For Quick Alerts
  ALLOW NOTIFICATIONS  
  For Daily Alerts

  ಬಣ್ಣದ ಹುಡುಗಿಯರು, ನಗಿಸುವ ಮೋಹನ್‌-ಸಾಧು ಜೋಡಿ, ನೀರಲ್ಲಿ ಹೊರಳಾಡುವ ನಾಯಕಿ, ಆ್ಯಕ್ಷನ್‌ಪ್ರಿಯರಿಗೆ ಮಾರಾಮಾರಿ.. ಎಲ್ಲ ಇದೆ ಅನಿಸಿದರೂ ಏನೋ ಕೊರತೆ ಇದೆ...

  By Staff
  |

  ಹೌದು, ಅದಕ್ಕೆ ಕಾರಣಗಳಿವೆ. ಒಂದು, ಓಬೀರಾಯನ ಕಾಲದ ಕತೆ. ಮತ್ತೊಂದು ನೀರಸ ನಿರೂಪಣೆ. ಹಾಸ್ಯದ ಪ್ರಸಂಗಗಳನ್ನು ಹೊರತುಪಡಿಸಿದರೆ ಭಾವನಾತ್ಮಕ ಸನ್ನಿವೇಶಗಳು ಮನಸ್ಸನ್ನು ಮುಟ್ಟಲು ತಿಪ್ಪರಲಾಗ ಹಾಕುತ್ತವೆ. ಪ್ರೇಮಕತೆಗೆ ಇರಬೇಕಾದ ಅಥವಾ ಯಾವುದೇ ಕತೆಯಲ್ಲಾದರೂ ಇರಬೇಕಾದ ಫೋರ್ಸ್‌ ಇಲ್ಲಿ ಇಲ್ಲವೇ ಇಲ್ಲ . ಸ್ನೇಹಿತ ತಾನು ಬಯಸಿದ ಹುಡುಗಿಯನ್ನೇ ಇಷ್ಟ ಪಡುತ್ತಿದ್ದಾನೆಂದು ತಿಳಿದರೂ ರವಿ ಮುಖದ ಒಂದೂವರೆ ನರವೂ ಅಲುಗಾಡುವುದಿಲ್ಲ ! ಇದು ಚಿಕ್ಕ ಉದಾಹರಣೆ. ಇಂಥ ಹಲವಾರು ದೃಶ್ಯಗಳು ಪ್ರೇಕ್ಷಕರನ್ನು ಕತೆಯಲ್ಲಿ ಒಳಗೊಳ್ಳದಂತೆ ತಡೆದಿವೆ. ಮೊದಲ ಬಾರಿ ರವಿ ಮತ್ತು ಶಿವಣ್ಣ ಜೊತೆಯಾಗಿ ನಟಿಸಿದ್ದರಿಂದ ಜನರ ನಿರೀಕ್ಷೆ ಏನೇನೋ ಇರುತ್ತದೆ. ಆ ‘ಏನೇನೊ’ ಮುಟ್ಟುವುದು ಬೇಡ. ಅಟ್‌ಲೀಸ್ಟ್‌ , ‘ಏನೋ’ ಅನ್ನುವ ಮಟ್ಟಿಗಾದರೂ ಬೇಡವೇ?

  ‘ಕೋದಂಡ ರಾಮ’ ಹಾಗಂತ ಕರೆದರೆ ಇಬ್ಬರೂ ತಿರುಗಿ ನೋಡುತ್ತಾರೆ. ಅವರಿಬ್ಬರೂ ಒಂದೇ ಜೀವ ಎರಡು ದೇಹ ಅನ್ನೋದು ಅದರರ್ಥ. ಹಿಂಗಿರುವ ಅವರು ಬದುಕುಳಿಯಲು ರೌಡಿಗಳಾಗುತ್ತಾರೆ. ನಿಯತ್ತಾಗಿ ದುಡಿದು ಶ್ರೀಮಂತರಾಗುತ್ತಾರೆ. ಅಷ್ಟಕ್ಕೇ ನಾಯಕರ ಕೆಲಸ ಸೀಮಿತವಾದರೆ ನಾಯಕಿಯರಿಗೇನು ಕೆಲಸ? ಬಾಲ್ಯದಿಂದಲೇ ರವಿಯನ್ನು ಪ್ರೀತಿಸುವ ಸಾಕ್ಷಿ ಶಿವಾನಂದ್‌ಗೆ- ತನಗೆ ಗೊತ್ತಾಗದಂತೆ - ಸವಾಲು ಹಾಕಲು ಆಶಾಸೈನಿ ಬರುತ್ತಾಳೆ. ಇಬ್ಬರೂ ರವಿಯ ಅಮಲುಗಣ್ಣಿಗೆ ಎಡವಿ ಬೀಳುತ್ತಾರೆ. ಶಿವಣ್ಣನನ್ನು ಕೆಡವಿ ಬೀಳಿಸುತ್ತಾರೆ. ಏಕೆಂದರೆ ಶಿವಣ್ಣ ಪ್ರೀತಿಸಿದ ಹುಡುಗಿ ರವಿಗೆ ಒಲಿದಿರುತ್ತಾಳೆ. ಹೀಗಿರುವಾಗ ಸಾಕ್ಷಿ ಶಿವಾನಂದಳನ್ನು ನೋಡು, ಅವಳ ಜೋಡಿ ಸರಿಯಾಗಿರುತ್ತೆ ಎಂದು ರವಿ ಉಲಿಯುತ್ತಾನೆ. ಅಲ್ಲಿಂದ ಗೊಂದಲಪುರದ ಮಹಿಮೆ ಶುರು. ತಾನು ಮೆಚ್ಚಿದ ಹುಡುಗಿಯನ್ನು ಆತ, ಅವನು ಮೆಚ್ಚಿದ ಬೆಡಗಿಯನ್ನು ತಾನು ಮದುವೆಯಾಗುವುದು ಆ ಜೋಡಿಗಳ ಅಲಿಖಿತ ಪಾಲಿಸಿ. ಇಲ್ಲಿ ಮೆಚ್ಚುವುದೆಂದರೆ ಪ್ರೀತಿ ಅಲ್ಲವೆಂಬುದನ್ನು ಪ್ರೇಕ್ಷಕರು ಮೊದಲೇ ತಿಳಿದಿರುವುದು ಒಳಿತು. ಹೀಗೆ ತಿಳಿದರೂ ಕೂಡಾ ಕೊನೆಕೊನೆಗೆ ಯಾವ ಹುಡುಗಿ ಯಾರಿಗೆ ಎಂಬುದು ತಿಳಿಯದೆ ಕಂಗಾಲಾಗುತ್ತೀರಿ. ತನಗೆ ತಿಳಿಯದಂತೆ ಶಿವಣ್ಣ , ಸ್ನೇಹಿತನ ಹುಡುಗಿಯ ಮೈ ಸವರುವ ದೃಶ್ಯಗಳು ಇರುಸು ಮುರುಸು ಉಂಟುಮಾಡುತ್ತವೆ. ಎಲ್ಲ ಚಿತ್ರಗಳಂತೆ ಇದೂ ಸುಖಾಂತ್ಯವಾಗುತ್ತದೆ. ಆದರೆ ಅಷ್ಟನ್ನು ತೋರಿಸಲು ಇಷ್ಟುದ್ದ ಕತೆ, ಅದಕ್ಕಿಬ್ಬರು ಸ್ಟಾರ್‌ ಮುಖಗಳು ಬೇಕಾಗಿದ್ದವೆ ಅನ್ನುವುದು ಅವರವರ ಅಭಿಮಾನಿಗಳನ್ನು ಕಾಡುವ ಮಿಲಿಯನ್‌ ಡಾಲರ್‌ ಪ್ರಶ್ನೆ !

  ಎರಡು ಹಾಡುಗಳು ಕೇಳುವಂತಿವೆ. ಆದರೆ ಕ್ಲೈಮ್ಯಾಕ್ಸ್‌ ಮುಂಚಿನ ಹಾಡು ಬಂದಾಗ ‘ಅಯ್ಯೋ ಈಗ್ಯಾಕೆ ಬೇಕಿತ್ತಪ್ಪಾ’ ಅನ್ನುವುದು ಹಾಡು ಪ್ಲಸ್‌ ನಿರೂಪಣೆಯ ಛೋಟಾ ವಿಮರ್ಶೆಯೂ ಹೌದು. ಸೀತಾರಾಂ ಛಾಯಾಗ್ರಹಣದ ಬಗ್ಗೆ ಯಾವುದೇ ದೂರು ನೀಡಲು ಸಾಧ್ಯವಿಲ್ಲ . ಮಾತು ಕೊಟ್ಟದ್ದು ರವಿಯಾದ್ದರಿಂದ ಅದರಲ್ಲಿ ರವೆಯಷ್ಟು ರಸವಿಲ್ಲವೆಂದು ಕಣ್ಣು ಮುಚ್ಚಿ ಹೇಳಬಹುದು. ಆದರೆ ಹಾಸ್ಯ ಪ್ರಸಂಗದ ಮಾತುಗಳಿಗೆ ವಿನಾಯಿತಿ ತೋರಿಸಬೇಕು.

  ಶಿವಣ್ಣ ಮತ್ತು ರವಿ ಇಬ್ಬರಿಗೂ ಸಮಾನ ಅವಕಾಶವಿದೆ, ಮತ್ತು ಸಮಾನ ಅವಕಾಶವನ್ನು ರವಿ ಕೊಟ್ಟಿದ್ದಾರೆ. ಹಾಡು, ಕುಣಿತ, ಪ್ರೇಮ ಎಲ್ಲದರಲ್ಲೂ ಇಬ್ಬರದೂ ಸಮಬಾಳು ಸಮಪಾಲು. ಇಷ್ಟಾದರೂ ಈ ಜೋಡಿ, ಅಭಿನಯವೆಂದು ತಿಳಿದು ನಟಿಸಿದ್ದನ್ನು ನೋಡಿ ಅವರ ಅಭಿಮಾನಿಗಳೇ ಶಾನೇ ಬೇಸರಪಡುತ್ತಾರೆ.

  ಸಾಕ್ಷಿ ಶಿವಾನಂದ, ಆಶಾಸೈನಿ ಪರವಾಗಿಲ್ಲ . ಇದ್ದುದರಲ್ಲಿ ನಿಮ್ಮನ್ನು ನಗಿಸುವವರು ಮೋಹನ್‌ ಮತ್ತು ಸಾಧು ಕೋಕಿಲ. ಹಸುವಿನ ವೇಷ ತೊಟ್ಟು ಮನೆ ತುಂಬಾ ಅಡ್ಡಾಡಿ ಕಚಗುಳಿ ಇಡುವುದು ಚಿತ್ರದ ಹೈಲೈಟ್‌. ಬಿಡಿಬಿಡಿಯಾಗಿ ಕೆಲವು ಭಾವನಾತ್ಮಕ ಸನ್ನಿವೇಶಗಳು ಆಪ್ತವಾದರೂ ಕೂಡ ಕತೆಯಲ್ಲಿ ನಿರ್ದಿಷ್ಟ ಬಂಧವೇ ಕಾಣುವುದಿಲ್ಲ . ಅಂದಹಾಗೆ ಇದು ಮಲಯಾಳಿಯ ‘ತೆಂಕಾಸಿ ಪಟ್ಣಂ’ ಚಿತ್ರದ ರಿಮೇಕ್‌. ಅಲ್ಲಿ ಸೂಪರ್‌ಹಿಟ್‌ ಆದ ಚಿತ್ರವೆನ್ನುವ ಬಿರುದೂ ಇದಕ್ಕಿದೆ. ಚಿತ್ರಕತೆಯನ್ನು ರವಿಯವರೇ ಬರೆದಿದ್ದರಿಂದ ಮೂಲಕತೆಯನ್ನು ಬದಲಿಸಿದ್ದಾರೆಂಬುದು ಸಾಬೀತಾಗಿದೆ.

  ಆಗ ಪಕ್ಕಕ್ಕಿಟ್ಟ ಪ್ರಶ್ನೆಯನ್ನು ಈಗ ನೀವೇ ಕೇಳಿಕೊಳ್ಳಿ. ‘ಇಬ್ಬಿಬ್ಬರು ಸ್ಟಾರ್‌ ಇದ್ದರೂ ಚಿತ್ರವೇಕೆ ಜನರಿಗೆ ಮೋಡಿ ಮಾಡುವಲ್ಲಿ ವಿಫಲವಾಯಿತು?’

  (ವಿಜಯ ಕರ್ನಾಟಕ)

  Post your own Review

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X