ, ನಿರ್ದೇಶಕರೆನಿಸಿರುವ ಸಿ.ಪಿ. ಯೋಗೇಶ್ವರ್‌ ಅವರಲ್ಲಿ ವಿನಂತಿ: ತಮ್ಮ ನಟನೆಯನ್ನು ನಿಲ್ಲಿಸಿದರೆ ಪ್ರೇಕ್ಷಕರನ್ನು ಒಂದು ದೊಡ್ಡ ಅಪಾಯದಿಂದ ಪಾರು ಮಾಡಿದಂತೆ. ನೀವು ಉತ್ತಮ ನಟರೇನೋ ಹೌದು. ಆದರೆ ಇಂತಹ ಸಣ್ಣ ಪುಟ್ಟ ಪಾತ್ರಗಳು ನಿಮ್ಮ ಇಮೇಜಿಗೆ ‘ ಸೂಟ್‌’ ಆಗುವುದಿಲ್ಲ. ತಾವು ಈಗ ರಾಜಕೀಯ ಕಣಕ್ಕಿಳಿದಿರುವಿರಿ. ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಒಂದು ‘ ಟಿಪ್ಸ್‌’. ಬೇಕಿದ್ದಲ್ಲಿ ಇದನ್ನನುಸರಿಸಿ ಗೆಲ್ಲಬಹುದು; ಬೇಜಾರಾದರೆ ಬಿಟ್ಟುಬಿಡಬಹುದು. ಚುನಾವಣಾ ಪ್ರಚಾರದಲ್ಲಿ ಜನರೊಡನೆ ‘ ನಾನು ಚುನಾವಣೆಗೆ ನಿಂತಿರುವೆ. ನೀವು ನನಗೆ ಓಟು ಹಾಕಿದರೆ ನಾನು ಕನ್ನಡ ಸಿನಿಮಾಗಳಲ್ಲಿ ನಟಿಸುವುದನ್ನು ಬಿಡುವೆ’ ಎಂಬ ಒಂದೇ ಸಾಲು ಸಾಕು ನಿಮ್ಮ ಗೆಲುವಿಗೆ. ನಿಮ್ಮ ಚಿತ್ರಗಳಲ್ಲಿನ ಹಾಡು, ಸಂಗೀತ, ಲೊಕೇಶನ್‌ ಎಲ್ಲ ಚೆನ್ನಾಗೇ ಇರುತ್ತದೆ. ಕೆಲವೇ ಕೆಲ ಕಾರಣಗಳಿಂದ ಪ್ರೇಕ್ಷಕರನ್ನು ಮುಟ್ಟುವಲ್ಲಿ ಸೋಲುತ್ತದೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada