ನಿರೀಕ್ಷೆ ಮುಟ್ಟದ ಗಣೇಶ್, ನಾರಾಯಣ್ ಮುಂಜಾನೆ
ಶ್ರೀಮತಿ ಭಾಗ್ಯವತಿ ನಿರ್ಮಿಸಿರುವ 'ಮುಂಜಾನೆ' ಚಿತ್ರ ರಾಜ್ಯಾದ್ಯಂತ ಇಂದು (ಮಾರ್ಚ್ 3, 2012) ತೆರೆಕಂಡಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಇವೆಲ್ಲವುಗಳೊಂದಿಗೆ ಈ ಚಿತ್ರಕ್ಕೆ ನಿರ್ದೇಶನವನ್ನೂ ಮಾಡಿದ್ದಾರೆ ಕಲಾಸಾಮ್ರಾಟ್ ಎಸ್ ನಾರಾಯಣ್. ಚೆಲುವಿನ ಚಿತ್ತಾರ ಸೂಪರ್ ಹಿಟ್ ಚಿತ್ರದ ಜೋಡಿ ಎಸ್ ನಾರಾಯಣ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್, ಇತ್ತೀಚಿನ 'ಶೈಲೂ' ಯಶಸ್ಸಿನ ನಂತರ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದೆ.
ಕ್ಯಾಮರಾ ಹಾಗೂ ಸಂಕಲನ ಹೊರತುಪಡಿಸಿ ಮತ್ತೆಲ್ಲ ಮುಖ್ಯ ವಿಭಾಗಗಳನ್ನು ನಿರ್ವಹಿಸಿರುವ ನಾರಾಯಣ್, ಮುಂಜಾನೆ ಚಿತ್ರವನ್ನು ಒನ್ ಮ್ಯಾನ್ ಶೋ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕಥೆ, ಚಿತ್ರಕಥೆಯನ್ನು ಎರಡು ದಶಕಗಳ ಹಿಂದೆ ಮಾಡಿರುವಂತೆ ಗೋಚರಿಸುತ್ತದೆ ಮುಂಜಾನೆ. ನಾರಾಯಣ್ ಯೋಚನಾ ಧಾಟಿ ಹಾಗೂ ಇತಿಮಿತಿ ಇನ್ನೂ ಎರಡ್ಮೂರು ದಶಕಗಳ ಹಿಂದಿನಂತೇ ಇದೆ ಎಂಬುದನ್ನು ಹೇಳುವಂತಿದೆ ಈ ಚಿತ್ರ. ಇದರಲ್ಲಿ ಮಾಡಿರುವ ಫೇಸ್ ಬುಕ್ ಬಳಕೆಯನ್ನು ಬಿಟ್ಟರೆ ಆಧುನಿಕ ಎನ್ನಿಸುವುದು ಏನೂ ಇಲ್ಲ. ಮಿಕ್ಕೆಲ್ಲವೂ ಹಳಸಲು ಚಿತ್ರನ್ನ.
ಮುಂಜಾನೆಯನ್ನು ನಾರಾಯಣ್ ಗಡಿಬಿಡಿಯಲ್ಲಿ ಮುಗಿಸಿದ್ದಾರೆ, ಹೊಸತನವೇನೂ ಇಲ್ಲ. ಇಂತಹ ಚಿತ್ರವನ್ನು ದಶಕಗಳಿಗೂ ಹೆಚ್ಚು ವರ್ಷದ ಅನುಭವವಿರುವ ನಾರಾಯಣ್ ಮಾಡಿದರೇ, ಮಾಡಬಹುದೇ ಎಂಬ ಎರಡು ಪ್ರಶ್ನೆಗಳು ಏಕಕಾಲಕ್ಕೆ ಪ್ರೇಕ್ಷಕರಲ್ಲಿ ಮೂಡುವಂತಿದೆ. ಪ್ರೀತಿ, ಪ್ರೇಮದ ವಿಷಯ ನಿರಂತರವಾಗಿ ಇರುತ್ತದೆ ಎನ್ನುವುದೇನೋ ಸರಿ, ಆದರೆ ಅದರಲ್ಲೂ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆ ಆಗುತ್ತದೆ ಎನ್ನುವುದನ್ನು ಮರೆತಂತಿದೆ ನಿರ್ದೇಶಕ ನಾರಾಯಣ್.
ಇನ್ನು ಅಭಿನಯದ ವಿಷಯಕ್ಕೆ ಬಂದರೆ, ಗಣೇಶ್ ಎಂದಿನಂತೆ ಲೀಲಾಜಾಲ. ಅದೇ ಲವಲವಿಕೆ, ಉತ್ತಮ ಸಂಭಾಷಣೆ ಜೊತೆಗೆ ಬಾಡಿ ಲಾಂಗ್ವೇಜ್ ಎಲ್ಲವನ್ನೂ ಕೂಡ ಗಣೇಶ್ ಈ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಆದರೆ ಕಥೆಯೇ ಚೆನ್ನಾಗಿಲ್ಲದಿದ್ದರೆ ಗಣೇಶ್ ನಟನೆ ವೇಸ್ಟ್ ತಾನೆ? ಗಣೇಶ್ ಇನ್ನು ಮುಂದಾದರೂ ಚಿತ್ರವನ್ನು ಒಪ್ಪಿಕೊಳ್ಳುವ ಮೊದಲು ಬಹಳಷ್ಟು ಯೋಚಿಸಬೇಕು ಎಂದು ಹೇಳದೇ ಬೇರೆ ದಾರಿಯಿಲ್ಲ. ಇಲ್ಲದಿದ್ದರೆ ಮುಂದೆ, ಬೇರೆ ಪ್ರೇಕ್ಷಕರು ಬರುವುದು ಹಾಗಿರಲಿ, ಗಣೇಶ್ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಸಂಶಯ ಎನ್ನಬೇಕಾಗುತ್ತದೆ.
ಇನ್ನು ನಾಯಕಿ ಮಂಜರಿ ಅಭಿನಯದಲ್ಲಿ ಸಾಕಷ್ಟು ಪಳಗಿದಂತಿದೆ. ಚಿತ್ರದುದ್ದಕ್ಕೂ ಗಣೇಶ್ ಅಭಿನಯಕ್ಕೆ ಸ್ಪರ್ಧೆ ನೀಡಲು ಪ್ರಯತ್ನಿಸಿದ್ದಾರೆ. ಆದರೂ ಗಣೇಶ್ ಸಮಾನವಾಗಿ ಮಿಂಚಲು ಸಾಧ್ಯವಾಗಿಲ್ಲ. ಇನ್ನುಳಿದಂತೆ ರಾಜೇಂದ್ರ ಕಾರಂತ್, ರಾಜಗೋಪಾಲ್, ಮಾಳವಿಕಾ, ಎಂ ಎನ್ ಲಕ್ಷ್ಮಿದೇವಿ ಎಲ್ಲರ ಪೋಷಕನಟನಟಿಯರ ಅಭಿನಯ ಮನಮುಟ್ಟುವಂತಿದೆ. ಜೆ ಎಸ್ ವಾಲಿ ಕ್ಯಾಮರಾ, ಕೆ ಆರ್ ಲಿಂಗರಾಜು ಸಂಕಲನ ಹಾಗೂ ಎಸ್ ನಾರಾಯಣ್ ಸಂಗೀತ ಮತ್ತು ಹಾಡುಗಳು ಸಿನಿಮಾಕ್ಕೆ ಪೂರಕವಾಗಿವೆ. ಆದರೆ ನೋಡಿದ ಪ್ರೇಕ್ಷಕರಿಗೆ ನಾರಾಯಣ್-ಗಣೇಶ್ ಜೋಡಿ ಮುಂಜಾನೆ ಚಿತ್ರ ಮಾಡಬೇಕಿತ್ತೇ ಎನಿಸಿದರೆ ಆಶ್ಚರ್ಯವಿಲ್ಲ.


Click it and Unblock the Notifications











