»   » ಗೌಡ್ರ ಗತ್ತಿಗೆ ಅಂಬರೀಷೇ ಮಸ್ತು !

ಗೌಡ್ರ ಗತ್ತಿಗೆ ಅಂಬರೀಷೇ ಮಸ್ತು !

Posted By:
Subscribe to Filmibeat Kannada
  • ಎಂ.ಡಿ.
ಇದು ನಿಜಕ್ಕೂ ಅಂಬರೀಷಾ ?

ಗೊಂದಲವಾಗುತ್ತದೆ. ಜತೆಗಿಷ್ಟು ಅಚ್ಚರಿಯೂ ಸೇರುತ್ತದೆ. ಯಾಕೆಂದರೆ ತುಂಬಾ ವರುಷಗಳ ನಂತರ ಅಂಬರೀಷ್‌ ಮನೋಜ್ಞ ಅಭಿನಯ ನೀಡಿದ್ದಾರೆ. ಮೆಷಿನ್‌ಗನ್‌ ಬದಿಗಿಟ್ಟು ಎದೆ ತುಂಬಾ ಪ್ರೀತಿ ತುಂಬಿಕೊಂಡ ಅಣ್ಣನಾಗಿ ಸಖತ್‌ ಸ್ಕೋರ್‌ ಮಾಡಿದ್ದಾರೆ. ತಾವೂ ಅತ್ತು ಪ್ರೇಕ್ಷಕರನ್ನೂ ಅಳಿಸಿದ್ದಾರೆ. ಇಮೇಜ್‌ ಬಗ್ಗೆ ತಲೆ ಕೆಡಿಸಿಕೊಳ್ಳದೆ ತೆರೆ ತುಂಬಿದ್ದಾರೆ. ವಯಸ್ಸಾದಂತೆ ಅಭಿನಯ ಮಾಗುತ್ತದೆ ಅನ್ನುವುದಕ್ಕೆ ‘ಗೌಡ್ರು’ ಸಾಕ್ಷಿಯಾಗಿದ್ದಾರೆ.

ಇದೊಂದು ಅಣ್ಣ ತಂಗಿಯ ಮಮತೆಯ ಕಥೆ. ಜೀವಕ್ಕಿಂಥ ಹೆಚ್ಚಾಗಿ ಪ್ರೀತಿಸುವ ತಂಗಿ ಆಕಸ್ಮಿಕವಾಗಿ ಅಣ್ಣನ ಪ್ರೀತಿಯಿಂದ ವಂಚಿತಳಾಗುತ್ತಾಳೆ. ಗಂಡನ ಮಾತನ್ನು ಮೀರಲಾಗದೆ, ಅಣ್ಣನ ಅಕ್ರೆಯಿಂದ ದೂರವಾಗದೆ ಚಡಪಡಿಸುತ್ತಾಳೆ. ಅಣ್ಣ ಕೂಡ ಸಂದಿಗ್ಧದಲ್ಲಿ ಸಿಲುಕಿ ನರಳುತ್ತಾನೆ. ಇದರ ನಡುವೆ ತಂಗಿಯ ಗಂಡನ ದ್ವೇಷ ನಾಯಕನತ್ತ ತಿರುಗುತ್ತದೆ. ಹೀಗೆ ಪ್ರೀತಿ-ಸೇಡು-ತ್ಯಾಗದ ಸುತ್ತ ಕಥೆ ನಡೆಯುತ್ತದೆ.

ಮೊದಲ ಭಾಗದಲ್ಲಿ ನಿರ್ದೇಶಕ ಎಸ್‌.ಮಹೇಂದರ್‌ ಚಿತ್ರಕಥೆಯಲ್ಲಿ ಬಿಗಿ ತಂದಿದ್ದಾರೆ. ಒಂದು ಮನೆಯ ಸಡಗರವಾಗಲಿ, ಮಗುವಿನ ನಾಮಕರಣದ ಸಮಯವಾಗಲಿ ಕಣ್ತುಂಬುವಂತೆ ಚಿತ್ರಿಸಿದ್ದಾರೆ. ಶ್ರೀಮಂತಿಕೆ ಪ್ರತಿ ಫ್ರೇಮಿನಲ್ಲಿ ಕಾಣುತ್ತದೆ. ಮೊದಲರ್ಧದ ಕಥೆ ಒಂದೇ ವೇಗದಲ್ಲಿ ಸಾಗುತ್ತದೆ. ಆದರೆ ಎರಡನೇ ಭಾಗಕ್ಕೆ ಬರುವಷ್ಟರಲ್ಲಿ ಹಳಿ ತಪ್ಪುತ್ತದೆ. ಮಳೆ ಬೀಳದ ಊರಿಗೆ ನಾಯಕನ ಪತ್ನಿಯೇ ಹಾರವಾಗುವ ಕಥೆ ತೊಡರುಗಾಲು ಹಾಕುತ್ತದೆ. ಅದು ಕೊನೆಗೂ ಮೂಲಕಥೆಯಿಂದ ಹೊರಗೇ ಉಳಿಯುತ್ತದೆ. ಆದರೆ ಒಂದು ಗ್ರಾಮೀಣ ಹಿನ್ನಲೆಯ ಕಥೆಯನ್ನು ನಮ್ಮ ಸಂಪ್ರದಾಯ, ಅಲ್ಲಿಯ ಭಾಷೆ, ನೀಚತನ, ದೊಡ್ಡತನ ಮತ್ತು ಮೂಢನಂಬಿಕೆಗಳ ಸಹಿತ ಹಿಡಿದಿಡುವಲ್ಲಿ ಮಹೇಂದರ್‌ ಯಶಸ್ವಿಯಾಗಿದ್ದಾರೆ.

ಹಂಸಲೇಖಾ ಬರೆದ ಕವಾಲಿ ಟೈಪಿನ ಹಾಡು ಅಂಬಿ ಇಮೇಜಿಗೆ ತಕ್ಕಂತಿದೆ. ಕೆಲವು ಪಾತ್ರಗಳು ನಾಯಕನನ್ನು ‘ಸರ್ವನಾಶವಾಗಲಿ’ ಎಂದು ಬೈಯುವುದನ್ನು ಉಳಿಸಿದ ಮಹೇಂದರ್‌ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ‘ಮಾವಿನ ಹಣ್ಣಿಗೆ ಹು ಬೀಳದೆ ಬೇವಿನಕಾಯಿಗೆ ಹುಳ ಬೀಳುತ್ತಾ?’ ಎನ್ನುವ ಮಾತು ಯಾಕೋ ತಟ್ಟಿಬಿಡುತ್ತದೆ.

‘ನಮ್ಮ ಗೌಡ್ರು ಒಂದು ದಿನ ಮಾಡುವ ದಾನ ನಿಮ್ಮ ವರ್ಷದ ಊಟಕ್ಕೆ ಆಗುತ್ತೆ’ ಎನ್ನುವ ಮಾತೂ ನೆನಪಿನಲ್ಲಿ ಉಳಿಯುತ್ತೆ. ಗಂಡ ಮತ್ತು ಅಣ್ಣನ ದ್ವೇಷದ ನಡುವೆ ಸಿಲುಕಿ ನರಳುವ ಶೃತಿ ಸಂಯಮದ ಅಭಿನಯ ನೀಡಿದ್ದಾರೆ.

ದೇವರಾಜ್‌ಗೆ ಉತ್ತಮ ಬ್ರೇಕ್‌ ಸಿಕ್ಕಿದೆ. ಬಾಯಿ ಬಡುಕಿಯಾಗಿ ಜಯಮ್ಮ, ಪ್ರೇಕ್ಷಕರ ನಿಂದನೆಗೆ ಗುರಿಯಾಗುವಷ್ಟೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರಕಾಶ್‌ ರೈ ಅಭಿನಯ ನೆನಪಿಸುವ ಕಿಟ್ಟಿ , ಶಕುನಿಯಾಗಿ ರಮೇಶ್‌ ಪಂಡಿತ್‌ ಗಮನ ಸೆಳೆಯುತ್ತಾರೆ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada