»   » ಚಂಡ ಆಗಿಲ್ಲ ಪ್ರಚಂಡ!

ಚಂಡ ಆಗಿಲ್ಲ ಪ್ರಚಂಡ!

Posted By:
Subscribe to Filmibeat Kannada

ಕೊನೆಯ ಅರ್ಧ ಗಂಟೆಯನ್ನು ಮಾತ್ರ ಕುರ್ಚಿ ತುದಿಗೆ ತಂದು ಕೂಡುವಂತೆ ನಿರೂಪಿಸಿದ್ದಾರೆ ನಾರಾಯಣ್. ಆದರೆ ಅದಷ್ಟೇ ಸಿನಿಮಾ ಅಲ್ಲವಲ್ಲ. ಅಂತಿಮ ದೃಶ್ಯದಲ್ಲಿ ನಾಯಕ ಸ್ಮಶಾನದಲ್ಲಿ ಚಾಪೆ ಹಾಕಿಕೊಂಡು ಮಲುಗುವುದು ಎದೆಯಲ್ಲಿ ಉಳಿಯುತ್ತದೆ. ಆ ಮೂಲಕ ನಾರಾಯಣ್ ಗೆಲ್ಲುತ್ತಾರೆ, ವಿಜಯ್ ಬೆಳೆಯುತ್ತಾರೆ...

  • ದೇವಶೆಟ್ಟಿ ಮಹೇಶ್

ಆತ ಕಾಲೇಜು ಮೆಟ್ಟಿಲು ಹತ್ತುವ ಮುನ್ನವೇ ಗಬ್ಬು ನಾತ, ತಿಂಗಳಿಗೊಮ್ಮೆ ಸ್ನಾನ ಮಾಡಿದ್ರೆ ಅದೇ ಹಬ್ಬ, ಊಟಕ್ಕೆ ಕುಂತರೆ ಕೈ ಬಾಯಿ ಒಂದಾಗುತ್ತದೆ. ನೀರಿಗೆ ಇಳಿದರೆ ತಿಮಿಂಗಿಲದಂಥ ಮೀನು ಕೈ ಏರುತ್ತದೆ. ಅಕಸ್ಮಾತ್ ಯಾರಾದರೂ ತಿರುಗಿ ಬಿದ್ದರೆ ಬಂಡೆಗಳೂ ಬಿರುಕಾಗುತ್ತವೆ... ಇನ್ನು ಅವರ ತಲೆ ಉಳಿಯುತ್ತದಾ?

ಇಂಥ ಹುಡುಗ ಅಕಸ್ಮಾತ್ತಾಗಿ ಮಟ್ಕಾ ದೊರೆಯ ಮಗಳಿಗೆ ಪ್ರೇಮ ಪತ್ರ ಕೊಡುವಾಗ ಸಿಕ್ಕಿಬೀಳುತ್ತಾನೆ. ಆಕೆಯ ಚಿಕ್ಕಪ್ಪ ಮೈಮೇಲೆ ಏರಿ ಬಂದಾಗ ಹಿಗ್ಗಾಮುಗ್ಗಾ ಬಾರಿಸುತ್ತಾನೆ. ಇಡೀ ಪಡೆಯೇ ದಾಳಿ ಮಾಡಿದಾಗಲೂ ಅದನ್ನೇ ಮಾಡುತ್ತಾನೆ. ಕೊನೆಗೆ ಅದು ಆತ ಬರೆದ ಪತ್ರವಲ್ಲ ಎಂಬುದು ತಿಳಿಯುತ್ತದೆ. ಆಗ ಆಕೆ ಆತನನ್ನು ಪ್ರೇಮದಲ್ಲಿ ಬೀಳಿಸುತ್ತಾಳೆ. ಮುಂದೆಲ್ಲಾ ಮರ ಸುತ್ತುತ್ತಾರೆ, ಬೀದಿ ಸುತ್ತುತ್ತಾರೆ, ಆತನನ್ನು ಆಕೆ ಸುಧಾರಿಸಲು ಯತ್ನಿಸುತ್ತಾಳೆ. ಇನ್ನೇನು ಆಕೆ ಮನೆಯಲ್ಲಿ ಇದೆಲ್ಲ ಗೊತ್ತಾಗಿ ಮದುವೆಯಾಗೋಣ ಎಂದು ಹೇಳಿದಾಗ ಆಕೆ ನಿನ್ನನ್ನು ಪ್ರೀತಿ ಮಾಡುವ ನಾಟಕ ಮಾಡಿದೆ ಎಂದು ಬಾಂಬ್ ಹಾಕುತ್ತಾಳೆ. ಆಕೆ ಹಾಗೆ ಹೇಳಿದ್ದು ಯಾಕೆ,ಕೊನೆಯಲ್ಲಿ ಏನಾಗುತ್ತದೆ ಎಂಬುದನ್ನು ಇಲ್ಲೇ ಹೇಳಿದರೆ ಏನ್ ಮಜಾ?

ತುಂಬಾ ಸರಳವಾದ ಕತೆ, ಅದಕ್ಕೆ ತಕ್ಕಂತಿದೆ ಚಿತ್ರ ಕತೆ. ಮೊದಲಾರ್ಧ ಸಿಕ್ಕಾಪಟ್ಟೆ ಎಳೆದಿದ್ದಾರೆ ನಿರ್ದೇಶಕ ಎಸ್.ನಾರಾಯಣ್. ನಂತರವೂ ಅದೇ ಹಾದಿ ಹಿಡುಯುತ್ತದೆ. ಆದರೆ ಕೊನೆಯ ಅರ್ಧ ಗಂಟೆ ಹಿಡಿದು ಕೂಡಿಸುತ್ತದೆ. ಬಹುತೇಕ ಎಲ್ಲಾ ದೃಶ್ಯಗಳಲ್ಲೂ ವಿಜಯ್ ಇದ್ದಾರೆ. ಹಾಗೇ ತಮ್ಮ ಪಾತ್ರವನ್ನು ಎಷ್ಟು ಸಾಧ್ಯವೋ ಅಷ್ಟನ್ನು ಹಲ್ಲು ಕಡಿದು ಹೊರ ಹಾಕಿದ್ದಾರೆ.

ಕೊನೆಯ ಕ್ಷಣಗಳಲ್ಲಂತೂ ವಿಜಯ್ ಪಾತ್ರವನ್ನೇ ಅವಾಹಿಸಿಕೊಂಡಿದ್ದಾರೆ. ವಿರಹದ ನೋವನ್ನು ವ್ಯಕ್ತಪಡಿಸುವ ರೀತಿ ವಂಡರ್ ಫುಲ್. ಹೊಡೆದಾಟದಲ್ಲಿ ವಿಜಯ್ ಮಿರಾಕಲ್. ಎಲ್ಲವನ್ನೂ ಇವರೊಬ್ಬರೇ ತಿಂದಿದ್ದಾರೆ. ಹೀಗಾಗಿ ಕೋಮಲ್ ಬಿಟ್ಟರೇ ಉಳಿದವರಿಗೆ ಹೆಚ್ಚು ಅವಕಾಶವಿಲ್ಲ. ನಾಯಕಿ ಶುಭ ಪೂಂಜಾ ಚೆಂದ ಇದ್ದರೆ ನಾಯಕಿ ಆಗಬಹುದು ಎಂದು ತಿಳಿದಂತಿದೆ. ಆದರೆ ಹೆಚ್ಚು ದಿನ ಸಿನಿಮಾ ನೆಲದಲ್ಲಿ ಉಳಿಯುವುದಿಲ್ಲ ಎಂಬುದು ಅವರ ಪಾತ್ರ ನೋಡಿದರೆ ಗೊತ್ತಾಗುತ್ತದೆ. ಎರಡು ಹಾಡುಗಳು ಕೇಳುವಂತಿವೆ. ಕೊನೆಯ ಹಾಡು ನಿಜಕ್ಕೂ ಹೃದಯಕ್ಕೆ ತಟ್ಟುತ್ತದೆ.

ವಿಜಯ್ ಗೆ ಡಬ್ಬಿಂಗ್ ಮಾಡಿದ ಸುದರ್ಶನ್ ಮಕ್ಕಿ ಕಾ ಮಕ್ಕಿ ವಿಜಯ್ ಧ್ವನಿಯನ್ನು ಅನುಕರಿಸಿದ್ದಾರೆ. ಅದು ಡಬ್ಬಿಂಗ್ ಅಂತ ಅನ್ನಿಸುವುದಿಲ್ಲ. ಆದರೆ ಬೆಸ್ತರ ಭಾಷೆ ಮಾತಾಡುವಾಗ ಮಾತ್ರ ಕೇಳಲು ಕಿರಿ ಕಿರಿ ಮಾಡುತ್ತಾರೆ. ಆದರೆ ಕನ್ನಡ ಬರುವ ನಾಯಕನಿದ್ದರೂ ಇನ್ನೊಬ್ಬರಿಂದ ಡಬ್ಬಿಂಗ್ ಮಾಡಿಸಿದ್ದು ನಿರ್ದೇಶಕರ ಸ್ಥಾನಕ್ಕೆ ತಕ್ಕದ್ದಲ್ಲ.

ಒಟ್ಟಿನಲ್ಲಿ ನಾರಾಯಣ್ ಇಷ್ಟು ಚಿಕ್ಕ ಎಳೆಯನ್ನು ಇಟ್ಟುಕೊಂಡು ಇಷ್ಟು ಹೊತ್ತಿನ ಸಿನಿಮಾ ಮಾಡಿದ್ದೇ ಎಡವಟ್ಟಾಗಿದೆ. ಕತೆಯಲ್ಲಿ ಹೊಸತನವಿದೆ. ಚಿತ್ರ ಕತೆಯಲ್ಲಿ ಬಿಗಿ ಇದ್ದಿದ್ದರೆ ಚಂಡ ಪ್ರಚಂಡನಾಗುತ್ತಿದ್ದ. ಅದು ಆಗಿಲ್ಲ ಎನ್ನುವದು ಬರೀ ಟೀಕೆ ಅಲ್ಲ. ಒಂದು ಮಾತು ನಿಜ. ಕೊನೆಯ ಅರ್ಧ ಗಂಟೆಯನ್ನು ಮಾತ್ರ ಕುರ್ಚಿ ತುದಿಗೆ ತಂದು ಕೂಡುವಂತೆ ನಿರೂಪಿಸಿದ್ದಾರೆ ನಾರಾಯಣ್. ಆದರೆ ಅದಷ್ಟೇ ಸಿನಿಮಾ ಅಲ್ಲವಲ್ಲ. ಅಂತಿಮ ದೃಶ್ಯದಲ್ಲಿ ನಾಯಕ ಸ್ಮಶಾನದಲ್ಲಿ ಚಾಪೆ ಹಾಕಿಕೊಂಡು ಮಲುಗುವುದು ಎದೆಯಲ್ಲಿ ಉಳಿಯುತ್ತದೆ. ಆ ಮೂಲಕ ನಾರಾಯಣ್ ಗೆಲ್ಲುತ್ತಾರೆ, ವಿಜಯ್ ಬೆಳೆಯುತ್ತಾರೆ...

(ದಟ್ಸ್ ಸಿನಿ ವಾರ್ತೆ)

ಚಂಡ ಚಿತ್ರದ ಗ್ಯಾಲರಿ
ಚಂಡ ಚಿತ್ರದ ನಾಯಕಿ ಶುಭಾ ಪೂಂಜಾ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada