twitter
    For Quick Alerts
    ALLOW NOTIFICATIONS  
    For Daily Alerts

    ತೂಫಾನ್ ಎಂಬ ತಾಯಿ ಇಲ್ಲದ ತಬ್ಬಲಿ!

    By *ವಿನಾಯಕರಾಮ್ ಕಲಗಾರು
    |

    Yashas Surya Nakshatra
    ಹೆಸರು ಹನುಮ.. ಆದರೆ ಕೈ ಕಾಲು ಸಹಿತ ಅಲ್ಲಾಡಿಸಲು ಬರುವುದಿಲ್ಲ! ಹೆಸರು ದಯಾನಂದ.. ಆದರೆ ಮೂಗಿನ ಮೇಲೆ ಕೋಪೇಶ್ವರ ಕುರ್ಚಿ ಹಾಕಿಕೊಂಡು ಕೂತಿರುತ್ತಾನೆ! ಹೆಸರು ಕಲ್ಲೇಶ.. ಆದರೆ ಹೂವಿನ ಎಸಳಿನಷ್ಟು ಮೃದು! ಹೆಸರು ರಾಮಪ್ಪ.. ಆದರೆ, ಊರು ತುಂಬಾ ಟೈರು-ಸ್ಟೆಪ್ನಿಗಳು! ಹೆಸರು ಸುಂದರ.. ನೋಡಲಿಕ್ಕೆ ಮಾತ್ರ ಅಷ್ಟಾವಕ್ರನ ಅಪರಾವತಾರ!

    ಏಕೆ ಈ ಪೀಠಿಕೆ ಎಂದ್ರಾ? ತೂಫಾನ್ ಚಿತ್ರ ನೋಡನೋಡುತ್ತಿದ್ದಂತೇ ಈ ಮೇಲಿನ ಸೆಂಟೆನ್ಸ್‌ಗಳು ಶುಂಠಿಪುಡಿ ಪರಿಮಳದಂತೇ ಕಾಡಿದರೆ ಆಶ್ಚರ್ಯವಿಲ್ಲ.. ಕನ್ನಡ ಚಿತ್ರರಂಗ ಉಳಿಯಬೇಕು, ಬೆಳೆಯಬೇಕು.. ಸಿನಿಮಾಗಳು ಬರಬೇಕು, ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಕಟ್ಟಿ ಕೂರಿಸಬೇಕು.. ಕಲೆಕ್ಷನ್ ಬೇಕು.. ಸೆಲೆಕ್ಷನ್ ಬೇಕು.. ಇದು ಬರೀ ಮಾತಿಗಷ್ಟೇ ಸೀಮಿತವಾಗಬಾದರು. ಒಂದು ಚಿತ್ರ ನಿರ್ದೇಶಕನ ಮೇಲಷ್ಟೇ ನಿಂತಿದೆ ಮತ್ತು ಆ ಸಿನಿಮಾ ಅಸಂಬದ್ಧ ಎನಿಸುವುದೂ ಅದೇ ನಿರ್ದೇಶಕನಿಂದ ಎನ್ನುವುದಕ್ಕೆ ಮತ್ತೊಂದು ನಿದರ್ಶನ ತೂಫಾನ್!

    ನಟ ಯಶಸ್ ಸೂರ್ಯನಿಗೆ ಅವಕಾಶವಿದೆ, ಅದೃಷ್ಟವಿಲ್ಲ. ಪ್ರತಿಭೆಯಿದೆ, ದೇವರಿಂದ ಪ್ರಸಾದ ಸಿಕ್ಕಿಲ್ಲ. ಸ್ಟಾರ್ ಲೆವೆಲ್ಲಿಗೇ ನಟಿಸಿದರೂ ಸಿನಿಮಾ ಕಚ್ಚಿಕೊಳ್ಳುವ ಮಟ್ಟಕ್ಕಿರುವುದಿಲ್ಲ. ಹಿಂದೆ ಬಂದ ಎರಡೂ ಸಿನಿಮಾಗಳು-ಯುಗಯುಗಗಳೆ ಸಾಗಲಿ, ಶಿಶಿರ ಚಿತ್ರಗಳಲ್ಲಿ ಯಶಸ್ ಅಮೋಘವಾಗಿ ನಟಿಸಿದ್ದರೂ ಸಿನಿಮಾ ಜನರಿಗೆ ಹಿಡಿಸಲಿಲ್ಲ. ಗೆಲುವು ಯಶಸ್ ಬೆನ್ನು ಹತ್ತಲಿಲ್ಲ. ಇಲ್ಲಿಯೂ ಅಷ್ಟೇ.. ಯಶಸ್ ಯಥೇಚ್ಚವಾಗಿ ನಟಿಸಿದ್ದಾರೆ.

    ನಗುವಾಗ ನಕ್ಕು, ಅಳುವಾಗ ಅತ್ತು ಮುಗಿದಿತ್ತು ಅರ್ಧ ದಾರಿ ಎನ್ನುವ ಸಾಲಿನಂತೇ ಯಶಸ್ ಇಲ್ಲಿ ಒಬ್ಬ ಪಾತ್ರಧಾರಿ ಅಷ್ಟೇ.. ಸೂತ್ರಧಾರಿ ಸ್ಮೈಲ್ ಸೀನು ಸೀನ್‌ಗಳನ್ನು ಸಿಹಿ ಎನಿಸುವ ರೀತಿಯಲ್ಲಿ ಕಟ್ಟಿಕೊಡುವ ಎಲ್ಲಾ ಅವಕಾಶಗಳು ಇದ್ದರೂ ಎಲ್ಲೋ ಒಂದು ಕಡೆ ಚಿತ್ರಕಥೆ ಮತ್ತು ಸಂಭಾಷಣೆ ಪೇಲವ ಎನಿಸುತ್ತದೆ. ಜೊಳ್ಳು ಜೊಳ್ಳೆನುತಾ ಸಾಗುತ್ತದೆ. ಶಿವಣ್ಣ-ಅನು ಪ್ರಭಾಕರ್ ಅಭಿನಯದ ಹೃದಯಾ ಹೃದಯಾ ಚಿತ್ರದಿಂದ ನಿರ್ದೇಶಕರು ಇನ್ಸ್‌ಪೈರ್ ಆಗಿದ್ದರೂ ಆ ಮಟ್ಟಕ್ಕೆ ಚಿತ್ರದಲ್ಲಿ ಫೈರ್ ಇಲ್ಲ. ಇಲ್ಲಿಯೂ ಅವರು ಹೃದಯಗಳ ವಿಷಯವನ್ನು ವಿಷಮ ರೀತಿಯಲ್ಲಿ ತೆರೆದಿಟ್ಟಿದ್ದಾರೆ.

    ನಾಯಕಿ ನಕ್ಷತ್ರಾ ಮುಖದಲ್ಲಿ ಮೂರೂವರೆ ಕೇಜಿ ಮಂಜಹಾಸ ಇಲ್ಲದಿದ್ದರೂ ಕಷ್ಟಪಟ್ಟು ಒದ್ದಾಡಿ ಗುದ್ದಾಡಿ ನಟಿಸಿದ್ದಾಳೆ. ಈಕೆ ಹೀರೋಯಿನ್ ಎಂದು ಆಗ ಆಗ ನೆನಪು ಮಾಡಿಕೊಡುವವರನ್ನು ನಿಮ್ಮ ಪಕ್ಕಕ್ಕೆ ಕೂರಿಸಿಕೊಂಡರೆ ಅವರ ಪಾತ್ರ ಮತ್ತು ಮುಖ ನಿಮ್ಮ ತಲೆಯಲ್ಲಿ ರಿಜಿಸ್ಟರ್ ಆಗುತ್ತದೆ. ಈಕೆಗೂ ಕೂಡ- ಹೆಸರು ವಿದ್ಯಾಧರ., ಆದರೆ ಓದಿದ್ದು ಮಾತ್ರ ಮೂರನೇಕ್ಲಾಸ್ ಮೂರು ಸಾರಿ ಎಂಬ ಮಾತು ಅನ್ವಯವಾಗುತ್ತದೆ!

    ಇನ್ನು ತಾರಾಬಳಗಕ್ಕೆ ಬಂದರೆ, ರಮೇಶ್ ಭಟ್, ಸುರೇಶ್ ಮಂಗ್ಳೂರ್-ಶಿವರಾಮಣ್ಣ, ಚಿತ್ರಾ ಶೆಣೈ, ದೇವದಾಸ್ ಕಾಪಿಕ್ಕಾಡ್ ಮೊದಲಾದ ದೊಡ್ಡ ದಂಡೇ ಇದೆ. ಅವರೆಲ್ಲರೂ ಇದ್ದರೂ ತೂಫಾನ್ ರಭಸವಾಗಿ ಬೀಸುವುದಿಲ್ಲ. ಬದಲಾಗಿ ಗಾಳಿ ಆಂಜನೇಯನ ದೇವಸ್ಥಾನದ ಮುಂದೆ ನಿಲ್ಲಿಸಿರುವ ಸೈಕಲ್ ಟೈರಿನಲ್ಲಿ ಗಾಳಿ ಹೋದಂತೇ ಸುರ ಸುರ..ಬುರ ಬುರ..

    ಸಾಧುಕೋಕಿಲಾ ಅಕ್ಮ ಮಹಾದೇವಿಯ ಗಂಡು ರೂಪ ಎಂಬಂತೇ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ನೆಲ ಕೆದರಾಡುತ್ತಾರೆ. ಮೈ ತುಂಬಾ ಕೂದಲು ಬಿಟ್ಟು ಕೂಗಾಡುವುದನ್ನು ನೋಡುತ್ತಿದ್ದರೆ ಅಯ್ಯೋ ಚೆನ್ನಮಲ್ಲಿಕಾರ್ಜುನಾ ಎನ್ನುವ ಮಟ್ಟಕ್ಕೆ ಎದೆ ತುಂಬಿ ಬರುತ್ತದೆ! ಸಾಧು ಇನ್ನಾದರೂ ಇಂಥ ಎಬಡು-ತಬಡು ಪಾತ್ರ ಮಾಡುವುದನ್ನು ನಿಲ್ಲಿಸಲಿ...

    ನಿರೂಪಕ ಚಂದನ್ ನಿಂತಲ್ಲೇ ನೆಲ ನೋಡುತ್ತಿರುವಂತೆ ಕಾಣುತ್ತಾರೆ. ಅವರು ಮಾತನಾಡುತ್ತಿದ್ದರೂ ಮೌನಗೀತೆ ದೂರದಲ್ಲೆಲ್ಲೋ ಕೇಳಿಬರುತ್ತದೆ. ಇನ್ನು ಛಾಯಾಗ್ರಹಣ ಸುಮಾರು. ಸಂಗೀತ ಢಮಾರು. ಸಂಕಲನ ನಿನ್ನೆ ಮಾಡಿದ ಇಡ್ಲಿ ವಡೆ ಸಾಂಬಾರು...

    ನಿರ್ದೇಶಕ ಸ್ಮೈಲ್ ಸೀನು ಅವರಿಗೆ ಇದು ಮೊದಲನೇ ಚಿತ್ರ ಎಂಬ ಕಾರಣಕ್ಕೆ ಒಂದು ಎಕ್ಸ್‌ಕ್ಯೂಸ್ ಕೊಡಬಹುದು. ನಿರ್ಮಾಪಕರು ಕೈ ತುಂಬಾ ಹಣ ಕೊಟ್ಟು, ಕಂಪ್ಲೀಟ್ ಫ್ರೀಡಂ ಕೊಟ್ಟಿರುವಾಗ 'ತೂಫಾನ್'ಗೆ ಕಳೆ ಕೊಡಬಹುದಿತ್ತು. ಅದೇ ಲವ್ವ್ ಸ್ಟೋರಿಯನ್ನು ಟ್ವಿಸ್ಟು-ಗಿಸ್ಟು ಮಾಡಿ ಪ್ರೇಕ್ಷಕರನ್ನು ಟೆಸ್ಟು ಮಾಡುವುದನ್ನು ಮುಂದಾದರೂ ನಿಲ್ಲಿಸಲಿ.. ಕನ್ನಡ ಚಿತ್ರರಂಗ ಉಳಿಯಲಿ..ಬೆಳೆಯಲಿ..ಮಳೆಯಲಿ..ಜೊತೆಯಲಿ...ಬೆಟರ್ ಲಕ್ ನೆಕ್ಟ್ ಟೈಮ್!

    English summary
    Taday (20 April 2012) released Kannada Movie Toofan Review. Yashas Surya Nakshatra acted in Lead Role and Smile Seenu Directed this. Unfortunately, director has spoiled the movie. 
 
    Friday, April 20, 2012, 17:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X